

ಬೆಳಗಾವಿ: ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿ ಐತಿಹಾಸಿಕ ಪರಂಪರೆಯ ಅಮೂಲ್ಯ ಹೆಗ್ಗುರುತು ಒಂದಕ್ಕೆ ಮರುಜೀವ ದೊರೆತಿದೆ.
ಹೌದು... ಕಸ, ಮಣ್ಣು ಮತ್ತು ಅವಶೇಷಗಳಡಿ ಹೂತುಹೋಗಿದ್ದ ಸುಮಾರು 300 ವರ್ಷಗಳಷ್ಟು ಹಳೆಯ ಐತಿಹಾಸಿಕ ಮೆಟ್ಟಿಲು ಬಾವಿ (ಸ್ಟೆಪ್‌ವೆಲ್)ಯನ್ನು ಇದೀಗ ಸಂಪೂರ್ಣವಾಗಿ ಪುನರುಜ್ಜೀವನಗೊಳಿಸಲಾಗಿದೆ.
ಸುಮಾರು 80 ಅಡಿ ಆಳ ಹೊಂದಿರುವ ಈ ಮೆಟ್ಟಿಲು ಬಾವಿಯನ್ನು 15ನೇ ಮತ್ತು 17ನೇ ಶತಮಾನದ ನಡುವಿನ ಅವಧಿಯಲ್ಲಿ ಆದಿಲ್‌ಶಾಹಿ ಆಡಳಿತದ ಕಾಲದಲ್ಲಿ ನಿರ್ಮಿಸಲಾಗಿತ್ತು ಎಂದು ನಂಬಲಾಗಿದೆ.
ಬೆಳಗಾವಿ ಮೂಲದ ಪ್ಯಾಸ್ ಫೌಂಡೇಶನ್, ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಸ್ವಯಂಸೇವಕರು ಹಾಗೂ ಸ್ಥಳೀಯ ನಿವಾಸಿಗಳ ಸಹಕಾರದೊಂದಿಗೆ ಈ ಪುರಾತನ ಬಾವಿಯನ್ನು ಸಂಪೂರ್ಣವಾಗಿ ಮರುಸ್ಥಾಪಿಸಿದೆ.
ಪುನರುಜ್ಜೀವನದ ಬಳಿಕ ಬಾವಿಯಲ್ಲಿರುವ 53 ಕಲ್ಲಿನ ಮೆಟ್ಟಿಲುಗಳು ಮತ್ತೆ ಗೋಚರವಾಗಿದ್ದು, ಮೇಲಿನಿಂದ ನೋಡಿದಾಗ ಇದರ ವಿನ್ಯಾಸ ಶಿವಲಿಂಗದ ಆಕಾರವನ್ನು ಹೋಲುವ ವಿಶಿಷ್ಟ ರೂಪ ಹೊಂದಿರುವುದು ಗಮನ ಸೆಳೆಯುತ್ತಿದೆ.
ಪುನರುಜ್ಜೀವನ ಕಾರ್ಯದಲ್ಲಿ ಭಾಗವಹಿಸಿದ್ದ ಸ್ವಯಂಸೇವಕರೊಬ್ಬರು ಈ ಬಗ್ಗೆ ಮಾತನಾಡಿದ್ದು, 'ಹಲವು ವರ್ಷಗಳಿಂದ ಬಾವಿಯಲ್ಲಿ ಸಂಗ್ರಹವಾಗಿದ್ದ ಕಸ, ಮಣ್ಣು, ಅವಶೇಷಗಳು ಹಾಗೂ ದಟ್ಟವಾಗಿ ಬೆಳೆದಿದ್ದ ಗಿಡಗಂಟಿಗಳನ್ನು ತೆರವುಗೊಳಿಸಲು ಸಾಕಷ್ಟು ಶ್ರಮವಹಿಸಬೇಕಾಯಿತು' ಎಂದು ತಿಳಿಸಿದ್ದಾರೆ.
ಒಂದಾನೊಂದು ಕಾಲದಲ್ಲಿ ಗ್ರಾಮಸ್ಥರು, ಜಾನುವಾರುಗಳು ಹಾಗೂ ಪ್ರಯಾಣಿಕರಿಗೆ ಕುಡಿಯುವ ನೀರಿನ ಪ್ರಮುಖ ಮೂಲವಾಗಿದ್ದ ಈ ಮೆಟ್ಟಿಲು ಬಾವಿಯನ್ನು ಮರುಸ್ಥಾಪಿಸಿರುವುದಕ್ಕೆ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.
ಪುನರುಜ್ಜೀವನದ ಬಳಿಕ ಈ ಶತಮಾನಗಳಷ್ಟು ಹಳೆಯ ಮೆಟ್ಟಿಲು ಬಾವಿ ಸ್ಥಳೀಯ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸಾರುವ ಪ್ರಮುಖ ಹೆಗ್ಗುರುತಾಗಿ ಹೊರಹೊಮ್ಮಿದ್ದು, ಪ್ರವಾಸೋದ್ಯಮಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ.