ಒಂದೂವರೆ ತಿಂಗಳ ಬಳಿಕ ಮಳೆರಾಯನ ಕೃಪೆ; ರಾಜ್ಯದ ಜಲಾಶಯಗಳಲ್ಲಿ ಜೀವಕಳೆ; ಪ್ರಮುಖ ಅಣೆಕಟ್ಟುಗಳಿಗೆ ಒಳಹರಿವು ಹೆಚ್ಚಳ!

ರಾಜ್ಯದ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಮುಖ ಜಲಾಶಯಗಳಿಗೆ ಒಳಹರಿವು ಹೆಚ್ಚಳವಾಗಿದ್ದು, ಅಣೆಕಟ್ಟುಗಳ ನೀರಿನ ಮಟ್ಟ ಏರಿಕೆಯಾಗುತ್ತಿದೆ.
File photo
ಸಂಗ್ರಹ ಚಿತ್ರ
Updated on

ವಿಜಯಪುರ: ಮುಂಗಾರು ಆರಂಭವಾಗಿ ಒಂದೂವರೆ ತಿಂಗಳು ಕಳೆದರೂ ಸಮರ್ಪಕ ಮಳೆಯ ಕೊರತೆಯಿಂದ ಕಂಗೆಟ್ಟಿದ್ದ ರಾಜ್ಯಕ್ಕೆ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಕೊಂಚ ನೆಮ್ಮದಿ ತಂದಿದೆ.

ರಾಜ್ಯದ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಮುಖ ಜಲಾಶಯಗಳಿಗೆ ಒಳಹರಿವು ಹೆಚ್ಚಳವಾಗಿದ್ದು, ಅಣೆಕಟ್ಟುಗಳ ನೀರಿನ ಮಟ್ಟ ಏರಿಕೆಯಾಗುತ್ತಿದೆ.

ಪಶ್ಚಿಮ ಘಟ್ಟ ಪ್ರದೇಶದಲ್ಲಿ ಉತ್ತಮ ಮಳೆಯಾದ ಪರಿಣಾಮ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಆಲಮಟ್ಟಿ ಜಲಾಶಯಕ್ಕೆ ಸೋಮವಾರದಿಂದ ಮತ್ತೆ ನೀರಿನ ಹರಿವು ಆರಂಭವಾಗಿದೆ.

ಜಲಾಶಯಕ್ಕೆ 1,239 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಜಲಾಶಯದ ಗರಿಷ್ಠ ಮಟ್ಟ 519.60 ಮೀಟರ್ ಹಾಗೂ ಪ್ರಸ್ತುತ ಸಂಗ್ರಹ 123 ಟಿಎಂಸಿ ಅಡಿ ಇದೆ.

ಮಲೆನಾಡಿನಲ್ಲಿ ಸುರಿಯುತ್ತಿರುವ ಮಳೆಯ ಪರಿಣಾಮ ಶಿವಮೊಗ್ಗ ಜಿಲ್ಲೆಯ ಪ್ರಮುಖ ಜಲಾಶಯಗಳಿಗೂ ನೀರಿನ ಹರಿವು ಹೆಚ್ಚಾಗಿದೆ.

ಭದ್ರಾ ಜಲಾಶಯಕ್ಕೆ 4,135 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಜಲಾಶಯದ ನೀರಿನ ಮಟ್ಟ 139.6 ಅಡಿ ತಲುಪಿದೆ. ಇದರ ಗರಿಷ್ಠ ಮಟ್ಟ 186 ಅಡಿಯಾಗಿದೆ.

File photo
ಬರದ ಮುನ್ಸೂಚನೆಯ ನಡುವೆಯೂ ರಾಜ್ಯದ ಅದೊಂದು ಜಲಾಶಯ ಮಾತ್ರ ಭರ್ತಿ!

ಇನ್ನು ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಬೆಳಗ್ಗೆ 8 ಗಂಟೆಗೆ 1,751.60 ಅಡಿ ದಾಖಲಾಗಿದ್ದು, ಹಿಂದಿನ ದಿನಕ್ಕಿಂತ 1.75 ಅಡಿ ಏರಿಕೆಯಾಗಿದೆ. ಜಲಾಶಯಕ್ಕೆ 18,486 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 507 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.

ತುಂಗ ಭದ್ರಾ ಜಲಾಶಯಕ್ಕೂ ಭಾರೀ ಪ್ರಮಾಣದ ನೀರು ಹರಿದು ಬರುತ್ತಿದೆ. ಜಲಾಶಯದ ಮಟ್ಟ 587.86 ಮೀಟರ್ ತಲುಪಿದ್ದು, ಗರಿಷ್ಠ ಮಟ್ಟ 588.24 ಮೀಟರ್ ಆಗಿದೆ. ಜಲಾಶಯಕ್ಕೆ 21,747 ಕ್ಯೂಸೆಕ್ ಒಳಹರಿವು ಹಾಗೂ 23,784 ಕ್ಯೂಸೆಕ್ ಹೊರಹರಿವು ದಾಖಲಾಗಿದೆ.

ಹೇಮಾವತಿ, ಹಾರಂಗಿಯಲ್ಲೂ ನೀರಿನ ಹರಿವು ಹೆಚ್ಚಳ

ಹಾಸನ ಜಿಲ್ಲೆಯ ಗೋರೂರಿನ ಹೇಮಾವತಿ ಜಲಾಶಯಕ್ಕೂ ಕಳೆದ ಎರಡು ದಿನಗಳ ಮಳೆಯಿಂದ ಒಳಹರಿವು ಹೆಚ್ಚಾಗಿದೆ. ಜಲಾಶಯದ ನೀರಿನ ಮಟ್ಟ 2,894.6 ಅಡಿ ಇದ್ದು, ಗರಿಷ್ಠ ಮಟ್ಟ 2,922 ಅಡಿ ಆಗಿದೆ. ಸೋಮವಾರ 6,924 ಕ್ಯೂಸೆಕ್ ನೀರು ಹರಿದು ಬಂದಿದೆ.

ಕೊಡಗು ಜಿಲ್ಲೆಯ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾದ ಪರಿಣಾಮ ಹಾರಂಗಿ ಜಲಾಶಯಕ್ಕೂ ಒಳಹರಿವು ಏರಿಕೆಯಾಗಿದೆ. ಜಲಾಶಯದ ನೀರಿನ ಮಟ್ಟ 2,835.92 ಅಡಿ ತಲುಪಿದ್ದು, ಇದರ ಗರಿಷ್ಠ ಮಟ್ಟ 2,852.34 ಅಡಿ ಆಗಿದೆ.

ರಾಜ್ಯದ ವಿವಿಧ ಭಾಗಗಳಲ್ಲಿ ಮಳೆ ಮುಂದುವರಿದರೆ ಜಲಾಶಯಗಳ ನೀರಿನ ಮಟ್ಟ ಇನ್ನಷ್ಟು ಏರಿಕೆಯಾಗುವ ನಿರೀಕ್ಷೆ ಇದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com