ಗೌರಿ ಲಂಕೇಶ್ ಹತ್ಯೆಗೆ ಸುಧನ್ವ ಗೊಂಧಲೇಕರ್ ನೆರವು: ಎಸ್ ಐಟಿ

Published: 12 Sep 2018 12:38 PM IST | Updated: 12 Sep 2018 12:46 PM IST
ಗೌರಿ ಲಂಕೇಶ್
ಬೆಂಗಳೂರು: ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಇತ್ತೀಚಿಗೆ ಬಂಧಿಸಿರುವ ಮತ್ತೋರ್ವ ಆರೋಪಿ ಸುಧನ್ವ ಗೊಂಧಲೇಕರ್, ಗೌರಿ ಹತ್ಯೆಗೆ ಬಳಸಿದ ಪಿಸ್ತೂಲನ್ನು ರವಾನೆ ಮಾಡಿರುವುದು ದೃಢಪಟ್ಟಿದೆ ಎಂದು ಎಸ್ ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

ಗೊಂಧಲೇಕರ್ (39) ಸತಾರಾದ ಹೋರಾಟಗಾರ ಹಾಗೂ ಶಿವಪ್ರತಿಷ್ಠಾನ ಹಿಂದೂಸ್ತಾನದ ಸದಸ್ಯನಾಗಿದ್ದು, ರಾಜ್ಯದಲ್ಲಿನ ಗುಪ್ತಚರ ಮಾಹಿತಿ ನಂತರ ಮಹಾರಾಷ್ಟ್ರದ ಭಯೋತ್ಪಾದಕ ನಿಗ್ರಹದಳದಿಂದ ಬಂಧಿಸಲಾಗಿತ್ತು.

ಆತನ ವಿಚಾರಣೆ ಸಂದರ್ಭದಲ್ಲಿ ಕಳೆದ ವರ್ಷ ಸೆಪ್ಟೆಂಬರ್ 5 ರಂದು ಆತ ಬೆಂಗಳೂರಿನಲ್ಲಿದ್ದು, ಪುರುಷೋತ್ತಮ್ ವಾಘ್ಮೋರೆ ಗೌರಿ ಲಂಕೇಶ್ ಹತ್ಯೆ ಮಾಡಿದ ನಂತರ  ಆತನಿಂದ ಬಂದೂಕು ಪಡೆದು ಮತ್ತೊಮ್ಮ ಆರೋಪಿ ಹೆಚ್.ಎಲ್. ಸುರೇಶ್ ಗೆ ನೀಡಿದ್ದಾನೆ ಎಂದು ಎಸ್ ಐಟಿ ಮೂಲಗಳಿಂದ ತಿಳಿದುಬಂದಿದೆ.

ಸುರೇಶ್ ಸಿಗೇಹಳ್ಳಿ ನಿವಾಸಿಯಾಗಿದ್ದು, ಆತನ ಗೌರಿ ಲಂಕೇಶ್ ಹತ್ಯೆಯಾದ ದಿನ ಅಮೊಲ್ ಕಾಳೆಗೆ ಆಶ್ರಯ ನೀಡಿದ್ದಾನೆ. ಗೌರಿ ಲಂಕೇಶ್ ಹತ್ಯೆ ಮಾಡಿದ ಬಳಿಕ ದೇಶೀ ನಿರ್ಮಿತ ಪಿಸ್ತೂಲ್ ಬಂದೂಕನ್ನು ಗೊಂದಲ್ಕೇಕರ್  ಮೊದಲಿಗೆ ಸುರೇಶ್ ಗೆ ನೀಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

ವಾರಗಟ್ಟಲೇ ಸುರೇಶ್ ಮನೆಯಲ್ಲಿಯೇ ಆ ಗನ್ ಇತ್ತು. ನಂತರ ಅದನ್ನು ಗೊಂಧಲೇಕರ್  ಕಾಳೆ ಸಹಚರನಿಗೆ ನೀಡಿದ್ದಾನೆ ಎಂದು ಸುರೇಶ್ ಎಸ್ ಐಟಿ ಅಧಿಕಾರಿಗಳಿಗೆ ತಿಳಿಸಿದ್ದಾನೆ.

ಕಾಳೆ ಡೈರಿಯಲ್ಲಿ ಗೋವಿಂದ ಎಂಬ ಹೆಸರು ಉಲ್ಲೇಖಿಸಲಾಗಿದೆ. ಅಲ್ಲದೇ ಪೋನ್ ಕರೆಗಳ ಬಗ್ಗೆ ವಿಚಾರಣೆ ನಡೆಸಿದಾಗ ಆತನ ನಂಬರ್ ಸತಾರದ ಮೂಲ ತೋರಿಸುತಿತ್ತು. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಭಯೋತ್ಪಾದನ ನಿಗ್ರಹ ದಳಕ್ಕೆ ಮಾಹಿತಿ ನೀಡಲಾಯಿತು ಎಂದು ಎಸ್ ಐಟಿ  ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ತನಿಖೆ ಚುರುಕುಗೊಳಿಸಿದ ಎಟಿಸಿ ಆಗಸ್ಟ್ 10 ರಂದು ನಲಸೊಪಾರದಲ್ಲಿ ಗೊಂಧಲೇಕರ್ ಜೊತೆಯಲ್ಲಿ ನಾಲ್ವರನ್ನು ಬಂಧಿಸಿದ್ದು, ಕಾನೂನು ಬಾಹಿರ ಚಟುವಟಿಕೆ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬಂಧಿತರಿಂದ ದೇಶಿ ನಿರ್ಮಿತ ಪಿಸ್ತೂಲನ್ನು ವಶಪಡಿಸಿಕೊಳ್ಳಲಾಗಿದೆ.

ಗೋವಿಂದನೇ ಗೊಂಧಲೇಕರ್ ಎಂದು ಸುರೇಶ್ ಪತ್ತೆ ಹಚ್ಚಿದ್ದಾನೆ. ಆತನಿಂದ ವಶಪಡಿಸಿಕೊಂಡಿರುವ ಬಂದೂಕನ್ನು ಎಫ್ ಎಸ್ ಎಲ್ ನಲ್ಲಿ ಪರೀಕ್ಷಿಸಲಾಗುತ್ತಿದ್ದು, ಹೊಂದಾಣಿಕೆಯಾಗುವ ಸಾಧ್ಯತೆ ಇರುವುದಾಗಿ ಎಸ್ ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

Posted by: ABN | Source: The New Indian Express

ಈ ವಿಭಾಗದ ಇತರ ಸುದ್ದಿ