ರಿಯಾಯಿತಿ ದರದಲ್ಲಿ ಮೈಸೂರು ಸಿಲ್ಕ್ ಸೀರೆ: ಖರೀದಿಗೆ ಮುಗಿಬಿದ್ದ ಮಹಿಳೆಯರು

Published: 11 Sep 2018 02:52 PM IST
ಸಂಗ್ರಹ ಚಿತ್ರ
ಮೈಸೂರು: ವರಮಹಾಲಕ್ಷ್ಮೀ ಹಬ್ಬಕ್ಕೆ ರಿಯಾಯಿತಿ ದರದಲ್ಲಿ ಮೈಸೂರು ಸಿಲ್ಕ್ ಸೀರೆ ಕೊಡುವುದಾಗಿ ಹೇಳಿ ಮಾತು ತಪ್ಪಿದ್ದ ರಾಜ್ಯ ಸರ್ಕಾರ ಇದೀಗ ಮಹಿಳೆಯನ್ನು ಸಮಾಧಾನ ಪಡಿಸಲು ಗೌರಿ-ಗಣೇಶ ಹಬ್ಬಕ್ಕೆ ರೇಷ್ಮೆ ಸೀರೆ ನೀಡಲು ಮುಂದಾಗಿದ್ದು, ಸೀರೆ ಖರೀದಿಗೆ ಮಹಿಳೆಯರು ನಾ ಮುಂದು, ತಾ ಮುಂದು ಎಂದು ಮುಗಿಬಿದ್ದಿದ್ದಾರೆ. 

ವರಮಹಾಲಕ್ಷ್ಮೀ ಹಬ್ಬಕ್ಕೇ ರೂ.10 ಸಾವಿರ ಸೀರೆಯನ್ನು ರಿಯಾಯಿತಿ ದರದಲ್ಲಿ ಸರ್ಕಾರ ಘೋಷಣೆ ಮಾಡಿತ್ತು. ಆದರೆ, ಕೊಡಗು ಪ್ರವಾಹ ಹಾಗೂ ಚುನಾವಣಾ ನೀತಿ ಸಂಹಿತೆ ಹಿನ್ನಲೆಯಲ್ಲಿ ನಿರ್ಧಾರದಿಂದ ಹಿಂದಕ್ಕೆ ಸರಿದಿತ್ತು. ಇದಕ್ಕೆ ತೀವ್ರ ವಿರೋಧಗಳು ವ್ಯಕ್ತವಾಗಿದ್ದವು. ಬಳಿಕ ಜನತೆಯನ್ನು ಸಮಾಧಾನಪಡಿಸಲು ಮುಂದಾಗಿದ್ದ ಸರ್ಕಾರ ಗೌರಿ ಗಣೇಶ ಹಬ್ಬಕ್ಕೆ ರಿಯಾಯಿತಿ ದರದಲ್ಲಿ ಸೀರೆ ಕೊಡುವುದಾಗಿ ತಿಳಿಸಿತ್ತು. 

ಇದರಂತೆ ಇಂದು ಬೆಳಿಗ್ಗೆ 10.30ರಿಂದ ಮೈಸೂರಿನ ಮೃಗಾಲಯ ಆವರಣದಲ್ಲಿರುವ ಕರ್ನಾಟಕ ರಾಜ್ಯ ರೇಷ್ಮೆ ಮಂಡಳಿಯ ಮಳಿಗೆಯಲ್ಲಿ ಮಹಿಳೆಯರಿಗೆ ರೂ.4,500 ದರದಲ್ಲಿ ರೇಷ್ಮೆ ಸೀರೆ ನೀಡಲು ನೋಂದಣಿ ಪ್ರಕ್ರಿಯೆ ಆರಂಭವಾಗಲಿದ್ದು, ಮಧ್ಯಾಹ್ನ 2.30ಕ್ಕೆ ಸೀರೆಗಳನ್ನು ವಿತರಣೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. 

ಈ ಮಾಹಿತಿ ತಿಳಿಯುತ್ತಿದ್ದಂತೆಯೇ ನೂರಾರು ಮಹಿಳೆಯರು ಬೆಳಿಗ್ಗೆಯಿಂದಲೇ ಸಾಲಿನಲ್ಲಿ ನಿಂತು ಆಧಾರ್ ಸಂಖ್ಯೆ ಹಾಗೂ ಹೆಸರು ನೋಂದಾಯಿಸಿಕೊಳ್ಳುತ್ತಿದ್ದಾರೆ. 

ರಿಯಾಯಿತಿ ದರದಲ್ಲಿ ಮೈಸೂರು ಸಿಲ್ಕ್ ಸೀರೆ ನೀಡುವ ಈ ಯೋಜನೆಗೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಇಂದು ಮಧ್ಯಾಹ್ನ ಲಾಟರಿ ಎತ್ತುವ ಮೂಲಕ  ಚಾಲನೆ ನೀಡಲಿದ್ದಾರೆ. ಲಾಟರಿಯಲ್ಲಿ ಯಾರಿಗೆ ಅದೃಷ್ಟ ಬರುತ್ತದೆಯೋ ಅವರಿಗೆ ಮೊದಲ ಸೀರೆಯನ್ನು ನೀಡುತ್ತಾರೆ. ಈ ಯೋಜನೆ ಹೀಗೆಯೇ ಮುಂದುವರೆಯಲಿದ್ದು, ಯಾರೂ ಕೂಡ ಗೊಂದಲಕ್ಕೊಳಗಾಗಬಾರದು ಎಂದು ಸಚಿವ ಸಾ.ರಾ. ಮಹೇಶ್ ಅವರು ಹೇಳಿದ್ದಾರೆ. 
Posted by: MVN | Source: Online Desk

ಈ ವಿಭಾಗದ ಇತರ ಸುದ್ದಿ