
ಭಾರತದಲ್ಲಿ ತನ್ನ ಜೀವನ ರೋಮಾಂಚಕಾರಿಯಾಗಿರುತ್ತದೆ ಎನ್ನುವ ಆಕೆಯ ಕನಸುಗಳೆಲ್ಲಾ ಕನಸಾಗಿಯೇ ಉಳಿಯುತ್ತವೆ ಎನ್ನುವ ಸತ್ಯ ಆಕೆ ಹೈದರಾಬಾದಿಗೆ ಕಾಲಿಟ್ಟ ಕ್ಷಣವೇ ಅರಿವಾಗುತ್ತದೆ. ಸಿನಿಮಾಗಳಲ್ಲಿ, ಪುಸ್ತಕಗಳಲ್ಲಿ ನೋಡಿದ, ಓದಿದ ಭಾರತಕ್ಕೂ ನಿಜವಾಗಿ ಕಾಣುತ್ತಿರುವ ಭಾರತಕ್ಕೂ ಅಜಗಜಾಂತರವಿರುವುದು ಮನವರಿಕೆಯಾಗಲು ಇಪ್ಪತ್ತೇಳು ವರ್ಷದ ಜೆನ್ನಿಗೆ ಬಹಳ ಸಮಯ ಬೇಕಾಗುವುದಿಲ್ಲ. ನ್ಯೂಯಾರ್ಕ್ನಲ್ಲಿ ದೊರೆಯುತ್ತಿದ್ದ ಸೌಂದರ್ಯ ಚಿಕಿತ್ಸೆಗಳು, ಹೊಸ ಫ್ಯಾಷನ್, ಸ್ಟಾರ್ಬಕ್ಸ್ ಕಾಫಿ, ಸ್ನೇಹಿತರು ಮತ್ತು ಸಹೋದ್ಯೋಗಿಗಳನ್ನು ಜೆನ್ನಿ ಭಾರತದಲ್ಲಿ ಮಿಸ್ ಮಾಡಿಕೊಳ್ಳುತ್ತಾಳೆ. ಫುಡ್ ಪಾಯ್ಸನ್ನಿಂದ ನರಳುತ್ತಾಳೆ. ರಸ್ತೆಗಳಲ್ಲಿ ಹಸು ಎಮ್ಮೆಗಳನ್ನು ಕಂಡು ಹೌಹಾರುತ್ತಾಳೆ. ಜನರಿಂದ ತುಂಬಿ ತುಳುಕುವ ದೇಶದಲ್ಲಿ ಗೆಳೆಯರಿಲ್ಲದೆ ಒಂಟಿಯಾಗುತ್ತಾಳೆ. ತನ್ನ ಒಂಟಿತನಕ್ಕೆ, ಅಸಹಾಯಕತೆಗೆ ಭಾರತವೇ ಕಾರಣವೆಂದು ದೂಷಿಸತೊಡಗುತ್ತಾಳೆ: 'ಇಲ್ಲಿ ನಾನು ಯಾರೂ ಅಲ್ಲ. ನಾನು ನನ್ನ ಪತಿಯ ಒಂದು ಭಾಗವಾಗಿದ್ದೆ, ಆತನ ಕಾರ್ಪೊರೇಟ್ ವಿಶ್ವದ ಒಂದು ಪರಾವಲಂಬಿ ವಿಸ್ತರಣೆ ಮಾತ್ರ.'
ಭಾರತದೊಡನೆ ಹೊಂದಾಣಿಕೆಯಾಗದೆ ಮದುವೆ ಆರು ತಿಂಗಳಲ್ಲಿಯೇ ವಿಚ್ಛೇದನದ ಹಂತ ತಲುಪುತ್ತದೆ. ಅದಕ್ಕೂ ಆಕೆ ಭಾರತವನ್ನೇ ದೂಷಿಸುತ್ತಾಳೆ. ಅಮೆರಿಕಾದ ಥ್ಯಾಂಕ್ಸ್ ಗಿವಿಂಗ್ ಸಂಭ್ರಮಾಚರಣೆಯಲ್ಲಿ ದಂಪತಿಗಳಿಬ್ಬರೂ ತಮ್ಮ ಮದುವೆ ಉಳಿಸಿಕೊಳ್ಳುವ ಶಪಥ ತೊಡುತ್ತಾರೆ. ಅಲ್ಲಿಂದಾಚೆಗೆ ನಾವು ಕಾಣುವುದು ಬದಲಾದ ಜೆನ್ನಿಯನ್ನು. ಆಕೆಯ ಮನೋಭಾವ, ನೋಟದಲ್ಲಿ ಹಠಾತ್ ಬದಲಾವಣೆ ಕಂಡುಬರುತ್ತವೆ. ಭಾರತವನ್ನು ದೂಷಿಸುವುದನ್ನು ನಿಲ್ಲಿಸುತ್ತಾಳೆ. ಇರುವ ಹಾಗೆಯೇ ಒಪ್ಪಿಕೊಳ್ಳುತ್ತಾಳೆ. ತನ್ನ ನಿರೀಕ್ಷೆಗಳನ್ನು ಬದಿಗಿಟ್ಟು ನೋಡುತ್ತಾಳೆ.
ಪುಸ್ತಕದ ಮೊದಲರ್ಧದಲ್ಲಿ ಭಾರತವನ್ನು ದ್ವೇಷಿಸುತ್ತಿದ್ದ ಜೆನ್ನಿ ಕೊನೆಯರ್ಧದಲ್ಲಿ ಬ್ರಹ್ಮಾಂಡ ಅನುಗಾಲವೂ ತನಗೆ ಏನು ಹೇಳಲು ಪ್ರಯತ್ನಿಸುತ್ತಿದೆ ಎನ್ನುವುದನ್ನು ಅರಿತುಕೊಳ್ಳುತ್ತಾಳೆ. ಬದಲಾಗಬೇಕಿರುವುದು ಭಾರತವಲ್ಲ ತಾನು ಎಂದು ತಿಳಿದು ಬದಲಾಗುತ್ತಾಳೆ, ಭಾರತವನ್ನು ಗೌರವಿಸತೊಡಗುತ್ತಾಳೆ. ಪುಸ್ತಕದಲ್ಲಿ ಭಾರತ ಆಕೆಯ ಹೊಸ ಜೀವನ ಮತ್ತು ಮದುವೆಯನ್ನು ಮಾತ್ರ ತೆರೆದಿಡುವುದಿಲ್ಲ, ಹುದುಗಿದ್ದ ಕೆಲವು ಸತ್ಯಗಳನ್ನೂ ತೆರೆದಿಡುತ್ತದೆ. ಅಡುಗೆ ಮನೆಗೆ ಕಾಲಿಡದ ಆಕೆಯ ಕೈಯಲ್ಲಿ ಅಡುಗೆ ಮಾಡಿಸುತ್ತದೆ, ಮನೆಯಿಲ್ಲದ ಆಕೆಗೆ ಭಾರತವೇ ತಾತ್ಕಾಲಿಕ ಮನೆಯೆನ್ನುವ ಅರಿವು ಮೂಡಿಸುತ್ತದೆ. ಕರ್ಮ ಕೆಟ್ಟರೆ ಬಂಗಲೆಯಂಥಾ ಮನೆಯಿದ್ದರೂ ಯಾವ ಪ್ರಯೋಜನವೂ ಇಲ್ಲವೆನ್ನುವ ಸತ್ಯ ತಿಳಿಸಿಕೊಡುತ್ತದೆ.
ಪುಸ್ತಕದ ಕೊನೆಯ ಕಾಲು ಭಾಗದಲ್ಲಿ ಭಾರತೀಯ ಸಂಸ್ಕೃತಿಯನ್ನು ಸ್ವೀಕರಿಸುವ, ಆನಂದಿಸುವ ಪ್ರಯತ್ನ ಮಾಡಿದಾಗ ಜೆನ್ನಿಯ ಮೇಲೆ ಮರುಕ ಹುಟ್ಟುತ್ತದೆ. ಜೀವನದಲ್ಲಿ ದೊಡ್ಡ ಸವಾಲುಗಳು ಹೊರಹೊಮ್ಮಿದಾಗಲೇ ನಾವು ಅವುಗಳನ್ನೆದುರಿಸಿ ಮುಂದೆ ಸಾಗಲು ಕಲಿಯುವುದು ಎನ್ನುವ ಸತ್ಯ ಈ ಆತ್ಮಕಥೆಯಲ್ಲಿ ಗೋಚರವಾಗುತ್ತದೆ. ಪುಸ್ತಕದ ಮೊದಲ ಮುಕ್ಕಾಲು ಭಾಗ ಓದುವಾಗ ನಿರೂಪಕಿಯನ್ನು, ಅನ್ಯರನ್ನು ನಿಂದಿಸುವ, ಚಿಕ್ಕ ವಿಷಯಗಳಿಗೆ ಹಠ ಮಾಡುವ ಆಕೆಯ ಮನೋಭಾವವನ್ನು ಓದುಗರು ದ್ವೇಷಿಸುತ್ತಾರೆ. ಜೆನ್ನಿಯ ದೂರುಗಳಿಗೆ ಮಿತಿಯೇ ಇಲ್ಲವೇನೋ ಎನಿಸುತ್ತದೆ: ಅಯ್ಯೋ, ಸ್ಟಾರ್ಬಕ್ಸ್ ಇಲ್ಲಿಲ್ಲ? ಈ ಜನರೇಕೆ ಕಾಫಿ ಕುಡಿಯುವುದಿಲ್ಲ? ಈ ಕಂದು ಜನರೇಕೆ ನನ್ನನ್ನು ಹೀಗೆ ದಿಟ್ಟಿಸಿ ನೋಡುತ್ತಾರೆ? ಈ ಜನರೇಕೆ ಅಮೆರಿಕನ್ನರ ಹಾಗೆ ಸಾಲಿನಲ್ಲಿ ನಿಲ್ಲುವುದಿಲ್ಲ? ಹೀಗೆ ಹತ್ತು ಹಲವು ದೂರುಗಳು ಪ್ರತಿ ಪುಟದಲ್ಲಿಯೂ ತುಂಬಿ ತುಳುಕುತ್ತವೆ. ಪೂರ್ವಗ್ರಹಪೀಡಿತ ಲೇಖಕಿಯೊಬ್ಬಳು ಬೇರೆ ದೇಶದ ಬಗ್ಗೆ ಬರೆದರೆ ಏನೆಲ್ಲಾ ತಪ್ಪು ಅಭಿಪ್ರಾಯಗಳನ್ನು ಹುಟ್ಟುಹಾಕಬಹುದೆನ್ನುವುದಕ್ಕೆ ಈ ಪುಸ್ತಕ ಮೂಕ ಸಾಕ್ಷಿ. ಹಲವು ಬಾರಿ ಭಾರತವನ್ನು ತೃತೀಯ ಜಗತ್ತು ಎಂದು ಕೀಳು ಮಟ್ಟದಲ್ಲಿ ನೋಡಿರುವುದು ಕಂಡರೆ ಅಚ್ಚರಿಯಾಗುತ್ತದೆ. ವಿಮಾನದಲ್ಲಿ ಕುಳಿತು ಭಾರತವೇಕೆ ಅಂಧಕಾರದಲ್ಲಿ ಮುಳುಗಿದೆ, ಇಲ್ಲಿ ಲೈಟುಗಳಿಲ್ಲವೆ ಎಂದು ಯೋಚಿಸುವಾಗ ದೀಪಾವಳಿಯಲ್ಲಿ ಈಕೆ ಭಾರತವನ್ನು ಕಾಣಬೇಕಾಗಿತ್ತೆನಿಸುತ್ತದೆ. ಕಾರಿನಲ್ಲಿ ಸ್ಟೀರಿಂಗ್ ಬಲಗಡೆ ಇರುವುದು ಹಾಸ್ಯಾಸ್ಪದ ಎನ್ನುವಾಗ ಆಕೆ ಅಮೆರಿಕ ಎನ್ನುವ ಬಾವಿಯಿಂದ ಹೊರಬರಲು ತಯಾರಿರದ ಕಪ್ಪೆಯೆನಿಸುತ್ತದೆ- ಭಾರತ ಮಾತ್ರವಲ್ಲ, ಪ್ರಪಂಚದಲ್ಲಿ ಇನ್ನೂ 74 ದೇಶಗಳಲ್ಲಿ ಸ್ಟೀರಿಂಗ್ ಬಲಗಡೆ ಇರುತ್ತದೆ ಮತ್ತು ವಾಹನಗಳು ರಸ್ತೆಯ ಎಡಭಾಗದಲ್ಲಿ ಚಲಿಸುತ್ತವೆ.
ಆಕೆಯ ಸಾಕ್ಷಾತ್ಕಾರದ ಬಳಿಕದ ದಿನಗಳ ಬಗ್ಗೆ ಹೆಚ್ಚು ಬೆಳಕು ಚೆಲ್ಲಬಹುದಾಗಿತ್ತೇನೋ, ಆಗಲಾದರೂ ಆಕೆಯ ದ್ವೇಷದ ಬಗ್ಗೆ ಓದುಗರ ಕೋಪ ತಣ್ಣಗಾಗುತ್ತಿತ್ತು. ಭಾರತದ ಬಗ್ಗೆ ಆಕೆಯ ಪೂರ್ವಗ್ರಹಪೀಡಿತ ನೋಟದ ಮೇಲೆ ಬರುವ ಕೋಪ ಆಕೆ ಭಾರತವನ್ನು ಗೌರವಿಸತೊಡಗಿದಾಗಲೂ ಕಡಿಮೆಯಾಗುವುದಿಲ್ಲ. ಆಕೆಯ ದ್ವೇಷದ ಗಾಢತೆಯಲ್ಲಿ ಪ್ರೀತಿ ಎಲ್ಲೋ ಮರೆಯಾದಂತೆ ತೋರುತ್ತದೆ.
ಕೈಮಗ್ಗ ನೇಯ್ಗೆಯ ಕತೆ
ಕೈಮಗ್ಗ ನೇಯ್ಗೆಯ ಬಗ್ಗೆ ಏಕೆ ಇಲ್ಲಿ ಬರೆಯುತ್ತಿದ್ದೇನೆ, ಓದುಗರಿಗೆ ಇದರಿಂದಾಗುವ ಪ್ರಯೋಜನವಾದರೂ ಏನು, ಎಂಬ ಪ್ರಶ್ನೆಯು ನಿಮ್ಮನ್ನು ಕಾಡಿದ್ದರೆ ಅದು ಸಹಜವೇ ಆಗಿದೆ. ಈ ಪ್ರಶ್ನೆಯನ್ನೇ ಮೊದಲು ಎತ್ತಿಕೊಳ್ಳೋಣವಂತೆ. ಇತರ ಉದ್ದಿಮೆಗಳಂತೆ ಕೈಮಗ್ಗವೂ ಒಂದು ಉದ್ದಿಮೆ ಮಾತ್ರ ಎಂದಾಗಿದ್ದರೆ- ಮತ್ತೊಂದು ಕೈಗಾರಿಕೆ, ಅಥವಾ ಮತ್ತೊಂದು ವೃತ್ತಿ ಮಾತ್ರವೇ ಆಗಿದ್ದರೆ, ಈ ಪುಸ್ತಕವು ಹೆಚ್ಚಿನವರಿಗೆ ಆಸಕ್ತಿಯ ವಿಷಯ ಆಗಲಾರದು. ಆದರೆ ಈ ಉದ್ದಿಮೆಗೆ ಒಂದು ಸಾಂಕೇತಿಕ ಮಹತ್ವವಿದೆ. ಕೈಮಗ್ಗವೆಂಬುದು ಕೈಗಳಿಂದ ಚಲಿಸುವ ಯಂತ್ರ, ಪ್ರಾಯಶಃ ಅತ್ಯಂತ ಸಂಕೀರ್ಣವಾದ ಒಂದು ಕೈಯಂತ್ರ. ಸ್ವಯಂಚಾಲಿತ ಯಂತ್ರಗಳೇ ತುಂಬಿ ಹೋಗಿರುವ ಈ ಯುಗದಲ್ಲಿ ಇದು ಸ್ವಯಂಚಾಲಿತ ಯಂತ್ರವಲ್ಲ ಎಂಬುದೇ ಇದರ ಮಹತ್ವವಾಗಿದೆ. ಇಂದಲ್ಲ ನಾಳೆ, ಮಾನವ ಸಭ್ಯತೆಯ ಉಳಿವಿನ ಸಲುವಾಗಿಯಾದರೂ ಸರಿ, ನಾವು ಮಾನವರು ಮತ್ತೊಮ್ಮೆ ಕೈಕೆಲಸಕ್ಕೆ ಹಿಂದಿರುಗಲೇ ಬೇಕಿರುವುದರಿಂದ ಈ ಯಂತ್ರಕ್ಕೆ ಸಾಂಕೇತಿಕ ಮಹತ್ವ ಬಂದಿದೆ. ಕೈಕೆಲಸ, ಶ್ರಮದ ಜೀವನ ಪದ್ಧತಿ ಹಾಗೂ ಆ ಮೂಲಕ ನಿಧಾನಗತಿಯ ಬದುಕು, ಇವುಗಳನ್ನು ನಾವು ಇಂದಲ್ಲ ನಾಳೆ ಸ್ವೀಕರಿಸಲೇಬೇಕಾಗಿದೆ. ಹಾಗೆ ಸ್ವೀಕರಿಸಿದಾಗ ಮಾತ್ರವೇ ಮಾನವ ಸಭ್ಯತೆಯು ಉಳಿಯಬಲ್ಲುದು, ಒಳಿತಿನ ನಮ್ಮ ಪ್ರಯ್ತನಗಳು ಫಲಕಾರಿಯಾಗಬಲ್ಲದು.
(ಪ್ರಸನ್ನರ 'ಕೈಮಗ್ಗ ನೇಯ್ಗೆಯ ಕತೆ' ಕೃತಿಯಿಂದ ಆಯ್ದ ಭಾಗ)
ಕಾವ್ಯಪ್ರಭೆ
ಕಾಂತರಾಜಪುರ ಸುರೇಶ್ರ 5ನೇ ಕೃತಿ 'ಕಾವ್ಯ ಪ್ರಭೆ'. ಇದರಲ್ಲಿ 29 ವಿಮರ್ಶಾ ಲೇಖನಗಳಿವೆ. ಅವರ ವಿಮರ್ಶೆಯ ಮೊದಲ ಒಲವು ಕಾವ್ಯದ ಕಡೆಗೆ ಎಂಬುದಕ್ಕೆ ಇಲ್ಲಿಯ ಲೇಖನಗಳೇ ಸಾಕ್ಷಿ. ಕೃತಿಯಲ್ಲಿನ ಒಳ್ಳೆಯ ಗುಣಗಳನ್ನು ಎತ್ತಿಹೇಳಿ ಕೃತಿಕಾರನನ್ನು ಬೆನ್ನುತಟ್ಟುವ ವಿಮರ್ಶೆಗಳು ಇವು. ಸಹೃದಯನ ಒಳನೋಟಗಳು ಇದರಲ್ಲಿವೆ. ನಿರ್ದಿಷ್ಟ ವಿಮರ್ಶಾ ಮಾನದಂಡಗಳನ್ನು ಸುರೇಶ್ ಅವರು ಬಳಸುವುದಿಲ್ಲ. ಸಹೃದಯ ಓದುಗನಂತೆ ಅವರು ಕೃತಿಯ ಅನುಸಂಧಾನ ಮಾಡುವರು. ಕೃತಿಯೊಂದನ್ನು ಹುರುಪಿನಿಂದ ಅವರು ಪರಿಚಿಯುತ್ತಾರೆ. ಕೃತಿಗೆ ಓದುಗನ್ನು ದೊರಕಿಸಿಕೊಡುತ್ತಾರೆ. ಮೌನವೂ ವಿಮರ್ಶೆಯಲ್ಲಿ ಮಾತಾಗುತ್ತದೆ.
ಕೃತಿ: ಕಾವ್ಯಪ್ರಭೆ
ಪ್ರ: ವಸು ಪ್ರಕಾಶನ, ಬೆಂಗಳೂರು, ಪುಟಗಳು 112, ಬೆಲೆ ರು. 85
ಲಲ್ಲಾದೇವಿ
ಕಾಶ್ಮೀರದ ಅನುಭಾವಿ ಲಲ್ಲಾದೇವಿ (ಕ್ರಿ.ಶ.1317) 14ನೇ ಶತಮಾನದಲ್ಲಿ ಹುಟ್ಟಿದವಳು. ಕಾಶ್ಮೀರದ ಮೊದಲ ಕವಯತ್ರಿ ಆಕೆ. 24ರ ಹರೆಯದಲ್ಲಿ ಸಂಸಾರ ತೊರೆದು ಸನ್ಯಾಸಿನಿಯಾದಳು. ನಮ್ಮ ವಚನಕಾರರ ಹಾಗೆಯೇ ಶಿವನನ್ನು ಹುಡುಕಿದವಳು. ಅಲ್ಲಮನ ವಚನಗಳ ಹಾಗೆಯೇ ಅವಳ ಕಾವ್ಯವೂ ಬೆಡಗಿನದು. ಅಕ್ಕಮಹಾದೇವಿಯ ಹಾಗೆ ಶಿವನಲ್ಲಿ ಆರ್ತಳಾಗಿ ಮೊರೆಹೋದವಳು. ಲಲ್ಲೇಶ್ವರಿ ಎಂದೂ ಆಕೆಯನ್ನು ಕರೆಯುತ್ತಾರೆ. 24 ವರ್ಷ ಆಕೆ ಬದುಕಿದ್ದಳು. ಲಲ್ಲಾಳ ರಚನೆಗಳನ್ನು ವಾಕ್ಗಳೆಂದು ಕರೆಯುತ್ತಾರೆ. 400 ವಾಕ್ ರಚಿಸಿದಳೆಂದು ಪ್ರತೀತಿ. ಇಂಗ್ಲಿಷಿಗೆ ಅನುವಾದಗೊಂಡ ಈ ವಾಕ್ಗಳಲ್ಲಿ 154 ಅನ್ನು ಆರ್. ವಿಜಯರಾಘವನ್ ಕನ್ನಡಕ್ಕೆ ತಂದಿದ್ದಾರೆ. ವಚನಗಳನ್ನು ನೆನಪಿಸುವ ಈ ಅನುವಾದದ ಜೊತೆ ವಿವರಣೆಯೂ ಇದೆ.
ಪ್ರ: ವಿವಾ ಪುಸ್ತಕ, ಬೆಂಗಳೂರು, ಪುಟಗಳು 184, ಬೆಲೆ ರು. 120
ಬೇವಿನಗಿಡದ ಚಕ್ಕಡಿ
ಬಸು ಬೇವಿನಗಿಡದ ಅವರ 'ಹೊಡಿ ಚಕ್ಕಡಿ' ಸಂಕಲನ ಇದೀಗ ಬಂದಿದೆ. ಇದರಲ್ಲಿ ಬಸು ಅವರ 12 ಕತೆಗಳು ಇವೆ. ಶೋಷಣೆಯನ್ನು ಅಗಧಿ ದಟ್ಟವಾಗಿ ಕಟ್ಟಿಕೊಡುವ ಶಕ್ತಿ ಬಸು ಅವರಲ್ಲಿದೆ. ಹಿಂದುಳಿದ ವರ್ಗದ ಹಾಸ್ಟೆಲ್ನಲ್ಲಿ ನಡೆಯುವ ಕೀಳು ರಾಜಕೀಯವನ್ನು 'ಹಸಿವೆಯೇ ನಿಲ್ಲು ನಿಲ್ಲು' ಕತೆ ಗಾಢವಾಗಿ ಕಟ್ಟಿಕೊಡುತ್ತದೆ. ಸಾಮಾಜಿಕ ಬದುಕಿನಲ್ಲಿ ನೈತಿಕತೆಯ ಗೈರುಹಾಜರಿ ಲೇಖಕರನ್ನು ಬಹುತೇಕ ಕತೆಗಳಲ್ಲಿ ತಟ್ಟಿದೆ.
ಕೃತಿ: ಹೊಡಿ ಚಕ್ಕಡಿ, ಪ್ರ: ಮನೋಹರ ಗ್ರಂಥಮಾಲಾ, ಧಾರವಾಡ,
ಪುಟಗಳು 142, ಬೆಲೆ ರು. 100
- ಚೈತ್ರಾ ಅರ್ಜುನಪುರಿ
carjunp@gmail.com
Stay up to date on all the latest ಖುಷಿ news