ಮಂಗೋಲಿಯಾ ರಾಮಾಯಣ

ಮಂಗೋಲಿಯಾ ರಾಮಾಯಣ

ರಾಮಾಯಣಕ್ಕೆ ಸಂಬಂಧಿಸಿದ ಜನಪ್ರಿಯ ವಿವಿಧ ಕಥೆಗಳ ಮೂಲ ಆಧಾರವೆಂದರೆ ಮರದ ಹಲಗೆಗಳ ಮೇಲಿನ ಕೆತ್ತನೆ ಮತ್ತು ಕೈಬರಹಗಳ ಪುಸ್ತಕಗಳು; ಇದರಿಂದ ತಿಳಿಯುವುದೇನೆಂದರೆ ಪುರಾತನ ಕಾಲದಿಂದಲೂ ಮಂಗೋಲಿಯಾದಲ್ಲಿ ರಾಮಾಯಣದ ಪರಿಚಯವಿತ್ತು. ಪ್ರತಿ ಕಥಾ ನಿರೂಪಣೆಯಲ್ಲೂ ಕಲಾತ್ಮಕ ಮಂಗೋಲಿಯಾ ಸಂಸ್ಕೃತಿಯ ಛಾಯೆಯು ಪ್ರಜ್ವಲಿಸುವುದನ್ನು ಅರಿಯಬಹುದು.
ಭಾರತ ದೇಶದ ಗ್ರಂಥಗಳು ಟಿಬೆಟ್ ಮೂಲಕ ಮಂಗೋಲಿಯಾಕ್ಕೆ ಹೋದವು. ಇವುಗಳಲ್ಲಿ ಮುಖ್ಯವಾದವು ಬೌದ್ಧ ಗ್ರಂಥಗಳು. ರಾಮಾಯಣ ಪಾತ್ರಗಳ ಸಾಮ್ಯವನ್ನು 'ಪ್ರಜ್ಞಾಪಾರ ಮಿತಾಸೂತ್ರ'ದಲ್ಲಿ ಕಾಣಬಹುದು. ಕಥಾ ನಿರೂಪಣೆಯಲ್ಲಿ ಭಾಷಾಂತರಕಾರನು ತನ್ನ ಕಲ್ಪನಾಸಾಮರ್ಥ್ಯದಿಂದ ಅಲ್ಲಲ್ಲಿ ಸುಂದರ ಚಿತ್ರಣ ನೀಡಿದ್ದಾನೆ.
ಕಥೆಯ ಕಡೆ ಗಮನ ಹರಿಸಿದರೆ ದೊರೆ ಜೀವಕನಿಗೆ ಮೂವರು ಪತ್ನಿಯರು; ಮಕ್ಕಳಿರಲಿಲ್ಲ. ಕಣಿ ಹೇಳಿದ ಪ್ರಕಾರ, ಉದುಂಬರ ಹೂವನ್ನು ಸೇವಿಸಿದರೆ ಮಕ್ಕಳಾಗುವುದೆಂದು ಕೇಳಿದನು. ಜೀವಕನು ಸಮುದ್ರದಲ್ಲರಸಿ ತಂದು ಹೆಂಡತಿಯರಿಗೆ ನೀಡಿದನು. ಒಬ್ಬಳು ರಾಣಿಗೆ ಮಗನು ಹುಟ್ಟಿದ. ಅವನಿಗೆ 'ರಾಮ' ಎಂದು ನಾಮಕರಿಸಲಾಯಿತು. ಕಾಲಕ್ರಮದಲ್ಲಿ ರಾಮನು ರಾಜ್ಯಾಡಳಿತ ವಹಿಸಿಕೊಂಡು ಧರ್ಮಪಾಲನೆ ಮಾಡುತ್ತಾ ಪ್ರಜೆಗಳಿಗೆ ಸುಖಸಂತೋಷದ ಜೀವನ ನೀಡಿದನು. 'ಬುದ್ಧ ಕ್ರಕುಚಂದ'ನು ರಾಮನ ಆಹ್ವಾನವನ್ನು ಅಂಗೀಕರಿಸಿ ಆ ರಾಜ್ಯಕ್ಕೆ ಬಂದು ಬೌದ್ಧ ಧರ್ಮವನ್ನು ಪ್ರಸಾರ ಮಾಡಿದನು.
ಒಮ್ಮೆ ಲಂಕಾ ಪಟ್ಟಣದ ದೈತ್ಯನು ಚಿನ್ನ ಮತ್ತು ಬೆಳ್ಳಿ ಬಣ್ಣದ ಜಿಂಕೆಯಾಕಾರದಲ್ಲಿ ಬಂದು ಮುನಿಗಳ ತಪೋಭಂಗ ಮಾಡಲಾರಂಭಿಸಿದನು. ಮುನಿಗಳು ರಾಮನಿಗೆ ತಿಳಿಸಿ ಆ ಮೃಗವನ್ನು ಒಂದು ಕಲ್ಲಿನಿಂದ ಅದರ ಕಣ್ಣಿಗೆ ಹೊಡೆದು ಓಡಿಸಲು ಹೇಳಿದರು. ಅಂತೆಯೇ ರಾಮನು ಮಾಡಿದನು. ಮುನಿಗಳು ರಾಮನಿಗೆ ಅದೃಶ್ಯವಾಗುವ ಶಕ್ತಿಯ ವರ ನೀಡಿದರು.
ಭೂತಗಳ ರಾಜ್ಯದಲ್ಲಿ ವಯಸ್ಸಾದ ಭೂತಿಣಿ ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಆ ಮಗು ಅಲ್ಲಿದ್ದಲ್ಲಿ ದೇಶ ನಾಶವಾಗುವುದೆಂದು ಭವಿಷ್ಯ ತಿಳಿಸಲು ಮಗುವನ್ನು ಪೆಟ್ಟಿಗೆಯಲ್ಲಿಟ್ಟು ಸಮುದ್ರಕ್ಕೆ ಎಸೆದುಬಿಟ್ಟರು. ಪೆಟ್ಟಿಗೆ ತೇಲುತ್ತಾ ಜಂಬೂದ್ವೀಪದ ಒಬ್ಬ ರೈತನ ಕೈಸೇರಿತು. ಅವಳು ವಯಸ್ಕಳಾದ ಮೇಲೆ ರಾಮನಿಗೆ ಮದುವೆ ಮಾಡಿಕೊಡಲಾಯಿತು. ದೈತ್ಯರಾಜ ದಶಗ್ರೀವನು ತನ್ನ ತಂಗಿಯಿಂದ ರಾಮನ ಹೆಂಡತಿ ಬಲು ಸುಂದರಿಯೆಂದು ತಿಳಿದುಕೊಂಡು ಅವಳನ್ನು ಪಡೆಯಲು ಅವನ ಮಂತ್ರಿಯನ್ನು ಜಿಂಕೆಯಾಕಾರದಲ್ಲಿ ಕಳುಹಿಸಿದ ದಶಗ್ರೀವನು ರಾಮನ ಹೆಂಡತಿಯನ್ನು ತನ್ನ ದೇಶಕ್ಕೆ ಕದ್ದುಕೊಂಡು ಹೋದನು.
ರಾಮನು ಹೆಂಡತಿಯನ್ನು ಹುಡುಕುತ್ತಾ ವಾನರರ ರಾಜ್ಯಕ್ಕೆ ಬಂದನು; ಅಲ್ಲಿ ವಾಲಿನ್ ಸುಗ್ರೀವರು ಕಾದಾಡುತ್ತಿದ್ದರು. ರಾಮನು ವಾಲಿಯನ್ನು ಸಂಹರಿಸಿದನು. ಪ್ರತ್ಯುಪಕಾರ ಮಾಡಲು ಸುಗ್ರೀವನು ವಾನರ ಸೈನ್ಯವನ್ನೊದಗಿಸಿದನು. ವಾನರ ಸೇನಾ ಮುಖ್ಯಸ್ಥ ಹನುಮನೊಡಗೂಡಿ ರಾಮನು ಹೆಂಡತಿಯನ್ನು ಮತ್ತೆ ಹಿಂದಕ್ಕೆ ಕರೆತಂದನು. ನಂತರ ಸುಖವಾಗಿ ಬಾಳಿದರು.
ಮಂಗೋಲಿಯಾದ ಬೌದ್ಧ ಲಾಮಾಗಳು ರಾಮನ ಕಥೆಯ ಉದಾಹರಣೆಗಳನ್ನು ನೀಡುವ ಪರಿಪಾಠವಿದೆ. ಅದರಲ್ಲೂ ಪದ್ಯಕಾವ್ಯಗಳಲ್ಲಿ ರಾಮಾಯಣದ ಸನ್ನಿವೇಶಗಳನ್ನು ಸುಂದರವಾಗಿ ಚಿತ್ರಿಸಿದ್ದಾರೆ. ಮಂಗೋಲಿಯಾದ 'ಜಂಬದೋರ್ಜಿ' ಕ್ರಿ.ಶ. 1837ರಲ್ಲಿ 'ಬೊಲೋರ್ ತೊಲಿ' ಗ್ರಂಥದಲ್ಲಿ ಸೂರ್ಯವಂಶದ ಸಾಮ್ರಾಜ್ಯವಾಳಿದ ಶಾಕ್ಯ ದೊರೆಗಳ ಉಲ್ಲೇಖವಿದೆ. 'ಕಪಿಲ್‌' ನಗರದಲ್ಲಿ ದಶರಥ ದೊರೆಯಾಳುತ್ತಿದ್ದನು. ಅವನ ಮಗ ರಾಮ. ಕಥೆಯಲ್ಲಿ ಒಂದು ಆಕರ್ಷಕ ಸನ್ನಿವೇಶದ ವಿವರಣೆ ಇರುವುದು. ಬೇರೆಲ್ಲೂ ಇದು ಇಲ್ಲ.
ರಾಮರಾವಣ ಯುದ್ಧವು ಭಯಂಕರವಾಗಿ ನಡೆಯುತ್ತಿತ್ತು. ರಾವಣನನ್ನು ಹುಡುಕುತ್ತಾ ರಾಮನು ರಾವಣನ ಸ್ಫಟಿಕದಿಂದ ನಿರ್ಮಿತವಾದ ಅರಮನೆಗೆ ಬಂದನು. ನಯವಾದ ಗೋಡೆಗಳಲ್ಲಿ ರಾವಣನ ನೂರು ಪ್ರತಿಮೆಗಳನ್ನು ಜೋಡಿಸಲಾಗಿತ್ತು. ನಿಜವಾದ ರಾವಣನು ಯಾರೆಂದು ರಾಮನಿಗೆ ತಿಳಿಯಲಿಲ್ಲ. ಆಗ ರಾಮನಿಗೆ ಭಕ್ತಿಪೂರ್ವಕ ಸೇವೆಗೈಯ್ಯುತ್ತಿದ್ದ ಹನುಮಂತನು ನಿಜವಾದ ರಾವಣನನ್ನು ತೋರಿಸಿಕೊಟ್ಟನು. ರಾಮನು ಬಾಣ ಪ್ರಯೋಗಿಸಿ ರಾವಣನನ್ನು ಸಂಹರಿಸಿದನು.
ರಾಮಾಯಣವು ಮಂಗೋಲಿಯನ್ನರ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಲಾಮಾಗಳಿಗೆ ವಾನರ ಪಂಥ, ಕಿರಿಯ ಮೂರ್ತಿಪೂಜೆ, ಪ್ರತಿಮೆಗಳ ಪೂಜೆ ವಿಧಿಯ ಆಧ್ಯಾತ್ಮಿಕ ಶ್ರದ್ಧೆ ಅಪಾರವಾಗಿತ್ತು. ವಾನರಪೂಜೆ, ವರಗಳ ಪಡೆಯಲು ಬಲಿ ಕೊಡುವುದರಲ್ಲಿ ನಂಬಿಕೆಯಿದ್ದಿತು. ವಾನರರಿಗೆ ಸಲ್ಲಿಸುವ ಪೂಜಾಪದ್ಧತಿ ಭಾರತದ ರಾಮಾಯಣದಲ್ಲಿನ ಹನುಮಾನನ ಪ್ರಭಾವ ಎನ್ನಲಡ್ಡಿಯಿಲ್ಲ.
ದಶರಥ ಜಾತಕಗಳು ಸಂಸ್ಕೃತ, ಚೀನೀ ಮತ್ತು ಕೊಟಾನ್ ಭಾಷೆಗಳಿಂದ ಭಾಷಾಂತರಗೊಂಡು ಮಂಗೋಲಿಯಾ ಮತ್ತು ಟಿಬೆಟ್ ದೇಶಗಳಲ್ಲಿ ಜನಪ್ರಿಯವಾಗಿವೆ.
ಪುಸ್ತಕ: ಅಮರ ರಾಮಾಯಣ (ವಿವಿಧ ದೇಶಗಳ ರಾಮಾಯಣದ ಸರಳಾನುವಾದ)
ಲೇಖಕರು: ವಿದುಷಿ ಸರೋಜಾ ಶ್ರೀನಾಥ್
ಅಭಿಜಿತ್ ಪ್ರಕಾಶನ, ಮುಂಬೈ
ಬೆಲೆ: 150

ಶಿಲಾಕುಲ ವಲಸೆ
ಘಟನೆಯೊಂದರ ಎಳೆಯನ್ನು ಹಿಡಿದು ಕುತೂಹಲಕರವಾಗಿ ಪತ್ತೆದಾರಿ ಶೈಲಿಯನ್ನು ಕತೆಯನ್ನು ಹೆಣೆಯುವ ಕೆ. ಗಣೇಶಯ್ಯ ಈಗಾಗಲೆ ಕನ್ನಡದಲ್ಲಿ ದೊಡ್ಡ ಸಂಖ್ಯೆಯ ಓದುಗರನ್ನು ಗಳಿಸಿಕೊಂಡಿದ್ದಾರೆ. ಅವರ ಇತ್ತೀಚಿನ ಕೃತಿ 'ಶಿಲಾಕುಲ ವಲಸೆ'. ಹೆಸರೇ ಹೇಳುವಂತೆ ಶಿಲಾಕುಲ ಎಂದರೆ ಶಿಲಾಯುಗದ ಜನರು. ಅವರ ವಲಸೆ ಹೇಗೆ ಆಯಿತು ಎಂಬುದನ್ನು ಅವರು ಇತಿಹಾಸ, ಜಾನಪದ, ಪುರಾಣ ಇತ್ಯಾದಿಗಳಿಂದ ಮಾಹಿತಿ ಕಲೆಹಾಕಿ ನಿಜವೋ ಎನ್ನುವಂತೆ ಕತೆಯನ್ನು ಕಟ್ಟಿದ್ದಾರೆ. ಇದರಲ್ಲಿ ಭಾರತದ ಮೂಲ ನಿವಾಸಿಗಳು ಯಾರು, ಆರ್ಯರು ಇಲ್ಲಿನವರೆ, ಎಲ್ಲಿಂದ ಬಂದವರು, ದ್ರಾವಿಡರು ಯಾರು ಇತ್ಯಾದಿ ಅಂಶಗಳನ್ನು ಕೆದಕುತ್ತ ಹೋಗುತ್ತಾರೆ. ಎಲ್ಲ ದೇವತೆಗಳ ವಿಕಾಸ ಪಥ ಒಂದೇ ಎಂಬುದು ಲೇಖಕರ ಅರಿವು. ಕತೆಯ ನಡುವೆ ಸಂಶೋಧನೆಗೆ ಮಾಹಿತಿ ಒದಗಿಸುವವರ ಕೊಲೆಯೂ ನಡೆಯುವುದರಿಂದ ಇದೊಂದು ಥ್ರಿಲ್ಲರ್ ಆಗುತ್ತದೆ. ರೋಚಕವಾದ ಶೈಲಿ ಗಣೇಶಯ್ಯಗೆ ಸಿದ್ಧಿಸಿದೆ. ಕಷ್ಟಪಟ್ಟು ಸಾಕಷ್ಟು ಮಾಹಿತಿಯನ್ನೂ ಅವರು ಕಲೆಹಾಕಿದ್ದಾರೆ. ಅವರ ಅಧ್ಯಯನದ ಕುರುಹು ಇದರಲ್ಲಿ ಕಾಣುವುದು. ಕರ್ನಾಟಕದ ಎಡಕಲ್ಲುಗುಡ್ಡದ ನೆಲೆಯಿಂದಾಗಿ ಕನ್ನಡ ನೆಲದ ಸಂಪರ್ಕವೂ ಇದಕ್ಕೆ ಒದಗಿದೆ. ಬೆಂಗಳೂರು, ಲಂಡನ್, ಭುಜ್, ದೆಹಲಿ, ಕೊಲ್ಕತ್ತಾ ಹೀಗೆ ಹಲವು ನೆಲೆಗಳಲ್ಲಿ ಕತೆಯು ಹರಡಿದೆ.
ಪ್ರ: ಅಂಕಿತ ಪುಸ್ತಕ, ಬೆಂಗಳೂರು, ಪುಟಗಳು 328, ಬೆಲೆ ರು. 225

ಚರ್ಚೆಗೊಳಗಾಗುತ್ತಾನೆ ಸೂರ್ಯ
ಕವಿತೆ ಬಟ್ಟೆ ತೊಡಿಸಿಕೊಳ್ಳುವಂತಹುದಲ್ಲ. ಯಾವಾಗಲೂ ಬೆತ್ತಲೆ ಬಯಸುತ್ತದೆ ಎಂಬ ನಂಬಿಕೆಯ ಸಿ.ವಿ. ಶೇಷಾದ್ರಿ ಹೊಳವನಹಳ್ಳಿಯವರು ತಮ್ಮ 'ಚರ್ಚೆಗೊಳಗಾಗುತ್ತಾನೆ ಸೂರ್ಯ' ಕವನ ಸಂಕಲನದಲ್ಲಿ ಹಲವು ಉತ್ತಮ ಕವಿತೆಗಳನ್ನು ನೀಡಿದ್ದಾರೆ. ಸಮಾಜದಲ್ಲಿಯ ಅಸಂಗತಗಳನ್ನು ವ್ಯಂಗ್ಯವಾಗಿ ನೋಡುವ ಕವಿಯ ಆಂತರ್ಯದಲ್ಲಿ ಈ ಬಗ್ಗೆ ತೀವ್ರವಾದ ವಿಷಾದವಿದೆ. ಎಲ್ಲರೂ ಚೆನ್ನಾಗಿರಬೇಕು ಎಂಬುದು ಕವಿಯ ಆಶಯವಾಗಿದೆ. 'ಎಲ್ಲರೂ ಚೆನ್ನಾಗಿರ್ಲಿ' ಎಂಬ ಒಂದು ಕವಿತೆ ಇದರಲ್ಲಿದೆ. "ನಾವ್ ನಾವೇ ಜಗಳ ಆಡಿದ್ದಿದ್ರೆ/ ಬೇಗ ಬರೆಹರೀತಿತ್ತು/ ಮೂರನೇವ್‌ರು ಬಂದ್ರು/ ಮಾಮ್ಲ ಬಿಗಡಾಯಿಸ್ತು..." ಎಂದು ಆರಂಭವಾಗುವ ಈ ಕವಿತೆಯಲ್ಲಿ ಇಬ್ಬರ ಜಗಳದಲ್ಲಿ ಮೂರನೆಯವರು ಹೇಗೆ ಲಾಭಮಾಡಿಕೊಳ್ಳುತ್ತಾರೆ ಅಥವಾ ಬೇರೆಯವರಿಂದ ಹೇಗೆ ತೊಂದರೆಯಾಗುತ್ತದೆ ಎಂಬುದನ್ನು ತುಂಬ ಲವಲವಿಕೆಯಿಂದ ವರ್ಣಿಸಿದ್ದಾರೆ. ಕೊನೆಯಲ್ಲಿ "ಚೆನ್ನಾಗಿದ್ದೀರಾ..?/ ಅಂತ ಕೇಳ್ಕೊಂತ/ ಈ ಹಾಡ್ ಹೇಳೋಣ/ ಬೇರೇವ್‌ರ ಬೋದ್‌ನೆ ಬೇಡ ನಮ್ಗೆ/ ನಮ್‌ದೆ ಇರ್ಲಿ/ ಒಬ್ಬುನ್ ಸುಖಾ ಅಲ್ಲ/ ಎಲ್ರೂ ಚೆನ್ನಾಗಿರ್ಲಿ" ಎಂದು ಮುಗಿಸುತ್ತಾರೆ. ಇವರಲ್ಲಿ ಒಬ್ಬ ಗಟ್ಟಿಯಾದ ಕವಿ ಇದ್ದಾನೆ ಎಂಬುದಕ್ಕೆ ಇದೂ ಸೇರಿದಂತೆ ಹಲವು ಪುರಾವೆಗಳು ಈ ಸಂಕಲನದಲ್ಲಿವೆ.
ಪ್ರ: ಕಮಲ ಪ್ರಕಾಶನ, ಕೊರಟಗೆರೆ ಪುಟಗಳು 80, ಬೆಲೆ ರು. 80

ನಾ ಕಂಡ ಮಸ್ಕತ್
ನಮ್ಮಲ್ಲಿ ಹೆಚ್ಚಿನವರು ಕೇಳೇ ಇರದ ದೇಶ ಒಮನ್. ತನ್ನ ಗಂಡನ ಉದ್ಯೋಗದ ನಿಮಿತ್ತ ಈ ದೇಶಕ್ಕೆ ಅಳುಕುತ್ತಲೇ ಹೋಗಿ ಈಗ ಹೆಮ್ಮೆಯಿಂದ ನನ್ನದೆಂದು ಹೇಳಿಕೊಳ್ಳುವ ಕವಿತ ರಾಮಕೃಷ್ಣ, ಅದಕ್ಕೆ ತಮ್ಮ 'ನಾ ಕಂಡ ಮಸ್ಕತ್‌' ಪುಸ್ತಕದಲ್ಲಿ ಕಾರಣಗಳನ್ನು ನೀಡುತ್ತಾರೆ. ಮುಸ್ಲಿ ದೇಶವೊಂದು 'ರಾಮರಾಜ್ಯ'ದ ಕಲ್ಪನೆ ನೆರವೇರಿಸಿರುವುದರ ಹಿಂದೆ ರಾಜ ಸುಲ್ತಾನ್ ಖಬೂಸ್ ಬಿನ್ ಸೈಯದ್ ಅವರ ದಕ್ಷ ಆಡಳಿತದ ಕಾಣಿಕೆ ಎಷ್ಟಿದೆ ಎಂಬುದನ್ನು ಸ್ಮರಿಸುತ್ತಾರೆ. ಭಾರತದಂಥ ದೇಶದಲ್ಲಿ ಭರವಸೆಗಳಾಗೇ ಉಳಿವ ನಮ್ಮ ಕನಸುಗಳೆಲ್ಲವೂ ಒಮನ್‌ನಂತ ಪುಟ್ಟ ದೇಶವೊಂದರಲ್ಲಿ ಸಾಕಾರಗೊಂಡಿರುವುದು ಕೇಳುವಾಗ ಇದೊಂದು 'ಕನಸಿನ ಲೋಕ'ವೆನಿಸುತ್ತದೆ. ಜೊತೆಗೆ ನಮ್ಮನಾಡಿನ ಈ ಕುಟುಂಬ ಅಲ್ಲಿ ಹೋಗಿ ಪತಿ, ಪತ್ನಿ ಮಗ ಮೂವರೂ ಒಂದೊಂದು ವಿಧದಲ್ಲಿ ಸಾಧನೆ ಮೆರೆಯುತ್ತಾ ನಮ್ಮ ದೇಶದ ಕೀರ್ತಿ ಎತ್ತಿ ಹಿಡಿಯುತ್ತಿರುವುದು ಹೆಮ್ಮೆಯೆನಿಸುತ್ತದೆ.

ಕವಿತೆ ನಿಲು ತಾಣ
'ಬೇರೆ ಬೇರೆ/ ಆಕಾರಗಳ ಮೋಡಗಳು/ ಮಳೆ ಸುರಿಸುವಾಗ/ ಒಂದಾಗಿ ಬಿಡುತ್ತವೆ./'- 'ಮಳೆ ಸುರಿಸುವಾಗ' ಹೆಸರಿನ ಈ ಹನಿಯಲ್ಲಿ ಎಷ್ಟೊಂದು ಅರ್ಥಗಳು ತುಂಬಿವೆ ನೋಡಿ. ಮಳೆ ಸುರಿಸುವುದು ವ್ಯಕ್ತಿಯೊಬ್ಬನ ನೋವಿನ ಅಭಿವ್ಯಕ್ತಿಯೂ ಆಗಬಹುದು ಸಂತೋಷದ ಅಭಿವ್ಯಕ್ತಿಯೂ ಆಗಬಹುದು. ಈ ಎರಡೂ ಸಂದರ್ಭಗಳಲ್ಲಿ ಜನರು ಸೇರುತ್ತಾರೆ. ದುಃಖವನ್ನೂ ಹಂಚಿಕೊಳ್ಳುತ್ತಾರೆ, ಸಂತೋಷದಲ್ಲೂ ಭಾಗಿಯಾಗುತ್ತಾರೆ. ಇದು ಸಿ.ವಿ.ಶೇಷಾದ್ರಿ ಹೊಳವನಹಳ್ಳಿಯವರ ಪುಟ್ಟ ಕವಿತೆಯ ಚಮತ್ಕಾರ. ಇಂಥ ನೂರಾರು ಹನಿಗಳನ್ನು ಅವರು ತಮ್ಮ 'ಸಣ್ಣ ನಿಲ್ದಾಣ' ಸಂಕಲನದಲ್ಲಿ ನೀಡಿದ್ದಾರೆ. ಇದಕ್ಕೊಂದು ಉಪ ಶೀರ್ಷಿಕೆ- ಪುಟಕ್ಕೊಂದು ಪುಟ್ಟ ಕವಿತೆ. ಎರಡೇ ಸಾಲಿನ ಕವಿತೆ ಇದ್ದರೂ ಅದಕ್ಕೊಂದು ಅರ್ಥಪೂರ್ಣ ಚಿತ್ರವಿದೆ. "ಹೂ ಮುಡಿಯುವ ಇಷ್ಟವಿದ್ದರೆ/ ಹೇಗಾಗುವುದು ಹೇಳು ಕಟ್ಟಲು ಬೇಜಾರು?/ ಶಿಖರದ ತುದಿ ಸೆಳೆಯುತ್ತಿದ್ದರೆ/ ಹೇಗೆ ಹೆದರಿಸುವುದು ಇಳಿಜಾರು..?/", "ಈ ಬದುಕು/ ದುಡುಕು/ ಒಂದೊಂದೇ ಮೆಟ್ಟಿಲಿಳಿದು/ ಕೈ ಜಾರಿದ್ದೆಲ್ಲ/ ಹುಡುಕು/". ಹೀಗೆ ಸುಭಾಷಿತದಂತೆ ಉಸುರಬಹುದಾದ, ಮೈತುಂಬ ಅರ್ಥವನ್ನು ಹೊದ್ದ ಇಲ್ಲಿಯ ಹನಿಗಳು ಇಷ್ಟವಾಗುತ್ತವೆ. ಶೇಷಾದ್ರಿಯವರು ಇನ್ನಷ್ಟ ಹನಿಸಲಿ.
ಪ್ರ: ಕಮಲ ಪ್ರಕಾಶನ, ಕೊರಟಗೆರೆ ಪುಟಗಳು 132

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com