ದೇವಲೋಕದ ಪುಷ್ಪ ಪಾರಿಜಾತ

ದೇವಲೋಕದ ಪುಷ್ಪ ಪಾರಿಜಾತ

ದೇವಾಸುರರು ಹಾಲಿನ ಕಡಲನ್ನು ಕಡೆದಾಗ ಮೇಲೆದ್ದು ಬಂದ ಹದಿನಾಲ್ಕು ರತ್ನಗಳ ಪೈಕಿ ಪಾರಿಜಾತವೂ ಒಂದು. ಪಾರಿಜಾತ ಮರವನ್ನು ಪಡೆಯಲು ರುಕ್ಮಿಣಿ ಸತ್ಯಭಾಮಾ ಇವರ ನಡುವೆ ಕಾದಾಟವಾಗುತ್ತದೆ. ಈ ಮರ ತನಗೆ ಬೇಕು ಎಂಬುದು ಇವರಿಬ್ಬರ ಬಯಕೆ. ಈ ಮರವನ್ನು ಯಾರಿಗೆಂದು ಕೊಡುವುದು!
ಶ್ರೀಕೃಷ್ಣನಾದರೋ ಬಲು ಚತುರ. ಸುರ ಲೋಕದಿಂದ ತಂದ ಪಾರಿಜಾತ ಮರವನ್ನು ಸತ್ಯಭಾಮೆಯ ಅಂಗಳದಲ್ಲಿ ನೆಟ್ಟನು. ಅಲ್ಲಿ ಅಂಗಳದಲ್ಲಿ ಬೆಳೆದ ಪಾರಿಜಾತ ರುಕ್ಮಿಣಿಯ ಅಂಗಳದಲ್ಲಿ ಹೂವನ್ನು ಉದುರಿಸುತ್ತಿತ್ತು.
ಇದು ಪಾರಿಜಾತದ ಕುರಿತು ಇರುವ ಪುರಾಣದ ಸ್ವಾರಸ್ಯಕರ ಕಥೆ. ನಮ್ಮ  ಜನಪದ, ಪುರಾಣಗಳು ಹಾಡಿ  ಹರಸಿರುವ ಮರ ಪಾರಿಜಾತ. ನಿಜಕ್ಕೂ ಇದು ದೇವಲೋಕದ ಮರವೇ ಸರಿ. ಸಂಜೆಯ ವೇಳೆ ಹೂವರಳಿಸಿ ಪರಿಮಳ ಸೂಸುವ ಈ ಹೂವನ್ನು ನೋಡಿದವರು ದೇವಲೋಕಕ್ಕೆ ತಕ್ಕುದಾದ ಮರ ಎಂದು ಒಪ್ಪದೆ  ಇರಲಾರರು.
ಇನ್ನೊಂದು ಕಥೆಯ ಪ್ರಕಾರ ಒಬ್ಬ ರಾಜಕುಮಾರಿಯ ಹೆಸರು ಪಾರಿಜಾತಕ. ಅವಳು ಸೂರ್ಯನನ್ನು ಪ್ರೀತಿಸಿದಳು. ಆದರೆ ಸೂರ್ಯ ದೇವರು ಮಾತ್ರ ಮಾತಿಗೆ ತಪ್ಪಿ ಆಕೆಯನ್ನು ತಿರಸ್ಕರಿಸಿದರು. ಮಾತು ತಪ್ಪಿದ ವಿರಹ ವೇದನೆಯಲ್ಲಿ ಪಾರಿಜಾತಕ ಅಗ್ನಿಗೆ ಆತ್ಮಾ ರ್ಪಣೆ ಮಾಡಿದಳು. ಪಾರಿಜಾತ ಮರವಾಗಿ ಜನಿಸಿದಳು. ಸೂರ್ಯನನ್ನು ಇನ್ನೆಂದಿಗೂ ನೋಡಲಾರೆ ಎಂಬ ತನ್ನ ಪ್ರತಿಜ್ಞೆಯನ್ನು ಇಂದಿಗೂ ಅದು ನೆರವೇರಿಸುತ್ತಲೇ ಇದೆ. ಇಂದಿಗೂ  ಸಂಜೆಯ ವೇಳೆ ಸೂರ್ಯ ಅಸ್ತಮಿಸಿದ ನಂತರವೇ ಇದು ಹೂವರಳಿಸುತ್ತದೆ. ಸೂರ್ಯ ಬರುವ ವೇಳೆ ಹೂವು ಮರದಿಂದ ಉದುರಿರುತ್ತದೆ.  
ರಾತ್ರಿಯ ವೇಳೆ ಸುವಾಸನೆ ಸೂಸುವ ಸುಂದರ ಹೂವಿಗೆ ಕೆಂಪು ದಳ. ಬಿಳಿಯ ಮೃದುವಾದ ಹೂವಿನ ಎಸಳುಗಳು. ಒಂದು ರೀತಿಯಲ್ಲಿ ತುಂಬಾ ಕೋಮಲವಾದ ಹೂವು ಇದು. ಪಾರಿಜಾತ ಮರದ ಗೆಲ್ಲುಗಳನ್ನು ಮಳೆಗಾಲದ ಅವಧಿಯಲ್ಲಿ ತುಂಡು ಮಾಡಿ ನೆಟ್ಟರೂ ಬದುಕುತ್ತವೆ.
ಪಾರಿಜಾತ ಹತ್ತರಿಂದ ಹದಿನೈದು ಅಡಿ ಎತ್ತರ ಬೆಳೆಯುವ ಪೊದರು ಮರ. ಐವತ್ತು ಅರುವತ್ತು ವರ್ಷದ  ಮರಗಳೂ ಅತಿ ಎತ್ತರಕ್ಕೆ ಬೆಳೆಯದೆ ತುಂಬಾ ಹೂವುಗಳನ್ನು ನೀಡುತ್ತಿರುತ್ತವೆ. ನಿಕಾಂಥಿಸ್ ಅರ್ಬಸ್ಟ್ರಿಸ್ಟಿಸ್ ಎಂಬುದು ವೈಜ್ಞಾನಿಕ ಹೆಸರು. ರಾತ್ರಿಯಲ್ಲಿ  ಹೂವರಳಿಸುವ ದುಃಖತಪ್ತ ಮರ ಎಂಬ ಅರ್ಥವನ್ನು ಈ ಶಬ್ದ ಸೂಚಿಸುತ್ತದೆ. ಸಂಸ್ಕೃತದಲ್ಲಿ ಶೆಫಾಲಿಕಾ. ಬೆಂಗಾಲಿಯಲ್ಲಿ ಹರ್‌ಸಿಂಗಾರ್. ಮಲಯಾಳದವರು ಪವಿಳ ಮಲ್ಲಿಗೆ ಎಂದು ಕರೆಯುವರು. ತಮಿಳರಿಗೆ ಮಾತ್ರ ಇದು ಮಂಜು ವೂ.
ಔಷಧೀಯ ಬಳಕೆಗಾಗಿ ಸುಶ್ರುತ ಸಂಹಿತೆಯಲ್ಲಿ ಪ್ರಸ್ತಾಪವಾಗಿದೆ. ತೊಗಟೆಯ ಕಷಾಯ ಗಾಯಗಳಿಗೆ ಉಪಯೋಗ. ಎಲೆಯ ರಸ ಜಂತುಹುಳ ನಿವಾರಕ. ತೊಗಟೆಯ ಪುಡಿ ಕೆಮ್ಮು ಗುಣಪಡಿಸುತ್ತದೆ. ಲಿವರ್ ತೊಂದರೆಗಳಿಗೆ ಎಲೆಯ ರಸ ಸೇವನೆ ಪರಿಣಾಮಕಾರಿ. ಹೂವಿನಿಂದ ಸುಗಂಧ ದ್ರವ್ಯ ತಯಾರಿಸುತ್ತಾರೆ.
'ಸಂಜೆಗೆಂಪು ಮೊದಲು, ಹಿಂದೆ ಬೆಳದಿಂಗಳು' ಎಂದು ದ.ರಾ. ಬೇಂದ್ರೆಯವರು ಕಾವ್ಯದಲ್ಲಿ ಉಲ್ಲೇಖಿಸಿದ್ದು  ಈ ಪಾರಿಜಾತ ಹೂವಿನ ಕುರಿತು ಎಂದು ಬಿಜಿಎಲ್ ಸ್ವಾಮಿ ಉಲ್ಲೇಖಿಸಿದ್ದಾರೆ.

= ಚಿತ್ರ, ಬರಹ: ರಮೇಶ್ ಕೈಂತಜೆ
    rkramesh44@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com