ಕೆಲವು ಪುಟಗಳು

ಪ್ರಥಮ ಶ್ರೇಣಿಯಲ್ಲಿ ಪ್ರಥಮಳಾದರೂ ನನ್ನನ್ನು ಫೈಟರ್ ವರ್ಗಕ್ಕೆ ಆರಿಸುವುದರಲ್ಲಿ ತೊಡಕಿತ್ತು...
ಕೆಲವು ಪುಟಗಳು

ಪ್ರಥಮ ಶ್ರೇಣಿಯಲ್ಲಿ ಪ್ರಥಮಳಾದರೂ ನನ್ನನ್ನು ಫೈಟರ್ ವರ್ಗಕ್ಕೆ ಆರಿಸುವುದರಲ್ಲಿ ತೊಡಕಿತ್ತು. ಸೈನ್ಯದಲ್ಲಿ ಹೆಂಗಸರನ್ನು ಕಾಳಗದ ವರ್ಗಕ್ಕೆ ಆರಿಸದೆ ಇರುವ ಪರಂಪರೆ ಇರುವಂತೆ ವಾಯುಪಡೆಯಲ್ಲಿಯೂ ಕದನದ ವರ್ಗಕ್ಕೆ ಆರಿಸುತ್ತಿರಲಿಲ್ಲ. ನಾನು ಈ ತಾರತಮ್ಯದ ವಿರುದ್ಧ ಹೋರಾಡಬೇಕೆಂದು ನಿಶ್ಚಯಿಸಿದ್ದೆ. ನಾನು ನಿರೀಕ್ಷಿಸಿದಂತೆಯೇ ಆಯಿತು. ನನ್ನನ್ನು ಸರಕು ಸಾಗಾಣಿಕೆಯ ಪೈಲಟ್ ಆಗಿ ಆರಿಸಿದ್ದರು.
...

ಚೀಫ್ ಆಫ್ ಏರ್‌ಸ್ಟಾಫ್ ನನ್ನನ್ನು ಸೌಜನ್ಯದಿಂದಲೇ ಕಂಡರು. ಕೈ ಕುಲುಕಿ ತಮ್ಮ ದೊಡ್ಡ ಮೇಜಿನ ಎದುರಿನ ಕುರ್ಚಿಯನ್ನು ತೋರಿಸಿದರು. ನನ್ನ ಡ್ಯಾಡಿಯಂತೆಯೇ ತೆಳುವಾದ ಮೈಕಟ್ಟು, ಹಸನ್ಮುಖ. ಹಲವು ಬಗೆಯ ಫೈಟರ್ ಪ್ಲೇನ್‌ಗಳ ಚಾಲನೆಯಲ್ಲಿ ಪರಿಣತಿ ಪಡೆದವರಂತೆ ಕಣ್ಣುಗಳಲ್ಲಿ ಬುದ್ಧಿಯ ಚುರುಕು ಮಿಂಚುತ್ತಿತ್ತು. 'ಮಿಸ್ ಉತ್ತರಾ, ನಿಮ್ಮ ಪ್ರಗತಿಯ ಎಲ್ಲ ಹಂತಗಳನ್ನೂ ನಾನು ಖುದ್ದು ಪರಿಶೀಲಿಸಿದೀನಿ. ಅಕ್ಸೆಪ್ಟ್ ಮೈ ಕಂಗ್ರಾಚುಲೇಶನ್ಸ್. ಕೆಲವು ಸಂಗತಿಗಳನ್ನ ನಾವು ಸಾರ್ವಜನಿಕವಾಗಿ ಹೇಳೂದಿಲ್ಲ.
...

ನನಗೆ ನಿನಗಿಂತ ಹಿರಿವಯಸ್ಸಿನ ಹೆಣ್ಣುಮಕ್ಕಳಿದ್ದಾರೆ. ನಿನ್ನ ತಂದೆಯೂ ನಮ್ಮ ಪಡೆಯ ಹಿರಿಯ ಪೈಲಟ್. ಆದ್ದರಿಂದ ನಾನೇ ಬಿಡಿಸಿ ಹೇಳಬೇಕು ಅಂತ ನಿನ್ನನ್ನ ಕರೆಸಿದೆ. ಯೋಚನೆ ಮಾಡು' ಎನ್ನುವಲ್ಲಿ ಅಟೆಂಡರ್ ನನಗೆ ಚಹಾ ಬಿಸ್ಕತ್ತು ತಂದಿಟ್ಟ.
'ಇದನ್ನ ತಗೊ. ನನಗೆ ತುರ್ತು ಕೆಲಸವಿದೆ. ಐದು ನಿಮಿಷದಲ್ಲಿ ಬರ್ತೀನಿ' ಎಂದು ಹೇಳಿ ಅವರು ಪಕ್ಕದ ಕೋಣೆಗೆ ಹೋಗಿ ಬಾಗಿಲು ಮುಚ್ಚಿಕೊಂಡರು. ಒಂದು ಕೋಣೆಯ ಮಾತುಕತೆಗಳು ಇನ್ನೊಂದು ಕೋಣೆಗೆ ಕೇಳಿಸದಷ್ಟು ಬಿಗಿಯಾಗಿದ್ದವು ಬಾಗಿಲುಗಳು.
ನಾನು ಚಹಾ ಸೇವಿಸಿ ಕಾದು ಕುಳಿತೆ. ಅವರು ಇಪ್ಪತ್ತು ನಿಮಿಷಗಳ ನಂತರ ಹಿಂತಿರುಗಿದರು. ನಾನು ಎದ್ದು ನಿಂತು ಗೌರವ ತೋರಿಸಿದೆ. ಕುಳಿತುಕೊಳ್ಳಲು ಹೇಳಿ ಅವರೂ ಕುಳಿತು ಮಾತನ್ನು ಮುಂದುವರಿಸಿದರು: 'ನೀನು ಯಾವ ವರ್ಗವನ್ನು ಆಯ್ದುಕೊಂಡರೂ ಅದರ ಬಡ್ತಿಯಲ್ಲಿ ಈಗ ನೀನು ಸಾಧಿಸಿರುವ ಅರ್ಹತೆಯು ಪರಿಗಣನೆಗೆ ಬರುತ್ತೆ. ಚುರುಕು ಬುದ್ಧಿಯವರು ಯಾವ ವರ್ಗದಲ್ಲಿದ್ದರೂ ಬೇಗ ಮೇಲೇರ್ತಾರೆ. ಇದು ಹೆಚ್ಚು ಅದು ಕಡಿಮೆ ಅನ್ನೋದೆಲ್ಲ ಬರೀ ಹುರುಡು.'
ನಾನು ನಿಶ್ಚಯಿಸಿಕೊಂಡದ್ದನ್ನು ದಾಕ್ಷಿಣ್ಯವಿಲ್ಲದೆ ಹೇಳಿಬಿಟ್ಟೆ: 'ಸರ್, ನಾನು ವರ್ಜಿನ್. ಆ ಅನುಭವ ನನಗಿಲ್ಲ. ಆದರೆ ಅತ್ಯಾಚಾರ ಅಂದರೆ ಏನು ಅಂತ ಗೊತ್ತಿದೆ. ಸಾಮೂಹಿಕ ಅತ್ಯಾಚಾರ ಅನ್ನೂದೂ ಗೊತ್ತಿದೆ. ನೋವಾಗುತ್ತೆ. ಅಸಹ್ಯವಾಗುತ್ತೆ. ಅತ್ಯಾಚಾರಿಗಳು ಬರೀ ತೃಷೆ ತೀರಿಸಿಕೊಳ್ಳಲ್ಲ. ಕಚ್ಚಿ ಹಿಸುಕಿ ಹಿಂಸೆ ಮಾಡ್ತಾರೆ. ವಿಕೃತ ಲಾಲಸೆಗಳನ್ನ ಪೂರೈಸಿಕೊಳ್ತಾರೆ. ಸೆರೆ ಸಿಕ್ಕಿದವಳ ಆತ್ಮಗೌರವವನ್ನು ನಾಶ ಮಾಡೂದು ಅವರ ಉದ್ದೇಶವಾಗಿರುತ್ತೆ. ಪ್ರಾಣವೂ ಹೋಗಬಹುದು. ಗಂಡಸು ಫೈಟರ್ ಪೈಲಟ್ ಅಥವಾ ಎದುರಾಎದುರು ಕಾಳಗದಲ್ಲಿ ಸೆರೆಸಿಕ್ಕಿದ ಸೈನಿಕನನ್ನೂ ಅವರು ಹೀಗೆಯೇ ಹಿಂಸಿಸಬಹುದು. ಅವನ ಒಂದೊಂದೇ ಬೆರಳ ತುದಿಗಳನ್ನು ಚಾಕುವಿನಿಂದ ಕುಯ್ಯಬಹುದು. ಸೂಜಿಯಿಂದ ಮರ್ಮಾಂಗವನ್ನು ಚುಚ್ಚಬಹುದು. ಎದೆಯನ್ನು ಬೂಟು ಕಾಲಿನಿಂದ ತುಳಿಯಬಹುದು. ಹಿಂಸಿಸಿ ಹಿಂಸಿಸಿ ಸಾಯಿಸಬಹುದು. ರಕ್ಷಣಾ ಪಡೆಗೆ ಸೇರಿದ ಮೇಲೆ ಅವೆಲ್ಲಕ್ಕೂ ಅವನು ಸಿದ್ಧನಾಗಿರಬೇಕಲ್ಲವೆ? ಹಾಗೆಯೇ ಹೆಂಗಸು ಕೂಡ. ಅತ್ಯಾಚಾರದ ಭಯದಿಂದ ಹೆಂಗಸರು ಯಾಕೆ ಹಿಂದುಳಿಯಬೇಕು?'
'ಅವಳು ಭಯಪಡುವ ಪ್ರಶ್ನೆಯಲ್ಲ. ಒಬ್ಬ ಮಹಿಳೆಯು ಶತ್ರುವಿಗೆ ಸೆರೆಸಿಕ್ಕಿ ಇಂಥ ಹೇಸಿಗೆಯ ಹಿಂಸೆಗೆ ಒಳಗಾಗಿದಾಳೆ ಅಂತ ಮಾಧ್ಯಮಗಳಲ್ಲಿ ಪ್ರಚಾರವಾದರೆ ಇಡೀ ದೇಶದ ಧೃತಿ ಕುಸಿಯುತ್ತೆ. ಇದು ಯುದ್ಧ ನಿರ್ವಹಣೆಯಲ್ಲಿ ಇಡೀ ಪ್ರಚಾರ ಸಮೂಹದ ನಿಶ್ಚಯವನ್ನೂ ಗಟ್ಟಿಯಾಗಿ ಉಳಿಸಿಕೊಂಡಿರುವ ಜವಾಬ್ದಾರಿಯ ಪ್ರಶ್ನೆ.'
'ಇದೇ ವಿಷಯವನ್ನು ಎತ್ತಿಕೊಂಡು ನಮ್ಮ ಶತ್ರುಗಳು ಎಷ್ಟು ಅನಾಗರಿಕರು, ಅವರನ್ನು ಸದೆಬಡಿಯಲೇಬೇಕು ಅಂತ ನಮ್ಮ ಪ್ರಜಾಸಮೂಹ ನಿಶ್ಚಯವನ್ನು ಗಟ್ಟಿಗೊಳಿಸಬಹುದಲ್ಲವೆ? ಅಂತಾರಾಷ್ಟ್ರೀಯ ಮಟ್ಟದಲ್ಲೂ ಶತ್ರುವಿನ ವಿರುದ್ಧ ಅಭಿಪ್ರಾಯ ಮೂಡಿಸಬಹುದಲ್ಲವೆ?'
ಅವರು ಮಾತನಾಡಲಿಲ್ಲ. ಒಂದು ನಿಮಿಷ ನನ್ನ ಮುಖವನ್ನೇ ನಿರುಕಿಸಿ ಅನಂತರ, 'ಥ್ಯಾಂಕ್ಯು ಮಿಸ್. ನಿನ್ನ ಮುಕ್ತ ಮಾತುಗಳನ್ನು ನಾವು ಆಲೋಚಿಸುತ್ತೀವಿ' ಎಂದು ಬೀಳ್ಕೊಡುಗೆಯ ಸೂಚಕವಾಗಿ ಕೈ ನೀಡಿದರು.
ಎರಡು ತಿಂಗಳಿನ ನಂತರ ಪತ್ರ ಬಂತು. ನಾನು ಫೈಟರ್ ಪೈಲಟ್ ವರ್ಗಕ್ಕೆ ಆಯ್ಕೆಯಾಗಿದ್ದೆ. ಹಲವು ಪತ್ರಿಕೆಗಳಲ್ಲಿ ದೇಶದ ಪ್ರಪ್ರಥಮ ಹೋರಾಟ ವಿಮಾನ ಚಾಲಕಿಯಾಗುವವಳು ಎಂದು ಲೇಖನಗಳು ಬಂದವು. ಮಹಿಳಾ ಸಂಘಟನೆಗಳು ನನ್ನನ್ನು ಅಭಿನಂದಿಸಿ ಹೇಳಿಕೆ ನೀಡಿದವು. ಎರಡು ಟೆಲಿವಿಶನ್ ಹೇಗೋ ನನ್ನ ಫೋಟೊವನ್ನು ಸಂಪಾದಿಸಿ ಬಿತ್ತರಿಸಿದವು. ಪಡೆಯ ನಿಯಮದಂತೆ ನಾನು ಯಾವ ಮಾಧ್ಯಮದ ಸಂಪರ್ಕಕ್ಕೂ ಸಿಕ್ಕಲಿಲ್ಲ. ಆದರೆ ರಾಷ್ಟ್ರವ್ಯಾಪಿ ಬಂದ ಪ್ರಸಿದ್ಧಿಯ ಖುಷಿಯನ್ನು ಮನಸ್ಸಿನಲ್ಲೇ ಸವಿದೆ. ನನ್ನೊಡನೆ ತರಬೇತಿ ಪಡೆಯುತ್ತಿದ್ದ ಗಂಡುಹುಡುಗರಿಗೆ ಮತ್ಸರ ಹುಟ್ಟಿದ್ದು ಸ್ಪಷ್ಟವಿತ್ತು. ಅದರಿಂದ ನನ್ನ ಖುಷಿ ಇಮ್ಮಡಿಯಾಯಿತು.


ತರಬೇತಿ ಆರಂಭವಾದ ಎರಡು ತಿಂಗಳ ನಂತರ ಒಂದು ದಿನ ರಾಕೆಟ್ ಮೇಲೆ ಏರುವಾಗ ಆಕಾಶಯಾನಿಗಳು ಇರಬೇಕಾದ ರೀತಿಯ ಶೀರ್ಷಾಸನದಲ್ಲಿ ನಾನು ನಿರತಳಾಗಿದ್ದಾಗ ನಿರ್ದೇಶಕರು ಹತ್ತಿರ ಬಂದು, 'ಬಿಡುವಾದಾಗ ಕಾಣುವಿರಾ, ನನ್ನ ಛೇಂಬರಿನಲ್ಲಿ?' ಎಂದು ಹೇಳಿಹೋದರು. ಡಾ. ವೆಂಕಟ್ ಸೌಜನ್ಯಶೀಲ ವ್ಯಕ್ತಿ. ಈ ಸಂಸ್ಥೆಗಾಗಿ ಜೀವನವನ್ನು ಮುಡುಪಾಗಿಟ್ಟವರು. ಎಂದೂ ತಮ್ಮ ಅಧಿಕಾರವನ್ನು ದರ್ಪದ ರೀತಿಯಲ್ಲಿ ತೋರಿದವರಲ್ಲ. ಅವರ ಸೌಜನ್ಯಕ್ಕೇ ಸಹೋದ್ಯೋಗಿಗಳೆಲ್ಲ ವಿಧೇಯರಾಗಿರುತ್ತಿದ್ದರು. ಮೆಸಾಚುಸೆಟ್ಸ್‌ನಲ್ಲಿ ಡಾಕ್ಟರೇಟ್ ಪಡೆದ ನಂತರ ಐದು ವರ್ಷ ನಾಸಾಕ್ಕೆ ಕೆಲಸ ಮಾಡಿದ ಮೇಲೆ ಸ್ವದೇಶದ ಬಾಹ್ಯಾಂತರಿಕ್ಷ ಸಂಶೋಧನೆಗೆ ಬಂದು ಸೇರಿದವರು. ಯೂರೋಪಿನ ಬಾಹ್ಯಾಂತರಿಕ್ಷ ಸಂಸ್ಥೆಯು ಭಾರಿ ಸಂಬಳದ ಆಶೆ ತೋರಿಸಿದರೂ ಹೋಗಲಿಲ್ಲ. ಭಾರತದ ಈ ಸಂಸ್ಥೆಯ ಒಂದೊಂದು ಹಂತದಲ್ಲೂ ಅವರ ಕೊಡುಗೆ ಇದೆ. ಇಷ್ಟಾದರೂ ಸಂಕೋಚ ಪ್ರಕೃತಿ. ತಮ್ಮ ಕೊಡುಗೆಯನ್ನು ಎಲ್ಲೂ ಹೇಳಿಕೊಳ್ಳುವುದಿಲ್ಲ. ಮಾಧ್ಯಮದ ಕಣ್ಣಿಗೂ ಬೀಳುವುದಿಲ್ಲ. ಎತ್ತರದಲ್ಲಿ ನನಗಿಂತ ಒಂದು ಅಂಗುಲ ಕಡಿಮೆ. ಪೈಲಟ್‌ನ ಆಕಾರಕ್ಕೆ ಹೋಲಿಸಿದರೆ ತುಸು ಸ್ಥೂಲ. ನಸುಗಪ್ಪು ಬಣ್ಣ. ಸುಮಾರು ಐವತ್ತು ವರ್ಷ. ತಲೆಯಲ್ಲಿ ವಿರಳ ಬಿಳಿಕೂದಲು. ಹಳೆಯದಾದ ಬೂದುಬಣ್ಣದ ಪ್ಯಾಂಟು, ಬಿಳಿ ಅರ್ಧ ಶರಟು. ಕಾಲಿಗೆ ಚಪ್ಪಲಿ. ವೇಷಭೂಷಣಗಲ್ಲಿ ಶಿಸ್ತು ಇಲ್ಲದ ವಿಜ್ಞಾನಿ.
ಸಂಜೆ ಏಳು ಗಂಟೆ ಕಳೆದರೂ ಅವರು ಸಂಸ್ಥೆಯಲ್ಲೇ ಇರುತ್ತಾರೆಂಬುದು ಎಲ್ಲರಿಗೂ ಗೊತ್ತಿತ್ತು. ನಾನು ಐದು ಗಂಟೆಗೆ ಅವರ ಛೇಂಬರಿಗೆ ಹೋದೆ. ಸೌಜನ್ಯದಿಂದ ನನ್ನನ್ನು ಸೋಫಾದ ಮೇಲೆ ಕೂರಿಸಿ ತಾವು ಎದುರಿನ ಸೋಫಾದ ಮೇಲೆ ಕೂತು ಫ್ಲಾಸ್ಕ್‌ನಿಂದ ಬಿಸಿ ಟೀಯನ್ನು ಕಪ್ಪಿಗೆ ಬಗ್ಗಿಸಿ ನನ್ನ ಮುಂದಿಟ್ಟು ದ್ವಾರಪಾಲಕ ಮತ್ತು ಪಿ.ಎ. ಇಬ್ಬರಿಗೂ ಬೇರೆ ಯಾರನ್ನೂ ಒಳಗೆ ಬಿಡಬೇಡಿ ಎಂಬ ಸೂಚನೆಯ ವಿದ್ಯುತ್ ಗುಂಡಿಯನ್ನು ಒತ್ತಿ ನಾನು ಇಲ್ಲಿಯ ತರಬೇತಿಗೆ ಹೇಗೆ ಹೊಂದಿಕೊಂಡಿದ್ದೇನೆ ಎಂಬ ಕುಶಲ ಪ್ರಶ್ನೆ ಮಾಡಿದರು. 'ನಿಮ್ಮ ಮೇಲ್ವಿಚಾರಣೆಯಲ್ಲಿ ಯಾವುದಕ್ಕೂ ಕೊರತೆ ಇಲ್ಲ, ಯಾವ ತೊಂದರೆಯೂ ಇಲ್ಲ' ಎಂದು ನಾನು ಅಷ್ಟೇ ಸೌಜನ್ಯದಿಂದ ಹೇಳಿದ ನಂತರ, 'ನೋಡಿ, ಈ ವಿಷಯ ಪ್ರಸ್ತಾಪಿಸುಕ್ಕೆ ನನಗೆ ತುಂಬ ಸಂಕೋಚವಾಗುತ್ತೆ. ಆದರೆ ಸಂಶೋಧನೆಯ ವಿಷಯ. ಸಂಶೋಧನೆಯ ಮುಂದಿನ ಹಂತದ ಪ್ರಗತಿಯ ವಿಷಯ. ನೀವು ಅವಿವಾಹಿತೆ. ಭಾರತೀಯ ತರುಣಿ ಅಂತ ಗೊತ್ತಿದ್ದೂ ಪ್ರಸ್ತಾಪಿಸಬೇಕಾಗಿದೆ. ಈಗ ನೀವು ಹೋಗ್ತಿರುವ ಉದ್ದಿಷ್ಟ ಕಾರ್ಯದಲ್ಲಿ ಕೇವಲ ನಮ್ಮ ತಂತ್ರಕೌಶಲವನ್ನ ಪುನರ್ಪರಿಶೀಲಿಸುವುದು ನಮ್ಮ ಉದ್ದೇಶವಲ್ಲ. ಗಂಡು ಹೆಣ್ಣುಗಳ ಶರೀರಕ್ಕೆ ಸಂಬಂಧಿಸಿದ ಹಲವಾರು ಸೂಕ್ಷ್ಮ ಸಂಶೋಧನೆಗಳನ್ನೂ ಮಾಡಬೇಕು. ಈ ಯಾನಕ್ಕೆ ಒಬ್ಬ ಮಹಿಳೆಯೂ ಬೇಕು ಅಂತ ನಿಶ್ಚಯಿಸಿದ್ದು ಈ ಕಾರಣದಿಂದ. ಇಲ್ಲಿ ನಡೆಯೂದೆಲ್ಲ ಅತ್ಯಂತ ಗೋಪ್ಯವಾಗಿರುತ್ತೆ. ಇದರ ಬಗ್ಗೆ ಎಂದೆಂದಿಗೂ ಯಾರೂ ಬಾಯಿ ಬಿಡೂದಿಲ್ಲ. ನಿಮ್ಮ ಜತೆ ಮೇಲೆ ಹೋಗುವ ಮೂವರು ಗಂಡಸರ ಹೆಸರನ್ನ ಈಗಲೇ ಹೇಳಿಬಿಡ್ತೀನಿ. ಅವರಲ್ಲಿ ಫ್ಲೈಯಿಂಗ್ ಆಫೀಸರ್ ಯಾದವ್ ಒಬ್ಬರು. ಡಾ. ವ್ಯಾಸ್, ಡಾ. ಸಾಮಂತ್ ಇನ್ನಿಬ್ಬರು. ಅವರಲ್ಲಿ ಒಬ್ಬರನ್ನು ನೀವು ಸೂಚಿಸಿದರೆ ನಾನು ಅವರೊಡನೆ ಮಾತನಾಡ್ತೀನಿ. ಯಾನದಲ್ಲಿ ಮೇಲೆ ಹೋಗುವ ಎರಡು ತಿಂಗಳು ಮೊದಲೇ ನೀವಿಬ್ಬರೂ ಶರೀರ ಸಂಪರ್ಕ ಮಾಡುತ್ತಿರಬೇಕು. ಇದು ಸಂಶೋಧನೆಗೆ ಅನ್ನೂದನ್ನ ಮರೆತು ಸಹಜವಾಗಿ ಪ್ರೇಮಿಗಳು ಸೇರುವ ಹಾಗೆ ಕೂಡಬೇಕು. ಮುಂಕೇಳಿಗೆ ಮೊದಲೇ ನೀವಿಬ್ಬರೂ ನಾವು ಕೊಡುವ ಒಂದು ಪಟ್ಟಿಯನ್ನು ನಿಮ್ಮ ಯಾವುದಾದರೊಂದು ತೋಳಿಗೆ ಕಟ್ಟಿಕೊಂಡರೆ ಸಾಕು. ಸಂಶೋಧನೆಯ ವಿವರಗಳನ್ನು ಅದು ದಾಖಲಿಸಿಕೊಳ್ಳುತ್ತೆ. ಯಾನದಲ್ಲಂತೂ ಸಾಧ್ಯವಾದಷ್ಟು ಸಲ ಮೈಥುನ ಮಾಡಬೇಕು. ಯಾನದಿಂದ ಹಿಂತಿರುಗಿದ ಮೇಲೆ ನಮ್ಮ ವೈದ್ಯರು ನಿಮ್ಮಿಬ್ಬರನ್ನೂ ಪ್ರತ್ಯೇಕವಾಗಿ ಕೇಳುವ ಪ್ರಶ್ನೆಗಳಿಗೆ ಸಾಧ್ಯವಾದಷ್ಟೂ ಜ್ಞಾಪಕವಿಟ್ಟುಕೊಂಡು ಉತ್ತರಿಸಬೇಕು. ಕೋಪ ಮಾಡಿಕೊಳ್ಳಬೇಡಿ. ಈ ವಿನಂತಿಯನ್ನು ತಿರಸ್ಕರಿಸುವ ಆಯ್ಕೆಯೂ ನಿಮಗಿದೆ. ಆದರೆ ತಿರಸ್ಕರಿಸದಿರುವ ದೇಶಭಕ್ತಿ ನಿಮ್ಮದು ಅಂತ ನನಗೆ ಗೊತ್ತಿದೆ' ಎಂದು ನನ್ನ ಮುಖವನ್ನೇ ನೋಡುತ್ತಾ ಸುಮ್ಮನಾದರು. ನನ್ನೊಳಗೆ ಕೋಪ ಕಾಯುತ್ತಿತ್ತು. ಕ್ರಮೇಣ ಕುದಿಯತೊಡಗಿತು. ಡಾ. ವೆಂಕಟ್ ಅವರು ಅತ್ಯಂತ ಸೌಜನ್ಯಶಾಲಿಯಲ್ಲದಿದ್ದರೆ ಬೈದು ಎದ್ದು ನಡೆಯುತ್ತಿದ್ದೆನೇನೋ. ಆದರೆ ಇಷ್ಟು ಗಂಭೀರವಾಗಿ ಕರ್ತವ್ಯವನ್ನು ವಿವರಿಸಿ ಆಯ್ಕೆಯನ್ನು ನನಗೇ ಬಿಟ್ಟಿರುವ ಈ ಉನ್ನತಾಧಿಕಾರಿಯ ಮೇಲೆ ರೇಗುವುದು ನನ್ನ ಗೌರವಕ್ಕೇ ಕುಂದು ಎಂಬ ಎಚ್ಚರ ಮೂಡಿ ನಾನೂ ಸುಮ್ಮನೆ ಕೂತೆ. ಅವರು ಮತ್ತೆ ಮಾತನಾಡಿದರು:
'ಇದನ್ನು ಅತ್ಯಂತ ಗೋಪ್ಯವಾಗಿಡುಕ್ಕೆ ಎರಡು ಕಾರಣಗಳಿವೆ. ಹೊರಗೆ ಗೊತ್ತಾದರೆ ಸಾರ್ವಜನಿಕ ಅಭಿಪ್ರಾಯವು ನಮ್ಮ ಸಂಶೋಧನೆಯ ವಿರುದ್ಧ ತಿರುಗಿ ಸರ್ಕಾರವು ಅನುದಾನವನ್ನೇ ನಿಲ್ಲಿಸಬಹುದು. ಎರಡನೆಯದಾಗಿ ಈ ಸಂಶೋಧನೆಯಲ್ಲಿ ಭಾಗವಹಿಸುವ ಗಂಡು ಹೆಣ್ಣು ಇಬ್ಬರ ಗೌರವಕ್ಕೂ ಚ್ಯುತಿ ಬರುತ್ತೆ. ಆದ್ದರಿಂದಲೇ ಸುದ್ದಿಯು ಎಲ್ಲೂ ಹೊರಗೆ ಸೋರದಂತೆ ಕಟ್ಟುನಿಟ್ಟು ಬಿಗಿ ಮಾಡಿರ್ತೀವಿ. ನೀವು ಸಂಪರ್ಕ ಆರಂಭಿಸುವ ಮೊದಲಿನಿಂದ ಯಾನದಿಂದ ಹಿಂತಿರುಗಿ ಸಂಪರ್ಕ ನಿಲ್ಲಿಸುವವರೆಗೆ ಗರ್ಭನಿರೋಧಕ ಮಾತ್ರೆಗಳನ್ನ ನಮ್ಮ ವೈದ್ಯರು ಕೊಡ್ತಾರೆ. ಕಾಂಡೋಮ್ ಬಳಕೆಯಿಂದ ಸಹಜ ಅನುಭವವಾಗುಲ್ಲವಾದ್ದರಿಂದ ಈ ವಿಧಾನ' ಎಂದು ಸುಮ್ಮನಾದರು. ಮತ್ತೆ ಎರಡು ನಿಮಿಷದ ನಂತರ, 'ಇಂಥ ವಿಷಯದಲ್ಲಿ ತಕ್ಷಣ ಉತ್ತರ ಅಪೇಕ್ಷಿಸೂದು ಸಾಧ್ಯವಿಲ್ಲ. ನೀವು ಒಂದು ವಾರ ಆಲೋಚಿಸಿ. ನಡುವೆ ಯಾವ ಸ್ಪಷ್ಟನೆ, ತೊಡಕು ಕಾಣಿಸಿದರೂ ನನ್ನನ್ನ ಭೇಟಿಯಾಗುಕ್ಕೆ ಸೂಚನೆ ಕೊಡಿ. ಇವತ್ತು ಏಕಾಂತದಲ್ಲಿ ಕೂತು ಯಾರಿಗೂ ತಿಳಿಯದಂತೆ ಮಾತಾಡಿದೆವಲ್ಲ, ಹಾಗೆ ಮಾತಾಡೋಣ' ಎಂದರು. ನನ್ನ ಮುಖ ನೋಡುತ್ತಿದ್ದರೂ ಅವರ ಕಣ್ಣುಗಳು ತಮ್ಮ ಮಾತು ಮುಗಿಯಿತು ಎಂದು ಸೂಚಿಸುತ್ತಿದ್ದವು.
- - -
ಎರಡು ದಿನ ಕೋಪ ಉರಿಯುತ್ತಿತ್ತು. ರಕ್ಷಣಾ ಪಡೆಯ ಶಾಲೆಯಲ್ಲಿ ಓದಿ ಅದೇ ಪಡೆಯ ಕಾಲೇಜಿನ ಅನುಭವವಿದ್ದು ಕಂಟೋನ್‌ಮೆಂಟ್ ಜೀವನಕ್ಕೆ ಒಗ್ಗಿದ್ದರೂ ನನ್ನದು ಪಾರಂಪರಿಕ ಸಂಸ್ಕಾರವೆಂದು ಈಗ ಅರ್ಥವಾಗತೊಡಗಿತು. ಅಮ್ಮ ತಪ್ಪದೆ ಮಾಡುತ್ತಿದ್ದ ವ್ರತ ಕಥೆ ಉಪವಾಸಗಳ ಮಹಿಮೆಯೋ, ಪ್ರಭಾವವೋ! ಡ್ಯಾಡಿ ಅವು ಯಾವುದನ್ನೂ ಮಾಡಿದಿದ್ದರೂ ಅವುಗಳಿಗೆ ಎಂದೂ ವಿರೋಧ ವ್ಯಕ್ತಪಡಿಸಿದವರಲ್ಲ. ಅಂಥ ಮನೆಯಲ್ಲಿ ಬೆಳೆದ ನನಗೆ ಸಂಶೋಧನಾ ವಸ್ತುವಾಗಿ ವಿವಾಹದ ಸಮ್ಮತಿ ಇಲ್ಲದೆ ದೇಹ ಸಂಬಂಧಕ್ಕೆ ಒಳಗಾಗುವುದೆಂದರೆ ನನ್ನ ವ್ಯಕ್ತಿತ್ವವನ್ನೇ ಅಪಮೌಲ್ಯಗೊಳಿಸಿಕೊಂಡಂತೆ ಅನ್ನಿಸತೊಡಗಿತು. ಈ ಸಂಶೋಧನೆಗೆಂದೇ ಇವರು ನನ್ನನ್ನು ಆರಿಸಿದ್ದಾರೆ. ಹೆಂಗಸೇ ಬೇಕೆಂಬ ನಿಗದಿ ಯಾಕಿತ್ತು? ಪಡೆಯಿಂದ ಹೊರಡುವ ಮೊದಲೇ ಯಾಕೆ ಹೇಳಲಿಲ್ಲ? ರಹಸ್ಯವನ್ನು ಕಾಪಾಡಲೆಂದೇ? ರಕ್ಷಣಾ ಪಡೆಯವಳು ಇಂಥದಕ್ಕೆ ಎಗ್ಗಿಲ್ಲ ಅಂತ ಭಾವಿಸಿದರೆ? ಅಥವಾ ಪಡೆಯ ಶಿಖರಾಧಿಕಾರಿಗೆ ಹೇಳಿದ್ದಾರೆಯೆ? ಅವರ ಮೇಲೂ ಕೋಪ ಬಂತು. ಶತ್ರುದೇಶದಲ್ಲಿ ಹೆಂಗಸು ಸೆರೆಸಿಕ್ಕಿದರೆ ಸಾಮೂಹಿಕ ಅತ್ಯಾಚಾರಕ್ಕೊಳಗಾಗುವ ಸಂಭವವಿದೆ ಎಂದು ಏರ್‌ಮಾರ್ಷಲರು ಆಕ್ಷೇಪವೆತ್ತಿದಾಗ ನಾನು ಅದಕ್ಕೂ ಸಿದ್ಧವೆಂದದ್ದನ್ನು ನೆನಪಿನಲ್ಲಿಟ್ಟುಕೊಂಡು ಈ ಯಾನಕ್ಕೆ ಇವಳೇ ತಕ್ಕವಳು, ಇಂಥದಕ್ಕೆಲ್ಲ ಎಗ್ಗಿಲ್ಲದವಳು, ಅಂತ ಆಲೋಚಿಸಿ ಅವರು ನನ್ನ ಹೆಸರನ್ನು ಇಲ್ಲಿಗೆ ಸೂಚಿಸಿದರೆ? ಎಂಬ ಅನುಮಾನ ಬಂತು. ಆಗ ನಾನು ಅವರಿಗೆ ಉತ್ತರ ಕೊಟ್ಟದ್ದು ಫೈಟರ್ ಪೈಲಟ್ ಆಗಲೇಬೇಕೆಂಬ ಹಟದಿಂದ. ದೇಶಭಕ್ತಿಯ ಭಾವನೆಯಿಂದಲ್ಲ. ಇವರು ಕೇಳುತ್ತಿರುವುದು ದೇಶಭಕ್ತಿಯಿಂದ ಪ್ರೇರಿತಳಾಗಿ ಸಮ್ಮತಿಸು ಎಂದು. ಮನಸ್ಸೆಲ್ಲ ಗೋಜಲಿನಿಂದ ತುಂಬಿಕೊಂಡಿದೆ. ಏರ್‌ಮಾರ್ಷಲ್‌ರಿಗೆ ಇವರು ಹೇಳಿರಬಹುದು, ಹೇಳದೆಯೂ ಇರಬಹುದು. ಆಡಳಿತದ ಮೇಲ್ಮಟ್ಟದ ಮರೆಯಲ್ಲಿ ಏನೇನು ನಡೆಯುತ್ತೆಯೋ ತಿಳಿಯುವುದಿಲ್ಲ. ನಮ್ಮನ್ನು ಆಳುವ ನಿಯಮಗಳು ನಮಗೆ ಪೂರ್ತಿಯಾಗಿ ತಿಳಿದಿರುವುದಿಲ್ಲ; ತಿಳಿಯಪಡಿಸುವುದಿಲ್ಲ.
ಎರಡು ದಿನ ಕಳೆಯಿತು. ಮನಸ್ಸು ಒಪ್ಪಲಿಲ್ಲ. ಪ್ರೀತಿ ಇಲ್ಲದೆ, ವಿವಾಹದ ವಿಧಿ ಇಲ್ಲದೆ ಸಂಶೋಧನೆಯ ಪ್ರಯೋಗಕ್ಕಾಗಿ; ಜಾಗ್ರತಾವಸ್ಥೆಯಲ್ಲಿ ಮಾತ್ರವಲ್ಲ, ಕನಸಿನಲ್ಲೂ ಮನಸ್ಸು ದಂಗೆ ಏಳುತ್ತಿತ್ತು. ಮೂರನೆಯ ಬೆಳಗ್ಗೆ ಮೆಸ್‌ನಲ್ಲಿ ಉಪಾಹಾರ ಮಾಡುತ್ತಿದ್ದಾಗ ಯಾದವ್ ತನ್ನ ತಟ್ಟೆಯನ್ನು ಹಿಡಿದು ಬಂದು ನನ್ನ ಮೇಜಿನ ಇನ್ನೊಂದು ಕುರ್ಚಿಯ ಮೇಲೆ ಕುಳಿತ. ನಾನಿಲ್ಲಿ ಕೂರಬಹುದೆ? ಎಂದು ಕೇಳುವ ಔಪಚಾರಿಕತೆಯು ನಾವು ನಾಲ್ಕು ಜನರ ನಡುವೆ ಕಳೆದು ಸಲಿಗೆ ಬೆಳೆದಿತ್ತು. ಯಾದವನ ಮತ್ತು ನನ್ನ ನಡುವೆಯಂತೂ ಸಲಿಗೆಯನ್ನು ಮೀರಿದ ಸ್ನೇಹ ಹುಟ್ಟಿತ್ತು. 'ಮೂರು ದಿನದಿಂದ ಒಂದು ಥರಾ ಇದ್ದೀಯಲ್ಲ, ಗಂಭೀರವಾಗಿ?' ಅವನೇ ಕೇಳಿದ. ಅವನ ಕೈಲಿ ಹೇಳಿಬಿಡಲೆ? ಎನ್ನಿಸಿತು. ಬೇಡವೆಂದು ತಡೆದುಕೊಂಡೆ. 'ಹಾಗೇನಿಲ್ಲವಲ್ಲ!' ಎಂದೆ. 'ಮನೆಯ ಕಡೆ ಎಲ್ಲ ಚೆನ್ನಾಗಿದಾರೆ ತಾನೆ?' ಅವನು ಮತ್ತೆ ಕೇಳಿದ. 'ಮನುಷ್ಯರ ಮೂಡ್ ಯಾವಾಗಲೂ ಒಂದೇ ಥರ ಇರುಲ್ಲ ಅಲ್ಲವೆ? ವಿಮಾನ ಹಾರಿಸದೆ ತಿಂಗಳುಗಟ್ಟಳೆ ಇರೂದು ಅಂದರೆ ಮನಸ್ಸು ಜಡವಾಗುಲ್ಲವೆ, ಅದೂ ಫೈಟರ್ ಪೈಲಟ್‌ಗೆ? ನಿನಗೆ ಹಾಗನ್ನಿಸುಲ್ಲವೆ ಹೇಳು.' 'ಹೌದು, ಹೌದು,' ಅವನು ತಕ್ಷಣ ಸಹಮತಿಯನ್ನು ಸೂಚಿಸಿದ.
ಆ ದಿನದ ತರಬೇತಿಯನ್ನು ಮುಗಿಸಿ ಸಂಜೆ ಕೋಣೆಗೆ ಹೋಗಿ ಸ್ನಾನ ಮಾಡುವಾಗ ಮಿಂಚು ಹೊಳೆದಾಗ ದಾರಿ ಕಾಣುವಂತೆ ಒಂದು ಪರಿಹಾರ ಗೋಚರಿಸಿತು. ಯಾಕಾಗಬಾರದು ಎಂದು ವಿಚಾರವೂ ಅನುಮೋದಿಸಿತು. ಒಂದು ದಿನವೆಲ್ಲ ಆಲೋಚಿಸಿದರೂ ಅದು ಸರ್ವಸಮ್ಮತವೆನ್ನಿಸಿತು. ಅದರ ಮರುದಿನ ನಿರ್ದೇಶಕರನ್ನು ಕಾಣಬೇಕೆಂದು ಅವರ ಪಿ.ಎ.ಗೆ ಹೇಳಿದೆ. ಸಂಜೆ ನಾಲ್ಕಕ್ಕೆ ಬನ್ನಿ ಎಂಬ ನಿಗದಿಯೂ ಆಯಿತು.
ಹಿಂದಿನ ದಿನದಂತೆಯೇ ಡಾ. ವೆಂಕಟ್ ಅವರು ಬೇರೆ ಯಾರನ್ನೂ ಒಳಗೆ ಬಿಡಬೇಡಿ ಎಂಬ ಸೂಚನೆಯ ಗುಂಡಿಯನ್ನೊತ್ತಿ ಔಪಚಾರಿಕ ಆಸನವಾದ ಮೇಜಿನ ಹಿಂದಿನ ಕುರ್ಚಿಯನ್ನು ಬಿಟ್ಟು ಸೋಫಾದ ಮೇಲೆ ಕುಳಿತು ನನ್ನನ್ನು ಹತ್ತಿರದ ಎದುರಿನ ಸೋಫಾದ ಮೇಲೆ ಕೂರುವಂತೆ ಕೈ ತೋರಿಸಿ ನನಗೆ ಆರಂಭಿಸುವ ಮುಜುಗರ ಬೇಡವೆಂಬಂತೆ, 'ಏನು ಯೋಚಿಸಿದಿರಿ?' ಎಂದರು. 'ಸರ್, ನನ್ನ ಮೂವರು ಸಹೋದ್ಯೋಗಿಗಳಲ್ಲಿ ಫ್ಲೈಯಿಂಗ್ ಆಫೀಸರ್ ಯಾದವ್ ಆದರೆ ನನಗೆ ಒಪ್ಪಿಗೆ. ಆದರೆ ಅದಕ್ಕೆ ಮೊದಲು ಅವರು ನನ್ನನ್ನ ಮದುವೆಯಾಗಬೇಕು. ನಮ್ಮದು ಪ್ರೇಮ ವಿವಾಹವಲ್ಲ. ಹಿರಿಯರು ವ್ಯವಸ್ಥೆ ಮಾಡುವ ಮದುವೆ. ನಮ್ಮಿಬ್ಬರಿಗೂ ನೀವು ಹಿರಿಯರಾದ್ದರಿಂದ ನೀವೇ ಅವರ ಕೈಲಿ ಪ್ರಸ್ತಾಪ ಮಾಡಿ. ಅವರು ಒಪ್ಪಿದರೆ ನನ್ನ ತಂದೆ ತಾಯಿಯರಿಗೆ ತಿಳಿಸಿ ಸಮ್ಮತಿ ಪಡೆಯೂದು ನನ್ನ ಜವಾಬ್ದಾರಿ.'
ಎರಡು ನಿಮಿಷ ಗಂಭೀರವಾಗಿ ಆಲೋಚಿಸಿದ ನಂತರ ಅವರು ಹೇಳಿದರು: 'ಫ್ಲೈಯಿಂಗ್ ಆಫೀಸರ್ ಯಾದವ್ ಮತ್ತು ನೀವು ಅನುರೂಪದ ಜೋಡಿ ಅಂತ ನನ್ನ ಮನಸ್ಸಿನಲ್ಲೂ ಇತ್ತು. ಅವರೊಡನೆ ನಾನು ಪ್ರಸ್ತಾಪ ಮಾಡ್ತೀನಿ. ಆದರೆ ಮದುವೆಯ ವಿಷಯ ನೀವು ಮಾತಾಡಿ ಬಗೆಹರಿಸಿಕೊಳ್ಳಬೇಕು.'
ನಾನು ಆಲೋಚಿಸಿದೆ. ಆಗಲಿ ಸರ್ ಎಂದೆ.
ಯಾದವ್ ಮರುದಿನ ನನ್ನೊಡನೆ ವರ್ತಿಸುವಾಗ ಸಂಕೋಚಪಟ್ಟುಕೊಳ್ಳುತ್ತಿರುವಂತೆ ಹಿಡಿತದಲ್ಲೇ ಇದ್ದ. ಅದರ ಮರುದಿನ, 'ಸಂಜೆ ಸಿಕ್ಕು, ಮಾತನಾಡೂದಿದೆ' ಎಂದ. ನಿರ್ದೇಶಕರು ಅವನೊಡನೆ ಮಾತನಾಡಿದ್ದಾರೆಂಬುದು ವಿದಿತವಾಗಿತ್ತು. 'ನೀನೇ ನನ್ನ ರೂಮಿಗೆ ಬಾ' ಎಂದೆ.
ಬಂದು ಕುರ್ಚಿಯ ಮೇಲೆ ಸುಮ್ಮನೆ ಕುಳಿತ. 'ಹೇಳು,' ನಾನೇ ಆರಂಭಕ್ಕೆ ಚಾಲನೆ ಕೊಟ್ಟೆ. 'ವೆಂಕಟ್ ಸರ್ ನಿನ್ನ ಕೈಲೂ ಮಾತಾಡಿದಾರಂತೆ. ನಾವು ಹೇಗೂ ಸ್ನೇಹಿತರು. ನೀನು ಒಪ್ಪಿದೀ ಅಂದರೆ ನಾನು ಪುಣ್ಯಶಾಲಿ' ಎಂದ.
ನನ್ನ ಉತ್ತರ ಮೂರುದಿನದ ಹಿಂದೆಯೇ ಸಿದ್ಧವಾಗಿತ್ತು. 'ನಾವು ಒಂದೇ ಮನೋಧರ್ಮದವರು. ಒಂದೇ ವೃತ್ತಿಯವರು. ಒಂದೇ ತರಬೇತಿಯ ಹಿನ್ನೆಲೆಯವರು. ನಿನಗೆ ಒಪ್ಪಿಗೆ ಇರೂದು ನನಗೂ ಸಂತೋಷದ ಸಂಗತಿ. ಇವತ್ತು ನನ್ನ ಜೀವನದ ಪರಮಭಾಗ್ಯದ ದಿನ. ವೆಂಕಟ್ ಸರ್ ಮಾಡಿರುವ ಪ್ರಸ್ತಾಪ ಅಂತರಿಕ್ಷಯಾನದ ಅಥವಾ ಅಂತರಿಕ್ಷ ವಾಸದ ಸಂಶೋಧನೆಗೆ ಸೀಮಿತವಾದದ್ದು. ಅನಂತರ ನಮ್ಮಿಬ್ಬರ ಸಂಬಂಧ ಏನಾಗುತ್ತೋ ಅವರಿಗೆ ಸಂಬಂಧಿಸಿದ್ದಲ್ಲ. ಆದರೆ ನಮ್ಮ ಸಂಬಂಧವನ್ನ ನಾವು ಮೊದಲು ನಿಶ್ಚಯಿಸಿಕೊಬೇಕಲ್ಲವೆ? ಮೊದಲು ನಾವು ಮದುವೆಯಾಗಿಬಿಡೋಣ. ಅನಂತರ ಅವರು ಹೇಳುವ ಪ್ರಯೋಗ, ದಾಖಲಿಸಿಕೊಳ್ಳುವ ತೋಳುಪಟ್ಟಿಗಳು. ಹೇಗೂ ಇವನ್ನೆಲ್ಲ ಅವರು ಅತ್ಯಂತ ರಹಸ್ಯವಾಗಿಡ್ತಾರೆ.'
ಅವನು ಉತ್ತರಿಸಲಿಲ್ಲ. ಶೃಂಗಾರಭಾವದ ಕೆಂಪು ಜಿನುಗುತ್ತಿದ್ದ ಅವನ ಮುಖದ ಕಳೆ ಇಂಗಿದಂತಾಯಿತು. ಎರಡು ನಿಮಿಷ ಕಾದ. ನಾನು, 'ಯಾಕೆ ಸುಮ್ಮನಾದೆ? ನೀನು ಮದುವೆಯಾಗುಕ್ಕೆ ತಕ್ಕ ಹುಡುಗಿ ಅಲ್ಲವೆ ನಾನು?' ಎಂದೆ.
'ಛೇ, ತಪ್ಪು ತಿಳಿಯಬೇಡ. ಈ ಕೇಂದ್ರದಲ್ಲಿ ಮೊದಲ ದಿನ ನೋಡಿ ನೀನೂ ಫೈಟರ್ ಪೈಲಟ್ ಅಂತ ಪರಿಚಯವಾದ ಕ್ಷಣದಿಂದಲೇ ನನ್ನ ಮನಸ್ಸು ನಿನಗೆ ಮಾರುಹೋಯಿತು. ಮದುವೆಯಾದರೆ ನೀನೇ ಅಥವಾ ನಿನ್ನಂಥೋಳನ್ನೇ ಆಗಬೇಕು ಅಂತ ಮಿಡಿಯತೊಡಗಿತು. ಆದರೆ ಸಹೋದ್ಯೋಗಿನಿಯ ಜತೆ ಸಂಯಮದಿಂದಿರಬೇಕು ಅನ್ನುವ ಶಿಸ್ತಿನಿಂದ ಸುಮ್ಮನಿದ್ದೆ. ಅಂದಹಾಗೆ ನಿಂದು ಯಾವ ಜಾತಿ? ರಕ್ಷಣಾಪಡೆಯಲ್ಲಿ ಯಾರೂ ಇನ್ನೊಬ್ಬರ ಜಾತಿಯನ್ನು ಕೇಳುಲ್ಲ. ಕೇಳಬಾರದು. ಆದರೆ ಮದುವೆಯ ಪ್ರಶ್ನೆ ಬಂದಾಗ ನಾವಲ್ಲದಿದ್ದರೂ ನಮ್ಮ ಕುಟುಂಬಗಳು ಕೇಳ್ತಾರೆ. ನಂದು ತೀರ ಗ್ರಾಮೀಣ ಮನೆಯಲ್ಲ. ತಕ್ಕಮಟ್ಟಿನ ವಿದ್ಯಾವಂತ ಪಟ್ಟಣವಾಸದ ಮನೆತನವೇ. ಆದರೆ ಮದುವೆ ಸಂಬಂಧ ಬಂದರೆ ಗ್ರಾಮೀಣ ಕಟ್ಟಳೆಗಳನ್ನ ಮೀರುಲ್ಲ. ನನಗೆ ಮೂವರು ತಂಗಿಯರಿದಾರೆ. ಮದುವೆಗೆ ಬಂದಿರುವ ಒಬ್ಬಳು. ಅವಳಿಗೆ ಲಗ್ನ ಮಾಡಿ ಕಳಿಸದೆ ನನಗೆ ಮಾಡುವ ವಿಚಾರ ಅಪ್ಪ ಅಮ್ಮನಿಗೆ ಇಲ್ಲ. ನಾನು ಬೇರೆ ಜಾತಿಯ ಹುಡುಗೀನ ಮಾಡಿಕೊಂಡರೆ ಅವರ ವಿವಾಹಕ್ಕೆ ತೊಂದರೆಯಾಗುತ್ತೆ.'
ನನಗೆ ನಿರಾಶೆಯಾಯಿತು. ಮನಸ್ಸು ಕುಸಿಯಿತು. ತಕ್ಷಣ ಒಂದು ಪ್ರಶ್ನೆ ಹುಟ್ಟಿತು. ಅವನ ಕಣ್ಣುಗಳನ್ನು ದಿಟ್ಟಿಸುತ್ತಾ ಕೇಳಿದೆ: 'ಮದುವೆ ಇಲ್ಲದೆಯೇ ಸಂಶೋಧನೆಗೇಂದೇ ಆದರೆ ಸಂಭೋಗಸುಖಕ್ಕೆ ನೀನು ಸಿದ್ಧವೆ?'

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com