ಯಾನ

ಎಸ್.ಎಲ್. ಭೈರಪ್ಪನವರು ಹೊಸ ಕಾದಂಬರಿಯೊಂದಿಗೆ ಮರಳಿ ಬಂದಿದ್ದಾರೆ. ಈ ಬಾರಿ ಅಂತರಿಕ್ಷವೇ ಅವರ...
ಯಾನ

ಎಸ್.ಎಲ್. ಭೈರಪ್ಪನವರು ಹೊಸ ಕಾದಂಬರಿಯೊಂದಿಗೆ ಮರಳಿ ಬಂದಿದ್ದಾರೆ. ಈ ಬಾರಿ ಅಂತರಿಕ್ಷವೇ ಅವರ ಕಲ್ಪನೆಯ ಕೊಂಡಿ. ಬಾನು- ಭೂಮಿ- ಬದುಕುಗಳ ಸಂಬಂಧವೇ ವಸ್ತು. ಸೌರಮಂಡಲದ ಅಧ್ಯಯನ ನೌಕೆ ವಾಯೇಜರ್ ಅನ್ನು ಹಿನ್ನೆಲೆಯಾಗಿಟ್ಟುಕೊಂಡು ತಮ್ಮ ಸೃಜನಶೀಲತೆಯಿಂದ ಕಟ್ಟಿಕೊಟ್ಟ `ಯಾನ'ವನ್ನು ಸ್ವಾಗತಿಸಲು ಸಿದ್ಧರಾಗಿ.

ಬ್ಲ್ಯಾಕ್ಹೋಲ್ ಎನ್ನುವುದು ಏಕಾಂತದ, ಅಂತಮರ್ುಖತೆಯ ಘನ ಗಂಭೀರ ಪ್ರತೀಕ. ಕಾದಂಬರಿಯ ಪಾತ್ರವೊಂದು ಇಂಥ ಕಾವ್ಯಾತ್ಮಕ ಕಲ್ಪನೆಯನ್ನು ಅಭಿವ್ಯಕ್ತಿಸುತ್ತಲೇ, ಈ ಭೂಮಿಯ ಸೃಷ್ಟಿ ರಹಸ್ಯವನ್ನು ಭೇದಿಸಿ ರಟ್ಟು ಮಾಡುವ ಪ್ರಯತ್ನಕ್ಕೆ ಹೊರಟಿರುವ ವೈಜ್ಞಾನಿಕ ಸಮೂಹದ ಅಂತರಂಗದ ವಿಮಶರ್ೆಗೆ, ಅವರೊಳಗಿನ ತಾಕಲಾಟ, ನೈತಿಕತೆ, ಮಾನವೀಯ ಮೌಲ್ಯ, ಭಾರತೀಯತೆಯ ಸನ್ನಿವೇಶದಲ್ಲಿ ಸಂಬಂಧಗಳ ಸೂಕ್ಷ್ಮತೆ ಇತ್ಯಾದಿ ಇತ್ಯಾದಿಗಳಿಗೆ ಮುನ್ನುಡಿ ಬರೆಯುತ್ತದೆ.
ಕನ್ನಡದ ಹೆಮ್ಮೆಯ ಕಾದಂಬರಿಕಾರ ಎಸ್. ಎಲ್ ಭೈರಪ್ಪನವರ `ಯಾನ' ಅಲ್ಲಿಂದಲೇ ಆರಂಭವಾಗುತ್ತದೆ. ಅದು ಕೇವಲ ಭಾವತೀರದ ಯಾನವಲ್ಲ. ಹಾಗೆಂದು ತೀರದ ಭಾವಗಳ ಯಾನವೂ ಅಲ್ಲ. ಏಕೆಂದರೆ ಈ ಯಾನ ಬಹುತೇಕ ವೈಜ್ಞಾನಿಕ ಸಂಗತಿಗಳ ನಡುವೆಯೇ ಸಾಗುವಂಥದ್ದು. ಹಾಗೆಂದು ಇದು ವಿಜ್ಞಾನದ ಯಾನ ಮಾತ್ರವಲ್ಲ, ವಿಜ್ಞಾನದಲ್ಲೂ ಬಾಹ್ಯಾಂತರಿಕ್ಷ ಸಂಶೋಧನೆಯ ಸುತ್ತಲ ಯಾನ, ಅಷ್ಟಕ್ಕೇ ಸೀಮಿತವೂ ಅಲ್ಲ, ಇದು ಅಭಿವೃದ್ಧಿಯ ಯಾನವಲ್ಲ, ಏಕೆಂದರೆ ಆ ಹೆಸರಿನಲ್ಲಿ ಆಗಿರುವ, ಆಗುತ್ತಿರುವ ಅಪಸವ್ಯಗಳನ್ನು ಎತ್ತಿ ತೋರಿಸುತ್ತದೆ. ಹಾಗಿದ್ದರೆ ಬದುಕಿನ ಯಾನವೇ? ಅದಾಗಿದ್ದರೆ ಜೀವ ಸಮೂಹವನ್ನು ದಾಟಿ ಹೋಗಬೇಕಾದ್ದಿರಲಿಲ್ಲ. ಒಂದರ್ಥದಲ್ಲಿ ಮನುಕುಲದ ಯಾನ. ಈ ಜಗತ್ತಿನ ಯಾನ, ಅದನ್ನೂ ಮೀರಿ ಭೂ ಮಂಡಲದಿಂದಾಚೆಗೆ, ನಭವನ್ನೂ ಮೀರಿದ ಅನೂಹ್ಯ ಯಾನ. ಆದಿ ಭೌತಿಕ, ಆದಿ ದೈವಿಕವನ್ನು ದಾಟಿ ಆಧ್ಯಾತ್ಮಿಕ ಯಾನವೆಂದರೆ ಅದೂ ಅಲ್ಲ. ಅದಕ್ಕಿಂತ ಮಿಕ್ಕು ಈ ಸೃಷ್ಟಿಯ ಮೂಲವನ್ನೇ ಕೆದಕುವ ಯಾನ. ಪಯರ್ಾಯ ಸೃಷ್ಟಿ ಯಾನ. ಒಂದು ರೀತಿಯಲ್ಲಿ ಇದು ಜೀವ ಯಾನ.
ಸೌರಮಂಡಲದ ಆಚೆಗಿನ ಸಂಶೋಧನೆಯೊಂದರ ಸುತ್ತ ಸುತ್ತುವ ಅತ್ಯಮೂಲ್ಯ ಯಾನದಲ್ಲಿ ಅದರ ಜತೆ ಜತೆಗೇ ಮನುಷ್ಯನ ಅತಿ ಸೂಕ್ಷ್ಮ ಸಂಬಂಧಗಳಲ್ಲಿನ ಗುರುತ್ವ, ರಭಸ, ಉತ್ಕರ್ಷ ಮೊದಲಾದವುಗಳೂ ಸಾಗುತ್ತದೆ. ಬ್ಲ್ಯಾಕ್ಹೋಲ್ ಇಲ್ಲಿ ಭೂಮಿಯ ಸೃಷ್ಟಿಯ ಮೂಲವಷ್ಟೇ ಅಲ್ಲ. ಮಹಾಸ್ಫೋಟವೆಂಬುದು ಎಲ್ಲ ಸೃಷ್ಟಿಗೂ ಆದಿಯೇ. ಭೂಮಿಯ ಉಗಮಕ್ಕೆ ಕಾರಣವಾದಂತೆಯೇ ಪ್ರತಿ ಜೀವಿಯ ಉಗಮಕ್ಕೆ ಮುನ್ನ ನಡೆಯುವುದೂ ಮಹಾಸ್ಫೋಟವೇ. ಎರಡರ ಸಾತತ್ಯವನ್ನೂ ಯಾನ ಕಟ್ಟಿಕೊಡುತ್ತದೆ. ಅಲ್ಲಿಯೂ ಗುರುತ್ವ, ಇಲ್ಲಿಯೂ ವಿರುದ್ಧ ಲಿಂಗಿಗಳ ನಡುವಿನ ಆಕರ್ಷಣೆ, ನಂತರದ ಸಂಬಂಧದ ಗಾಢತೆಯೂ ಒಂದರ್ಥದಲ್ಲಿ ಗುರುತ್ವವೇ. ನಂತರದಲ್ಲಿ ಅಲ್ಲಿ, ಇಲ್ಲೂ ಉತ್ಕರ್ಷ, ಸಂಘರ್ಷ. ಕೊನೆಗೊಮ್ಮೆ ಸ್ಫೋಟ. ಕೆರಳಿ, ಕುದಿದು ಕೆಮ್ಮಾಡಿಯಾಗಿ ನಿಂತಿದ್ದ `ಕಾಯ' ಮೆಲ್ಲನೆ ತಣ್ಣಗಾಗುತ್ತದೆ. ದ್ರವರೂಪದಲ್ಲಿನ ದಾತು ನಿಧಾನಕ್ಕೆ ಘನೀಭವಿಸತೊಡಗುತ್ತದೆ. ಮತ್ತೊಂದರ ಅಸ್ತಿತ್ವ ಅಲ್ಲಿಯೇ ಅರಿವಿಗೆ ಬರುತ್ತದೆ. ಇದು ನಿರಂತರ ಯಾನ.
ಇಂಥ ಜೀವ ಸೃಷ್ಟಿಯ ಯಾನ ಸೌರಮಂಡಲದ ಏಕೈಕ ಸಜೀವ ಗ್ರಹ ಭೂಮಿಯಲ್ಲಿ ಕೋಟ್ಯಂತರ ವರ್ಷಗಳಿಂದ ಆಗುತ್ತಲೇ ಇದೆ. ಮನುಕುಲದ ವಿಕಾಸದ ಹಾದಿಯಲ್ಲಿ ಇಂದು ಅದೆಷ್ಟೋ ದೂರ ಕ್ರಮಿಸಿಯಾಗಿದೆ. ಒಂದರ್ಥದಲ್ಲಿ ಭೂಮಿಯ ಮೇಲಿನ ಈ ಸೃಷ್ಟಿಗೆ ಈಗ ತುಂಬು ಹರೆಯ. ಸಹಜವಾಗಿ ಹರೆಯದ ಮನಸ್ಸು ಮತ್ತೆ ಆಕರ್ಷಣೆಗೆ ಒಳಗಾಗುತ್ತದೆ. ಇನ್ನೊಂದು ಸಂಘರ್ಷದ ಹಂಬಲ, ಮತ್ತೊಂದು ಸೃಷ್ಟಿಯ ತವಕ ಮೊಳೆಯುತ್ತದೆ. ಈ ಹಂತದಲ್ಲಿ ಪ್ರತಿ ಜೀವಿಗಳಲ್ಲೂ ತಂತಮ್ಮ ಸೃಷ್ಟಿಯ ರಹಸ್ಯದ ಕುತೂಹಲ ಮೂಡಿದರೆ ಅದು ತಪ್ಪಲ್ಲ. ಭೂಮಿಯ ಮೇಲಿನ ಸೃಷ್ಟಿಯ ಹರೆಯದ ಈ ಕಾಲದಲ್ಲೂ ಇಂಥದ್ದೇ ರಹಸ್ಯ ತಿಳಿಯುವ ಕುತೂಹಲ ತೀವ್ರಗೊಂಡಿದೆ. ವಿಜ್ಞಾನದ ಇಂಥ ಸಂಶೋಧನೆಯ ಭಾಗ ಸೌರಮಂಡಲದ ಅಧ್ಯಯನ ಉಡಾವಣೆ ವಾಯೇಜರ್. ಇದನ್ನೇ ಆಧಾರವಾಗಿಟ್ಟುಕೊಂಡು ಭೈರಪ್ಪ ತಮ್ಮ ಸೃಜನಶೀಲ ಸೃಷ್ಟಿಯ ಇನ್ನೊಂದು `ಯಾನ'ವನ್ನು ಕಟ್ಟಿಕೊಟ್ಟಿದ್ದಾರೆ. ವಿಜ್ಞಾನದ ಬೆಳವಣಿಗೆಯನ್ನು ಕಲ್ಪನೆಯಲ್ಲಿ ಇನ್ನಷ್ಟು ಬೆಳೆಸಿ ಸೌರ ಮಂಡಲದಾಚೆಗೆ ತಲೆಮಾರುಗಳ ಬದುಕು ಸಾಧ್ಯವೇ? ಅಲ್ಲೊಂದು ಸಂಯೋಜನೆ, ಸೃಷ್ಟಿ ಆದೀತೆ? ಆದರೆ ಅದು ಹೇಗಿದ್ದೀತು? ಜನ ಸಮೂಹದಿಂದ, ಈ ಭೂಮಂಡಲದಿಂದ ಆಚೆ ಹೋಗಿ, ಎಲ್ಲ ಸಂಬಂಧ, ಸಂಪರ್ಕಗಳನ್ನು ಮೀರಿ ಎಷ್ಟೋ ವರ್ಷಗಳವರೆಗೆ ಬಾಹ್ಯಾಕಾಶದಲ್ಲೇ ನೆಲೆ ನಿಲ್ಲುವ ಗಂಡು, ಹೆಣ್ಣಿನ ಮನಸ್ಥಿತಿ ಎಂಥದ್ದು? ಅಲ್ಲಿ ಜನಿಸುವ ಮಾನವ ಕುಡಿಗಳ ಬದುಕು ಎಂತು? ಇಲ್ಲಿ ಇರುವ ಕಟ್ಟುಕಟ್ಟಲೆಗಳು, ನೈತಿಕ ಮೌಲ್ಯಗಳು, ಸೌರಮಂಡಲದ ಪರಿಧಿಯಲ್ಲಿ ನಮ್ಮಿಂದಲೇ ರೂಪುಗೊಂಡ ನಿಯಮಗಳು ಇಲ್ಲಿಂದಲೇ ನಭಕ್ಕೆ ಚಿಮ್ಮಿಸಲ್ಪಟ್ಟ ಮನುಷ್ಯರು, ಅವರಿಂದ ಜನಿಸುವ ಮುಂದಿನ ತಲೆಮಾರಿಗೂ ಅನ್ವಯವೇ ಇತ್ಯಾದಿ ಸಂಗತಿಗಳು ಕಾದಂಬರಿಯ ತಿರುಳು. ಕಲ್ಪನೆಯ ಸ್ವಾತಂತ್ರ್ಯವನ್ನು ಕಾದಂಬರಿಕಾರ ಎಲ್ಲಿಯೂ ದುರುಪಯೋಗ ಪಡಿಸಿಕೊಳ್ಳದೇ ವಾಸ್ತವದ ನೆಲೆಯಲ್ಲೇ ಎಲ್ಲವನ್ನೂ ಕಟ್ಟಿ ಕೊಡುತ್ತಾರೆ. ಮೂಲ ವಿಜ್ಞಾನಕ್ಕೆ ಒಂದಿನಿತೂ ಚ್ಯುತಿ ಬಾರದಂತೆ ಭವಿಷ್ಯದ ಸಾಧ್ಯತೆಯೋ ಎಂಬಂತೆ ಫಿಕ್ಷನ್ ಅನ್ನು ಬಿಂಬಿಸುವುದು ಭೈರಪ್ಪನವರ ಸಾಮಥ್ರ್ಯ. ಎರಡು ವರ್ಷ ಸ್ವತಃ ಬಾಹ್ಯಾಕಾಶ ವಿಜ್ಞಾನಿಗಳೊಂದಿಗೆ ಒಡನಾಡಿ, ಭಾರತೀಯ ವಿಜ್ಞಾನ ಮಂದಿರದ ವಿಜ್ಞಾನಿ ರಘುನಂದನ ಹಾಗೂ ಇಸ್ರೋದ ವಿಜ್ಞಾನಿ ಸತೀಶ್ರಂಥವರಿಂದಲೇ ತಿದ್ದಿಸಿ ಕೃತಿಪಾಕವನ್ನು ಪಕ್ವಗೊಳಿಸಿರುವುದು ಯಾನದ ಶ್ರೇಷ್ಠತೆ.
ಭೈರಪ್ಪನವರ ಹಿಂದಿನ ಎಲ್ಲ ಕಾದಂಬರಿಗಳಿಗಿಂತಲೂ ವಿಭಿನ್ನವಾಗಿ ನಿಲ್ಲುವ, ಆದರೆ ಅವರ ಎಂದಿನ ಅಧ್ಯಯನಶೀಲತೆಯಿಂದ ಹೊರತಾಗಿರದ, ವಿಷಯ, ವಸ್ತು, ನಿರೂಪಣೆಯ ದೃಷ್ಟಿಯಿಂದ ಮತ್ತಷ್ಟು ಬೆರಗು, ಹೊಸತನ್ನು ಒಳಗೊಂಡ ಕಾದಂಬರಿ `ಯಾನ' ಓದುಗರ ದಾಹ ತಣಿಸಲು ಸಜ್ಜಾಗಿದೆ. ಅತ್ಯಂತ ಗಂಭೀರ ವಸ್ತುವೊಂದನ್ನು ತೀರಾ ಮನೋಜ್ಞವಾಗಿ ಚಿತ್ರಿಸುವುದು ಭೈರಪ್ಪನವರಿಗೆ ಹೊಸತೇನಲ್ಲ. ಭಾರತೀಯ ಸಾಹಿತ್ಯ ಸನ್ನಿವೇಶದಲ್ಲಿ ಇಂಥವರಿಲ್ಲವೆಂದಲ್ಲ. ಆದರೆ ತಾವು ಆಯ್ದುಕೊಂಡ ವಿಷಯದ ಕುರಿತಾದ ಸಮಗ್ರ ಅಧ್ಯಯನ ಮತ್ತು ಅದರ ಅಳವಡಿಕೆಯಲ್ಲಿ ಮೂಲ ಸಂಗತಿಗಳಿಗೆ ಒಂದಿನಿತೂ ಧಕ್ಕೆ ಬಾರದಂತೆ ಅದನ್ನು ನಿರೂಪಿಸುವುದು ಭೈರಪ್ಪನವರದ್ದೇ ವೈಶಿಷ್ಟ್ಯ. ವಿಜ್ಞಾನದ, ಅದರಲ್ಲೂ ಖಗೋಲ, ಭೌತ, ಜೀವ ವಿಜ್ಞಾನಗಳನ್ನು ಅರ್ಥ ಮಾಡಿಸುವುದು ಕ್ಲಿಷ್ಟಕರ. ಕಾದಂಬರಿಯೊಂದಕ್ಕೆ ಅದನ್ನೇ ಮೂಲ ಧಾತುವಾಗಿ ತೆಗೆದುಕೊಳ್ಳುವುದು ಸವಾಲು. ಈ ದೃಷ್ಟಿಯಲ್ಲಿ `ಯಾನ'ವನ್ನು ವೈಜ್ಞಾನಿಕ ಕಾದಂಬರಿ ಎನ್ನಬಹುದು. ಆದರೆ ಕಾದಂಬರಿಕಾರ ಯಾನದುದ್ದಕ್ಕೂ ಹರವಿಡುವುದು ಮಾನವ ಸಂಬಂಧಗಳ ಬಗೆಗಿನ ವಿಪ್ಲವ, ಜಿಜ್ಞಾಸೆಗಳನ್ನು.
ಕಾದಂಬರಿ ಆರಂಭವಾಗುವುದು ಅಂತರಿಕ್ಷದಲ್ಲಿ, ಭೂಮಿಯ ಮೇಲಿಂದ ಚಿಮ್ಮಿಬಿಟ್ಟ ತಾಂತ್ರಿಕ ಪರಿಣತ ಗಂಡು, ಆಕಾಶಯಾನದಲ್ಲಿ ನುರಿತ ಹೆಣ್ಣೊಬ್ಬಳು ನಭದ ಗಾಢಾಂಧಕಾರದಲ್ಲಿ ಮೈಥುನಕ್ಕೆ ನಿಯೋಜಿತರಾಗಿರುತ್ತಾರೆ. ಅಲ್ಲಿಯೇ ಅವರು ಮಕ್ಕಳನ್ನು ಹೆರಬೇಕು. ಮಾತ್ರವಲ್ಲ ಅವರಿಂದ ಮರು ಸೃಷ್ಟಿಗಳೂ ಆಗಬೇಕು.

ಕಾದಂಬರಿ ಆರಂಭವಾಗುವುದು ಅಲ್ಲಾದರೂ ನೆನಪುಗಳ ಸ್ವರೂಪದಲ್ಲಿ ಓದುಗರನ್ನು ಅವರ ನೆಲೆಗೇ ಕರೆತರುತ್ತಾರೆ ಅವರು. ಬೆಂಗಳೂರು, ಇಸ್ರೋ ನೆಲೆಯಲ್ಲಿಯೇ ಕಥೆ ಸುರುಸುರುಳಿಯಾಗಿ ಬಿಚ್ಚಿಕೊಳ್ಳುತ್ತದೆ. ಆದರೆ, ದೃಷ್ಟಿ ಮಾತ್ರ ಸಮಗ್ರ ಸೌರಮಂಡಲವನ್ನು ದಾಟಿ ಗ್ರಹ, ನಕ್ಷತ್ರ ಸಮೂಹಗಳೆಲ್ಲವನ್ನೂ ಒಳಗೊಳ್ಳುತ್ತದೆ. ಹಾಗೆಯೇ ವಿಷಯದ ಹರವೂ ಸಹ. ಪ್ರಸ್ತುತ ಜಗತ್ತಿನಲ್ಲಿ ನಡೆಯುತ್ತಿರುವ ಎಲ್ಲ ವಿದ್ಯಮಾನಗಳ ಮೇಲಿನ ಸಣ್ಣದೊಂದು ಝಲಕ್ ಕಾದಂಬರಿಯಲ್ಲಿ ಕಾಣುತ್ತದೆ. ಹಿಮಾಲಯದ ಮೇಲಿನ ಅಭಿವೃದ್ಧಿಯ ಅತ್ಯಾಚಾರ, ಅದರ ಪರಿಣಾಮಗಳ ಬಗ್ಗೆ ಭೈರಪ್ಪ ವಿಷಾದದೊಂದಿಗಿನ ಅಸಹನೆಯನ್ನು ವ್ಯಕ್ತಪಡಿಸುತ್ತಾರೆ, ವೈಜ್ಞಾನಿಕ ಕ್ರಾಂತಿಯ ಕುರಿತು ಅಮೆರಿಕ ಹಾಗೂ ನೆರೆಯ ಮತ್ಸರ, ಕುತ್ಸಿತ ಟೀಕೆ. ವಿಜ್ಞಾನದಲ್ಲಿ ರಾಜಕೀಯದವರ ಹಸ್ತಕ್ಷೇಪ ಹೀಗೆ ಎಲ್ಲ ಸಂಗತಿಗಳೂ ವಿಮಶರ್ೆಗೊಳಪಡುತ್ತದೆ. ವಿಜ್ಞಾನಿಗಳೆಂದರೆ ದೈವ ನಂಬಿಕೆಯನ್ನೇ ಹೊಂದಿರಬಾರದೆಂಬ ಮನೋಭಾವದ ಮಿಥ್ಯೆಯನ್ನು ಭೈರಪ್ಪ ಪ್ರಶ್ನಿಸುತ್ತಾರೆ. ವ್ಯವಸ್ಥೆಯ ಬಗೆಗೆ ಸಾಮಾನ್ಯ ಓದುಗನ ಮನದಲ್ಲಿ ಇರಬಹುದಾದ ಸಹಜ ಆಕ್ರೋಶಗಳು ಪ್ರತಿಫಲನಗೊಳ್ಳುವುದರೊಂದಿಗೆ ಕೆಲವೊಮ್ಮೆ ಓದುಗ ಕಾದಂಬರಿಯ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿರುತ್ತಾನೆ.
ಸೂರ್ಯ, ಗ್ರಹಮಂಡಲ, ಭೂಮಿ, ಒಟ್ಟಾರೆ ಬ್ರಹ್ಮಾಂಡ ಮತ್ತು ಅದರೊಳಗಿನ ಅಸ್ತಿತ್ವವನ್ನು ವಿಮಶರ್ಿಸುವ ಕಾದಂಬರಿ, ಎಷ್ಟೋ ಸಂಗತಿಗಳಿಗೆ ವಿಜ್ಞಾನದಲ್ಲಿ ಸಿಗಲಾರದ ಉತ್ತರಗಳನ್ನು ತತ್ವಜ್ಞಾನದ ತಳಹದಿಯಲ್ಲಿ ಕಾಣುವ ಪ್ರಯತ್ನ ಮಾಡುತ್ತದೆ. ಕಥೆಯಷ್ಟೇ ಸಲೀಸಾಗಿ ಇಂಥ ಗಂಭೀರ ತಾತ್ವಿಕ ಹಾಗೂ ವೈಜ್ಞಾನಿಕ ಸಂಗತಿಗಳೂ ಸಾಗುವುದು ಯಾನದ ಹೆಗ್ಗಳಿಕೆ. ಹೇಗೇ ನೋಡಿದರೂ ಭೈರಪ್ಪನವರ ಈವರೆಗಿನ ಕೃತಿಗಳಲ್ಲೇ ವಿಭಿನ್ನ ಹಾಗೂ ಶ್ರೇಷ್ಠ ಸ್ಥಾನದಲ್ಲಿ ಯಾನ ನಿಲ್ಲುತ್ತದೆ. ಕಥೆಯ ದೃಷ್ಟಿಯಿಂದ ಇದೊಂದು ಪರಿಪೂರ್ಣ ಕಾದಂಬರಿ. ಇನ್ನು ಒಂದಕ್ಷರವೂ ಇದಕ್ಕೆ ಸೇರಬೇಕೆನಿಸುವುದಿಲ್ಲ. ಅಥವಾ ಇವಿಷ್ಟು ಕಥೆಯ ಸೊಗಸಿಗೆ ಬೇಕಿರಲಿಲ್ಲ ಎಂದೂ ಅನ್ನಿಸುವುದಿಲ್ಲ. ಅಷ್ಟರಮಟ್ಟಿಗೆ ಸೊಗಸಾಗಿ ಸಂಯೋಜ ನೆಗೊಳಿಸಲಾಗಿದೆ. ಬಹುಶಃ ಕನ್ನಡ ಮಾತ್ರವಲ್ಲ ಭಾರತೀಯ ಲೇಖಕರೂ ಈವರೆಗೆ ಇಂಥ ಸಂಗತಿಯನ್ನು ಕಾದಂಬರಿ ಯಾಗಿಸಿರಲಿಕ್ಕಿಲ್ಲ. ಪಾಶ್ಚಾತ್ಯ ಸಾಹಿತ್ಯದಲ್ಲೂ ವಿರಳವಿರಬಹುದು. ಅಥವಾ ಅದು ನನ್ನ ಓದಿನ ಮಿತಿಯೂ ಇದ್ದೀತು.
ಒಟ್ಟಾರೆ ಓದುಗನಿಗೆ ರಸದೌತಣವೀಯುವ, ಒಂದಿನಿತೂ ಬಳಲಿಕೆಯನ್ನು ತಾರದ, ವಿರಾಮದ ಬಯಕೆಯನ್ನೇ ಹುಟ್ಟಿಸದ ಭವ್ಯ ಯಾನ ಇದು ಎನ್ನುವುದರಲ್ಲಿ ಅನುಮಾನವೇ ಇಲ್ಲ. ನಮ್ಮ ನಡುವಿನ ಸರ್ವ ಶ್ರೇಷ್ಠ ಕಾದಂಬರಿಕಾರನ ಗರಿಷ್ಠ ಕಸುಬುಗಾರಿಕೆಯ ಫಲ ಇದೆನ್ನುವುದರಲ್ಲಿ ಅನುಮಾನವಿಲ್ಲ. ಸಾರಸ್ವತ ಲೋಕದ ಅತ್ಯುನ್ನತ ಗೌರವಕ್ಕೆ ಅರ್ಹ ಕೃತಿಗಳನ್ನು ಪೂರ್ವಗ್ರಹ ಬಿಟ್ಟು ಪರಿಗಣಿಸು ವುದಾದರೆ `ಯಾನ' ಆ ಸಾಲಿನಲ್ಲಿ ಮೊದಲಿಗೆ ನಿಲ್ಲುತ್ತದೆ. ಭೈರಪ್ಪನವರಿಗೆ ಓದುಗರ ಹೃದಯದಲ್ಲಿ ಅಂಥವೆಲ್ಲ ಮಿತಿಗಳನ್ನು ದಾಟಿದ ಸ್ಥಾನವಿರುವುದಕ್ಕೆ ಅವರ ಕೃತಿಗಳ ಮಾರಾಟ, ಮುದ್ರಣಗಳ ಸಂಖ್ಯೆಯೇ ಸಾಟಿ. ಯಾನ ಆ ಎಲ್ಲ ದಾಖಲೆಗಳನ್ನು ಮುರಿಯುವ ಸೂಚನೆ ಖಂಡಿತಾ ಇದೆ. ಹಾಗಾದರೆ ಅದು ಪ್ರತಿ ಕನ್ನಡಿಗನ ಹೆಮ್ಮೆಯೂ ಹೌದು.  

 -ರಾಧಾಕೃಷ್ಣ ಎಸ್. ಭಡ್ತಿ
abhyagatha@yahoo.co.in

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com