ನಳಿನಿಗೆ ಪೆರೋಲ್ ನೀಡದ ಜಯಾ, ದಿಢೀರ್ ನಿಲುವು ಬದಲಿಸಿದ್ದೇಕೆ..?

ಕಳೆದ ವಾರವಷ್ಟೇ ರಾಜೀವ್ ಗಾಂಧಿ ಹಂತಕರನ್ನು ಬಿಡುಗಡೆ ಮಾಡುವುದಿಲ್ಲ ಎಂದು ಹೇಳಿದ್ದ ತ.ನಾಡು ಸರ್ಕಾರ, ಈಗ ಇದ್ದಕ್ಕಿದ್ದಂತೆ ತನ್ನ ನಿಲುವು ಬದಲಿಸಿ..
ನಳಿನಿಗೆ ಪೆರೋಲ್ ನೀಡದ ಜಯಾ, ದಿಢೀರ್ ನಿಲುವು ಬದಲಿಸಿದ್ದೇಕೆ..?

ಚೆನ್ನೈ: ಕಳೆದ ವಾರವಷ್ಟೇ ರಾಜೀವ್ ಗಾಂಧಿ ಹಂತಕರನ್ನು ಬಿಡುಗಡೆ ಮಾಡುವುದಿಲ್ಲ ಎಂದು ಹೇಳಿದ್ದ ತಮಿಳುನಾಡು ಸರ್ಕಾರ, ಈಗ ಇದ್ದಕ್ಕಿದ್ದಂತೆ ತನ್ನ ನಿಲುವು ಬದಲಿಸಿದ್ದೇಕೆ ಎಂಬುದು ಈಗ ಚರ್ಚೆಗೆ ಗ್ರಾಸವಾಗಿದೆ.

ರಾಜೀವ್ ಗಾಂಧಿ ಅವರನ್ನು ಹತ್ಯೆಗೈದ 7 ಹಂತಕರ ಪೈಕಿ ನಳಿನಿ ಶ್ರೀಹರನ್ ಒಂದು ತಿಂಗಳ ಪೆರೋಲ್ ಕೋರಿ ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು. ಆದರೆ ನಳಿನಿಗೆ ಪೆರೋಲ್ ನೀಡುವುದಕ್ಕೆ ತೀವ್ರ ವ್ಯಕ್ತಪಡಿಸಿದ್ದ ತಮಿಳುನಾಡು ಸರ್ಕಾರ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವುದರಿಂದ ರಾಜೀವ್ ಗಾಂಧಿ ಹಂತಕರಿಗೆ ಪೆರೋಲ್ ನೀಡಬಾರದು ಎಂದು ನ್ಯಾಯಾಲಯದಲ್ಲಿ ಮನವಿ ಮಾಡಿತ್ತು. ಆದರೆ ಇದ್ದಕ್ಕಿದ್ದಂತೆಯೇ ತನ್ನ ನಿಲುವು ಬದಲಿಸಿದ ಜಯಾ ಸರ್ಕಾರ ರಾಜೀವ್ ಹಂತಕರನ್ನು ಶಾಶ್ವತವಾಗಿ ಬಿಡುಗಡೆ ಮಾಡಲು ಮುಂದಾಗಿತ್ತು. ಆದರೆ ಜಯಾ ಆತುರದ ನಿರ್ಧಾರಕ್ಕೆ ಸುಪ್ರೀಂಕೋರ್ಟ್ ಬ್ರೇಕ್ ಹಾಕಿದೆ.

ರಾಜೀವ್ ಗಾಂಧಿ ಹಂತಕರಲ್ಲಿ ಓರ್ವಳಾದ ನಳಿನಿ ಶ್ರೀಹರನ್ ಕಳೆದ ಜನವರಿಯಲ್ಲಿ ತನ್ನ ವಯಸ್ಸಾದ ತಂದೆಯನ್ನು ನೋಡಲು ತಮಗೆ 1 ತಿಂಗಳ ಪೆರೋಲ್ ನೀಡಬೇಕೆಂದು ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು. 'ತಾನು ಕಳೆದ 22 ವರ್ಷಗಳಿಂದ ಜೈಲುವಾಸ ಅನುಭವಿಸುತ್ತಿದ್ದು, ತನ್ನ ಸಹೋದರನ ಮದುವೆಗೆಂದು 10 ವರ್ಷಗಳ ಹಿಂದೆ 3 ದಿನಗಳ ಕಾಲ ಪೆರೋಲ್ ಮೇಲೆ ತನ್ನ ಊರಿಗೆ ಹೋಗಿ ವಾಪಾಸ್ಸಾಗಿದ್ದೆನು. ಇದೀಗ ಊರಿಗೆ ಹೋಗಿ ಬರಲು ತನಗೆ ಒಂದು ತಿಂಗಳ ರಜೆ ನೀಡಬೇಕು' ಎಂದು ನಳಿನಿ ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು.

ಆದರೆ ನಳಿನಿ ಅವರ ಮನವಿಯನ್ನು ಪುರಸ್ಕರಿಸಬಾರದು ಮತ್ತು ಪೆರೋಲ್‌ಗೆ ತಡೆ ನೀಡಬೇಕು ಎಂದು ಇದೇ ತಮಿಳುನಾಡು ಸರ್ಕಾರ ಅಂದು ನ್ಯಾಯಾಲಯದಲ್ಲಿ ವಾದ ಮಂಡಿಸಿತ್ತು. 'ನಳಿನಿ ಶ್ರೀಹರನ್ ಅವರನ್ನು ಕೆಲ ರಾಜಕೀಯ ವ್ಯಕ್ತಿಗಳು ಮತ್ತು ಕೆಲ ಪೊಲೀಸ್ ಅಧಿಕಾರಿಗಳು ದಟ್ಟ ಅಡವಿಯಲ್ಲಿ ಭೇಟಿ ಮಾಡುವ ಸಾಧ್ಯತೆ ಇದ್ದು, ನಳಿನಿ ಅವರ ಬಿಡುಗಡೆಯಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಂಭವವಿದೆ. ಹೀಗಾಗಿ ನಳಿನಿ ಅವರ ಮನವಿಯನ್ನು ತಿರಸ್ಕರಿಸಬೇಕು' ಎಂದು ತಮಿಳುನಾಡು ಸರ್ಕಾರ ನ್ಯಾಯಾಲಯದಲ್ಲಿ ವಾದಿಸಿತ್ತು.

ಆದರೆ ಈಗ ಇದ್ದಕ್ಕಿದ್ದಂತೆಯೇ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ರಾಜೀವ್ ಗಾಂಧಿ ಅವರನ್ನು ಹತ್ಯೆಗೈದ ಎಲ್ಲ 7 ಹಂತಕರನ್ನು ತಮ್ಮ ವಿಶೇಷ ಅಧಿಕಾರವನ್ನು ಬಳಸಿ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಅಲ್ಲದೆ ಈ ಬಗ್ಗೆ ಪ್ರತಿಕ್ರಿಯಿಸುವಂತೆ ಕೇಂದ್ರ ಸರ್ಕಾರಕ್ಕೆ ಮೂರು ದಿನಗಳ ಗಡುವನ್ನು ಕೂಡ ನೀಡಿದ್ದರು. ಜಯಲಲಿತಾ ಅವರ ನಿಲುವು ದಿಢೀರ್ ಬದಲಾಗಲು ಕಾರಣ ಏನು ಎಂಬುದು ತಿಳಿಯುತ್ತಿಲ್ಲ.

ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವ ಈ ಸಮಯದಲ್ಲಿ ಜಯಲಲಿತಾ ಅವರ ಈ ದಿಢೀರ್ ನಿರ್ಧಾರ ಅಚ್ಚರಿ ಮೂಡಿಸಿದೆ. ರಾಜೀವ್ ಹಂತಕರು ತಮಿಳಿಗರಾಗಿರುವುದರಿಂದ ಈ ವಿಚಾರ ತಮಿಳುನಾಡಿನಲ್ಲಿ ಭಾವನಾತ್ಮಕ ವಿಚಾರವಾಗಿದೆ. ತೃತೀಯ ರಂಗದಲ್ಲಿ ಗುರುತಿಸಿಕೊಂಡಿರುವ ಜಯಲಲಿತಾ ಅವರು ತಾವು ಪ್ರಧಾನಿ ಅಭ್ಯರ್ಥಿಯ ಆಕಾಂಕ್ಷಿ ಎಂದು ಈಗಾಗಲೇ ತಮ್ಮ ಬೆಂಬಲಿಗರ ಮೂಲಕ ಸ್ಪಷ್ಟಪಡಿಸಿದ್ದಾರೆ. ಹೀಗಾಗಿಯೇ ಜಯಲಲಿತಾ ಅವರು ಇಂತಹುದೊಂದು ನಿರ್ಧಾರಕ್ಕೆ ಕೈಹಾಕಿದರೇ ಅಥವಾ ನಿಜವಾಗಿಯೂ ರಾಜೀವ್ ಹಂತಕರ ಮೇಲಿನ ಕನಿಕರದಿಂದ ಅವರನ್ನು ಬಿಡುಗಡೆ ಮಾಡಲು ಬಯಸಿದ್ದರೇ ಎನ್ನುವುದು ಯಕ್ಷಪ್ರಶ್ನೆಯಾಗಿ ಉಳಿದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com