ಹದಿಹರೆಯ ಮಕ್ಕಳ ನಿಭಾವಣೆ, ನಿರ್ವಹಣೆ: ಪೋಷಕರು ಗಮನಿಸಬೇಕಾದ ಅಂಶಗಳು!

ಇಂದಿನ ವೇಗದ ಸ್ಪರ್ಧಾತ್ಮಕ ತಾಂತ್ರಿಕ ಯುಗದಲ್ಲಿ ಹದಿಹರೆಯದ ಮಕ್ಕಳನ್ನು ನಿಭಾಯಿಸುವುದು ಪೋಷಕರ ಪಾಲಿಗೆ ಸವಾಲಾಗಿ ಪರಿಣಮಿಸುತ್ತಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚೆನ್ನೈ: ಇಂದಿನ ವೇಗದ ಸ್ಪರ್ಧಾತ್ಮಕ ತಾಂತ್ರಿಕ ಯುಗದಲ್ಲಿ ಹದಿಹರೆಯದ ಮಕ್ಕಳನ್ನು ನಿಭಾಯಿಸುವುದು ಪೋಷಕರ ಪಾಲಿಗೆ ಸವಾಲಾಗಿ ಪರಿಣಮಿಸುತ್ತಿದೆ. ಹದಿಹರೆಯಕ್ಕೆ ಕಾಲಿಡುತ್ತಿದ್ದಂತೆ ಮಕ್ಕಳ ವರ್ತನೆ, ಮಾತುಗಳಲ್ಲಿ ಬದಲಾವಣೆಯಾಗುತ್ತಿರುತ್ತದೆ. ಅವರನ್ನು ಹೇಗೆ ನಿಭಾಯಿಸಬೇಕು, ಅವರ ಜೊತೆ ಹೇಗೆ ವರ್ತಿಸಬೇಕೆಂದು ಪೋಷಕರಿಗೆ ಗೊಂದಲವಾಗುತ್ತದೆ. 


ಇದಕ್ಕೆ ಚೆನ್ನೈಯ ಮನೋವೈದ್ಯೆ ಸುಜಾತ ಮೇಲ್ಮುರುಗನ್ ಕೆಲವು ಸಲಹೆಗಳನ್ನು ನೀಡಿದ್ದಾರೆ. ಅದು ಪೋಷಕರಿಗೆ ಉಪಯೋಗವಾಗಬಹುದು.


ಹದಿಹರೆಯಕ್ಕೆ ಕಾಲಿಟ್ಟ ಮಕ್ಕಳ ವರ್ತನೆ ಏಕೆ ಬದಲಾಗುತ್ತದೆ?: 11-12 ವರ್ಷಗಳು ಕಳೆಯುತ್ತಿದ್ದಂತೆ ಮಕ್ಕಳ ದೈಹಿಕತೆಯಲ್ಲಿ ಬದಲಾವಣೆಯಾಗುತ್ತದೆ. ಹಾರ್ಮೊನ್ ನಲ್ಲಿ ವ್ಯತ್ಯಾಸವಾಗುತ್ತದೆ, ಮನಸ್ಸಿನ ಭಾವನೆಗಳಲ್ಲಿ ಸಹ ಏರುಪೇರು, ಬದಲಾವಣೆಗಳು ಆಗುತ್ತಿರುತ್ತದೆ. ಪ್ರೌಢವಸ್ಥೆ ಮಕ್ಕಳು ಬಾಲ್ಯಜೀವನದಿಂದ ಯುವ ವಯಸ್ಕ ಜೀವನಕ್ಕೆ ಕಾಲಿಟ್ಟರೆಂದು ಅರ್ಥ. ಆಗ ಮಕ್ಕಳು ಮಾನಸಿಕವಾಗಿ ಯೋಚಿಸುವ ರೀತಿ ಬದಲಾಗುತ್ತದೆ. ಮಕ್ಕಳು ಪ್ರೌಢಾವಸ್ಥೆಗೆ ಬಂದಾಗ ಪೋಷಕರಲ್ಲಿ ಮತ್ತು ಮನೆಯ ವಾತಾವರಣ ಕೂಡ ಬದಲಾಗುತ್ತದೆ. 


ಹೆಣ್ಣು ಮಕ್ಕಳಲ್ಲಿ ದೈಹಿಕ ಬದಲಾವಣೆ 7ರಿಂದ 13 ವರ್ಷದೊಳಗೆ ಮತ್ತು ಗಂಡು ಮಕ್ಕಳಲ್ಲಿ 9ರಿಂದ 14 ವರ್ಷದೊಳಗೆ ಆಗುತ್ತದೆ. ಮುಖದಲ್ಲಿ ಕೂದಲು ಬರುವುದು, ಹೆಚ್ಚು ಬೆವರುವುದು, ತೈಲ ಸ್ರವಿಸುವಿಕೆ, ಸಂತಾನೋತ್ಪತ್ತಿ ಅಂಗಗಳ ಬೆಳವಣಿಗೆ, ಧ್ವನಿ ಬದಲಾವಣೆ ಮತ್ತು ದೇಹದ ಭಾಗಗಳ ಬೆಳವಣಿಗೆ ಕೆಲವು ಚಿಹ್ನೆಗಳು.

ತಮ್ಮ ಗುರುತು ತೋರಿಸಿಕೊಳ್ಳುವುದು: ಪ್ರೌಢಾವಸ್ಥೆ ಮಕ್ಕಳ ಪಾಲಿಗೆ ವಿಶೇಷ. ಈ ಸಮಯದಲ್ಲಿ ಮಕ್ಕಳಲ್ಲಿ ಒಂದು ರೀತಿಯಲ್ಲಿ ಗೊಂದಲವಿರುತ್ತದೆ. ಸ್ವತಂತ್ರತೆ ಬಯಸುತ್ತಾರೆ, ಅದೇ ಸಂದರ್ಭದಲ್ಲಿ ಪೋಷಕರ ನೆರವನ್ನು ಕೂಡ ಕೇಳುತ್ತಾರೆ. ಹೊಸ ಹೊಸ ಸ್ನೇಹಿತರನ್ನು ಮಾಡಿಕೊಳ್ಳುತ್ತಾರೆ. ಅದರೊಟ್ಟಿಗೆ ಹೊರ ಜಗತ್ತಿನ ಬಗ್ಗೆ, ಲೈಂಗಿಕತೆ ಬಗ್ಗೆ ಕುತೂಹಲ ಮೂಡುತ್ತದೆ. ಒಟ್ಟಾರೆ ವರ್ತನೆ, ನಡವಳಿಕೆಯಲ್ಲಿ ಬದಲಾವಣೆ ಕಾಣುತ್ತದೆ. ಈ ಸಮಯದಲ್ಲಿ ಮಕ್ಕಳಿಗೆ ಖಾಸಗಿತನ ಮತ್ತು ಅವರಿಗೆ ಅವರದೇ ಆದ ಸಮಯ ನೀಡುವುದು ಪೋಷಕರ ಕರ್ತವ್ಯ.


ತಂದೆ-ತಾಯಿ ಹೇಳಿದ ಮಾತನ್ನು ಎಲ್ಲವನ್ನೂ ಕೇಳುವುದಿಲ್ಲ, ಮೊಂಡುತನ ಮಾಡಬಹುದು, ಸ್ವತಂತ್ರವಾಗಿರಬೇಕು, ಮುಕ್ತವಾಗಿರಬೇಕು ಎಂದು ಬಯಸಬಹುದು, ಅಂದರೆ ಮಕ್ಕಳು ಹೊಸದನ್ನು ಕಲಿಯಲು, ಸ್ವತಂತ್ರವಾಗಿ ಕಲಿಯಲು ಬಯಸುತ್ತಿದ್ದಾರೆ ಎಂದು ಪೋಷಕರು ಅರ್ಥ ಮಾಡಿಕೊಳ್ಳಬೇಕು. ಮಕ್ಕಳ ಅಭಿಪ್ರಾಯಕ್ಕೆ ಈ ಸಮಯದಲ್ಲಿ ಪೋಷಕರು ಬೆಲೆ ನೀಡಬೇಕು. ಅವರಿಗೆ ಕೆಲವು ವಿಷಯಗಳಲ್ಲಿ ನಿರ್ಧರಿಸುವ ಸ್ವಾತಂತ್ರ್ಯ ನೀಡಬೇಕು.


ಹದಿಹರೆಯದಲ್ಲಿ ಮಕ್ಕಳಿಗೆ ತಮ್ಮ ಕೆಲಸವನ್ನು ಮತ್ತು ನಿರ್ಧಾರ ತೆಗೆದುಕೊಳ್ಳಲು ಬಿಟ್ಟು ಮುಂದೆ ಅದರಿಂದ ಏನಾಗುತ್ತದೆ ಎಂದು ತಿಳಿದುಕೊಳ್ಳಲು ಬಿಡಬೇಕು. ಪರಿಣಾಮಗಳನ್ನು ಅವರು ಅರ್ಥ ಮಾಡಿಕೊಳ್ಳಬೇಕು. ಬದಲಾವಣೆ ಸಹಜ ಎಂಬುದನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು. ಮಕ್ಕಳು ಶ್ರಮ ಹಾಕಿದಾಗ ಅವರ ಪ್ರಯತ್ನಕ್ಕೆ ಪೋಷಕರು ಪ್ರೋತ್ಸಾಹ ನೀಡಿ.

ತೀರ್ಪು ಕೊಡಲು ಹೋಗಬೇಡಿ: ಹದಿಹರೆಯದಲ್ಲಿ ಮಕ್ಕಳು ಹೊಸ ವಿಷಯಕ್ಕೆ ತೆರೆದು ತಮ್ಮ ಗುರುತನ್ನು ಅವರೇ ತೋರಿಸಿಕೊಳ್ಳಬೇಕು. ಮಕ್ಕಳು ದೊಡ್ಡವರ ಬಳಿ ಏನಾದರೂ ಆಲೋಚನೆ, ಸಲಹೆ ಕೇಳಿಕೊಂಡು ಬಂದಾಗ ನಿರ್ಲಕ್ಷ್ಯ ಮಾಡಿ ಉದಾಸೀನ ಮಾಡಿ ಕಳುಹಿಸಬೇಡಿ. ಅವರು ಹೇಳುವುದರಲ್ಲಿ ಆಸಕ್ತಿಯಿಂದ ಕೇಳಿ, ಮಕ್ಕಳಿಗೆ ತಮ್ಮ ಪೋಷಕರು ಅಗತ್ಯವಿದ್ದಾಗ ಜೊತೆಯಲ್ಲಿರುತ್ತಾರೆ ಎಂಬ ಭಾವನೆ ಮೂಡಿಸಬೇಕು. ಅವರ ಬಗ್ಗೆ ತೀರ್ಪು ಕೊಡಲು ಹೋಗಬೇಡಿ.

ಅವರ ಭಾವನೆಗಳಿಗೆ ಬೆಲೆ ಕೊಡಿ: ಕೆಲವೊಮ್ಮೆ ಮಕ್ಕಳು ಹೇಳುವುದು, ಮಾಡುವುದು ನಿಮಗೆ ಸರಿ ಅನಿಸದಿರಬಹುದು. ಉದಾಹರಣೆಗೆ ತಲೆಕೂದಲು ಕತ್ತರಿಸುವುದು, ಬಟ್ಟೆ ಧರಿಸುವುದು ಇತ್ಯಾದಿ, ಈ ಬಗ್ಗೆ ನಿಮಗೆ ಸರಿ ಕಾಣಿಸದಿದ್ದರೆ ತಿಳಿ ಹೇಳಿ. 

ಮಕ್ಕಳ ಜೊತೆ ಕುಳಿತು ಮಾತುಕತೆ: ಯಾವುದಾದರೊಂದು ಸೂಕ್ಷ್ಮ ವಿಚಾರಗಳನ್ನು ಮಕ್ಕಳು ಹೇಳುತ್ತಿದ್ದಾರೆ ಎಂದರೆ ಅವರನ್ನು ತಡೆಯಬೇಡಿ. ಅವರ ಜೊತೆ ನೀವೂ ಮಾತನಾಡಿ. ಅವರನ್ನು ಬೈಯುವುದು, ಟೀಕಿಸುವುದು ಮಾಡಬೇಡಿ. ಮಕ್ಕಳ ಸ್ಥಾನದಲ್ಲಿ ನಿಂತು ಹಲವು ಸಂದರ್ಭಗಳಲ್ಲಿ ಪೋಷಕರು ಯೋಚಿಸಬೇಕಾಗುತ್ತದೆ.


ಸ್ವಾಭಿಮಾನವನ್ನು ಬೆಳೆಸುವುದು: ಹದಿಹರೆಯದ ಮಕ್ಕಳ ಜೊತೆ ಸಿಟ್ಟಿನಿಂದ, ಕ್ರೂರವಾಗಿ ನಡೆದುಕೊಳ್ಳುವುದು ಕೂಡ ಸರಿಯಲ್ಲ. ಸಮಸ್ಯೆಗಳು ಬಂದಾಗ ಪರಿಸ್ಥಿತಿ ತಿಳಿಯಾದ ನಂತರ ಕೂತು ಸಮಾಧಾನದಿಂದ ಹೇಳಿ. ಮಕ್ಕಳು ಬೆಳೆಯುತ್ತಾ ಹೋದಂತೆ ಪೋಷಕರು ಹೇಳುವುದಕ್ಕಿಂತ ಹೆಚ್ಚಾಗಿ ತಮಗೆ ಬೇಕಾಗಿದ್ದನ್ನು ತಾವೇ ಆಯ್ಕೆ ಮಾಡಿಕೊಳ್ಳುವ ಮನಸ್ಥಿತಿಗೆ ಬಂದಿರುತ್ತಾರೆ. ಉದಾಹರಣೆಗೆ ಬಟ್ಟೆ ಕೊಳ್ಳಲು ಹೋದರೆ ನಿಮಗೆ ಇಷ್ಟವಾಗಿದ್ದನ್ನು ಖರೀದಿಸುವ ಬದಲು ಮಕ್ಕಳಿಗೆ ಬೇಕಾಗಿದ್ದನ್ನು ಅವರೇ ಆಯ್ಕೆ ಮಾಡಿಕೊಳ್ಳಲು ಬಿಡಿ. ಮಕ್ಕಳ ಬಗ್ಗೆ ಸಾಮಾನ್ಯ ದೃಷ್ಟಿಕೋನ ಬೆಳೆಸುವುದು ಮುಖ್ಯ.

ಮಕ್ಕಳು ಎಲ್ಲಾ ಸಂದರ್ಭದಲ್ಲಿ ಸರಿ ಇರಬೇಕೆಂದಿಲ್ಲ: ಮಕ್ಕಳು ಹಲವು ಬಾರಿ ಅಂತರ್ಮುಖಿಗಳಾಗಿರಬಹುದು ಅಥವಾ ಬಹುರ್ಮುಖಿಗಳಾಗಿರಬಹುದು. ಅವರ ವ್ಯಕ್ತಿತ್ವವನ್ನು ಗೌರವಿಸಿ, ಅವರಲ್ಲಿರುವ ಶಕ್ತಿ, ಸಾಮರ್ಥ್ಯವನ್ನು ಗುರುತಿಸಿ ಆ ದಿಕ್ಕಿನಲ್ಲಿ ಪ್ರೋತ್ಸಾಹ ನೀಡಿ ಬೆಳೆಸಿ. ನಿಮ್ಮ ಮಕ್ಕಳ ಭಾವನೆಗಳು ಪದೇ ಪದೇ ಬದಲಾಗುತ್ತಿದ್ದರೆ ಕೆಲ ಸಮಯ ಅವರನ್ನು ಅವರ ಪಾಡಿಗೆ ಬಿಟ್ಟುಬಿಡಿ. ಇದು ಮಕ್ಕಳ ದೌರ್ಬಲ್ಯವಲ್ಲ ಎಂದು ನಾವು ಅರ್ಥಮಾಡಿಕೊಳ್ಳಬೇಕು.

ಮಿತಿಯನ್ನು ಹಾಕಿ: ಕಳೆದೊಂದು ದಶಕದಿಂದ ತಂತ್ರಜ್ಞಾನ ಬಹಳ ವೇಗವಾಗಿ ಬದಲಾಗುತ್ತಿದ್ದು ಸೋಷಿಯಲ್ ಮೀಡಿಯಾಗಳು ಪ್ರಭಾವಶಾಲಿಯಾಗಿವೆ. ಒತ್ತಡ ಸಮಾಜದಲ್ಲಿ ಜಾಸ್ತಿಯಾಗುತ್ತಿದೆ. ಈ ಸಂದರ್ಭದಲ್ಲಿ ಮಕ್ಕಳು ಬಾಹ್ಯ ಆಕರ್ಷಣೆಗೆ ಒಳಗಾಗುವುದು ಸಹಜ. ಇಂದಿನ ಪೀಳಿಗೆಯಲ್ಲಿ ಕಾರ್ಯವಿಧಾನವನ್ನು ನಿಭಾಯಿಸುವ ರೀತಿ ಮತ್ತು ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯಗಳು ಕಡಿಮೆಯಾಗುತ್ತಿವೆ. 


ಇಂದಿನ ಜನರಿಗೆ ತಮ್ಮ ಆಸೆ-ಆಕಾಂಕ್ಷೆಗಳು ಸುಲಭವಾಗಿ, ಬೇಗನೆ ಈಡೇರಬೇಕು ಎಂಬ ತುಡಿತವಿರುತ್ತದೆ. ತಮ್ಮದೇ ದೃಷ್ಟಿಕೋನದಲ್ಲಿ ಯೋಚಿಸುತ್ತಿರುತ್ತಾರೆ. ನಿಮ್ಮ ಮಕ್ಕಳು ಸಂಪೂರ್ಣವಾಗಿ ಇಂಟರ್ನೆಟ್ ಪ್ರಪಂಚದಲ್ಲಿ ಮುಳುಗಿ ಹೋಗದಂತೆ ನೋಡಿಕೊಳ್ಳಿ. ಅವರ ಇತಿಮಿತಿಗಳನ್ನು ತಿಳಿಸಿಹೇಳಿ.


ಪೋಷಕರು-ಮಕ್ಕಳ ನಡುವಿನ ಬಾಂಧವ್ಯ, ಪ್ರೀತಿ, ಸಂಭಾಷಣೆ ಹೆಚ್ಚಬೇಕು. ಶಾಲೆಗಳಲ್ಲಿ ಕೂಡ ಶಿಕ್ಷಕರು ಮಕ್ಕಳ ಮೇಲೆ ಅಧಿಕಾರ ಚಲಾಯಿಸುವ ರೀತಿಯಲ್ಲಿ ವರ್ತಿಸದೆ ಉತ್ತಮ ಬಾಂಧವ್ಯ ಬೆಳೆಸಬೇಕು, ಶಿಕ್ಷಕರು ಮಕ್ಕಳಿಗೆ ಯಾವ ಕ್ಷಣದಲ್ಲಿಯೂ ಸಹಾಯಕ್ಕೆ ಬರುತ್ತಾರೆ ಎಂಬ ಭಾವನೆ ಉಂಟಾಗಬೇಕು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com