ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಏನು, ಹೇಗೆ, ಎಷ್ಟು ಮುಖ್ಯ? 

ನಮ್ಮ ನಿತ್ಯ ಜೀವನದಲ್ಲಿ ಹಲವು ರೀತಿಯ ಅನಾರೋಗ್ಯದಿಂದ ಬಳಲುತ್ತಿರುವವರನ್ನು, ಒತ್ತಡಕ್ಕೊಳಗಾದವರನ್ನು ಸಂಬಂಧಗಳಲ್ಲಿ ತೊಂದರೆ ಇರುವವರನ್ನು, ಖಿನ್ನತೆ, ಆತಂಕ, ಆತ್ಮವಿಶ್ವಾಸದ ಕೊರತೆಯಿಂದ ಬಳಲುತ್ತಿರುವವರನ್ನು ನೋಡುತ್ತಿರುತ್ತೇವೆ. 
ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಏನು, ಹೇಗೆ, ಎಷ್ಟು ಮುಖ್ಯ? 

ನಮ್ಮ ನಿತ್ಯ ಜೀವನದಲ್ಲಿ ಹಲವು ರೀತಿಯ ಅನಾರೋಗ್ಯದಿಂದ ಬಳಲುತ್ತಿರುವವರನ್ನು, ಒತ್ತಡಕ್ಕೊಳಗಾದವರನ್ನು ಸಂಬಂಧಗಳಲ್ಲಿ ತೊಂದರೆ ಇರುವವರನ್ನು, ಖಿನ್ನತೆ, ಆತಂಕ, ಆತ್ಮವಿಶ್ವಾಸದ ಕೊರತೆಯಿಂದ ಬಳಲುತ್ತಿರುವವರನ್ನು ನೋಡುತ್ತಿರುತ್ತೇವೆ. 

ಹೀಗೆ ವಯಸ್ಕರಲ್ಲಿ ಇಂತಹ ಸಮಸ್ಯೆ ಕಂಡುಬರಲು ಬಾಲ್ಯಜೀವನದಲ್ಲಿ ಆದ ಅನುಭವಗಳೇ ಪ್ರಮುಖ ಕಾರಣವಾಗಿರುತ್ತವೆ. ಅದು ಯಾವುದೇ ರೀತಿಯಲ್ಲಾಗಿರಬಹುದು, ಪೋಷಕರ ಸಮಸ್ಯೆ, ಕೆಟ್ಟ ಅನುಭವ, ಶಾಲೆಯಲ್ಲಿ ಶಿಕ್ಷಕರಿಂದ ಸಮಸ್ಯೆ, ಸ್ನೇಹಿತರು, ಸಹಪಾಠಿಗಳಿಂದ ಆದ ತೊಂದರೆ ಹೀಗೆ ಹತ್ತಾರು ಕಾರಣಗಳಿರಬಹುದು.

ಹಾಗಾದರೆ ಬಾಲ್ಯ ಜೀವನದಲ್ಲಿ ಮಕ್ಕಳು ಯಾವ ರೀತಿಯ ತೊಂದರೆ ಎದುರಿಸುತ್ತಿರಬಹುದು ಎಂಬುದನ್ನು ನೋಡೋಣ ಬನ್ನಿ

 ಹೋಲಿಕೆ ಮಾಡುವುದು: ಪೋಷಕರು ಮಾಡುವ ಬಹುದೊಡ್ಡ ತಪ್ಪು ತಮ್ಮ ಮಕ್ಕಳನ್ನು ನೆರೆಹೊರೆಯ ಮಕ್ಕಳೊಂದಿಗೆ, ಒಡಹುಟ್ಟಿದವರೊಂದಿಗೆ ಅಥವಾ ಅವರ ಸ್ನೇಹಿತರೊಂದಿಗೆ ಹೋಲಿಕೆ ಮಾಡುವುದು. ನಿಮ್ಮ ಮಕ್ಕಳನ್ನು ಬೇರೆಯವರೊಂದಿಗೆ ಹೋಲಿಸಿದರೆ ಅವರಲ್ಲಿರುವ ಸ್ವ ಗೌರವ, ಬೆಲೆ ಕಡಿಮೆಯಾಗುತ್ತಾ ಹೋಗುತ್ತದೆ. ತಮ್ಮ ಮಕ್ಕಳು ಬೇರೆಯವರಿಗಿಂತ ವಿಶೇಷ ಎಂಬುದನ್ನು ಪ್ರತಿ ಪೋಷಕರು ಅರ್ಥ ಮಾಡಿಕೊಳ್ಳಬೇಕು. ಅವರಿಗೆ ಅವರದ್ದೇ ಆದ ಸ್ವಂತಿಕೆ, ಗುರುತು ಇರುತ್ತದೆ. ಶೈಕ್ಷಣಿಕವಾಗಿ, ಕ್ರೀಡೆಯಲ್ಲಿ ಸಾಧನೆ ಮಾಡುವುದೊಂದೇ ಮಕ್ಕಳ ಜೀವನದ ಕೊನೆಯ ಗುರಿಯಲ್ಲ ಎಂಬುದನ್ನು ಪೋಷಕರು ಅರ್ಥಮಾಡಿಕೊಳ್ಳಬೇಕು.

ಮಕ್ಕಳ ಜೊತೆ ಹೆಚ್ಚು ಸಮಯ ಕಳೆಯದಿರುವುದು: ಮಕ್ಕಳಿಗೆ ಪೋಷಕರು ಹೆಚ್ಚಿನ ಸಮಯದಲ್ಲಿ ಬೇಕಾಗುತ್ತದೆ, ನಂತರ ಮನೆಕೆಲಸದವರು, ಸಹಾಯಕರು, ಕೆಲಸದವರನ್ನು ಇಟ್ಟುಕೊಂಡು ಮಕ್ಕಳು ಕೇಳಿದ್ದನ್ನು ಕೇಳಿ ಕೊಡಿಸಿದರೆ ಮಕ್ಕಳಿಗೆ ಸಾಕಷ್ಟು ಹಣ ಖರ್ಚು ಮಾಡಿದರೆ ತಮ್ಮ ಕರ್ತವ್ಯ ಮುಗಿಯಿತು ಎಂದು ಬಹುತೇಕ ಪೋಷಕರು ಅಂದುಕೊಳ್ಳುತ್ತಾರೆ. ಆದರೆ ಮಕ್ಕಳಿಗೆ ಬೇಕಾಗಿರುವುದು ಅದಲ್ಲ. ಮಕ್ಕಳಿಗೆ ಷರತ್ತುರಹಿತ ಪ್ರೀತಿ, ಭದ್ರತೆ, ಹೊಗಳಿಕೆ, ಶಿಸ್ತು, ಕಾಳಜಿ ಬೇಕು. ಪ್ರೀತಿ, ವಿಶ್ವಾ, ಕಾಳಜಿಯನ್ನು ಬೇರೆ ಯಾವುದರಿಂದಲೂ ಕೊಡಲು ಸಾಧ್ಯವಿಲ್ಲ. ಗಿಫ್ಟ್, ಐಪ್ಯಾಡ್, ಗೇಮ್, ಪಿಜ್ಜಾ, ಬರ್ಗರ್ ಮೊದಲಾದವುಗಳಿಂದ ಮಕ್ಕಳನ್ನು ಸಂತೋಷಪಡಿಸಬಹುದು ಎಂಬುದೆಲ್ಲ ಸುಳ್ಳು, ಅವೆಲ್ಲ ಕ್ಷಣಿಕ ಸುಖಗಳಷ್ಟೆ. ಮಗುವಿನ ಹೃದಯ ತಟ್ಟುವುದು ಪೋಷಕರ ನಿಜವಾದ ಪ್ರೀತಿ ಮತ್ತು ಕಾಳಜಿ.

ಮಕ್ಕಳನ್ನು ಅತಿಯಾಗಿ ಕಾಳಜಿವಹಿಸುವುದು: ಹಾಗೆಂದು ಮಕ್ಕಳನ್ನು ಅತಿಯಾಗಿ ಕಾಳಜಿ ಮಾಡುವುದು ಸಹ ಸರಿಯಲ್ಲ, ಅದರಿಂದ ಅವರು ಮಾಡಿದ್ದೇ ಸರಿ, ತಮ್ಮದೇನೂ ತಪ್ಪಿಲ್ಲ ಎಂದು ಅಂದುಕೊಳ್ಳುತ್ತಾರೆ. ಮಕ್ಕಳಲ್ಲಿ ಅವರ ವಯಸ್ಸಿಗೆ ತಕ್ಕಂತೆ ತುಂಟತನ, ಸಿಟ್ಟು, ಕೋಪ, ಬೇಸರ, ಗೊಂದಲ ಎಲ್ಲವೂ ಸಿಗಬೇಕು, ಬದುಕಿನ ವಾಸ್ತವ ಮತ್ತು ಸತ್ಯಗಳನ್ನು ಎದುರಿಸಲು ಬಿಡಬೇಕು. ನಮ್ಮ ಕೈಯಿಂದಾದಷ್ಟು ಉತ್ತಮ ಜೀವನ ಮಕ್ಕಳಿಗೆ ಕೊಡಿಸಬೇಕು ಎಂದು ಪೋಷಕರು ಹೇಳುವುದನ್ನು ಕೇಳುತ್ತೇವೆ. ಆದರೆ ಅದರ ಜೊತೆಗೆ ಮಕ್ಕಳಿಗೆ ಜೀವನದ ಪಾಠ, ಭಾವನಾತ್ಮಕ ಪಾಠ, ಪ್ರೀತಿ, ಕಾಳಜಿ, ಸಮಯ, ಮೌಲ್ಯದ ಪಾಠ ಕಲಿಸಬೇಕು.

ಮಕ್ಕಳಲ್ಲಿ ಋಣಾತ್ಮಕತೆ ತುಂಬುವುದು: ಇದು ನಿಜವಾಗಿಯೂ ಮಕ್ಕಳಲ್ಲಿ ಭಾವನಾತ್ಮಕ, ಮಾನಸಿಕ ಮತ್ತು ಶಾರೀರಿಕ ಸಮಸ್ಯೆಗಳನ್ನು ತಂದೊಡ್ಡಬಹುದು. ನೀನು ಯಾವುದಕ್ಕೂ ಪ್ರಯೋಜನವಿಲ್ಲ, ಮೂರ್ಖ, ಯಾವುದಕ್ಕೂ ಲಾಯಕ್ಕು ಇಲ್ಲ ಎಂದು ಹೇಳುತ್ತಿದ್ದರೆ ಮಕ್ಕಳಲ್ಲಿ ಅವರ ಆತ್ಮವಿಶ್ವಾಸ, ಭರವಸೆ ಕಡಿಮೆಯಾಗುತ್ತದೆ. ಮಕ್ಕಳಲ್ಲಿ ನಕಾರಾತ್ಮಕ ಭಾವನೆಗಳನ್ನು ತುಂಬಿಸುತ್ತಾ ಹೋದರೆ ದೊಡ್ಡವರಾದ ಮೇಲೆ ಅದೇ ಭಾವನೆ ಬೆಳೆಯುತ್ತದೆ. ಪ್ರೀತಿ ಮತ್ತು ಹೊಗಳಿಕೆಯಿಂದ ಮಕ್ಕಳಲ್ಲಿ ಧನಾತ್ಮಕ ಭಾವನೆ ಮೂಡಿಸಬೇಕು.

ನೀವು ಎಷ್ಟೇ ಶ್ರೀಮಂತರಾಗಿರಲಿ ಅಥವಾ ಬಡವರಾಗಿರಲಿ ನಿಮ್ಮ ಆಂತರಿಕ ವ್ಯಕ್ತಿತ್ವ ಮತ್ತು ಮನಸ್ಸಿನ ಯೋಚನೆ ಮೇಲೆ ಆರೋಗ್ಯ ನಿರ್ಧರಿತವಾಗುತ್ತದೆ. ಮಕ್ಕಳ ವರ್ತನೆಯಲ್ಲಿ ಯಾವುದೇ ತೊಂದರೆ ಕಂಡುಬಂದಲ್ಲಿ ಮನೋತಜ್ಞರ ಸಲಹೆ ಪಡೆಯುವುದು ಒಳ್ಳೆಯದು. ಸಮಸ್ಯೆಯನ್ನು ಅದರ ಬೇರಿನಲ್ಲಿಯೇ ಕಿತ್ತುಹಾಕಿದರೆ ಮುಂದೆ ಅದು ಬೃಹದಾಕಾರವಾಗಿ ಬೆಳೆಯುವುದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com