ಸ್ಮಾರ್ಟ್ ಫೋನ್ ಗಳ ಅತಿಯಾದ ಬಳಕೆ, ಆರೋಗ್ಯಕ್ಕೆ ಕುತ್ತು

ವಿಶ್ವದಲ್ಲಿ ಸ್ಮಾರ್ಟ್ ಫೋನ್ ಬಳಸುವವರಲ್ಲಿ ಸುಮಾರು 34 ಲಕ್ಷ ಜನರು ಕುತ್ತಿಗೆ ನೋವಿನಿಂದ ಬಳಲುತ್ತಿದ್ದಾರೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ವಿಶ್ವದಲ್ಲಿ ಸ್ಮಾರ್ಟ್ ಫೋನ್ ಬಳಸುವವರಲ್ಲಿ ಸುಮಾರು 34 ಲಕ್ಷ ಜನರು ಕುತ್ತಿಗೆ ನೋವಿನಿಂದ ಬಳಲುತ್ತಿದ್ದಾರೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ತಲೆ ತಗ್ಗಿಸಿ ಸ್ಮಾರ್ಟ್ ಫೋನ್ ನಿರಂತರವಾಗಿ ಬಳಕೆ ಮಾಡುವುದರಿಂದ ಕುತ್ತಿಗೆ ನೋವು ಮತ್ತು ಇತರ ಸಮಸ್ಯೆಗಳು ತಲೆದೋರುತ್ತವೆ ಎಂದು ಪ್ಲೊಸ್ ಒನ್ ಎಂಬ ವೃತ್ತಪತ್ರಿಕೆಯಲ್ಲಿ ಪ್ರಕಟವಾದ ಅಧ್ಯಯನ ಹೇಳುತ್ತದೆ.
ಇಂದು ಸ್ಮಾರ್ಟ್ ಫೋನ್ ಬಳಕೆ ಯುವಕರು ಸೇರಿದಂತೆ ಎಲ್ಲಾ ವಯಸ್ಸಿನ ಜನರಲ್ಲಿ ಸರ್ವೇಸಾಮಾನ್ಯವಾಗಿದೆ. ಆದರೆ ಇದರ ಅತಿಯಾದ ಬಳಕೆ ನೂರಾರು ಆರೋಗ್ಯ ಸಮಸ್ಯೆಯನ್ನು ತಂದೊಡ್ಡುತ್ತದೆ. ದಕ್ಷಿಣ ಆಸ್ಟ್ರೇಲಿಯಾದ ವಿಶ್ವವಿದ್ಯಾಲಯ ಮತ್ತು ಥೈಲ್ಯಾಂಡ್ ವಿಶ್ವವಿದ್ಯಾಲಯದ ಸಂಶೋಧಕರು ಹೇಳುವ ಪ್ರಕಾರ, ಸ್ಮಾರ್ಟ್ ಫೋನ್ ಬಳಕೆ ಮಾಡುವಾಗ ಕುತ್ತಿಗೆ, ಮಂಡಿ,ಕಾಲು ವಿವಿಧ ಭಂಗಿಗಳಲ್ಲಿರುತ್ತವೆ. ಇದರಿಂದಾಗಿ ಹಲವು ನರದೌರ್ಬಲ್ಯ ಸಮಸ್ಯೆಗಳು ನಿಧಾನವಾಗಿ ಕಾಣಿಸಿಕೊಳ್ಳಲಾರಂಭಿಸುತ್ತವೆ ಎಂದು ಸಂಶೋಧಕ ಸುವಾಲೆ ನಮ್ವಾಂಗ್ಸಾ ಹೇಳಿದ್ದಾರೆ.
ಸಂಶೋಧನೆಗೆ ಥೈಲ್ಯಾಂಡ್ ನ 18ರಿಂದ 25 ವರ್ಷದೊಳಗಿನ ಯುವಕ-ಯುವತಿಯರಲ್ಲಿ ಸುಮಾರು 30 ಮಂದಿ ಸ್ಮಾರ್ಟ್ ಫೋನ್ ಬಳಕೆದಾರರನ್ನು ಅಧ್ಯಯನಕ್ಕೊಳಪಡಿಸಲಾಯಿತು. ಇವರು ದಿನದಲ್ಲಿ ಸುಮಾರು 8 ಗಂಟೆಗಳ ಕಾಲ ಸ್ಮಾರ್ಟ್ ಫೋನ್ ನಲ್ಲಿ ಮುಳುಗಿರುತ್ತಾರೆ. ರಾಪಿಡ್ ಮೇಲ್ ಲಿಂಬ್ ಅಸೆಸ್ಮೆಂಟ್ ಟೂಲ್(ರುಲಾ)ವನ್ನು ಬಳಸಿ ಅಧ್ಯಯನ ನಡೆಸಲಾಗಿದ್ದು ಈ ಹಿಂದೆ ಡೆಸ್ಕ್ ಟಾಪ್ ಮತ್ತು ಲ್ಯಾಪ್ ಟಾಪ್ ಅತಿಯಾದ ಬಳಕೆಯಿಂದ ಉಂಟಾಗುವ ಅಪಾಯವನ್ನು ಈ ಹಿಂದೆ ತೋರಿಸಿತ್ತು.
ಸ್ಮಾರ್ಟ್ ಫೋನ್ ನಲ್ಲಿ ಏನಾದರೂ ನೋಡುವಾಗ, ಸಂದೇಶ ಬರೆಯುವಾಗ ಮತ್ತು ಕಳುಹಿಸುವಾಗ ಬಳಕೆದಾರರು ತಮ್ಮ ಕುತ್ತಿಗೆಯನ್ನು ಬಗ್ಗಿಸುತ್ತಾರೆ. ಅಕ್ಕಪಕ್ಕಕ್ಕೆ ಕುತ್ತಿಗೆಯನ್ನು ಹೊರಳಿಸುತ್ತಾರೆ ಅಲ್ಲದೆ ತಮ್ಮ ದೇಹದ ಭಾಗ ಮತ್ತು ಕಾಲನ್ನು ಕೂಡ ವಿಚಿತ್ರವಾಗಿ ಇರಿಸಿಕೊಂಡಿರುತ್ತಾರೆ ಎಂದು ಸಂಶೋಧಕರು ಹೇಳುತ್ತಾರೆ.
ದೇಹದ ಈ ಭಂಗಿಗಳನ್ನು ವಿಚಿತ್ರವಾಗಿ ಇರಿಸುವುದರಿಂದ ಅದು ಒತ್ತಡ ಬೀಳುವುದಲ್ಲದೆ ಬೆನ್ನಿನ ಹುರಿಯ ಸುತ್ತ ಸಣ್ಣ ಕೋಶಗಳ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟುಮಾಡುತ್ತದೆ ಎನ್ನುತ್ತಾರೆ.
ಜರ್ನಲ್ ವರ್ಕ್ ಎಂಬ ಪ್ರತ್ಯೇಕ ಅಧ್ಯಯನಕ್ಕೆ ತಂಡ 779 ಥೈ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಅಧ್ಯಯನಕ್ಕೊಳಪಡಿಸಿದ್ದು ಅವರಲ್ಲಿ ಶೇಕಡಾ 32ರಷ್ಟು ಮಂದಿ ಕುತ್ತಿಗೆ ನೋವು, ಶೇಕಡಾ 26ರಷ್ಟು ಮಂದಿ ಭುಜ ನೋವು, ಶೇಕಡಾ 20ರಷ್ಟು ಮಂದಿ ಬೆನ್ನಿನ ನೋವು ಮತ್ತು ಶೇಕಡಾ 19ರಷ್ಟು ಮಂದಿ ಮಣಿಕಟ್ಟು ಮತ್ತು ಕೈ ನೋವು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com