ನವಜಾತ ಶಿಶುಗಳ ಆರೋಗ್ಯ ಆರೈಕೆ ಹೇಗೆ? ಸ್ತನಪಾನ ಎಷ್ಟು ಮುಖ್ಯ? ಇಲ್ಲಿದೆ ಮಾಹಿತಿ...

ಶಿಶುಗಳ ಆರೈಕೆ ಸುಲಭದ ಕೆಲಸವಲ್ಲ. ಸಾಕಷ್ಟು ಶಿಶುಗಳು ಆಗಾಗ್ಗೆ ಅಜೀರ್ಣ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಇಂತಹ ಸಮಯದಲ್ಲಿ ಪ್ರತೀಯೊಬ್ಬ ತಾಯಿ ಮಗುವಿನ ಅಜೀರ್ಣದ ಬಗ್ಗೆ ಚಿಂತೆಗೀಡಾಗುವುದು ಸಾಮಾನ್ಯ. ಶಿಶುಗಳಲ್ಲಿ ಜೀರ್ಣಕ್ರಿಯೆಗೆ ಸಂಬಂಧಿಸಿದಂತೆ ಒಂದಲ್ಲಾ ಒಂದು ಸಮಸ್ಯೆಗಳು ಎದುರಾಗುತ್ತಲೇ ಇರುತ್ತದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವಜಾತ ಶಿಶುಗಳ ಆರೈಕೆ ಸುಲಭದ ಕೆಲಸವಲ್ಲ. ಸಾಕಷ್ಟು ಶಿಶುಗಳು ಆಗಾಗ್ಗೆ ಅಜೀರ್ಣ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಇಂತಹ ಸಮಯದಲ್ಲಿ ಪ್ರತೀಯೊಬ್ಬ ತಾಯಿ ಮಗುವಿನ ಅಜೀರ್ಣದ ಬಗ್ಗೆ ಚಿಂತೆಗೀಡಾಗುವುದು ಸಾಮಾನ್ಯ. ಶಿಶುಗಳಲ್ಲಿ ಜೀರ್ಣಕ್ರಿಯೆಗೆ ಸಂಬಂಧಿಸಿದಂತೆ ಒಂದಲ್ಲಾ ಒಂದು ಸಮಸ್ಯೆಗಳು ಎದುರಾಗುತ್ತಲೇ ಇರುತ್ತದೆ. ಸಣ್ಣಪುಟ್ಟ ಸಮಸ್ಯೆಗಳಿಗೂ ಪದೇ ಪದೇ ವೈದ್ಯರ ಬಳಿ ಹೋಗಲು ಸಾಧ್ಯವಾಗುವುದಿಲ್ಲ. ಕೆಲವು ಸಾಮಾನ್ಯ ಸಮಸ್ಯೆಗಳನ್ನು ಮನೆಯಲ್ಲಿಯೇ ಪರಿಹರಿಸಿಕೊಳ್ಳಬಹುದು. 

ಶಿಶುಗಳಲ್ಲಿ ಅಜೀರ್ಣ ಸಮಸ್ಯೆ ಏಕೆ...
ಶಿಶುಗಳಲ್ಲಿ ಈಸೋಫ್ಯಾಗಲ್ ಶ್ಪಿಂಕ್ಟರ್ ಎಂಬ ವಾಲ್ಟ್ ಹೊಟ್ಟೆಯಿಂದ ಅನ್ನನಾಳಕ್ಕೆ ಆಹಾರ ತಿರುಗಿ ಹೋಗದಂತೆ ನೋಡಿಕೊಳ್ಳುತ್ತದೆ. ಮಗುವಿನಲ್ಲಿ ವಾಲ್ಟ್ ಬೆಳವಣಿಗೆಯ ಹಂತದಲ್ಲಿರುತ್ತದೆ. ಹಾಗಾಗಿ ಸಂಪೂರ್ಣವಾಗಿ ಬೆಳೆಯಲು 1 ವರ್ಷ ಕಾಲಾವಕಾಶ ಬೇಕಾಗುತ್ತದೆ. ಇದು ಮಕ್ಕಳಲ್ಲಿ ಜೀರ್ಣಕ್ರಿಯೆ ಸರಿಯಾಗಿ ಆಗದಿರಲು ಪ್ರಮುಖ ಕಾರಣವೆಂದೇ ಹೇಳಬಹುದಾಗಿದೆ. 

ಮಕ್ಕಳಲ್ಲಿ ಇದರಿಂದಲೇ ಆ್ಯಸಿಡ್ ರಿಫ್ಲೆಕ್ಟ್ ಆಗುವ ಸಂಭವ ಹೆಚ್ಚು. ಆಗಾಗ ಅಜೀರ್ಣ ಸಮಸ್ಯೆಯು ಮಕ್ಕಳಲ್ಲಿ ಎದೆ ಉರಿ ಕಾಣಿಸಿಕೊಳ್ಳುತ್ತದೆ. ನಾಲ್ಕು ತಿಂಗಳೊಳಗೆ ಸುಮಾರು ಶೇ.50 ರಷ್ಟು ಮಕ್ಕಳಲ್ಲಿ ಎದೆಯುರಿ ಲಕ್ಷಣಗಳು ಕಂಡು ಬರುತ್ತವೆ. 

ನವಜಾತ ಶಿಶುಗಳಿಗೆ ತಾಯಿಯ ಎದೆ ಹಾಲು ಅಮೃತ ಇದ್ದಂತೆ. ಆದರೆ, ಕೆಲವು ತಾಯಂದಿರಲ್ಲಿ ಎದೆ ಹಾಲಿನ ಕೊರತೆ ಅನುಭವಿಸುತ್ತಾರೆ. ಅಂತಹವರು ಪರ್ಯಾಯವಾಗಿ ಬಾಟಲಿ ಹಾಲನ್ನು ನೀಡಬೇಕಾಗುತ್ತದೆ. ತಾಯಿಯ ಹಾಲಿನಲ್ಲಿ ಇರುವಷ್ಟು ಪೌಷ್ಟಿಕಾಂಶ ಬಾಟಲಿ ಹಾಲಿನಲ್ಲಿ ಇರುವುದಿಲ್ಲ. ಹಾಗಾಗಿ ಬಾಟಲಿ ಹಾಲವನ್ನು ಕುಡಿದ ಮಕ್ಕಳಲ್ಲಿ ಪೌಷ್ಟಿಕಾಂಶದ ಕೊರತೆ ಉಂಟಾಗುವ ಸಾಧ್ಯತೆಗಳಿರುತ್ತವೆ. ಇನ್ನು ಕೆಲವು ತಾಯಂದಿರು ಕೆಲಸದ ಒತ್ತಡ ಹಾಗೂ ಸೌಂದರ್ಯದ ಪ್ರಜ್ಞೆಯಿಂದಾಗಿ ಮಕ್ಕಳಿಗೆ ಬಾಟಲಿ ಹಾಲು ನೀಡುತ್ತಿರುತ್ತಾರೆ. ಆದರೆ, ಬಾಟಲಿ ಹಾಲು ಮಕ್ಕಳ ಆರೋಗ್ಯಕ್ಕೆ ಒಳ್ಳೆಯದಲ್ಲ. 

ನವಜಾತ ಶಿಶುವಿಗೆ ತಾಯಿಯ ಎದೆಹಾಲು ಕುಡಿಯುವುದು ತಿಳಿದಿರುವುದಿಲ್ಲ. ನಿಧಾನವಾಗಿ ಕಲಿಯುತ್ತದೆ. ಆದರ ಕಲಿಕೆ ಹಾಗೂ ಹಸಿವಿನ ಅಗತ್ಯತೆಗೆ ಅನುಗುಣವಾಗಿ ಹಾಲಿನ ಪ್ರಮಾಣವೂ ಹೆಚ್ಚಾಗುತ್ತದೆ. ತಾಯಿ ಸ್ವೀಕರಿಸಿದ ಆಹಾರಗಳೊಂದಿಗೆ ಮಗುವಿಗೆ ಸಂಪೂರ್ಣ ಆಹಾರ ದೊರೆಯುತ್ತದೆ. ಜೊತೆಗೆ ದೇಹದ ಅಂಗಾಂಗಗಳ ಬೆಳವಣಿಗೆಯು ಆರೋಗ್ಯಕರ ರೀತಿಯಲ್ಲಿ ಉಂಟಾಗುತ್ತದೆ. ಅಲ್ಲದೆ ಹಂತ ಹಂತವಾದ ಬೆಳವಣಿಗೆಯು ನೈಸರ್ಗಿಕವಾಗಿ ನಡೆಯುತ್ತದೆ. 

ಮಗು ತಾಯಿತ ಎದೆಹಾಲನ್ನು ಹೀರುವುದರಿಂದ ಶುಶ್ರೂಷೆಯ ಕ್ರಿಯೆಯು ಉತ್ತಮವಾಗುವುದು. ಹಾಲುಣ್ಣುವ ಪ್ರಕ್ರಿಯೆಯಿಂದ ಮಗುವಿನ ದವಡೆಯು ಗಟ್ಟಿಯಾಗುವುದು. ಜೊತೆಗೆ ತನ್ನ ಶಕ್ತಿಯನ್ನು ಬಳಸುವುದರ ಮೂಲಕ ದೇಹದ ಶಕ್ತಿಯನ್ನು ವಿನಿಯೋಗಿಸುವುದು. ಜೊತೆಗೆ ಹಸಿವೆ ಅನುಗುಣವಾಗಿ ಆರೋಗ್ಯಕರವಾದ ಆಹಾರವನ್ನು ಪಡೆದುಕೊಳ್ಳಲು ಯಶಸ್ವಿಯಾಗುವುದು. 

ತಾಯಿಯ ದೇಹದಲ್ಲಿ ಇರುವ ಕೊಬ್ಬಿನಾಂಶಗಳನ್ನು ಹೀರಿಕೊಂಡು ಹಾಲು ಉತ್ಪಾದನೆಯ ಪ್ರಕ್ರಿಯೆ ನಡೆಯುತ್ತದೆ. ಮಗು ಹೆಚ್ಚೆಚ್ಚು ಹಾಲು ಕುಡಿದ ಹಾಗೆ ತಾಯಿಯ ದೇಹದಲ್ಲಿ ಇರುವ ಅನಗತ್ಯವಾದ ಕೊಬ್ಬು ಕರಗುವುದು. ಜೊತೆಗೆ ಸಡಿಲವಾದ ಅಂಗಾಂಗ ಮತ್ತು ನರ ವ್ಯವಸ್ಥೆ ಪುನರ್ ಯೌವನ ಪಡೆದುಕೊಳ್ಳುವುದು. ಜೊತೆಗೆ ಗರ್ಭಾವಸ್ಥೆಯ ಪೂರ್ವದಲ್ಲಿ ಇದ್ದ ದೈಹಿಕ ಆರೋಗ್ಯ ಸ್ಥಿತಿಯನ್ನು ತಾಯಿ ಪಡೆದುಕೊಳ್ಳಬಹುದಾಗಿದೆ. 

ಮಗುವಿನಲ್ಲಿ ಹಸಿವಿನ ಚಿಹ್ನೆಗಳೇನು...? 
ನವಜಾತ ಶಿಶುವು ಹಸಿವೆಯಾದಾಗ ಅಳುವುದು ಸಾಮಾನ್ಯ. ಹಸಿವಾದರೆ, ಮೊದಲು ಅದು ಮುಖವನ್ನು ಆಚೆ ಈಚೆ ತಿರುಗಿಸಿ ತಾಯಿಯ ಮೊಲೆಯನ್ನು ಹುಡುಕುತ್ತದೆ. ಅನಂತರ ಚೀಪುವ ಶಬ್ದ ಮಾಡುತ್ತದೆ. ಆಮೇಲೆ ತನ್ನ ಕೈಮುಷ್ಠಿಯನ್ನು ಬಾಯಿಗೆ ಕೊಂಡುಹೋಗಿ ಚೀಪಲು ಆರಂಭಿಸುತ್ತದೆ.

ಮತ್ತೆಯೂ ಅಮ್ಮನಿಗೆ ಎದೆಹಾಲು ಕೊಡಬೇಕು ಎಂದು ತಿಳಿಯಲಿಲ್ಲವಾದರೆ, ಕ್ರಮೇಣ ಮಗು ಅಳಲು ಆರಂಭಿಸುತ್ತದೆ. ಮೂತ್ರ ಅಥವಾ ಮಲವಿಸರ್ಜನೆ ಮಾಡಿ ಬಟ್ಟೆ ಒದ್ದೆ ಆದರೂ ಕೂಡ ಮಗು ಅಳುತ್ತದೆ. ಕೆಲವೊಮ್ಮೆ ಬೇರೆ ತೊಂದರೆಗಳಿಂದ ಅಳಬಹುದು. ಆದ್ದರಿಂದ ಯಾವ ಕಾರಣದಿಂದ ಮಗು ಅಳುತ್ತಾ ಇದೆಯೆಂದು ಮೊದಲಿಗೆ ಕಂಡುಹಿಡಿಯಬೇಕು ಮತ್ತು ಎದೆಹಾಲುಣಿಸಬೇಕು.

ಮಗುವಿಗೆ ಸಾಕಷ್ಟು ಹಾಲು ಸಿಗುತ್ತದೆಯಾ ಎಂದು ತಿಳಿಯುವುದು ಹೇಗೆ...? 
ಸಾಕಷ್ಟು ಹಾಲು ಸಿಕ್ಕಿದಾಗ 15-20 ಗ್ರಾಂ. ನಷ್ಟು ಮಗು ತೂಕ ಪಡೆಯುತ್ತದೆ. ದಿನಕ್ಕೆ 6-8 ಸಲ ಮೂತ್ರ, 3-4 ಬಾರಿ ಮಲ ವಿಸರ್ಜನೆ ಮಾಡುತ್ತದೆ. ಹುಟ್ಟಿದ 7 ದಿನಗಳ ಒಳಗೆ ದೇಹದಲ್ಲಿನ ನೀರಿನಾಂಶ ಕಡಿಮೆಯಾಗಿ ಮಗು ತೂಕ ಕಳೆದುಕೊಳ್ಳುತ್ತದೆ. ಕ್ರಮೇಣ ಒಂದು ವಾರದ ಬಳಿಕ ಮಗುವಿನಲ್ಲಿ ತೂಕ ಜಾಸ್ತಿಯಾಗುತ್ತದೆ. ಆದ್ದರಿಂದ ತೂಕದ ಮೇಲೆ ನಿಗಾ ಇಡುವುದು ಬಹಳ ಮುಖ್ಯ.

ಸಾಮಾನ್ಯವಾಗಿ ನವಜಾತ ಶಿಶುವು ದಿನಕ್ಕೆ 15-18 ಗಂಟೆ ಮಲಗಬೇಕು. ಪ್ರತೀ ಎರಡು ಗಂಟೆಗೊಮ್ಮೆ ಮಗುವಿಗೆ ತಾಯಿಯ ಎದೆ ಹಾಲುಣಿಸಬೇಕು. ರಾತ್ರಿ ಹೊತ್ತಲ್ಲಿ ಮಗು ಒಮ್ಮೆಗೆ ಸಾಕಷ್ಟು ಹಾಲು ಚೀಪಿದರೆ 4 ಗಂಟೆಗಳ ಕಾಲ ಹಾಲು ಬಯಸುವುದಿಲ್ಲ. ಆದರೆ ಸಾಕಷ್ಟು ಹಾಲು ಕುಡಿದಿದೆಯೋ ಎಂದು ನೀವು ಖಚಿತ ಮಾಡಿಕೊಳ್ಳಬೇಕು. ಕನಿಷ್ಠ 8-12 ಬಾರಿ ಎದೆ ಹಾಲುಣಿಸಬೇಕು.

ಸ್ತನ್ಯಪಾನದ ಸಮರ್ಪಕತೆ...
ಎದೆಹಾಲು ಕುಡಿಯುವಾಗ ಮಗುವಿನ ಬಾಯಿ ಅಗಲವಾಗಿ ತೆರೆದಿದ್ದು, ಮೊಲೆತೊಟ್ಟಿನ ಸುತ್ತಲಿನ 3/4 ಕಪ್ಪು ಭಾಗ ಅದರ ಬಾಯಿಯಲ್ಲಿದ್ದರೆ, ಒಳ್ಳೆಯ ರೀತಿಯಲ್ಲಿ ಎದೆಹಾಲು ಚೀಪಲು ಅನುಕೂಲ ಆಗುತ್ತದೆ. ಬರೀ ಮೊಲೆತೊಟ್ಟನ್ನು ಮಗುವಿಗೆ ಚೀಪಲು ಬಿಡಬಾರದು. “ಸ್ತನ್ಯಪಾನ ಅಮೃತಪಾನ’ ಎಂಬ ಮಾತಿದೆ. ಆದ್ದರಿಂದ ಸಾಮಾನ್ಯ ಹೆರಿಗೆಯಾದ 30 ನಿಮಿಷಗಳ ಒಳಗೆ ಅಥವಾ ಸಿಸೇರಿಯನ್‌ ಆದ 2-4 ತಾಸುಗಳ ಒಳಗೆ, ಪ್ರತಿಯೊಬ್ಬ ತಾಯಿಯು ತನ್ನ ಮಗುವಿಗೆ ಎದೆಹಾಲನ್ನು ನೀಡುವುದು ಅತೀ ಅಗತ್ಯ. 6 ತಿಂಗಳುಗಳ ಕಾಲ ಮಗುವಿಗೆ ಕಡ್ಡಾಯವಾಗಿ ಕೇವಲ ಎದೆಹಾಲನ್ನು ಮಾತ್ರ ನೀಡಬೇಕು. ಇದು ಬಿಟ್ಟು ಬೇರೆ ಏನನ್ನೂ ಕೊಡಬಾರದು. ಒಂದು ವೇಳೆ ವೈದ್ಯರು ಏನಾದರೂ ಸಿರಪ್‌ ಅಥವಾ ಔಷಧಗಳನ್ನು ನೀಡಲು ಹೇಳಿದರೆ ಮಾತ್ರ ಅದನ್ನು ಕೊಡಬಹುದು.

ಎಷ್ಟು ನಿಮಿಷ ಹಾಲುಣಿಸಬೇಕು...? 
ಒಂದು ಮೊಲೆಯ ಹಾಲನ್ನು ಕನಿಷ್ಠ 15-20 ನಿಮಿಷ ಆದರೂ ಕೊಟ್ಟು ಆದ ಬಳಿಕ ಇನ್ನೊಂದು ಮೊಲೆಯ ಹಾಲನ್ನು ಕೊಡಲು ಆರಂಭಿಸಬೇಕು. ಒಂದೇ ಸಲ ಎರಡೂ ಮೊಲೆಗಳನ್ನು ಚೀಪಿಸಬೇಕು ಎಂದೇನಿಲ್ಲ. ಒಂದು ಸಲಕ್ಕೆ ಒಂದು ಮೊಲೆಯ ಹಾಲಿನಿಂದ ಮಗು ತೃಪ್ತಿಗೊಂಡರೆ, ಇನ್ನೊಂದು ಮೊಲೆಯ ಹಾಲನ್ನು ಮತ್ತೂಮ್ಮೆ ಹಾಲುಣಿಸುವಾಗ ಕೊಟ್ಟರಾಯಿತು. ಒಂದು ಮೊಲೆಯಿಂದ ಸಂಪೂರ್ಣವಾಗಿ ಹಾಲು ಕೊಟ್ಟ ಅನಂತರವೇ ಇನ್ನೊಂದು ಮೊಲೆಯನ್ನು ಚೀಪಿಸಬೇಕು.

ಯಾಕೆಂದರೆ, ಎದೆಹಾಲಿನಲ್ಲಿ 2 ವಿಧಗಳಿವೆ. ಮಗು ಎದೆಹಾಲನ್ನು ಚೀಪಲು ಪ್ರಾರಂಭಿಸುವಾಗ ಆರಂಭದಲ್ಲಿ ಬರುವ 3-4 ಚಮಚ ಹಾಲನ್ನು ನೀರು ಹಾಲು ಎಂದು ಕರೆಯುತ್ತೇವೆ. ಈ ಹಾಲಿನಲ್ಲಿ ಶೇ.80 ನೀರಿನ ಅಂಶ ಇರುವುದರಿಂದ ಮಗುವಿನ ಬಾಯಾರಿಕೆಯನ್ನು ತಣಿಸುವಲ್ಲಿ ಇದು ಸಹಾಯ ಮಾಡುತ್ತದೆ. ಕೊನೆಗೆ ಬರುವ ಹಾಲನ್ನು ದಪ್ಪ ಹಾಲು ಎಂದು ಹೇಳುತ್ತಾರೆ. ಈ ಹಾಲಿನಲ್ಲಿ ತುಂಬಾ ಪೌಷ್ಟಿಕಾಂಶಗಳು ಇರುವುದರಿಂದ ಮಗುವಿನ ಬೆಳವಣಿಗೆಗೆ ಇದು ಸಹಾಯ ಮಾಡುವುದು ಮಾತ್ರವಲ್ಲದೆ ಹಸಿವನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಹಾಲುಣಿಸಿದ ಬಳಿಕ ತೇಗು ಬರಿಸಬೇಕು ಏಕೆ? 
ಎದೆ ಹಾಲುಣಿಸಿ ಆದ ಬಳಿಕ ತೇಗು ಬರಿಸುವುದು ಅತಿ ಆವಶ್ಯಕ. ಯಾಕೆಂದರೆ ಮಕ್ಕಳು ಹಾಲು ಚೀಪುವಾಗ ಸ್ವಲ್ಪ ಪ್ರಮಾಣದಲ್ಲಿ ಗಾಳಿ ಸೇವಿಸುತ್ತಾರೆ; ಅದನ್ನು ಹೊರ ಬರಿಸಲು ತೇಗು ಬರುವಂಥದ್ದು. ಹೀಗೆ ಮಾಡಿದಲ್ಲಿ ಮಗುವಿಗೆ ಹೊಟ್ಟೆ ನೋವು ಮತ್ತು ವಾಂತಿ ಬರುವುದನ್ನು ತಡೆಗಟ್ಟಬಹುದು.

ಆದ್ದರಿಂದ ಮಗು ಗಾಳಿ ಸೇವಿಸದ ಹಾಗೆ, ಮೊಲೆ ಸರಿಯಾಗಿ ಅದರ ಬಾಯಿಯೊಳಗೆ ಇದೆಯಾ ಎಂದು ಹಾಲುಣಿಸುವಾಗ ನೋಡಬೇಕು. ತೇಗು ತೆಗೆಯುವುದಕ್ಕಾಗಿ, ಮಗುವನ್ನು ಭುಜದ ಮೇಲೆ ಮಲಗಿಸಿ ಹಗುರವಾಗಿ ಅದರ ಬೆನ್ನನ್ನು ಕೆಳಗಿನಿಂದ ಮೇಲೆ ತಟ್ಟಬೇಕು. ಆಗ ನಾವು ತೇಗು ತೆಗೆಯುವ ಹಾಗೆ ಒಂದು ಶಬ್ದ ಬರುತ್ತದೆ. ಒಂದು ವೇಳೆ ತುಂಬಾ ಹೊತ್ತು ಬೆನ್ನು ತಟ್ಟಿಯೂ ತೇಗು ಬರಲಿಲ್ಲವಾದರೆ, ಮಗುವನ್ನು ಅಂಗಾತ ಮಲಗಿಸದೆ ಬದಿಗೆ ತಿರುಗಿಸಿ ಮಲಗಿಸಬೇಕು.

ನನ್ನ ಆಹಾರ ಪದ್ಧತಿಯು ಮಗುವಿನ ಹಾಲಿನ ಮೇಲೆ ಪರಿಣಾಮ ಬೀರುತ್ತದೆಯೇ? 
ಹಾಲುಣಿಸುವ ಅವಧಿಯಲ್ಲಿ ತಾಯಿ ಹೆಚ್ಚೆಚ್ಚು ನೀರಿನ ಅಂಶ ಇರುವಂತಹ ಪದಾರ್ಥಗಳು, ಸಮತೋಲಿತ ಆಹಾರವನ್ನು ಸೇವಿಸುವುದು ಅತ್ಯಗತ್ಯ.

ತಾಯಿ ಸೇವಿಸುವ ಆಹಾರವು ಹಾಲಿನ ಉತ್ಪಾದನೆ ಮತ್ತು ಹಾಲಿನ ಗುಣಮಟ್ಟದ ಮೇಲೆ ಪ್ರಭಾವ ಬೀರುವುದಿಲ್ಲ. ಕೆಲವು ಸಂದರ್ಭಗಳಲ್ಲಿ ಹೊರತುಪಡಿಸಿ ಮಗುವಿಗೆ ಯಾವುದೇ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುವುದಿಲ್ಲ.

ಅನಾರೋಗ್ಯಕ್ಕೀಡಾದಾಗ, ಔಷಧಿಗಳನ್ನು ತೆಗೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಸ್ತನಪಾನ ಮಾಡಬಹುದೇ...?
ಹಾಣಿಸುವಷ್ಟು ಶಕ್ತಿ ಇದ್ದರೆ, ಸ್ತನಪಾನ ಮಾಡಬಹುದು. ಪ್ರಸ್ತುತ ಸಾಂಕ್ರಾಮಿಕ ರೋಗವಿದ್ದು. ಇಂತಹ ಸಂದರ್ಭದಲ್ಲಿಯೂ ಸೂಕ್ತ ಮುಂಜಾಗ್ರತಾ ಕ್ರಮಗಳಾದ ಸ್ಯಾನಿಟೈಸರ್, ಮಾಸ್ಕ್ ಗಳ ಬಳಕೆಯಿಂದ ಸ್ತನಪಾನ ಮಾಡಬಹುದು.

ಈ ಹಂತದಲ್ಲಿ ಯಾವುದೇ ಗೊಂದಲ, ಸಂಶಯಗಳು ಮೂಡಿದರೂ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com