ಕೋವಿಡ್-19 ಸಾಂಕ್ರಾಮಿಕ: ಜನತೆಯಲ್ಲಿ ಹೆಚ್ಚಿದ ಆತಂಕ, ಖಿನ್ನತೆ; ತಜ್ಞರು ಏನಂತಾರೆ?

ಕೋವಿಡ್-19 ಸಾಂಕ್ರಾಮಿಕ ರೋಗ ಹಲವರ ಮೇಲೆ ಮಾನಸಿಕ ಅನಾರೋಗ್ಯ ತಂದಿರುವುದಂತೂ ಸತ್ಯ. ಆರ್ಥಿಕ, ಸಾಮಾಜಿಕ ಸಂಕಷ್ಟದಿಂದ ಶೇಕಡಾ 40ರಷ್ಟು ಮಂದಿ ಸಣ್ಣ ಪ್ರಮಾಣದಿಂದ ತೀವ್ರ ಖಿನ್ನತೆಯನ್ನು ಅನುಭವಿಸುತ್ತಿದ್ದಾರೆ ಎಂದು ಅಧ್ಯಯನವೊಂದು ಹೇಳುತ್ತದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಭುವನೇಶ್ವರ: ಕೋವಿಡ್-19 ಸಾಂಕ್ರಾಮಿಕ ರೋಗ ಹಲವರ ಮೇಲೆ ಮಾನಸಿಕ ಅನಾರೋಗ್ಯ ತಂದಿರುವುದಂತೂ ಸತ್ಯ. ಆರ್ಥಿಕ, ಸಾಮಾಜಿಕ ಸಂಕಷ್ಟದಿಂದ ಶೇಕಡಾ 40ರಷ್ಟು ಮಂದಿ ಸಣ್ಣ ಪ್ರಮಾಣದಿಂದ ತೀವ್ರ ಖಿನ್ನತೆಯನ್ನು ಅನುಭವಿಸುತ್ತಿದ್ದಾರೆ ಎಂದು ಅಧ್ಯಯನವೊಂದು ಹೇಳುತ್ತದೆ. ಇವರಲ್ಲಿ ಶೇಕಡಾ 18ರಷ್ಟು ಮಂದಿ ಕೋವಿಡ್-19ನಿಂದ ಮಧ್ಯಮ ಪ್ರಮಾಣದಿಂದ ತೀವ್ರ ಒತ್ತಡ, ಖಿನ್ನತೆಗೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ.

ದೇಶದ ವಿವಿಧ ನಗರಗಳಲ್ಲಿ 550 ಮಂದಿ ಮೇಲೆ ಇಬ್ಬರು ಸಂಶೋಧಕರಾದ ಪ್ರೊ. ಸುಚಿತ್ರಾ ಪಾಲ್ ಮತ್ತು ದೆಬ್ರಜ್ ದಾಸ್ ಎಂಬುವವರು ಪ್ರಶ್ನೋತ್ತರ ವಿಧಾನ ಮೂಲಕ ಇದನ್ನು ಪತ್ತೆಹಚ್ಚಿದ್ದಾರೆ. ಪ್ರೊ.ಪಾಲ್ ಎಂಬುವವರು ಭುವನೇಶ್ವರದ ಕ್ಸೇವಿಯರ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದು ದಾಸ್, ಹಿರಿಯ ಕಾರ್ಪೊರೇಟ್ ಕಾರ್ಯನಿರ್ವಹಣಾಧಿಕಾರಿಯಾಗಿದ್ದಾರೆ. ಇದೇ ಸಂಸ್ಥೆಯಲ್ಲಿ ಪಿಹೆಚ್ ಡಿ ವಿದ್ವಾಂಸರು ಕೂಡ ಆಗಿದ್ದಾರೆ.

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಮೀಕ್ಷೆ ಮಾಡಲಾಗಿದ್ದು, ಕೋವಿಡ್-19 ಸಾಂಕ್ರಾಮಿಕ ಹೊಸ ಮಾದರಿಯ ಖಿನ್ನತೆ ಕೊರೊನೋಫೋಬಿಯಾವನ್ನು ಜನರಲ್ಲಿ ಉಂಟುಮಾಡಿದೆ. ಶೇಕಡಾ 23ರಷ್ಟು ಮಂದಿ ಕೋವಿಡ್-19ನ ಅಧಿಕ ಅಪಾಯವನ್ನು ಎದುರಿಸುತ್ತಿದ್ದಾರೆ.ಶೇಕಡಾ 7ರಷ್ಟು ಮಂದಿ ಕೊರೋನಾಫೋಬಿಯಾದಿಂದ ಬಳಲುತ್ತಿದ್ದಾರೆ. ಅಂದರೆ ವೈರಸ್ ಬಗ್ಗೆ ತೀವ್ರ ಭಯವಿದೆ. ಶೇಕಡಾ 16ರಷ್ಟು ಮಂದಿ ವರ್ತನೆಗಳಲ್ಲಿ ಆತಂಕ ತೋರಿಸುತ್ತಿದ್ದು, ಪದೇ ಪದೇ ತಮ್ಮ ದೇಹದ ಉಷ್ಣತೆಯನ್ನು ತಪಾಸಣೆ ಮಾಡಿಕೊಳ್ಳುವುದನ್ನು ಮಾಡುತ್ತಿರುತ್ತಾರೆ. ಶೇಕಡಾ 39ರಷ್ಟು ಮಂದಿಗೆ ಸೋಂಕಿನಿಂದ ತಾವು ಸತ್ತುಹೋಗಬಹುದು ಎಂದು ಭಾವಿಸುತ್ತಾರಂತೆ, ಇನ್ನು ಶೇಕಡಾ 85ರಷ್ಟು ಮಂದಿ ಮತ್ತೆ ಎಲ್ಲವೂ ಸರಿಯಾಗಿ ಸ್ವಲ್ಪ ಸಮಯದಲ್ಲಿ ಹಿಂದಿನ ಸಹಜ ಜೀವನಕ್ಕೆ ಮರಳುತ್ತೇವೆ ಎಂಬ ಆಶಾವಾದದಲ್ಲಿ ಜೀವನ ನಡೆಸುತ್ತಿದ್ದಾರಂತೆ.

ಸಮೀಕ್ಷೆಯಲ್ಲಿ, ಪುರುಷರಿಗೆ ಹೋಲಿಸಿದರೆ ಮಹಿಳೆಯರು ಹೆಚ್ಚಿನ ಆತಂಕಕ್ಕೀಡಾಗಿದ್ದಾರೆ. ಶೇಕಡಾ 23ರಷ್ಟು ಮಹಿಳೆಯರು ವರ್ತನೆಗಳಲ್ಲಿ ಆತಂಕ ತೋರಿಸಿದರೆ ಪುರುಷರ ಸಂಖ್ಯೆ ಶೇಕಡಾ 12ರಷ್ಟು. ಶೇಕಡಾ 52ರಷ್ಟು ಮಹಿಳೆಯರು ಖಿನ್ನತೆ ತೋರಿಸಿದರೆ ಶೇಕಡಾ 33ರಷ್ಟು ಮಹಿಳೆಯರಲ್ಲಿ ಈ ಸಮಸ್ಯೆಯಿದೆ ಎನ್ನುತ್ತಿದ್ದಾರೆ.

ಯುವಜನತೆಯ ಮಾನಸಿಕ ಆರೋಗ್ಯದ ಮೇಲೆ ಸಹ ಕೋವಿಡ್-19 ಪರಿಣಾಮ ಬೀರಿದೆ. 18ರಿಂದ 25 ವರ್ಷದೊಳಗಿನವರಲ್ಲಿ ತೀವ್ರ ಭಯ, ಆತಂಕಗಳಿವೆ. 26ರಿಂದ 40 ವರ್ಷದೊಳಗಿನವರಲ್ಲಿ ಕೂಡ ಭಯ ಮತ್ತು ಅಪಾಯ ಗ್ರಹಿಕೆ ಹೆಚ್ಚಾಗಿದೆ. 40 ವರ್ಷಕ್ಕಿಂತ ಮೇಲಿನವರು ಅಷ್ಟೊಂದು ಆತಂಕವನ್ನು ಹೊಂದಿಲ್ಲ ಎನ್ನುತ್ತದೆ ಸಮೀಕ್ಷೆ.

ತಜ್ಞರು ಹೇಳುವುದೇನು: ಸಾಂಕ್ರಾಮಿಕ ರೋಗದ ದೀರ್ಘಕಾಲೀನ ಪರಿಣಾಮವೇನು ಎಂದು ಈಗಲೇ ಅಂದಾಜಿಸುವುದು ಕಷ್ಟ. ಮಾನಸಿಕ-ಸಾಮಾಜಿಕ ಬೆಂಬಲ, ಆತಂಕಕ್ಕೆ ಕಾರಣವಾಗುವ ಅಂಶಗಳಿಂದ ಗಮನವನ್ನು ಬೇರೆಡೆಗೆ ತಿರುಗಿಸಲು ಆರೋಗ್ಯಕರ ಜೀವನಶೈಲಿ, ತಡೆಗಟ್ಟುವ ಕ್ರಮಗಳನ್ನು ಜಾರಿಗೆ ತರಲು ಕಠಿಣ ಕಾನೂನು, ಮಾಸ್ಕ್, ಸ್ಯಾನಿಟೈಸರ್ ಗಳ ಸೂಕ್ತ ಬಳಕೆಯನ್ನು ಮಾಡಬೇಕು ಎಂದು ತಜ್ಞರು ಸಮೀಕ್ಷೆಯಲ್ಲಿ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com