ನಿಮ್ಮ ದೇಹಕ್ಕೆ ಕ್ಯಾಲ್ಶಿಯಂ ಎಷ್ಟು ಮುಖ್ಯ ಅನ್ನೋದು ನಿಮಗೆ ಗೊತ್ತಾ?
ಕ್ಯಾಲ್ಶಿಯಂ ಹೃದಯ, ಸ್ನಾಯುಗಳ ಫಿಟ್ನೆಸ್, ಹಲ್ಲುಗಳು ಹಾಗೂ ಮೂಳೆಗಳು ಆರೋಗ್ಯವಾಗಿರುವಂತೆ ನೋಡಿಕೊಳ್ಳಲು ಅತ್ಯವಶ್ಯಕವಾಗಿದೆ. ಇಂತಹ ಕ್ಯಾಲ್ಶಿಯಂ ಕೊರತೆ ಒಮ್ಮೆ ಶುರುವಾಗಿದ್ದೇ ಆದರೆ, ಮೂಳೆಗಳು ಮುರಿಯುವುದು...
Published: 17th February 2021 02:28 PM | Last Updated: 17th February 2021 03:04 PM | A+A A-

ಸಂಗ್ರಹ ಚಿತ್ರ
ಕ್ಯಾಲ್ಶಿಯಂ ಹೃದಯ, ಸ್ನಾಯುಗಳ ಫಿಟ್ನೆಸ್, ಹಲ್ಲುಗಳು ಹಾಗೂ ಮೂಳೆಗಳು ಆರೋಗ್ಯವಾಗಿರುವಂತೆ ನೋಡಿಕೊಳ್ಳಲು ಅತ್ಯವಶ್ಯಕವಾಗಿದೆ. ಇಂತಹ ಕ್ಯಾಲ್ಶಿಯಂ ಕೊರತೆ ಒಮ್ಮೆ ಶುರುವಾಗಿದ್ದೇ ಆದರೆ, ಮೂಳೆಗಳು ಮುರಿಯುವುದು, ಇಡೀ ದೇಹದಲ್ಲಿ ನೋವು, ಮಾಂಸಖಂಡಗಳಲ್ಲಿ ಹಿಡಿದಂತೆ, ಹೃದಯ ಬಡಿತ ಹೆಚ್ಚಳ, ಮುಟ್ಟಿನ ಸಮಸ್ಯೆ, ಕೂದಲು ಉದುರುವಿಕೆಯಂತಹ ನಾನಾ ರೀತಿಯ ಸಮಸ್ಯೆಗಳು ಎದುರಾಗುತ್ತವೆ.
ಪ್ರತಿದಿನ ನಾವು ಸೇವನೆ ಮಾಡುವಂತಹ ಆಹಾರಗಳು ನಮ್ಮ ಆರೋಗ್ಯವನ್ನು ವೃದ್ಧಿಸುತ್ತವೆ ಹಾಗೂ ಆಹಾರ ಕ್ರಮದಲ್ಲಿ ಏನಾದರೂ ಸ್ವಲ್ಪ ವ್ಯತ್ಯಾಸವಾದರೂ ಅನಾರೋಗ್ಯ ಸಮಸ್ಯೆ ಕಾಡುತ್ತದೆ. ಹಾಗಾಗಿ ದೇಹಕ್ಕೆ ಪೋಷಕಾಂಶಗಳನ್ನು ನೀಡುವಂತಹ ಆಹಾರಗಳನ್ನು ಸೇವನೆ ಮಾಡುವುದು ಉತ್ತಮ.
ಆರೋಗ್ಯ ಉತ್ತಮವಾಗಿಟ್ಟುಕೊಳ್ಳಲು ಯಾವ ಆಹಾರಗಳು ಸೂಕ್ತ ಹಾಗೂ ದೇಹಕ್ಕೆ ಬೇಕಾಗುವಂತಹ ಕ್ಯಾಲ್ಶಿಯಂ ಕೊರತೆಯನ್ನು ನೀಗಿಸುವ ಆಹಾರಗಳು ಯಾವುವು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.
ವಿಟಮಿನ್ ಸಿ ಹಾಗೂ ವಿಟಮಿನ್ ಡಿ ದೇಹಕ್ಕೆ ಅಗತ್ಯವಾಗಿದೆ ಆದ್ದರಿಂದ ಈ ಅಂಶಗಳಿರುವ ಆಹಾರಗಳನ್ನು ಸೇವನೆ ಮಾಡಬೇಕಾಗುತ್ತದೆ.
ದೇಹದ ಮೂಳೆಗಳನ್ನು ಬಲಿಷ್ಠ ಮಾಡುವ ಜೊತೆಗೆ ದೇಹದಲ್ಲಿನ ಕ್ಯಾಲ್ಶಿಯಂ ಕೊರತೆಯನ್ನು ನೀಗಿಸುವಂತ ಆಹಾರಗಳೆಂದರೆ, ಹಸಿ ಸೊಪ್ಪು, ತರಕಾರಿಗಳು, ಕ್ಯಾರೆಟ್, ಬೀನ್ಸ್, ಬಿಟ್ರೋಟ್, ಎಳ್ಳು, ಚೀಸ್, ಸೋಯಾಬಿನ್, ರಾಜ್ಮಾ, ಕಾಬೂಲ್ ಕಡಲೆಕಾಳು, ಗೋಧಿ ಹಾಗೂ ಹಾಲು, ಮೊಟ್ಟೆ, ಮೊಸರು ಇತರೆ ಹಾಲಿನ ಉತ್ಪನ್ನಗಳಾಗಿವೆ. ಅಷ್ಟೇ ಅಲ್ಲದೆ ಒಣ ಹಣ್ಣುಗಳಾದಂತಹ ಗೋಡಂಬಿ, ದ್ರಾಕ್ಷಿ, ಒಣ ಅಂಜೂರ, ಬಾದಾಮಿ, ಇತ್ಯಾದಿಗಳಾಗಿವೆ.
ಇನ್ನು ಮೀನು ಸೇವನೆ ಕೂಡ ದೇಹದ ಆರೋಗ್ಯವನ್ನು ವೃದ್ಧಿಸುತ್ತದೆ. ದೇಹಕ್ಕೆ ಕ್ಯಾಲ್ಶಿಯಂ ಕೊರತೆಯನ್ನು ನಿವಾರಿಸುತ್ತದೆ.
ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ನೀಡುವಂತಹ ಆಹಾರಗಳು ವಿಟಮಿನ್ ಸಿ ಅಂಶವನ್ನು ಹೊಂದಿರುವಂತಹ ಆಹಾರಗಳನ್ನು ಸೇವನೆ ಮಾಡುವುದರಿಂದ ದೇಹಕ್ಕೆ ಉತ್ತಮ ಅರೋಗ್ಯವನ್ನು ನೀಡುತ್ತದೆ. ಕಿತ್ತಳೆಹಣ್ಣು, ಮೂಸಂಬಿ, ಕಿವಿಹಣ್ಣು ಇಂತಹ ಹಣ್ಣುಗಳನ್ನು ಸೇವನೆ ಮಾಡಬೇಕು. ಅಷ್ಟೇ ಅಲ್ಲದೆ ಪೊಟ್ಯಾಶಿಯಂ ಮೆಗ್ನಿಶಿಯಂ ಇರುವಂತಹ ಆಹಾರಗಳನ್ನು ಸೇವನೆ ಮಾಡುವುದು ಅತ್ಯುತ್ತಮವಾಗಿರುತ್ತದೆ.
ಕೆಲವರಲ್ಲಿ ವಿಟಮಿನ್ ಡಿ ಕೊರತೆ ಇರುತ್ತದೆ ಅಂತವರು ಈ ವಿಧಾನವನ್ನು ಅನುಸರಿಸುವುದರಿಂದ ಉತ್ತಮ ಫಲಿತಾಂಶವನ್ನು ಕಾಣಬಹುದಾಗಿದೆ.
ಪ್ರತಿದಿನ ಸೂರ್ಯನ ಕಿರಣಗಳನ್ನು ದೇಹಕ್ಕೆ ಬೀಳುವ ರೀತಿಯಲ್ಲಿ ೧೫ ರಿಂದ ೨೦ ನಿಮಿಷಗಳ ಕಾಲ ಮೈವೊಡ್ಡಿ ನಿಂತುಕೊಳ್ಳಬೇಕು. ಇನ್ನು ಆಹಾರ ಕ್ರಮದಲ್ಲಿ ಸೇವನೆ ಮಾಡಬೇಕಾದ ಕ್ರಮಗಳು ಮೊಟ್ಟೆ, ಅಣಬೆ ಮೀನು ಇವುಗಳಿಂದ ವಿಟಮಿನ್ ಡಿ ಕೊರತೆ ನಿವಾರಣೆಯಾಗುವುದು.
ಉತ್ತಮ ಆರೋಗ್ಯ ಮತ್ತು ಬಲಿಷ್ಠ ದೇಹಕ್ಕೆ ಕ್ಯಾಲ್ಶಿಯಂ ಅತ್ಯಂತ ಅವಶ್ಯ. ಆದ್ದರಿಂದ ಮೂಳೆಗಳು ಮತ್ತು ಹಲ್ಲುಗಳು ಬಲಿಷ್ಠವಾಗುತ್ತವೆ. ನಮ್ಮ ಮೂಳೆಗಳ ಶೇ.70ರಷ್ಟು ಭಾಗ ಫಾಸ್ಛೇಟ್ನಿಂದ ರೂಪುಗೊಂಡಿದೆ.
ಇದೇ ಕಾರಣದಿಂದ ಕ್ಯಾಲ್ಶಿಯಂ ಮೂಳೆಗಳು ಮತ್ತು ಹಲ್ಲುಗಳ ಒಳ್ಳೆಯ ಆರೋಗ್ಯಕ್ಕೆ ಅತ್ಯವಶ್ಯ. ನಾವು ಸೇವನೆ ಮಾಡುವಂತಹ ಆಹಾರಗಳೂ ಕೂಡ ಕೆಲವೊಮ್ಮೆ ದೇಹದಲ್ಲಿ ಕ್ಯಾಲ್ಶಿಯಂ ಸಮಸ್ಯೆಗಳನ್ನುಂಟು ಮಾಡುತ್ತವೆ. ಸಾಧ್ಯವಾದಷ್ಟು ಕಾಫಿ, ಆಲ್ಕೋಹಾಲ್ ಹಾಗೂ ಸಿಗರೇಟ್ ಸೇದುವ ಅಭ್ಯಾಸ ಇರುವವರು ಇಂತಹದ್ದನ್ನು ನಿಯಂತ್ರಿಸುವುದು ಆರೋಗ್ಯಕ್ಕೆ ಉತ್ತಮವಾಗಿರುತ್ತದೆ.
ಪ್ರತಿನಿತ್ಯ ನಾವು ಎಷ್ಟು ಪ್ರಮಾಣದ ಕ್ಯಾಲ್ಶಿಯಂವುಳ್ಳ ಆಹಾರ ಸೇವನೆ ಮಾಡಬೇಕು?
- ಯಾವುದೇ ಅಂಶ ಹೆಚ್ಚಾದರೂ, ಕಡಿಮೆಯಾದರೂ ಅನಾರೋಗ್ಯ ಕಟ್ಟಿಟ್ಟ ಬುತ್ತಿ. ಹಾಗಾಗಿ ನಾವು ಪ್ರತಿನಿತ್ಯ ಸೇವನೆ ಮಾಡುವಂತಹ ಆಹಾರದಲ್ಲಿ ಎಷ್ಟು ಪ್ರಮಾಣದ ಕ್ಯಾಲ್ಶಿಯಂ ಇರಬೇಕೆಂಬ ಮಾಹಿತಿ ಇಲ್ಲಿದೆ...
- ಆರೋಗ್ಯ ತಜ್ಞರು ಶಿಫಾರಸು ಮಾಡಿರುವಂತೆ ವಯಸ್ಕರು ದಿನಕ್ಕೆ 1,000 ಮಿಲಿ ಗ್ರಾಂನಷ್ಟು ಕ್ಯಾಲ್ಶಿಯಂಯುಕ್ತ ಆಹಾರ ಸೇವನೆ ಮಾಡಬೇಕು.
- 50 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಮತ್ತು 70 ವರ್ಷಕ್ಕಿಂತ ಮೇಲ್ಪಟ್ಟವರು ದಿನಕ್ಕೆ 1,200 ಮಿಲಿ ಗ್ರಾಂನಷ್ಟು ಕ್ಯಾಲ್ಶಿಯಂಯುಕ್ತ ಆಹಾರ ಸೇವನೆ ಮಾಡಬೇಕು.
- ಇನ್ನು 4-18 ವರ್ಷದೊಳಗಿನ ಮಕ್ಕಳು 1,300 ಮಿಲಿ ಗ್ರಾಂನಷ್ಟು ಕ್ಯಾಲ್ಶಿಯಂಯುಕ್ತ ಆಹಾರ ಸೇವನೆ ಮಾಡಬೇಕು.