
ಸಂಗ್ರಹ ಚಿತ್ರ
ಭಾರತದಲ್ಲಿ ಬಳಸುವ ಹಲವು ಸಾಂಬಾರ ಪದಾರ್ಥಗಳಲ್ಲೂ ಸಾಕಷ್ಟು ಆರೋಗ್ಯ ಗುಣಗಳಿವೆ. ಪ್ರತಿನಿತ್ಯ ನಾವು ಅಡುಗೆಯಲ್ಲಿ ಬಳಕೆ ಮಾಡುವ ಸಾಂಬಾರ ಪದಾರ್ಥಗಳಲ್ಲಿ ಬೆಳ್ಳುಳ್ಳಿ ಕೂಡಾ ಒಂದಾಗಿದೆ.
ಬೆಳ್ಳುಳ್ಳಿಯಲ್ಲಿ ಸಾಕಷ್ಟು ಔಷಧೀಯ ಗುಣಗಳಲಿದ್ದು, ಆರೋಗ್ಯಕ್ಕೆ ಹಲವಾರು ರೀತಿಯ ಲಾಭವನ್ನು ನೀಡುತ್ತದೆ. ಬೆಳ್ಳುಳ್ಳಿಯಲ್ಲಿ ಹಲವಾರು ಖನಿಜಾಂಶಗಳು, ವಿಟಮಿನ್ ಗಳು, ಮತ್ತು ರೋಗ ನಿರೋಧಕ ಶಕ್ತಿ ವೃದ್ಧಿಸುವ ಗುಣಗಳಿವೆ. ಪ್ರತಿನಿತ್ಯ ನಾವು ಸೇವಿಸುವ ಆಹಾರದಲ್ಲಿ ಬೆಳ್ಳುಳ್ಳಿಯನ್ನು ಬಳಕೆ ಮಾಡುವುದರಿಂದ ಆರೋಗ್ಯ ಉತ್ತಮಗೊಳಿಸಬಹುದಾಗಿದೆ. ಬೆಳ್ಳುಳ್ಳಿಯಲ್ಲಿ ಔಷಧೀಯ ಗುಣಗಳಿರುವುದನ್ನು ಸಾಕಷ್ಟು ಅಧ್ಯಯನಗಳೂ ಕೂಡ ಸಾಬೀತುಪಡಿಸಿವೆ.
ಬೆಳ್ಳುಳ್ಳಿಯಲ್ಲಿರುವ ಅಲಿಸಿನ್ ಎಂಬ ಪೋಷಕಾಂಶವು ಜೀವಿರೋಧಿ ವೈರಸ್ ವಿರೋಧಿ, ಬೂಸುನಿವಾರಕ ಮತ್ತು ರೋಗ ನಿರೋಧಕ ಶಕ್ತಿ ಗುಣಗಳನ್ನು ಹೊಂದಿರುವುದರಿಂದ ಹಲವು ರೀತಿಯಲ್ಲಿ ಆರೋಗ್ಯವನ್ನು ರಕ್ಷಿಸುತ್ತದೆ. ಇದರ ಪೂರ್ಣ ಉಪಯೋಗ ಪಡೆಯಲು ಬೆಳ್ಳುಳ್ಳಿಯನ್ನು ಚಿಕ್ಕದಾಗಿ ಹೆಚ್ಚಿ, ಅಥವಾ ಅರೆದು ಕೊಂಚ ಕಾಲ ಬಿಟ್ಟು ಸೇವಿಸುವುದು ಉತ್ತಮ. ಬೆಳ್ಳುಳ್ಳಿಯಲ್ಲಿ ಉತ್ತಮ ಪ್ರಮಾಣದ ಸಿಲಿನಿಯಂ ಕೂಡ ಇದ್ದು, ವೈರಸ್ ಗಳಿಂದ ಎದುರಾಗುವ ಸೋಂಕುಗಳಿಂದ ರಕ್ಷಣೆ ನೀಡಲಿದೆ.
ನಮ್ಮ ಆಹಾರದ ಮೂಲಕ ದಾಳಿಯಿಡುವ ವೈರಸ್ಸುಗಳು, ಬೂಸು, ಯೀಸ್ಟ್ ಮತ್ತು ಕ್ರಿಮಿಗಳಿಂದ ಸೋಂಕು ಆಗದಿರುವಂತೆ ನೋಡಿಕೊಳ್ಳುತ್ತದೆ. ವಿಶೇಷವಾಗಿ ನಮ್ಮ ಕರುಳುಗಳಲ್ಲಿ ಈ ಕ್ರಿಮಿಗಳು ದಾಳಿಯಿಡುವ ಮುನ್ನವೇ ಅವುಗಳೊಂದಿಗೆ ಹೋರಾಡಿ ದೇಹದಿಂದ ವಿಸರ್ಜನೆಯಾಗುವಂತೆ ನೋಡಿಕೊಳ್ಳುತ್ತವೆ. ನಮ್ಮ ಆರೋಗ್ಯವನ್ನು ಕೆಡಿಸುವ ಕೋಲಿ, ಸಾಲ್ಮೊನೆಲ್ಲಾ ಎಂಟರ್ಟಿಡಿಸ್ ಮೊದಲಾದ ವೈರಸ್ಸುಗಳಿಗೆ ಬೆಳ್ಳುಳ್ಳಿ ಉತ್ತಮ ಔಷಧಿಯಾಗಿದೆ.
ತೂಕ ಇಳಿಸಲು ಬೆಳ್ಳುಳ್ಳಿ ಉತ್ತಮವಾದ ಪದಾರ್ಥವಾಗಿದೆ. ದೇಹದಲ್ಲಿ ಬೊಜ್ಜು ಆವರಿಸಿಕೊಂಡು, ಅನಾರೋಗ್ಯಕಾರಿ ಆಗಿ ತೂಕ ಬೆಳೆದಿದ್ದರೆ ಆಗ ಅದನ್ನು ಇಳಿಸಲು ಹಸಿ ಬೆಳ್ಳುಳ್ಳಿ ಸೇವಿಸಿ. ಹಸಿ ಬೆಳ್ಳಿಯಲ್ಲಿ ಕೆಟ್ಟ ಮತ್ತು ಅಧಿಕ ಕೊಬ್ಬನ್ನು ಕರಗಿಸುವಂತಹ ಅಂಶಗಳು ಇವೆ. ವಿವಿಧ ರೀತಿಯ ಅಧ್ಯಯನಗಳ ಪ್ರಕಾರ ಬೆಳ್ಳುಳ್ಳಿಯು ಚಯಾಪಚಯ ಕ್ರಿಯೆ ವೃದ್ಧಿಸುವುದು ಎಂದು ಕಂಡುಕೊಳ್ಳಲಾಗಿದೆ.
ಬೆಳ್ಳುಳ್ಳಿಯಲ್ಲಿ ಆ್ಯಂಟಿಆಕ್ಸಿಡೆಂಟ್, ಪ್ರಿಬಯೋಟಿಕ್ ಮತ್ತು ಪ್ರೋಬಯೋಟಿಕ್ ಅಂಶವು ಸಮೃದ್ಧವಾಗಿದೆ. ಈ ಅಂಶಗಳು ಹೊಟ್ಟೆಯ ಆರೋಗ್ಯವನ್ನು ವೃದ್ಧಿಸಲು ನೆರವಾಗುವುದು. ಬೆಳ್ಳುಳ್ಳಿಯಲ್ಲಿ ಇರುವಂತಹ ಕೆಲವೊಂದು ಖನಿಜಾಂಶಗಳು ಮತ್ತು ವಿಟಮಿನ್ ಗಳು ಯಕೃತ್, ಮೂತ್ರನಾಳ ಮತ್ತು ಕಿಡ್ನಿ ಆರೋಗ್ಯವನ್ನು ಸುಧಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಇದರೊಂದಿಗೆ ಬೆಳ್ಳುಳ್ಳಿಯಲ್ಲಿ ಇರುವಂತಹ ಒತ್ತಡ ವಿರೋಧಿ ಅಂಶಗಳು ಹೊಟ್ಟೆಯಲ್ಲಿ ಹೆಚ್ಚು ಆಮ್ಲವು ಬಿಡುಗಡೆ ಆಗುವುದನ್ನು ತಡೆಯುವುದು ಮತ್ತು ಜೀರ್ಣಕ್ರಿಯೆ ವ್ಯವಸ್ಥೆಯು ಹೆಚ್ಚು ಪರಿಣಾಮಕಾರಿ ಆಗಿರುವಂತೆ ಮಾಡುವುದು.
ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಬೆಳ್ಳುಳ್ಳಿ ತುಂಬಾ ಒಳ್ಳೆಯದು. ಖಾಲಿ ಹೊಟ್ಟೆಯಲ್ಲಿ ಹಸಿ ಬೆಳ್ಳುಳ್ಳಿ ಸೇವಿಸಿದರೆ ಆಗ ಅದು ನೈಸರ್ಗಿಕವಾಗಿ ಮನಸ್ಥಿತಿ ಸುಧಾರಣೆ ಮಾಡುವುದು. ದೇಹದಲ್ಲಿನ ರಾಸಾಯನಿಕಗಳನ್ನು ಇದು ಸಮತೋಲನದಲ್ಲಿ ಇಡುವುದು ಮತ್ತು ಮೆದುಳಿನ ರಾಸಾಯನಿಕಗಳನ್ನು ಕೂಡ. ಖಿನ್ನತೆಯು ಮೆದುಳಿನ ರಾಸಾಯನಿಕದ ಅಸಮತೋಲನದಿಂದ ಬರುವುದು ಮತ್ತು ಬೆಳ್ಳುಳ್ಳಿಯು ಖಿನ್ನತೆ ವಿರುದ್ಧ ಹೋರಾಡಲು ನೆರವಾಗವುದು.
ಮಧುಮೇಹಿಗಳಿಗೆ ಬೆಳ್ಳುಳ್ಳಿಯು ತುಂಬಾ ಪ್ರಯೋಜನಕಾರಿ. ಇದರಲ್ಲಿ ಇರುವಂತಹ ಅಲಿಸಿನ್ ಎನ್ನುವ ಅಂಶವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ಮತ್ತು ತಗ್ಗಿಸುವುದು. ಬೆಳ್ಳುಳ್ಳಿಯನ್ನು ಜಜ್ಜಿಕೊಂಡಾಗ ಅಥವಾ ಕತ್ತರಿಸಿದಾಗ ಅಲಿಸಿನ್ ಹೆಚ್ಚಾಗುವುದು. ಜಜ್ಜಿಕೊಂಡ ಬೆಳ್ಳುಳ್ಳಿಯನ್ನು ದಿನದಲ್ಲಿ ಎರಡು ಸಲ ಸೇವಿಸಿದರೆ, ಆಗ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿ ಇರುವುದು.
ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಸೇವಿಸಿದರೆ ಅದರಿಂದ ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ಕಡಿಮೆ ಮಾಡಬಹುದು. ಅಧಿಕ ರಕ್ತದೊತ್ತಡದ ಸಮಸ್ಯೆಯ ಅಪಾಯವಿರುವಂತಹ ಜನರಿಗೆ ವೈದ್ಯರು ಕೂಡ ಬೆಳ್ಳುಳ್ಳಿ ಸೇವನೆ ಮಾಡಲು ಸೂಚಿಸುವರು.
ಬೆಳಗ್ಗೆ ಎದ್ದ ಬಳಿಕ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಸೇವಿಸಿದರೆ ಅದು ರಕ್ತಕ್ಕೆ ತುಂಬಾ ಒಳ್ಳೆಯದು. ಬೆಳ್ಳುಳ್ಳಿಯಲ್ಲಿ ಇರುವ ನಿರ್ವಿಷಗೊಳಿಸುವ ಅಂಶವು ರಕ್ತನಾಳದಲ್ಲಿ ಇರುವಂತಹ ಕಲ್ಮಶವನ್ನು ತೆಗೆಯುವುದು ಮತ್ತು ರಕ್ತನಾಳದ ಆರೋಗ್ಯವನ್ನು ಸುಧಾರಿಸುವುದು. ಆ್ಯಂಟಿ ಆಕ್ಸಿಡೆಂಟ್, ರೋಗನಿರೋಧಕ ಮತ್ತು ಉರಿಯೂತ ಶಮನಕಾರಿ ಗುಣ ಹೊಂದಿರುವಂತಹ ಬೆಳ್ಳುಳ್ಳಿಯು ರಕ್ತ ಶುದ್ಧೀಕರಿಸಲು ಪ್ರಮುಖ ಪಾತ್ರ ವಹಿಸುವುದು.
ಬೆಳ್ಳುಳ್ಳಿಯಲ್ಲಿ ಉರಿಯೂತ ಶಮನಕಾರಿ, ರೋಗನಿರೋಧಕ ಮತ್ತು ಕ್ಯಾನ್ಸರ್ ವಿರೋಧಿ ಅಂಶಗಳು ಇವೆ. ಖಾಲಿ ಹೊಟ್ಟೆಯಲ್ಲಿ ನೀವು ಬೆಳ್ಳುಳ್ಳಿ ಸೇವಿಸಿದರೆ ಅದರಿಂದ ಕೆಲವೊಂದು ರೀತಿಯ ಕ್ಯಾನ್ಸರ್ ನ್ನು ತಡೆಯಬಹುದು. ಬೆಳ್ಳುಳ್ಳಿಯಲ್ಲಿ ಉನ್ನತ ಮಟ್ಟದ ಆ್ಯಂಟಿಆಕ್ಸಿಡೆಂಟ್ ಗಳು ಇವೆ ಮತ್ತು ಇದು ದೇಹವನ್ನು ನಿರ್ವಿಷಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು.