ಹಿನ್ನೋಟ 2021: ಓಮಿಕ್ರಾನ್ ಗಂಭೀರ ಸ್ವರೂಪದ್ದಲ್ಲ, ಆದರೂ ಆರೋಗ್ಯ ವ್ಯವಸ್ಥೆ ಹಾಳು ಮಾಡುವ ಆತಂಕ; ಫೆಬ್ರವರಿಯಲ್ಲಿ 3ನೇ ಅಲೆ ಸೃಷ್ಟಿ

ದಕ್ಷಿಣ ಆಫ್ರಿಕಾದಲ್ಲಿ ಜನ್ಮತಾಳಿದ ಕೋವಿಡ್-19 ಹೊಸ ರೂಪಾಂತರಿ ಓಮಿಕ್ರಾನ್ ವೈರಸ್ ಗಂಭೀರ ಸ್ವರೂಪದ್ದಲ್ಲ. ಆದರೆ ಅತಿ ವೇಗವಾಗಿ ಹರಡುವುದರಿಂದ ಭಾರತ ಸೇರಿದಂತೆ ಜಗತ್ತಿನ ಬಹುತೇಕ ಎಲ್ಲಾ ರಾಷ್ಟ್ರಗಳಲ್ಲೂ ಆರೋಗ್ಯ ವ್ಯವಸ್ಥೆಯನ್ನೇ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ದಕ್ಷಿಣ ಆಫ್ರಿಕಾದಲ್ಲಿ ಜನ್ಮತಾಳಿದ ಕೋವಿಡ್-19 ಹೊಸ ರೂಪಾಂತರಿ ಓಮಿಕ್ರಾನ್ ವೈರಸ್ ಗಂಭೀರ ಸ್ವರೂಪದ್ದಲ್ಲ. ಆದರೆ ಅತಿ ವೇಗವಾಗಿ ಹರಡುವುದರಿಂದ ಭಾರತ ಸೇರಿದಂತೆ ಜಗತ್ತಿನ ಬಹುತೇಕ ಎಲ್ಲಾ ರಾಷ್ಟ್ರಗಳಲ್ಲೂ ಆರೋಗ್ಯ ವ್ಯವಸ್ಥೆಯನ್ನೇ ಹಾಳು ಮಾಡುವ ಆತಂಕ ಸೃಷ್ಟಿಸಿದೆ.

ಡೆಲ್ಟಾ ರೂಪಾಂತರಿಯಿಂದ ಭೀತಿಗೊಳಗಾಗಿದ್ದ ವಿಶ್ವದ ರಾಷ್ಟ್ರಗಳು ಈಗ ಓಮಿಕ್ರಾನ್ ಹೊಸ ರೂಪಾಂತರಿಯಿಂದಾಗಿ ಮತ್ತೆ ಆತಂಕ ಸೃಷ್ಟಿಯಾಗಿದ್ದು, ಆರೋಗ್ಯ ತಜ್ಞರು ಮತ್ತು ವಿಜ್ಞಾನಿಗಳ ಕಳವಳವನ್ನು ಹೆಚ್ಚಿಸಿದೆ. 

ಕಳೆದ ತಿಂಗಳು ನವೆಂಬರ್ 24 ರಂದು ದಕ್ಷಿಣ ಆಫ್ರಿಕಾದಲ್ಲಿ ಓಮಿಕ್ರಾನ್‌ ಹೊಸ ರೂಪಾಂತರಿಯ ಮೊದಲ ಪ್ರಕರಣ ಪತ್ತೆಯಾಯಿತು. ನಂತರ ಈ ರೂಪಾಂತರಿಯು ಯುನೈಟೆಡ್ ಕಿಂಗ್‌ಡಮ್, ಜರ್ಮನಿ, ಇಟಲಿ, ಬೆಲ್ಜಿಯಂ, ಬೋಟ್ಸ್‌ವಾನಾ, ಹಾಂಗ್ ಕಾಂಗ್ ಮತ್ತು ಇಸ್ರೇಲ್‌ನಲ್ಲಿಯೂ ಕಾಣಿಸಿಕೊಂಡಿತು. ಈಗ ಭಾರತ ಸೇರಿದಂತೆ ವಿಶ್ವದ ಬಹುತೇಕ ಎಲ್ಲಾ ದೇಶಗಳಲ್ಲೂ ಪತ್ತೆಯಾಗಿದೆ.

ಭಾರತ ಅದರಲ್ಲೂ ಕರ್ನಾಟಕದ ರಾಜಧಾನಿ ನಮ್ಮ ಬೆಂಗಳೂರಿಗೆ ಮೊದಲು ಕಾಲಿಟ್ಟಿರುವ ಓಮಿಕ್ರಾನ್(Omicron) ರೂಪಾಂತರಿ ದೇಶದಲ್ಲಿ ಫೆಬ್ರವರಿಯಲ್ಲಿ ಮೂರನೇ ಅಲೆ ಸೃಷ್ಟಿಗೆ ಕಾರಣವಾಗಲಿದೆ ಎಂದು ತಜ್ಞರು ಹೇಳಿದ್ದಾರೆ.

ಓಮಿಕ್ರಾನ್ ವೈರಸ್ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಕೆಲವೇ ದಿನಗಳಲ್ಲಿ ದಿನಂಪ್ರತಿ 11 ಸಾವಿರಕ್ಕೂ ಹೆಚ್ಚು ಮಂದಿಯಲ್ಲಿ ಕಾಣಿಸಿಕೊಳ್ಳುತ್ತಿತ್ತು. ಅಂದರೆ ಶರವೇಗದಲ್ಲಿ ಈ ರೂಪಾಂತರಿ ಕೊರೋನಾ ಜಗತ್ತಿಗೆ ಹಬ್ಬುತ್ತಿದ್ದು, ಭಾರತದಲ್ಲಿ ಕಳೆದ 24 ಗಂಟೆಯಲ್ಲಿ ಒಂದೇ ದಿನ 180 ಹೊಸ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ದೇಶದಲ್ಲಿ ಓಮಿಕ್ರಾನ್ ಸೋಂಕಿತರ ಸಂಖ್ಯೆ 961ಕ್ಕೆ ಏರಿಕೆಯಾಗಿದೆ.

ಈ ಹಿಂದೆ ನವೆಂಬರ್ ತಿಂಗಳ ಮಧ್ಯಭಾಗದಲ್ಲಿ ಕೊರೋನಾ ಪ್ರತಿದಿನ ದೇಶದಲ್ಲಿ ಸರಾಸರಿ 200ರಿಂದ 300ರಷ್ಟು ಪತ್ತೆಯಾಗುತ್ತಿದ್ದರೆ, ಈಗ ಓಮಿಕ್ರಾನ್ ಕಾರಣದಿಂದ ಸೋಂಕಿನ ಹರಡುವಿಕೆ ಪ್ರಮಾಣ ಹೆಚ್ಚಿದ್ದು, ನಿತ್ಯ 13 ಸಾವಿರಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿವೆ.

ಓಮಿಕ್ರಾನ್ ಪ್ರಕರಣಗಳನ್ನು ದೃಢೀಕರಿಸಲು ಜೀನೋಮ್ ಸೀಕ್ವೆನ್ಸಿಂಗ್ ಅಗತ್ಯವಿದ್ದು, ದೇಶದಲ್ಲಿ ಕೋವಿಡ್-19 ಪಾಸಿಟಿವ್ ಬರುವ ವ್ಯಕ್ತಿಗಳ ಮಾದರಿಯನ್ನು ಜೀನೋಮ್ ಸೀಕ್ವೆನ್ಸಿಂಗ್ ಗೆ ಕಳುಹಿಸಲಾಗುತ್ತಿದೆ.

ಓಮಿಕ್ರಾನ್ ಆತಂಕವು ಶ್ರೀಮಂತ ರಾಷ್ಟ್ರ ಬ್ರಿಟನ್ ಸೇರಿದಂತೆ ಹಲವು ದೇಶಗಳಲ್ಲಿ ಕೋವಿಡ್‌ ಲಸಿಕೆಯ ಬೂಸ್ಟರ್ ಡೋಸ್‌ ಗೆ ಅವಕಾಶ ನೀಡಲು ಕಾರಣವಾಗಿದ್ದು, ಭಾರತದಲ್ಲೂ ಹೊಸ ವರ್ಷದಿಂದ ಆರೋಗ್ಯ ಸಿಬ್ಬಂದಿ ಹಾಗೂ ಮುಂಚೂಣಿ ಕಾರ್ಯಕರ್ತರಿಗೆ ಮುನ್ನೆಚ್ಚರಿಕೆ ಡೋಸ್ ಅಥವಾ ಬೂಸ್ಟರ್ ಡೋಸ್ ಲಸಿಕೆ ನೀಡಲು ನಿರ್ಧರಿಸಲಾಗಿದೆ. ಆದರೆ ಈ ಹೆಚ್ಚುವರಿ ಡೋಸ್ ಓಮಿಕ್ರಾನ್ ವಿರುದ್ಧ ಎಷ್ಟು ಪರಿಣಾಮಕಾರಿಯಾಗಿರುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com