ಹಿನ್ನೋಟ 2021: ಕೋವಿಡ್ ಎರಡನೇ ಅಲೆ, ಲಾಕ್ ಡೌನ್; ಭಾರತದ ಮೇಲೆ ಉಂಟಾದ ಪರಿಣಾಮ
ಅದು 2019ರ ವರ್ಷಾಂತ್ಯ. ಚೀನಾ ದೇಶದ ವುಹಾನ್ ಎಂಬ ಪ್ರಾಂತ್ಯದಲ್ಲಿ ನೊವೆಲ್ ಕೊರೋನಾ ವೈರಸ್(COVID-19) ಪತ್ತೆಯಾಗಿದೆಯಂತೆ, ಮನುಷ್ಯರಲ್ಲಿ ಒಬ್ಬರಿಂದ ಒಬ್ಬರಿಗೆ ವೇಗವಾಗಿ ಹಬ್ಬುತ್ತದೆಯಂತೆ, ಸ್ವಲ್ಪ ಹೆಚ್ಚು-ಕಡಿಮೆಯಾದರೆ ಮಾರಣಾಂತಿಕ ಎಂಬ ಸುದ್ದಿ ಬರುತ್ತಿತ್ತು.
Published: 01st January 2022 08:54 AM | Last Updated: 03rd January 2022 04:21 PM | A+A A-

ಸಾಂದರ್ಭಿಕ ಚಿತ್ರ
ಅದು 2019ರ ವರ್ಷಾಂತ್ಯ. ಚೀನಾ ದೇಶದ ವುಹಾನ್ ಎಂಬ ಪ್ರಾಂತ್ಯದಲ್ಲಿ ನೊವೆಲ್ ಕೊರೋನಾ ವೈರಸ್ (COVID-19) ಪತ್ತೆಯಾಗಿದೆಯಂತೆ, ಮನುಷ್ಯರಲ್ಲಿ ಒಬ್ಬರಿಂದ ಒಬ್ಬರಿಗೆ ವೇಗವಾಗಿ ಹಬ್ಬುತ್ತದೆಯಂತೆ, ಸ್ವಲ್ಪ ಹೆಚ್ಚು-ಕಡಿಮೆಯಾದರೆ ಮಾರಣಾಂತಿಕ ಎಂಬ ಸುದ್ದಿ ಬರುತ್ತಿತ್ತು. ಇದಕ್ಕೆ 2019-nCoV ಎಂದು ಡಬ್ಲ್ಯುಎಚ್ಒ (WHO) ಹೆಸರನ್ನಿಟ್ಟಿತ್ತು. ತೀವ್ರವಾದ ಉಸಿರಾಟ ಸಮಸ್ಯೆ ಕಂಡುಬರುವ ವೈರಸ್ ಆಗಿರುವುದರಿಂದ ಇದಕ್ಕೆ SARS-CoV-2 ಎಂಬ ಹೆಸರಿನಿಂದಲೂ ಕರೆದರು.
ಈ ಸುದ್ದಿ ಭಾರತದ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದ ವೇಳೆ ಅದರ ಗಂಭೀರತೆ, ಸ್ವರೂಪ, ಅದರಿಂದ ಮುಂದೆ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಯಾವ ಯೋಚನೆಯೂ, ಪರಿವೆಯೂ ಯಾರಿಗೂ ಇದ್ದಿರಲಿಲ್ಲ ಎಂದೇ ಹೇಳಬಹುದು. ಯಥಾಪ್ರಕಾರ ಜನಜೀವನ ಸಾಗುತ್ತಿತ್ತು. ಚೀನಾದಿಂದ ಭಾರತ ಸೇರಿದಂತೆ ಹಲವು ದೇಶಗಳಿಗೆ ಪ್ರಯಾಣಿಕರು ಬಂದು ಹೋಗುತ್ತಿದ್ದರು. ಆಗ ವೈರಸ್ ತನ್ನ ರೂಪವನ್ನು ಪ್ರದರ್ಶಿಸಲಾರಂಭಿಸಿತು.
2019ರ ಡಿಸೆಂಬರ್ 31ರಂದು ಕೊರೋನಾವೈರಸ್ ನ ನೊವೆಲ್ ಸ್ಟ್ರೈನ್ ನ್ನು 2019-nCoV ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮೂಲಕ ಅಧಿಕೃತವಾಗಿ ಗೊತ್ತುಪಡಿಸಿತಷ್ಟೆಯಲ್ಲವೇ. 2020ರ ಜನವರಿ 24ರ ವೇಳೆಗೆ 547 ಪ್ರಕರಣಗಳು ಮತ್ತು ವೈರಸ್ ನಿಂದ 25 ಸಾವುಗಳು ವರದಿಯಾದವು.
ಭಾರತದಲ್ಲಿ ಕೊರೋನಾ(COVID-19) ಪತ್ತೆ: ಕೊರೋನಾ ವೈರಸ್ ಅಥವಾ ಕೋವಿಡ್ ಸಾಂಕ್ರಾಮಿಕ ವೈರಸ್ ನ ಗಂಭೀರತೆ ಭಾರತೀಯರಿಗೆ ಅರ್ಥವಾಗಿದ್ದು ಅದು ನಮ್ಮ ಕಾಲಬುಡಕ್ಕೆ ಬಂದಾಗಲೇ. 2020ರ ಜನವರಿ 30ರಂದು ಚೀನಾದ ವುಹಾನ್ ವಿಶ್ವವಿದ್ಯಾಲಯದಿಂದ ಕೇರಳಕ್ಕೆ ಮರಳಿದ ವಿದ್ಯಾರ್ಥಿಯಲ್ಲಿ ದೇಶದ ಮೊದಲ ಪ್ರಕರಣ ದೃಢಪಟ್ಟಿತು. ಅದೇ ವರ್ಷ ಫೆಬ್ರವರಿ 2 ರಂದು, ಕೇರಳದಲ್ಲಿ ಎರಡನೇ ಪ್ರಕರಣವನ್ನು ದೃಢಪಡಿಸಲಾಯಿತು. ಈ ವ್ಯಕ್ತಿ ಭಾರತ ಮತ್ತು ಚೀನಾ ನಡುವೆ ನಿಯಮಿತವಾಗಿ ಪ್ರಯಾಣಿಸುತ್ತಿದ್ದರು. ಫೆಬ್ರವರಿ 3ರಂದು ಕೇರಳದ ಕಾಸರಗೋಡಿನಲ್ಲಿ ಮೂರನೇ ಪ್ರಕರಣ ವರದಿಯಾಗಿದೆ. ರೋಗಿಯು ವುಹಾನ್ ಪ್ರಾಂತ್ಯದಿಂದ ಬಂದಿದ್ದರು.
ನಂತರದ ದಿನಗಳಲ್ಲಿ ದೆಹಲಿ, ಹೈದರಾಬಾದ್, ಜೈಪುರ, ಜಮ್ಮು ಹೀಗೆ ಭಾರತದ ಬೇರೆ ಬೇರೆ ರಾಜ್ಯಗಳಿಗೆ ಕೊರೋನಾ ಸೋಂಕು ವ್ಯಾಪಿಸಿ ಇನ್ನಷ್ಟು ಜನರಲ್ಲಿ ಕಾಣಿಸಿಕೊಂಡಿತು. ಆರಂಭದ ಹಂತದಲ್ಲಿ ಚೀನಾ ಸೇರಿದಂತೆ ವಿದೇಶಗಳಿಂದ ಬಂದ ಪ್ರಯಾಣಿಕರಲ್ಲಿ ಮಾತ್ರ ಸೋಂಕು ಕಾಣಿಸಿಕೊಂಡಿದ್ದರೆ ನಂತರ 2020ರ ಏಪ್ರಿಲ್ ಹೊತ್ತಿಗೆ ಸಮುದಾಯ ಮಟ್ಟದಲ್ಲಿ ವ್ಯಾಪಿಸಿತು.
ಕರ್ನಾಟಕದಲ್ಲಿ ಕೋವಿಡ್ ಪ್ರಕರಣ: ನಮ್ಮ ರಾಜ್ಯ ಕರ್ನಾಟಕದಲ್ಲಿ ಮೊದಲ ಕೋವಿಡ್ ಸೋಂಕು ಪ್ರಕರಣ ವರದಿಯಾಗಿದ್ದು 2020ರ ಮಾರ್ಚ್ 9ರಂದು. ಆಗ ಸಾಂಕ್ರಾಮಿಕ ರೋಗಗಳ ಕಾಯ್ದೆ, 1897ರ ಅಡಿಯಲ್ಲಿ ಸಾಂಕ್ರಾಮಿಕ ನಿರ್ಬಂಧನೆಗಳನ್ನು ಕರ್ನಾಟಕದಲ್ಲಿ ಘೋಷಿಸಲಾಯಿತು.
ಹೀಗೆ ಕೋವಿಡ್ ವೈರಸ್ ಜನರಿಂದ ಜನರಿಗೆ ಹರಡುತ್ತಿದ್ದಂತೆ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಂಡ ಕೇರಳ ಸರ್ಕಾರ 2020ರ ಮಾರ್ಚ್ 23ರಂದು ಲಾಕ್ ಡೌನ್ ಘೋಷಿಸಿತು. ವ್ಯಾಪಾರ-ವಹಿವಾಟು, ಜನಜೀವನ ಸಂಪೂರ್ಣ ಸ್ಥಬ್ಧವಾಗಿ ಹೋದವು. ದೇಶಾದ್ಯಂತ ಮಾರ್ಚ್ 25ರಂದು ಪ್ರಧಾನಿ ನರೇಂದ್ರ ಮೋದಿ ಲಾಕ್ ಡೌನ್ ಘೋಷಿಸಿದರು. ರೈಲು, ವಿಮಾನ ಸಂಚಾರಗಳು ಬಂದ್ ಆದವು. ಮಾರ್ಚ್ 22 ರಂದು 14 ಗಂಟೆಗಳ ಜನತಾ ಕರ್ಫ್ಯೂ ಅನ್ನು ಆಚರಿಸಲು ಮತ್ತು 5 ಗಂಟೆಗೆ ಚಪ್ಪಾಳೆ ತಟ್ಟುವ ಅಥವಾ ಗಂಟೆಗಳನ್ನು ಬಾರಿಸುವ ಮೂಲಕ ಕೋವಿಡ್ ಮುಂಚೂಣಿ ಕೆಲಸಗಾರರಿಗೆ ಧನ್ಯವಾದ ಹೇಳಲು ಪ್ರಧಾನಿ ಮೋದಿ ಎಲ್ಲಾ ಭಾರತೀಯರಿಗೆ ಕರೆ ನೀಡಿದರು.
ಎರಡು ತಿಂಗಳ ಕಠಿಣ ಲಾಕ್ ಡೌನ್ ನಂತರ ಕೊರೋನಾ ವೈರಸ್ ನಿಯಂತ್ರಣಕ್ಕೆ ಬರಲಾರಂಭಿಸಿ ಜೂನ್ 1ರ ನಂತರ ಹಂತಹಂತವಾಗಿ ಲಾಕ್ ಡೌನ್ ತೆರವು ಮಾಡಲಾಯಿತು. ಒಂದೊಂದೇ ವ್ಯವಸ್ಥೆಗಳ ನಿರ್ಬಂಧ ಸಡಿಲಿಕೆ ನವೆಂಬರ್ ತಿಂಗಳವರೆಗೆ ಮುಂದುವರಿಯಿತು.
2020ರ ಡಿಸೆಂಬರ್ ಹೊತ್ತಿಗೆ ಕೊರೋನಾ ನಿಯಂತ್ರಣಕ್ಕೆ ಬಂದು ಜನಜೀವನ ಸಹಜ ಸ್ಥಿತಿಗೆ ಬರುತ್ತಿತ್ತು.ಶಾಲಾ-ಕಾಲೇಜುಗಳು ವಹಿವಾಟುಗಳು ಆರಂಭವಾಯಿತು, ಹೊಸ ವರ್ಷ 2021ನ್ನು ಹಳೆಯ ಕಹಿಯನ್ನು ಮರೆತು ಹೊಸದನ್ನು ಸ್ವಾಗತಿಸೋಣ, ಇನ್ನು ಕೊರೋನಾ ಹೋಯಿತು ಎಂದು ಎಲ್ಲರೂ ಖುಷಿಯಿಂದ ಇರುವಾಗಲೇ ನೋಡಿ 2021ರ ಮಾರ್ಚ್ ತಿಂಗಳಲ್ಲಿ ಮತ್ತೆ ವೈರಸ್ ರೂಪಾಂತರಿಯಾಗಿ ವಕ್ಕರಿಸಿದ್ದು.
ಕೋವಿಡ್ ಎರಡನೇ ಅಲೆ (Covid second wave in India): ಕೊರೊನಾದಿಂದ ಸುಧಾರಿಸಿಕೊಳ್ಳುತ್ತಿದ್ದ ಭಾರತದಲ್ಲಿ, ಕೊರೋನಾ ಮೊದಲನೇ ಅಲೆಯ ಸಂದರ್ಭದಲ್ಲಿ ಅನಾರೋಗ್ಯ, ಲಾಕ್ ಡೌನ್ ನಿಂದ ಆರ್ಥಿಕ ದುಸ್ಥಿತಿಯಿಂದ ಕುಸಿದುಹೋಗಿದ್ದ ಜನತೆಗೆ ಏಪ್ರಿಲ್ 2021ರ ಹೊತ್ತಿಗೆ ಎರಡನೇ ಅಲೆ ಇನ್ನಿಲ್ಲದಷ್ಟು ಪೆಟ್ಟು ಕೊಟ್ಟಿತು.
ಪ್ರಪಂಚದ ಹಲವಾರು ಭಾಗಗಳಂತೆ, ಭಾರತದಲ್ಲಿ ಕೂಡ ಕೋವಿಡ್ ಸಾವು-ನೋವಿನ ಪ್ರಮಾಣ ಹೆಚ್ಚಾಗಿತ್ತು. ಪ್ರಕರಣಗಳು ಮತ್ತು ಸಾವುಗಳ ಭಾರೀ ಉಲ್ಬಣವನ್ನು ಅನುಭವಿಸುತ್ತಿದೆ. USA ಮತ್ತು Brazil ನಂತರ ಎರಡನೇ ಅಲೆ ತೀವ್ರವಾಗಿರುವ ದೇಶಗಳಲ್ಲಿ ಭಾರತ ಪ್ರಪಂಚದಲ್ಲಿ ಮೂರನೇ ಸ್ಥಾನ ಹೊಂದಿತು. ಮಾರ್ಚ್ 2021 ರ ಮಧ್ಯದಿಂದ, ಎರಡನೇ ಅಲೆ ಪ್ರಾರಂಭವಾಗಿ ಏಪ್ರಿಲ್ 09 ರಂದು, ಭಾರತದಲ್ಲಿ ಅತಿ ಹೆಚ್ಚು ಪ್ರಕರಣಗಳು 1 ಲಕ್ಷದ 44,829 ವರದಿಯಾದವು. ಮಹಾರಾಷ್ಟ್ರ, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಆಂಧ್ರಪ್ರದೇಶ, ದೆಹಲಿ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದ ಪ್ರಮುಖ ಕೊರೋನಾ ಪೀಡಿತ ರಾಜ್ಯಗಳೆನಿಸಿದವು.
ಏಪ್ರಿಲ್ 2021 ರ ಆರಂಭದ ವೇಳೆಗೆ, ಭಾರತದಲ್ಲಿ ಕೋವಿಡ್ ಎರಡನೇ ಅಲೆ ಉತ್ತುಂಗಕ್ಕೆ ಏರಿತು. 2021ರ ಏಪ್ರಿಲ್ 9 ರಂದು, ಭಾರತದಲ್ಲಿ 1 ಮಿಲಿಯನ್ ಸಕ್ರಿಯ ಪ್ರಕರಣಗಳನ್ನು ಮೀರಿತು. ಏಪ್ರಿಲ್ 12 ರ ಹೊತ್ತಿಗೆ, ಭಾರತವು ಬ್ರೆಜಿಲ್ ಅನ್ನು ಹಿಂದಿಕ್ಕಿತು. ಪ್ರಪಂಚದಾದ್ಯಂತ ಏಪ್ರಿಲ್ ಅಂತ್ಯದ ವೇಳೆಗೆ ಕೊರೋನಾ ಎರಡನೇ ಅಲೆ ಮಿತಿಮೀರಿದಾಗ ಭಾರತವು 2.5 ಮಿಲಿಯನ್ ಸಕ್ರಿಯ ಪ್ರಕರಣಗಳನ್ನು ಹೊಂದಿತು. ಸರಾಸರಿ 3 ಲಕ್ಷ ಹೊಸ ಪ್ರಕರಣಗಳು ಮತ್ತು ದಿನಕ್ಕೆ 2 ಸಾವಿರ ಸಾವುಗಳನ್ನು ವರದಿಯಾಗುತ್ತಿದ್ದವು. ಕಳೆದ ವರ್ಷ 2021ರ ಏಪ್ರಿಲ್ 30 ರಂದು, ಭಾರತದಲ್ಲಿ ಒಂದೇ ದಿನದಲ್ಲಿ 4 ಲಕ್ಷ ಹೊಸ ಕೋವಿಡ್ ಪ್ರಕರಣಗಳು ಮತ್ತು 3 ಸಾವಿರದ 500ಕ್ಕೂ ಹೆಚ್ಚು ಸಾವುಗಳು ಸಂಭವಿಸಿದವು.
ಡೆಲ್ಟಾ ರೂಪಾಂತರಿ: ಕೋವಿಡ್ ಎರಡನೇ ಅಲೆಯ ರೂಪಾಂತರಿಯನ್ನು ಡೆಲ್ಟಾ ಎಂದು ವಿಶ್ವ ಆರೋಗ್ಯ ಸಂಸ್ಥೆ ಗುರುತಿಸಿತು. ಇದು ಮೊದಲಿಗೆ ಪತ್ತೆಯಾಗಿದ್ದು ಭಾರತದಲ್ಲಿ. ಕೊರೊನಾವೈರಸ್ ಮಾರಣಾಂತಿಕ ಎರಡನೇ ಅಲೆಯು ಜಾಗತಿಕವಾಗಿ ಸಾಕಷ್ಟು ಹಾನಿಯನ್ನುಂಟುಮಾಡಿದರೂ ಮುಖ್ಯವಾಗಿ ತೀವ್ರ ಹಾನಿಮಾಡಿದ್ದು ಭಾರತದಲ್ಲಿ.
ಕೋವಿಡ್ ಎರಡನೇ ಅಲೆ ಭಾರತದ ಮೇಲೆ ಎಷ್ಟು ಪರಿಣಾಮ ಬೀರಿತು ಎಂದರೆ ಮೇ 18, 2021ರ ಹೊತ್ತಿಗೆ ದೇಶದಲ್ಲಿ 25 ಕೋಟಿ 38 ಲಕ್ಷದ 5 ಸಾವಿರದ 043 ಜನರಿಗೆ ಸೋಂಕು ತಗುಲಿ 2 ಲಕ್ಷದ 80 ಸಾವಿರದ 683 ಮುಗ್ಧ ಜೀವಗಳನ್ನು ಬಲಿ ತೆಗೆದುಕೊಂಡಿತು. ಕಳೆದ 100 ವರ್ಷಗಳ ನಂತರ ದೇಶದ ಮೇಲೆ ಪರಿಣಾಮ ಬೀರಿದ ಎರಡನೇ ಅತ್ಯಂತ ಕೆಟ್ಟ ಸಾಂಕ್ರಾಮಿಕ ರೋಗ ಎಂದು ಪರಿಗಣಿಸಲಾಯಿತು.
ಮಾರ್ಚ್ 2021 ರಲ್ಲಿ ಪ್ರಾರಂಭವಾದ ಎರಡನೇ ಅಲೆಯು ಮೊದಲನೆಯದಕ್ಕಿಂತ ಹೆಚ್ಚು ವಿನಾಶಕಾರಿಯಾಗಿತ್ತು. ದೇಶದ ವೈದ್ಯಕೀಯ, ಆರೋಗ್ಯ ವ್ಯವಸ್ಥೆ ಮೇಲೆ ಪರಿಣಾಮ ಬೀರಿತು. ಹಲವು ರಾಜ್ಯಗಳಲ್ಲಿ, ನಗರಗಳಲ್ಲಿ ಲಸಿಕೆಗಳು, ಆಸ್ಪತ್ರೆಯ ಹಾಸಿಗೆಗಳು, ಆಮ್ಲಜನಕ ಸಿಲಿಂಡರ್ ಮತ್ತು ಇತರ ವೈದ್ಯಕೀಯ ಸರಬರಾಜುಗಳ ಕೊರತೆಯುಂಟಾಯಿತು.
1947ರ ಇಬ್ಭಾಗದ ನಂತರ ಅತಿ ಕೆಟ್ಟ ಪರಿಸ್ಥಿತಿ: ಜೂನ್ 2021 ರ ಅಂತ್ಯದ ವೇಳೆಗೆ ಭಾರತದ ಅಧಿಕೃತ ಕೋವಿಡ್-19 ಸಾವಿನ ಸಂಖ್ಯೆ 4 ಲಕ್ಷ ಆಗಿತ್ತು. ಪರಿಸ್ಥಿತಿ ಅತ್ಯಂತ ದುರಂತವಾಗಿ ಕೆಟ್ಟದಾಗಿದೆ ಎಂದು ಸೆಂಟರ್ ಫಾರ್ ಗ್ಲೋಬಲ್ ಡೆವಲಪ್ಮೆಂಟ್ ಸಿದ್ಧಪಡಿಸಿದ ವರದಿಯು ಹೇಳುತ್ತದೆ. COVID-19 ಸಾಂಕ್ರಾಮಿಕದ ಎರಡನೇ ಅಲೆಯು 1947ರ ವಿಭಜನೆ ನಂತರ ಅತ್ಯಂತ ಕೆಟ್ಟ ದುರಂತವಾಗಿದೆ ಎಂದು ಹೇಳಿದೆ.
ಭಾರತದಲ್ಲಿ ಕೋವಿಡ್ -19ನ ಮೊದಲ ಅಲೆಯು ನಿರ್ದಿಷ್ಟ ಸಮಯ ಮತ್ತು ಸ್ಥಳದಲ್ಲಿ ಹರಡಿದರೆ ಎರಡನೇ ಅಲೆಯು ಹಠಾತ್ ಏರಿಕೆಯಾಗಿ ನಿರ್ದಿಷ್ಟ ಸ್ಥಳಕ್ಕಿಂತ ಭಿನ್ನವಾಗಿ ಹರಡಿತು. ಮೊದಲ ಅಲೆಯ ಸಮಯದಲ್ಲಿ ಜನರ ಮರಣ ಸಂಖ್ಯೆ ಮಧ್ಯಮವಾಗಿ ಕಾಣಿಸಿಕೊಂಡಿದ್ದರೂ ಆ ಅವಧಿಯಲ್ಲಿ ಸುಮಾರು 2 ಮಿಲಿಯನ್ ಜನರು ಮೃತಪಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ.
ಕೋವಿಡ್ ಎರಡನೇ ಅಲೆಯಲ್ಲಿ ಕಳೆದ ವರ್ಷ ಜುಲೈ ಮಧ್ಯಭಾಗದ ಹೊತ್ತಿಗೆ ಭಾರತದಲ್ಲಿ 2.5 ಲಕ್ಷಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಮೊದಲ ಅಲೆಗಿಂತ 1 ಲಕ್ಷ ಹೆಚ್ಚು ಮಂದಿ ಮೃತಪಟ್ಟಿದ್ದರು. 2021ರ ಮಾರ್ಚ್ ಮೊದಲು ಮೊದಲ ಅಲೆಯಲ್ಲಿ ಭಾರತದಲ್ಲಿ ಕೋವಿಡ್ ಗೆ ಮೃತಪಟ್ಟವರ ಸಂಖ್ಯೆ 1.57 ಲಕ್ಷ.
2020ರಲ್ಲಿ ಸಾಂಕ್ರಾಮಿಕ ರೋಗ ಹರಡಿದ ನಂತರ ಭಾರತವು 30.45 ಮಿಲಿಯನ್ ಪ್ರಕರಣಗಳನ್ನು ಹೊಂದಿದರೆ, 33 ಮಿಲಿಯನ್ ಪ್ರಕರಣಗಳನ್ನು ಹೊಂದಿದ್ದ ಅಮೆರಿಕ ನಂತರ ಎರಡನೇ ಅತಿ ಹೆಚ್ಚು ಪೀಡಿತ ದೇಶವಾಗಿದೆ.
ಅನ್ ಲಾಕ್ 2020: 2020ರ ಮೇ 4ರಿಂದ ಗೃಹ ವ್ಯವಹಾರಗಳ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ ಎಲ್ಲಾ ವಲಯಗಳಲ್ಲಿ ಹಲವಾರು ಸಡಿಲಿಕೆಗಳೊಂದಿಗೆ ಲಾಕ್ಡೌನ್ ಸರಾಗಗೊಳಿಸುತ್ತಾ ಹೋಗಲಾಯಿತು. ಪ್ರತಿ ವಲಯದಲ್ಲಿ ಚಟುವಟಿಕೆಗಳನ್ನು ಜುಲೈ 2020ರಲ್ಲಿ ಅನ್ಲಾಕ್ 2.0 ನ ಭಾಗವಾಗಿ, ಶಿಕ್ಷಣ ಸಂಸ್ಥೆಗಳು, ಅಂತರರಾಷ್ಟ್ರೀಯ ವಿಮಾನ ಪ್ರಯಾಣ, ಮನರಂಜನಾ ಸ್ಥಳಗಳು (ಈಜುಕೊಳಗಳು, ಜಿಮ್ನಾಷಿಯಂಗಳು, ಥಿಯೇಟರ್& ಮನರಂಜನಾ ಉದ್ಯಾನವನಗಳು, ಬಾರ್, ಸಭಾಂಗಣಗಳು ಮತ್ತು ಅಸೆಂಬ್ಲಿ ಹಾಲ್) ಮತ್ತು ದೊಡ್ಡದನ್ನು ಹೊರತುಪಡಿಸಿ ಹೆಚ್ಚಿನ ಚಟುವಟಿಕೆಗಳನ್ನು ಕಂಟೈನ್ಮೆಂಟ್ ವಲಯಗಳ ಹೊರಗೆ ಅನುಮತಿ ನೀಡಲಾಯಿತು.
ಲಾಕ್ ಡೌನ್ 2021: ಆಗಲೇ ಹೇಳಿದಂತೆ ಮಾರ್ಚ್ 2021ರ ಹೊತ್ತಿಗೆ ಭಾರತದಲ್ಲಿ ಕೋವಿಡ್ ಎರಡನೇ ಅಲೆ ಸೃಷ್ಟಿಯಾಗಿ ಏಪ್ರಿಲ್ ಹೊತ್ತಿಗೆ ಉತ್ತುಂಗಕ್ಕೆ ಏರಿತ್ತು. ಕೋವಿಡ್ ಒಂದನೇ ಅಲೆ ಕಡಿಮೆಯಾಯಿತೆಂದು ಜನರು ಜಾಗ್ರತೆಯಿಲ್ಲದೆ ಸುತ್ತಾಡಿದ್ದು, ಮಾಸ್ಕ್ ಹಾಕದೆ ಓಡಾಡಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇದ್ದದ್ದು, ರಾಜಕೀಯ ಪಕ್ಷಗಳ ಪ್ರಚಾರ, ರ್ಯಾಲಿಗಳು ಎಲ್ಲವೂ ಕೋವಿಡ್ ಹೆಚ್ಚಳಕ್ಕೆ ಕಾರಣವಾಗಿತ್ತು.
ಕೇಂದ್ರ ಸರ್ಕಾರ ಎರಡನೇ ಅಲೆ ಸಂದರ್ಭದಲ್ಲಿ ಆಯಾ ರಾಜ್ಯಗಳ ಪರಿಸ್ಥಿತಿ, ಸ್ಥಿತಿಗತಿ ನೋಡಿಕೊಂಡು ರಾಜ್ಯಮಟ್ಟದಲ್ಲಿ ಲಾಕ್ ಡೌನ್ ಮಾಡುವಂತೆ ಸೂಚಿಸಿತು. ಮಹಾರಾಷ್ಟ್ರದಲ್ಲಿ 2021ರ ಏಪ್ರಿಲ್ ನಿಂದ ಜೂನ್ ವರೆಗೆ 4 ಹಂತಗಳಲ್ಲಿ ಲಾಕ್ ಡೌನ್ ಹೇರಲಾಗಿತ್ತು.
ತಮಿಳುನಾಡು, ಕರ್ನಾಟಕ, ಕೇರಳ, ರಾಜಸ್ಥಾನ, ಬಿಹಾರ, ದೆಹಲಿ, ಮಧ್ಯಪ್ರದೇಶ, ಉತ್ತರ ಪ್ರದೇಶ, ಹರಿಯಾಣ, ಒಡಿಶಾ, ಜಾರ್ಖಂಡ್, ಛತ್ತೀಸ್ಗಢ, ಜಮ್ಮು-ಕಾಶ್ಮೀರ, ಲಡಾಖ್, ಗೋವಾ, ಮಿಜೋರಾಂ, ಮೇಘಾಲಯ, ಪಶ್ಚಿಮ ಬಂಗಾಳ, ಉತ್ತರಾಖಂಡ, ಪುದುಚೇರಿಯಂತಹ ಹಲವಾರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು , ತೆಲಂಗಾಣ, ಸಿಕ್ಕಿಂ ಮತ್ತು ಹಿಮಾಚಲ ಪ್ರದೇಶ ಸಂಪೂರ್ಣ ಲಾಕ್ ಡೌನ್ ವಿಧಿಸಿದರೆ ಪಂಜಾಬ್, ಚಂಡೀಗಢ, ಗುಜರಾತ್, ಆಂಧ್ರಪ್ರದೇಶ, ಅಸ್ಸಾಂ, ಅರುಣಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್ ಮುಂತಾದ ಕೆಲವು ಕಡೆಗಳಲ್ಲಿ ಭಾಗಶಃ ಲಾಕ್ಡೌನ್ ಮತ್ತು ಪ್ರಮುಖ ನಿರ್ಬಂಧಗಳನ್ನು ವಿಧಿಸಲಾಯಿತು. 15 ಜೂನ್ 2021 ರಿಂದ, ಅನೇಕ ರಾಜ್ಯಗಳು ಲಾಕ್ಡೌನ್ ನಿರ್ಬಂಧಗಳನ್ನು ತೆಗೆದುಹಾಕಲು ಪ್ರಾರಂಭಿಸಿದವು.
ಲಾಕ್ ಡೌನ್ ಪರಿಣಾಮ: ಲಾಕ್ ಡೌನ್ ನಂತರ ಹಲವರು ನಿರುದ್ಯೋಗಿಗಳಾದರು. ಸಾವಿರಾರು ಜನರು ನಗರಗಳಿಂದ ವಲಸೆ ಹೋದರು. ಲಾಕ್ಡೌನಿಂದ ಹಸಿವು, ಆತ್ಮಹತ್ಯೆಗಳು, ರಸ್ತೆ ಮತ್ತು ರೈಲು ಅಪಘಾತಗಳು, ಪೋಲೀಸರ ದೌರ್ಜನ್ಯ, ವೈದ್ಯಕೀಯ ಸೌಲಭ್ಯದ ಕೊರತೆ ಹೀಗೆ ದೇಶದ ಜನತೆ ಸಾಕಷ್ಟು ಕಷ್ಟ-ನಷ್ಟ ಅನುಭವಿಸುವಂತಾಯಿತು. ದೇಶದ ಅರ್ಥವ್ಯವಸ್ಥೆಯೇ ಕುಸಿದುಹೋಯಿತು.