2022 ಹಿನ್ನೋಟ: ಸ್ಯಾಂಡಲ್ ವುಡ್ ನಲ್ಲಿ ಗೆದ್ದವರಾರು, ಬಿದ್ದವರಾರು? ಯಾವ್ಯಾವ ಚಿತ್ರ ಎಷ್ಟು ಗಳಿಕೆ

ಎರಡು ವರ್ಷಗಳ ಕೊರೋನಾದಿಂದ ಸಂಕಷ್ಟಕ್ಕೆ ಸಿಲುಕಿದ್ದ ಕನ್ನಡ ಚಿತ್ರರಂಗಕ್ಕೆ 2022 ವರ್ಷ ತುಸು ಆಶಾದಾಯಕ ವರ್ಷವಾಗಿತ್ತು. ಕೆಜಿಎಫ್-2, ಕಾಂತಾರ, ಜೇಮ್ಸ್, ವಿಕ್ರಾಂತ್ ರೋಣ, ಚಾರ್ಲಿ -777 ಚಿತ್ರಗಳು ಗಲ್ಲಾ ಪೆಟ್ಟಿಗೆಯಲ್ಲಿ ಬಾರಿ ಸದ್ದು ಮಾಡಿದ ಬೆನ್ನಲ್ಲೆ ಹೊಸಬರು ಮತ್ತು ಹಳಬರ ಚಿತ್ರ ಸೇರಿ ಇನ್ನೂರಕ್ಕೂ ಅಧಿಕ ಚಿತ್ರಗಳು ಬಿಡುಗಡೆಯಾಗಿ  ಗಮನ ಸೆಳೆದಿವೆ.
2022ರಲ್ಲಿ ಸೂಪರ್ ಹಿಟ್ ಚಿತ್ರಗಳ ಸಾಂದರ್ಭಿಕ ಚಿತ್ರ
2022ರಲ್ಲಿ ಸೂಪರ್ ಹಿಟ್ ಚಿತ್ರಗಳ ಸಾಂದರ್ಭಿಕ ಚಿತ್ರ

ಎರಡು ವರ್ಷಗಳ ಕೊರೋನಾದಿಂದ ಸಂಕಷ್ಟಕ್ಕೆ ಸಿಲುಕಿದ್ದ ಕನ್ನಡ ಚಿತ್ರರಂಗಕ್ಕೆ 2022 ವರ್ಷ ತುಸು ಆಶಾದಾಯಕ ವರ್ಷವಾಗಿತ್ತು. ಅನೇಕ ವರ್ಷಗಳ ಕಾಲ ಭಾರತೀಯ ಚಿತ್ರರಂಗದಲ್ಲಿ ಪ್ರತ್ಯೇಕಿಸಲಾಗಿದ್ದ ಸ್ಯಾಂಡಲ್ ವುಡ್ ಮುನ್ನಲೆಗೆ ಬರುವ ಮೂಲಕ ಇಡೀ ಭಾರತೀಯ ಚಿತ್ರರಂಗವನ್ನೇ ತನ್ನತ್ತ, ಸೆಳೆಯುವಂತೆ ಮಾಡಿತು. ಇದಕ್ಕೆ ಕೆಜಿ ಎಫ್ ಚಾಪ್ಟರ್ 2, ಕಾಂತಾರ ಯಶಸ್ಸು ಕಾರಣ.

ಕೆಜಿಎಫ್-2, ಕಾಂತಾರ, ವಿಕ್ರಾಂತ್ ರೋಣ, ಚಾರ್ಲಿ -777, ಜೇಮ್ಸ್ ಚಿತ್ರಗಳು ಗಲ್ಲಾ ಪೆಟ್ಟಿಗೆಯಲ್ಲಿ ಬಾರಿ ಸದ್ದು ಮಾಡಿದ ಬೆನ್ನಲ್ಲೆ ಹೊಸಬರು ಮತ್ತು ಹಳಬರ ಚಿತ್ರ ಸೇರಿ ಇನ್ನೂರಕ್ಕೂ ಅಧಿಕ ಚಿತ್ರಗಳು ಬಿಡುಗಡೆಯಾಗಿ  ಗಮನ ಸೆಳೆದಿವೆ. ಈ ಪೈಕಿ ಹೊಸಬರ ಸಿನಿಮಾಗಳು ಇವೆ ಎನ್ನುವುದು ಕೂಡ ಗಮನಾರ್ಹ.

2022ನೇ ವರ್ಷದ ಆರಂಭದಲ್ಲೇ  ಚಿತ್ರಮಂದಿರಕ್ಕೆ ಬಂದ ಮೊದಲ ಸಿನಿಮಾ ಲೂಸ್ ಮಾದ ಯೋಗಿ ಅಭಿನಯದ 'ಒಂಬತ್ತನೇ ದಿಕ್ಕು' ಅಂದುಕೊಂಡಂತೆ ಪ್ರೇಕ್ಷಕರನ್ನ ರಂಜಿಸಲಿಲ್ಲ. ನಂತರ ಬಂದ ಸ್ಫೂಕೀ ಕಾಲೇಜ್ ಯಾರಿಗೂ ಗೊತ್ತೇ ಇಲ್ಲ.

ಇನ್ನೂ ಫೆಬ್ರವರಿಯಲ್ಲಿ ಒನ್ ಕಟ್ ಟೂ ಕಟ್, ಹಳ್ಳಿ ಹೈಕ್ಳ ಪ್ಯಾಟೆ ಲೈಫು, ಮಹಾಪುರುಷ, ಒಪ್ಪಂದ, ಲವ್ ಮಾಕಟೇಲ್ 2, ರೌಡಿ ಬೇಬಿ, ಫ್ಯಾಮಿಲಿ ಪ್ಯಾಕ್ಯ್, ಮಹಾರುದ್ರಂ, ಗಿಲ್ಕಿ, ಭಾವಚಿತ್ರ, ಗರುಡಾಕ್ಷ, ಬಹುಕೃತ ವೇಷಂ, ವಿನೋದ್ ಪ್ರಭಾಕರ್, ಅಮಿತ್ ರಂಗನಾಥ್ ಅಭಿನಯದ ವರದ, ಧನವೀರ್ , ಶ್ರೀಲೀಲಾ ಜೋಡಿಯ ಬೈಟು ಲವ್ , ಆದಿತಿ ಪ್ರಭುದೇವ ಅಭಿಯನದ ಓಲ್ಡ್ ಮಾಂಕ್ , ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಚಿತ್ರಗಳು ಬಿಡುಗಡೆಯಾದವು. ಈ ಪೈಕಿ ಲವ್ ಮಾಕ್ ಟೈಲ್ ಸಿಕ್ವೇಲ್ ಪ್ರೇಕ್ಷಕರಿಗೆ ಇಷ್ಟ ಆಯಿತು. ಬಾಕ್ಸ್ ಆಫೀಸ್​​ನಲ್ಲಿ 15 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಗೆಲುವಿನ ನಗೆ ಬೀರಿತ್ತು.

ಜೇಮ್ಸ್: ಮಾರ್ಚ್ ತಿಂಗಳಲ್ಲಿ  ಕನ್ನೇರಿ, ಯೆಲ್ಲೋ ಬೋರ್ಡ್,  ಶುಗರ್ ಫ್ಯಾಕ್ಟರಿ, ಮೋಕ್ಷ, ಡಿಯರ್ ಸತ್ಯ,ಅಬ್ಬಬ್ಬ, ರಾಧೆ ಶ್ಯಾಮ್, (ಆರ್.ಆರ್.ಆರ್) ಜೇಮ್ಸ್  ಚಿತ್ರಗಳು ತೆರೆ ಕಂಡವು. ಈ ಪೈಕಿ ದಿವಂಗತ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಸಿನಿಮಾ ವಿಶ್ವದಾದ್ಯಂತ ಬಿಡುಗಡೆ ಆಗಿ ನಾಲ್ಕೇ ದಿನಗಳಲ್ಲಿ 100 ಕೋಟಿ ರೂ ಕಲೆಕ್ಷನ್ ಮಾಡಿದ ಹೆಗ್ಗಳಿಕೆಗೆ ಪಾತ್ರವಾಯಿತು.

ಕೆಜಿಎಫ್ ಚಾಪ್ಟರ್ -2: ಏಫ್ರಿಲ್ ನಲ್ಲಿ ತೆರೆಗೆ ಬಂದ ಉಪೇಂದ್ರ ಅಭಿನಯದ ಹೋಮ್ ಮಿನಿಸ್ಟರ್ ನಿರೀಕ್ಷೆ ತಲುಪಲಿಲ್ಲ. ಡಾರ್ಲಿಂಗ್ ಕೃಷ್ಣ ಅಭಿನಯದ ಲೋಕಲ್ ಟ್ರೈನ್, ಸಂಚಾರಿ ವಿಜಯ್ ಅಭಿನಯದ ತಲೆದಂಡ, ಅಜಯ್ ರಾವ್ ಅಭಿಯನದ ಶೋಕಿವಾಲ ಗಮನ ಸೆಳೆಯಲಿಲ್ಲ.  ಏಪ್ರಿಲ್ 14 ರಂದು ವಿಶ್ವದಾದ್ಯಂತ ತೆರೆಗೆ ಅಪ್ಪಳಿಸಿದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್: ಚಾಪ್ಟರ್ 2 ಈ ಚಿತ್ರ ಎಲ್ಲೆಡೆ ಸದ್ದು ಮಾಡಿ 1300 ಕೋಟಿ ರೂ ಬಾಚಿಕೊಂಡಿತು.ಕೆಜಿಎಫ್ ಚಿತ್ರದ ನಂತರ ಇತ್ತೀಚೆಗೆ ಕನ್ನಡದಲ್ಲಿ ತಯಾರಾಗುತ್ತಿರುವ  ಎಲ್ಲಾ ಚಿತ್ರಗಳು ಪ್ಯಾನ್ ಇಂಡಿಯಾ ಎಂದು ಹೇಳಿಕೊಳ್ಳುತ್ತಿವೆ. 

ಚಾರ್ಲಿ 777: ರಕ್ಷಿತ್ ಶೆಟ್ಟಿ ಮತ್ತು ನಾಯಿಯ ಕಥೆ ಆಧರಿಸಿ ಬಂದ ಚಾರ್ಲಿ 777 ಸಿನಿಮಾ ದೊಡ್ಡ 150 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ಉಳಿದಂತೆ  ಬೈರಾಗಿ, ರವಿ ಬೋಪಣ್ಣ, ಪೆಟ್ರೋಮ್ಯಾಕ್ಸ್, ತೋತಾಪುರಿ, ಮಾನ್ಸೂನ್ ರಾಗ ಸಿನಿಮಾಗಳು ಅಂದುಕೊಂಡ ಮಟ್ಟಕ್ಕೆ ಗೆಲುವು ಪಡೆಯಲಿಲ್ಲ.

ವಿಕ್ರಾಂತ್ ರೋಣ: ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡ ಸದ್ದು ಮಾಡುವ ಮೂಲಕ ಗಲ್ಲಾ ಪೆಟ್ಟಿಗೆಯಲ್ಲಿ 200 ಕೋಟಿ ಕಲೆಕ್ಷನ್ ಮಾಡಿತ್ತು. ಗಾಳಿಪಟ 2 ಸಿನಿಮಾ ಒಂದು ಮಟ್ಟಿಗೆ ಪ್ರೇಕ್ಷಕರಿಗೆ ಇಷ್ಟವಾಗಿ ನಿರ್ಮಾಪಕರಿಗೆ ಲಾಭ ತಂದುಕೊಟ್ಟಿತು.

ಕಾಂತಾರ ಈ ವರ್ಷದ ಸೂಪರ್​ ಹಿಟ್​ ಸಿನಿಮಾ:ಗುರು ಶಿಷ್ಯರು ಹಾಗು ಲವ್ 360 ಡಿಗ್ರಿ ಚಿತ್ರ ಕೊಂಚ ಹಿಂದೆ ಸರಿಯಿತು. ಕಾಂತಾರ ಈ ವರ್ಷದ ಸೂಪರ್​ ಹಿಟ್​ ಸಿನಿಮಾ. 400 ಕೋಟಿ ರೂಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಹಲವು ದಾಖಲೆಗಳನ್ನು ಬರೆಯಿತು.ಬಹಳ ನಿರೀಕ್ಷೆ ಹುಟ್ಟಿಸಿದ್ದ ಹೆಡ್ ಬುಷ್‌ ಹಿಟ್ ಆಗುವ ಬದಲು ವಿವಾದದಿಂದಲೇ ಹೆಚ್ಚು ಸದ್ದು ಮಾಡಿತ್ತು

ಪುನೀತ್ ರಾಜ್‌ಕುಮಾರ್ ಅವರ ಕೊನೆಯ ಚಿತ್ರ ಗಂಧದ ಗುಡಿ ಉತ್ತಮ ಪ್ರದರ್ಶನ ಕಂಡು 25 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ದೊಡ್ಡ ಮಟ್ಟದ ಸಕ್ಸಸ್ ಕಂಡಿತ್ತು.ರಾಜಕಾರಣಿ ಜಮೀರ್​ ಪುತ್ರ ಝೈದ್ ಖಾನ್ ಹೀರೋ ಆಗಿದ್ದ ಮೊದಲ ಸಿನಿಮಾ ಬನಾರಸ್ ತೆರೆಕಂಡು ಮೆಚ್ಚುಗೆ ಪಡೆದುಕೊಂಡಿತು.ಗುರು ಶಿಷ್ಯರು ಕಂಬ್ಳಿಹುಳ, ಖಾಸಗಿ ಪುಟಗಳು, ಯೆಲ್ಲೋ ಗ್ಯಾಂಗ್ಸ್, ಧರಣಿ ಮಂಡಲ ಮಧ್ಯದೊಳಗೆ ಮುಂತಾದದ ಹೊಸಬರ ಸಿನಿಮಾಗಳು ಉತ್ತಮ ಪ್ರತಿಕ್ರಿಯೆ ಪಡೆಯಿತಾದರೂ ಕಲೆಕ್ಷನ್​ ವಿಚಾರ ಹೇಳುವಷ್ಟೇನಿಲ್ಲ.

ದಿಲ್ ಪಸಂದ್, ರಾಣ, ತ್ರಿಬಲ್ ರೈಡಿಂಗ್, ತಿಮ್ಮಯ್ಯ & ತಿಮ್ಮಯ್ಯ ಸಿನಿಮಾಗಳ ಮೇಲೆ ಪ್ರೇಕ್ಷಕರು ಹೆಚ್ಚಿನ ನಿರೀಕ್ಷೆ ಇಟ್ಟಿದ್ದರು. ಆದರೆ ಈ ಸಿನಿಮಾಗಳು ದೊಡ್ಡ ಮಟ್ಟದ ಕಲೆಕ್ಷನ್ ಮಾಡಲಿಲ್ಲ.ಡಿಸೆಂಬರ್ ತಿಂಗಳಲ್ಲಿ ಅಭಿಮಾನಿಗಳ ಕುತೂಹಲಕ್ಕೆ ಕಾರಣ ಆಗಿದ್ದ ವಿಜಯಾನಂದ ಹಾಗು ಶಿವರಾಜ್ ಕುಮಾರ್ ಅಭಿನಯದ 125ನೇ ಸಿನಿಮಾ ವೇದ ಬಿಡುಗಡೆ ಆಗಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿವೆ. ಡಿಸೆಂಬರ್ 30ರಂದು ಒನ್ಸ್ ಅಪಾನ್‌ ಎ ಟೈಮ್ ಇನ್ ಜಮಾಲಿಗುಡ್ಡ, ಪದವಿ ಪೂರ್ವ, ನಾನು ಅದು ಮತ್ತು ಸರೋಜಾ ಚಿತ್ರಗಳು ಬಿಡುಗಡೆ ಆಗಲಿವೆ.


ಗಮನ ಸೆಳೆದ ಹಾಡು: ವಿಕ್ರಾಂತ್ ರೋಣ ಚಿತ್ರ  "ರಾ ರಾ ರಕ್ಕಮ್ಮ " ಚಿತ್ರದ ಗಮನ ಸೆಳೆದ ವರ್ಷದ ಹಾಡುಗಳಲ್ಲಿ ಒಂದಾಗಿದೆ. ಸುದೀಪ್ ಮತ್ತು ಬಾಲಿವುಡ್ ಬೆಡಗಿ ಜಾಕ್ವಲಿನ್ ಫರ್ನಾಂಡೀಸ್ ಹೆಜ್ಜೆ ಹಾಕಿದ ಹಾಡು ಇಡೀ ಚಿತ್ರವನ್ನು ಬೇರೊಂದು ಮಟ್ಟಕ್ಕೆ ತೆಗೆದುಕೊಂಡು ಹೋಗಿತ್ತು. ಹಾಡೊಂದಕ್ಕೆ ಇರುವ ಶಕ್ತಿ ಇದು. ಕಾಂತಾರ ಚಿತ್ರದ “ಸಿಂಗಾರ ಸಿರಿಯೇ” ಹಾಗು ವರಹಾ ರೂಪಂ ಬಾರಿ ಸದ್ದು ಮಾಡಿವೆ. ವೇದ ಚಿತ್ರದ ಗಿಲ್ಲಕ್ಕೊ, ಜುಂಜಪ್ಪ, ಪುಷ್ಪ ಸೇರಿದಂತೆ ಹಲವು ಹಾಡುಗಳು ಗಮನ ಸೆಳೆದಿವೆ.

ಅತಿ ಹೆಚ್ಚು ಚಿತ್ರ ಬಿಡುಗಡೆಯಾದ ನಟ: ಈ ವರ್ಷ ನಟನೊಬ್ಬನ ಅತಿ ಹೆಚ್ಚು ಚಿತ್ರಗಳು ಬಿಡುಗಡೆಯಾದ ಹಿರಿಮೆ ನಟ ಡಾಲಿ ಧನಂಜಯ ಅವರದು. ಅವರ ಬೈರಾಗಿ, ಹೆಡ್ ಬುಷ್, ತೋತಾಪುರಿ,  ಮಾನ್ಸೂನ್ ರಾಗ, ಟ್ವಿಂಟ್ವಿ ಒನ್ ಅವರ್ಸ್ ಬಿಡುಗಡೆಯಾಗಿದ್ದು ಜಮಾಲಿಗುಡ್ಡ ವರ್ಷಾಂತ್ಯಕ್ಕೆ ತೆರೆಗೆ ಬರಲಿದೆ.  ನಟನಾಗಿ ನಿರ್ಮಾಪಕನಾಗಿ ಜೊತೆಗೆ ಚಿತ್ರಸಾಹಿತಿಯಾಗಿ ಧನಂಜಯ ಗಮನ ಸೆಳೆದಿದ್ದಾರೆ. ಪ್ರತಿಭಾವಂತರಿಗೆ ಅವಕಾಶ ನೀಡುವ ಮೂಲಕ ಬಡವರ ಮಕ್ಕಳು ಬೆಳೀಬೇಕ ಕಣ್ರಯ್ಯ ಎಂದು ಅವರ ಬೆನ್ನಿಗೆ ನಿಂತಿದ್ದಾರೆ.

ಹೊಸ ಮುಖ:ಈ ವರ್ಷ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ಹೊಸ ಮುಖಗಳಲ್ಲಿ ಕನಸಿನ ರಾಣಿ ಮಾಲಾಶ್ರೀ ಅವರ ಪುತ್ರಿ ರಾಧನಾ ರಾಮ್ ಮತ್ತು ನಟ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ ಚಿತ್ರರಂಗದಲ್ಲಿ ಹವಾ ಸೃಷ್ಠಿಸಲು ಮುಂದಾಗಿದ್ದಾರೆ.
ಅದೇ ರೀತಿ ಕನ್ನಡದ ಹಲವು ನಟರು ಚಿತ್ರರಂಗದಲ್ಲಿ ಮೋಡಿ ಮಾಡಲು ಮುಂದಾಗಿದ್ದಾರೆ.

ಶತದಿನ ಆಚರಣೆ
ಕಾಂತಾರ ಚಿತ್ರ ಹೊಸ ವರ್ಷದ ಆರಂಭದಲ್ಲಿ 100 ದಿನ ಪೂರೈಸಿದ ಹಿರಿಮೆಗೆ ಪಾತ್ರವಾಗಲಿದೆ. ಇದು ಕನ್ನಡ ಮಟ್ಟಿಗೆ ಇತ್ತೀಚಿನ ದಿನಗಲ್ಲಿ ದಾಖಲೆ


ಯಾವ್ಯಾವ ಚಿತ್ರ ಎಷ್ಟು ಗಳಿಕೆ
•    ಕೆಜಿಎಫ್-2 ಚಿತ್ರ ಬಿಡುಗಡೆಯಾದ ಎಲ್ಲಾ ಭಾಷೆಗಳಲ್ಲಿ 1000 ಕ್ಕೂ ಆಧಿಕ ಕೋಟಿ ಗಳಿಕೆ ಮಾಡಿದ ಹಿರಿಮೆ ತನ್ನದಾಗಿಸಿಕೊಂಡಿದೆ. ಈ ಪೈಕಿ ಕನ್ನಡದಲ್ಲಿಯೇ 160 ಕೋಟಿಗೂ ಅಧಿಕ ಹಣ ಮಾಡಿದೆ ಎನ್ನಲಾಗಿದೆ.
•    ಕಾಂತಾರ ಚಿತ್ರ 400 ಕೋಟಿಗೂ ಹೆಚ್ಚು ಗಳಿಕೆ ಮಾಡಿದ್ದು ಕನ್ನಡದಲ್ಲಿ 170 ಕೋಟಿ ಸಂಗ್ರಹ ಮಾಡಿದೆ ಎನ್ನುತ್ತುದೆ ಗಾಂಧಿನಗರ
•    ಚಾರ್ಲಿ-777 ಚಿತ್ರ 77 ಕೋಟಿ ಸಂಗ್ರಹ
•    ವಿಕ್ರಾಂತ್ ರೋಣ- 75.49 ಕೋಟಿ ಗಳಿಕೆ
•    ಪುನೀತ್ ರಾಜ್ ಕುಮಾರ್ ಅವರ ಚಿತ್ರ ಜೇಮ್ಸ್ 67.68 ಕೋಟಿ ಸಂಗ್ರಹ ಮಾಡಿದೆ ಎನ್ನುತ್ತಿದೆ ಗಾಂಧಿನಗರದ ಮೂಲಗಳು

ನಿರೀಕ್ಷೆ ಮೂಡಿಸಿರುವ ಚಿತ್ರಗಳು

ಕ್ರಾಂತಿ: ಹೊಸ ವರ್ಷದ ಆರಂಭದಲ್ಲಿ ತೆರೆಗೆ ಬರಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ “ಕ್ರಾಂತಿ” ನಾನಾ ಕಾರಣಕ್ಕೆ ಚಿತ್ರರಂಗದಲ್ಲಿ ಕ್ರಾಂತಿಯ ಕಹಳೆ ಮೊಳಗಿಸಿದೆ. ಅಕ್ಷರ ಕ್ರಾಂತಿ ಮತ್ತು ಸರ್ಕಾರಿ ಶಾಲೆಯ ಸುತ್ತ ಸಾಗುವ ಕತೆಯ ಎಳೆಯನ್ನು ಚಿತ್ರ ಹೊಂದಿದ್ದು ಶೈಲಜಾ ನಾಗ್ ಚಿತ್ರ ನಿರ್ಮಾಣ ಮಾಡಿದ್ದಾರೆ.  ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ನಿರ್ದೇಶನ ಮಾಡಿದ್ದಾರೆ. ದರ್ಶನ್ ಜೊತೆಗೆ ರಚಿತಾ ರಾಮ್ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ.

ಕಬ್ಜ:  ಆರ್ ಚಂದ್ರು ನಿರ್ಮಾಣದಲ್ಲಿ ಮೂಡಿಬಂದಿರುವ ಅವರದೆ ನಿರ್ದೇಶನದ  ಕಬ್ಜ ಭಾರತೀಯ ಚಿತ್ರರಂಗವನ್ನು ಕಬ್ಜ ಮಾಡಿಕೊಳ್ಳಲು ಮುಂದಾಗಿದೆ. ಈಗಾಗಲೇ ಚಿತ್ರದ ಟೀಸರ್ ಮತ್ತು ಟ್ರೈಲರ್ ನಿಂದ ಸಾಕಷ್ಟು ಗಮನ ಸೆಳೆದಿದೆ.
ಭೂಗತಲೋಕದ ಕಥೆಯ ಎಳೆ ಹೊಂದಿರುವ ಚಿತ್ರದಲ್ಲಿ ಉಪೇಂದ್ರ- ಕಿಚ್ಚ ಸುದೀಪ್, ಬಾಲಿವುಡ್ ನಟಿ ಶ್ರೀಯಾ ಸರಣ್ ಸೇರಿದಂತೆ ಹಿರಿ ಕಿರಿಯ ಕಲಾವಿದರ ದೊಡ್ಡ ದಂಡು ಚಿತ್ರದಲ್ಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com