ಮುಖಪುಟ >> ವರಮಹಾಲಕ್ಷ್ಮಿ ವ್ರತ

ವರಮಹಾಲಕ್ಷ್ಮಿ ಪೂಜಾ ವಿಧಿ ವಿಧಾನ ಹೇಗೆ?

ಸುಮಂಗಲಿಯರ ಹಬ್ಬ ವರಮಹಾಲಕ್ಷ್ಮಿ ಪೂಜೆ ಮಾಡುವ ರೀತಿ ಹಾಗೂ ನಿಯಮ
Varalakshmi Vratha Pooja

ವರಮಹಾಲಕ್ಷ್ಮೀ

ವರಮಹಾಲಕ್ಷ್ಮಿ ದಿನ ಪೂಜೆ ಹೆಸರೇ ಸೂಚಿಸುವಂತೆ ಇದು ಲಕ್ಷ್ಮಿದೇವಿಯನ್ನು ಪೂಜಿಸುವ ದಿನ. ಶ್ರಾವಣ ಮಾಸದ ಶುಕ್ಷ ಪಕ್ಷದ ಶುಕ್ರವಾರನ್ನು ವರಮಹಾಲಕ್ಷ್ಮಿ ದಿನ ಎಂದು ಕರೆಯುವುದುಂಟು. ವರಮಹಾಲಕ್ಷ್ಮಿ ದಿನ ಆಚರಣೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಶ್ರೇಷ್ಠತೆ ಪಡೆದುಕೊಳ್ಳುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಪ್ರತೀಯೊಬ್ಬ ಗೃಹಿಣಿಯೂ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲು ಮುಂದಾಗುತ್ತಿದ್ದಾರೆ. ವರಮಹಾಲಕ್ಷ್ಮಿ ಹಬ್ಬ ಆಚರಣೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದ್ದು, ಆಡಂಬರವಾಗಿ ಅಲ್ಲದಿದ್ದರೂ ಚಿಕ್ಕದಾದ ಲಕ್ಷ್ಮಿ ದೇವಿಯನ್ನು ಕೂರಿಸಿ ಆಚರಣೆ ಮಾಡಲು ಜನರು ಮುಂದಾಗುತ್ತಿದ್ದಾರೆ.

ಮಾರುಕಟ್ಟೆಯಲ್ಲಿ ಅತೀ ಕಡಿಮೆ ಬೆಲೆಯಿಂದ ಹಿಡಿದು ದುಬಾರಿ ಬೆಲೆಯವರೆಗೂ ಲಕ್ಷ್ಮಿ ಕೂರಿಸುವುದಕ್ಕೆ ಬೇಕಾದ ಎಲ್ಲಾ ವಸ್ತುಗಳು ದೊರೆಯುವುದುಂಟು.ಲಕ್ಷ್ಮಿ ಕೂರಿಸುವುದು ಕೇವಲ ಇತರರು ನೋಡುವುದಕ್ಕಾಗಿ ಅಲ್ಲ. ನಮ್ಮ ಇಷ್ಟಾರ್ಥಗಳನ್ನು ಈಡೇರಿಸುವ ಸಲುವಾಗಿ. ರೀತಿನೀತಿ ನಿಯಮಗಳ ಮೂಲಕ ಲಕ್ಷ್ಮಿಪೂಜೆಯನ್ನು ಮಾಡಬೇಕು. ಪ್ರತಿಯೊಂದು ಪೂಜೆಗೂ ಒಂದಲ್ಲ ಒಂದು ರೀತಿಯ ನಿಯಮ ಹಾಗೂ ಪದ್ಧತಿ ಇರುತ್ತದೆ. ಹಾಗೆಯೇ ಲಕ್ಷ್ಮಿ ಪೂಜೆಗೂ ನಿಯಮಗಳಿದ್ದು, ಅವುಗಳನ್ನು ಪಾಲಿಸಿ ಪೂಜೆ ಮಾಡಿದರೆ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳಬಹುದು ಎಂದು ಹಿರಿಯರು ಹೇಳುತ್ತಾರೆ.

ಲಕ್ಷ್ಮಿ ಪೂಜೆ ಹೇಗೆ ಮಾಡಬೇಕು...ಅವುಗಳ ರೀತಿ ನೀತಿಗಳೇನು ಎಂಬ ಮಾಹಿತಿ ಇಲ್ಲಿದೆ.

  • ಲಕ್ಷ್ಮಿ ಪೂಜೆ ಮಾಡುವ ಹಿಂದಿನ ದಿನವೇ ಶುಭ್ರವಾಗಿ ಪೂಜೆಗೆ ಬೇಕಾದ ಎಲ್ಲಾ ಸಾಮಾಗ್ರಿಗಳನ್ನು ತಯಾರು ಮಾಡಿಟ್ಟುಕೊಳ್ಳಬೇಕು. ಉದಾಹರಣೆಗೆ: ಸೀರೆ, ಹಣ್ಣು, ಅಲಂಕಾರಿಕ ವಸ್ತು, ಶುದ್ಧ ನೀರು ಇತ್ಯಾದಿ...
  • ಲಕ್ಷ್ಮಿಯನ್ನು ಉತ್ತರಾಭಿಮುಖವಾಗಿ ಪ್ರತಿಷ್ಠಾಪಿಸುವುದಾದರೆ ಹಸಿರು ಬಣ್ಣದ ಸೀರೆಯನ್ನು ತೊಡಿಸಬೇಕು. ಕೆಂಪು ಮತ್ತು ಹಳದಿ ಹೂವುಗಳನ್ನು ಬಳಸಬೇಕು. ದೀಪವನ್ನು ತುಪ್ಪದಿಂದ ಹಚ್ಚಬೇಕು.
  • ಪೂಜೆಯ ದಿನದಂದು ಮಹಿಳೆಯರು ಸೂರ್ಯ ಹುಟ್ಟುವುದಕ್ಕೆ ಮುಂಚೆಯೇ ಎದ್ದು, ಶುದ್ಧ ನೀರಿನಿಂದ ಸ್ನಾನ ಮಾಡಬೇಕು. ಲಕ್ಷ್ಮಿ ವ್ರತ ಮಾಡುವವರೇ ಕಲಶ ಸ್ಥಾಪನೆ ಮಾಡಬೇಕು.
  • ಪೂಜಾ ಸ್ಥಳವನ್ನು ತುಂಬಿದ ಕೊಡದ ನೀರಿನಿಂದ ಶುದ್ಧ ಮಾಡಿ. ಸ್ಥಳದಲ್ಲಿ ಅಷ್ಟದಳದ ರಂಗೋಲಿ ಹಾಕಿ, ಬಾಳೆಕಂಬ, ಮಾವಿನ ಎಲೆಗಳಿಂದ ಸಿಂಗರಿಸಬೇಕು.
  • ಕಲಶಕ್ಕೆ ತುಂಬಿದ ಕೊಡದ ಶುದ್ಧ ನೀರು ಹಾಕಿ/ಶುದ್ಧ ಅಕ್ಕಿ ಹಾಕಬೇಕು. ಇದರ ಜೊತೆಗೆ ಅರಿಶಿಣದ ಕೊಂಬು, ಅಡಿಕೆ, ಬೆಳ್ಳಿ ಅಥವಾ ಯಾವುದೇ ನಾಣ್ಯ, ದ್ರಾಕ್ಷಿ, ಗೋಡಂಬಿ, ಕರ್ಜೂರ, ಬಾದಾಮಿ, ಕಲ್ಲುಸಕ್ಕರೆ ಹಾಕಬೇಕು. ನಂತರ ಒಂಬತ್ತು ಎಳೆಯ ದಾರ ತೆಗೆದುಕೊಂಡು ಇದಕ್ಕೆ ಅರಿಶಿಣ ಹಚ್ಚಿ, ಅರಿಶಿಣದ ಕೊಂಬನ್ನು ಕಟ್ಟಿ ತಾಳಿ ಮಾಡಬೇಕು. ಇದನ್ನು ಕಲಶದ ಚೊಂಬಿಗೆ ಕಟ್ಟಿದರೆ ಕಲಶ ತಯಾರಾಗುತ್ತದೆ.

ನಂತರ ಶುಭ್ರವಾಗಿ ತೊಳೆದ ತೆಂಗಿನಕಾಯಿಗೆ ಅರಿಶಿಣ ಹಚ್ಚಿಬೇಕು. ಅರಿಶಿಣ ಹಚ್ಚಿದ ತೆಂಗಿನಕಾಯಿಗೆ ಕುಂಕುಮ ಬೊಟ್ಟು ಇಡಬೇಕು. ಕಳಶದ ಬಾಯಿಗೆ ವೀಳ್ಯದೆಲೆ ಅಥವಾ ಮಾವಿನ ಎಲೆ ಇಡಬೇಕು. ನಂತರ ತಟ್ಟೆಯೊಂದಕ್ಕೆ ಅಕ್ಕಿ ಹಾಕಿ ಇದರ ಮೇಲೆ ಕಲಶವನ್ನು ಇಡಬೇಕು. ಅರಿಶಿಣವನ್ನು ಸ್ವಲ್ಪ ನೀರಿನಿಂದ ಮಿಶ್ರಣ ಮಾಡಿ ಒಂದು ನಾಣ್ಯ ತೆಗೆದುಕೊಂಡು ಅದರ ಹಿಂದೆ ಹಾಕಬೇಕು. ನಂತರ ದೇವರ ಬಳಿ ಇಚ್ಛೆಯನ್ನು ಹೇಳಿಕೊಂಡು ದೇವಿಯನ್ನು ಬೇಡಿ ಸಂಕಲ್ಪ ಮಾಡಿಕೊಳ್ಳಬೇಕು. ನಂತರ ದೇವಿಯನ್ನು ಆವಾಹನೆ ಮಾಡಬೇಕು ಅಂದರೆ ಪ್ರಾಣ ಪ್ರತಿಷ್ಠಾಪನೆ.

ಪ್ರಾಣ ಪ್ರತಿಷ್ಠಾಪನೆ....

ಇಷ್ಟಾದ ನಂತರ ಲಕ್ಷ್ಮಿ ದೇವಿಗೆ ಪ್ರಾಣಪ್ರತಿಷ್ಠಾಪನೆ ಮಾಡಬೇಕು. ಇದಕ್ಕೆ ಷೋಡಶೋಪಚಾರ ಪೂಜೆಯೆಂದು ಕರೆಯಲಾಗುತ್ತದೆ. ದೇವಯು ತನ್ನ ಎಲ್ಲ ಆಂಗಾಂಗ, ಪರಿವಾರ, ಆಯುಧ ಮತ್ತು ಶಕ್ತಿಸಹತಿವಾಗಿ ಬಂದು ಮೂರ್ತಿಯಲ್ಲಿ ಪ್ರತಿಷ್ಟಿತಳಾಬೇಕು ಮತ್ತು ನಮ್ಮ ಪೂಜೆಯನ್ನು ಸ್ವೀಕರಿಸಬೇಕು ಎಂದು ದೇವತೆಯಲ್ಲಿ ಸಂಪೂರ್ಣ ಶರಣಾಗತಭಾವದಿಂದ ಮಾಡುವ ಪ್ರಾರ್ಥನೆಯೆ ಪ್ರಾಣಪ್ರತಿಪ್ಠಾಪನೆ ಎಂದು ಕರೆಯಲಾಗುತ್ತದೆ.

  • ಪ್ರಣಪ್ರತಿಷ್ಠಾಪನೆ ಸಮಯದಲ್ಲಿ ಕೈಯಲ್ಲಿ ಗಂಧಾಕ್ಷತೆ, ತುಳಸೀದಳ ಅಥವಾ ಹೂವುಗಳನ್ನು ತೆಗೆದುಕೊಳ್ಳಬೇಕು. ದೇವಿಯ ಸಹಸ್ರ ನಾಮವನ್ನು ಹೇಳಿ ಕೊನೆಗೆ ನಮಃ ಎಂದು ಹೇಳಿ ಗಂಧಾಕ್ಷತೆ, ತುಳಸೀದಳ ಅಥವಾ ಹೂವನ್ನು ದೇವತೆಗೆ ಅರ್ಪಿಸಿ ನಮಸ್ಕರಿಸಬೇಕು.
  • ಪ್ರಾಣ ಪ್ರತಿಷ್ಟಾಪನೆ ಬಳಿಕ ನಂತರ ಲಕ್ಷ್ಮಿ ದೇವಿಗೆ ಸೀರೆಯನ್ನು ಉಡಿಸಿ, ಅಲಂಕಾರ ಮಾಡಬೇಕು.
ಅಲಂಕಾರವಾದ ಬಳಿಕ ಪೂಜೆಗೆ ಯಾವುದೇ ವಿಘ್ನಗಳು ಬಾರದಿರುವುದಕ್ಕೆ, ನಮ್ಮ ಕಾರ್ಯವನ್ನು ಸಿದ್ಧಿ ಮಾಡು ಎಂದು ವಿಘ್ನೇಶ್ವರನ ಬಳಿ ಪ್ರಾರ್ಥಿಸಬೇಕು.

ಗಣಪತಿಗೆ ಪೂಜೆ ಮಾಡುವಾಗ ಅಷ್ಟನಾಮ ಸಹಸ್ರ ನಾಮಾವಳಿಯನ್ನು ಮಾಡಬೇಕು. ಹೇಳಲು ಸಾಧ್ಯವಾಗದಿದ್ದರೆ ಮಾರುಕಟ್ಟೆಯಲ್ಲಿ ಗಣಪತಿಯ ಸಹಸ್ರ ನಾಮಾವಳಿಯ ಸಿಡಿಗಳು ಲಭ್ಯವಿದೆ ಇದನ್ನು ಹಾಕಬಹುದು.

ಗಣಪತಿ ಪೂಜೆಯ ಬಳಿಕ ಲಕ್ಷ್ಮಿಗೆ ಇಷ್ಟವಾಗುವ ಹಣ್ಣು, ತಿಂಡಿ, ತಿನಿಸುಗಳನ್ನು ದೇವಿಯ ಮುಂದೆ ಇಡಬೇಕು. ಮತ್ತೊಂದು ತಟ್ಟೆಯಲ್ಲಿ ಚಿಕ್ಕ ಕಳಶ, ಅರಿಶಿನದ ಕೊಂಬು, ಮರದ ಜೊತೆ / ಬಾಗಿನ, ಹಸಿರು ಬಳೆ, ಬಳೆ ಬಿಚ್ಚೋಲೆ, ಕನ್ನಡಿ, ಕಪ್ಪು, ಬಾಚಣಿಗೆ, ರವಿಕೆ ಬಟ್ಟೆ (ಬಾಗಿನದ ಸಾಮಾನು ಎಂದರೆ ಇದೀಗ ಮಾರುಕಟ್ಟೆಯ ಅಂಗಡಿಗಳಲ್ಲಿ ಸಿಗುತ್ತದೆ) ಇಡಬೇಕು.

ಲಕ್ಷ್ಮಿ ಪೂಜೆ ಮಾಡುವಾಗ ಪೂಜೆಯ ತಟ್ಟೆಯೊಂದರಲ್ಲಿ 9ಸುತ್ತಿನ ದಾರ ಇಟ್ಟಿರಬೇಕು. ಪೂಜೆಯಾದ ಬಳಿಕ ಈ ದಾರವನ್ನು ಮನೆಯಲ್ಲಿರುವವರು ತಮ್ಮ ಕೈಗಳಿಗೆ ಕಟ್ಟಿಕೊಳ್ಳಬೇಕು.

ಲಕ್ಷ್ಮಿ ಪೂಜೆ ಮಾಡಿದ ಬಳಿಕ ಸುಮಂಗಲಿಯರನ್ನು ಮನೆಗೆ ಕರೆದು ದೇವಿಯ ಕಥಾ ಶ್ರವಣ ಮಾಡಬೇಕು. ನಂತರ ಸುಮಂಗಲಿಯರಿಗೆ ಅರಿಶಿನ, ಕುಂಕುಮ ರವಿಕೆ ಬಟ್ಟೆ ಹಾಗೂ ವೀಳ್ಯದೆಲೆ, ಅಡಿಕೆ, ಬಾಳೆಹಣ್ಣು ಕೊಟ್ಟು ಅವರನ್ನು ಸಂಸತದಿಂದ ಕಳುಹಿಸಿಕೊಡಬೇಕು. ಪೂಜೆಗೆ ಬಂದವರಿಗೆಲ್ಲಾ ದೇವಿಯನ್ನು ಆರಾಧನೆ ಮಾಡಿ ಆರತಿ ಕೊಡಬೇಕು.

ದೇವಿಯ ವಿಸರ್ಜನೆ...

ವರಮಹಾಲಕ್ಷ್ಮಿ ದಿನ ಮುಗಿಯಿತು....ಪೂಜೆ ಮಾಡಿ ಆಯಿತೆಂದು ಹೇಗೆಂದರೆ ಹಾಗೆ ದೇವಿಯನ್ನು ತೆಗೆದುಬಿಡುವುದಲ್ಲ...ಪ್ರಾಣಪ್ರತಿಷ್ಠಾಪನೆ ಹಾಗೂ ಕಳಶವನ್ನು ಹೇಗೆ ಶ್ರದ್ಧಾ ಭಕ್ತಿ, ನೀತಿ, ನಿಯಮಗಳಿಂದ ಮಾಡುತ್ತೇವೆಯೋ ಹಾಗೆಯೇ ದೇವಿಯ ಕಳಶ ವಿಸರ್ಜನೆಯನ್ನೂ ಕ್ರಮಬದ್ಧವಾಗಿ, ಪದ್ಧತಿಯಿಂದ ಮಾಡಬೇಕು. ಸಾಮಾನ್ಯವಾಗಿ ವರಲಕ್ಷ್ಮಿಯನ್ನು ಒಂದು, ಮೂರು ಹಾಗೂ ಐದು ದಿನಗಳ ಕಾಲ ಮನೆಯಲ್ಲಿಟ್ಟು ಪೂಜಿಸುವುದುಂಟು.

ದೇವಿಯ ವಿಸರ್ಜನೆ ಮಾಡುವಾಗ ಸುಮಂಗಲಿಯರು ಸಂಕಲ್ಪ ಮುದ್ರೆಯಲ್ಲಿ ಕುಳಿತುಕೊಂಡು ಕೈಯ ನಡುಬೆರಳಿನಿಂದ ನೆಲದಲ್ಲಿ ಬರೆದಿರುವ ಚೌಕದ ಗೆರೆಯನ್ನು ಭಿನ್ನಗೊಳಿಸಬೇಕು. ಪ್ರತಿಷ್ಠಾಪನೆ ಉತ್ತಾರಾಭಿಮುಖವಾಗಿದ್ದರೆ ಉತ್ತರದ ಗೆರೆಯನ್ನು ಭಿನ್ನ ಮಾಡಬೇಕು. ಪೂರ್ವಾಭಿಮುಖವಾಗಿದ್ದರೆ ಪೂರ್ವದ ಗೆರೆಯನ್ನು ಭಿನ್ನಗೊಳಿಸಬೇಕು. ನಂತರ ನಿಧಾನವಾಗಿ ಕಳಶವನ್ನು ಅಲುಗಾಡಿಬೇಕು.

ಇದೆಲ್ಲಾ ಆದ ಮೇಲೆ ಒಳ್ಳೆಯ ಸಮಯ ನೋಡಿ ದೇವಿಯ ಬಳಿಯಿರುವ ಎಲ್ಲಾ ಸಾಮಾಗ್ರಿಗಳನ್ನು ನಿಧಾನವಾಗಿ ತೆಗೆಯಬೇಕು. ಕಲಶ ಪಾತ್ರೆಯಲ್ಲಿರುವ ಅಕ್ಕಿ ಹಾಗೂ ತೆಂಗಿನ ಕಾಯಿಯನ್ನು ಸಿಹಿ ಅಡುಗೆಗೆ ಉಪಯೋಗಿಸಿ ಮಕ್ಕಳಿಗೆ ಹಂಚಬೇಕು.

ಚೌಕ ಹಾಗೂ ರಂಗೋಲಿ ಬರೆದ ಪುಡಿ, ಹೂವು, ಎಲ್ಲಾ ವಸ್ತುವನ್ನು ತೆಗೆದು ಎಲ್ಲೆಂದರಲ್ಲಿ ಬಿಸಾಡದೆ ಗಲೀಜು ಮಾಡದೆ ನದಿ ದಡದಲ್ಲಿ ಇಡಬೇಕು. ನದಿಗೆ ಎಸೆಯಬಾರದು. ನದಿಗೆ ಎಸೆದರೆ ದೋಷ ಉಂಟಾಗುತ್ತದೆ. ಪೂಜೆ ಮಾಡುವುದು ಎಷ್ಟು ಮುಖ್ಯವೋ ಪೂಜೆ ನಂತರವಿರುವ ಪದ್ಧತಿಗಳನ್ನೂ ಅನುಸರಿಸುವುದೂ ಸಹ ಅಷ್ಟೇ ಮುಖ್ಯ.

-ಮಂಜುಳ.ವಿ.ಎನ್
Posted by: Manjula VN | Source: Online Desk

ಕನ್ನಡ ಮ್ಯಾಟ್ರಿಮೋನಿ - ಉಚಿತ ನೋಂದಣಿ !

Topics : Mahalakshmi Vratha, Pooja, Procedure, India, ವರಮಹಾಲಕ್ಷ್ಮಿ ವ್ರತ, ಪೂಜೆ, ವಿಧಿವಿಧಾನ, ಭಾರತ

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

comments powered by Disqus

Disclaimer: The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. Comments are automatically posted live; however, kannadaprabha.com reserves the right to take any or all comments down at any time.