ಮಹಾ ಶಿವರಾತ್ರಿ ಜಾಗರಣೆ ಹಾಗೂ ಅದರ ವಿಶೇಷತೆ
Published: 04th March 2016 02:00 AM | Last Updated: 04th March 2016 07:33 AM | A+A A-

ಮಹಾ ಶಿವರಾತ್ರಿ ಜಾಗರಣೆ ಹಾಗೂ ಅದರ ವಿಶೇಷತೆ
ಹಿಂದೂಗಳ ಆಚರಣೆಯಲ್ಲಿ ಶಿವರಾತ್ರಿ ಹಬ್ಬಕ್ಕೆ ವಿಶೇಷ ಸ್ಥಾನವಿದೆ. ಶಿವರಾತ್ರಿಯಂದು ಭಕ್ತಿಯಿಂದ ಶಿವನನ್ನು ಆಚರಣೆ ಮಾಡುವುದರಿಂದ ದುಃಖಗಳು ದೂರವಾಗಿ ಸುಖ ಪ್ರಾಪ್ತಿಯಾಗುತ್ತದೆ ಹಾಗೂ ಶಿವನ ಪ್ರೀತಿ ತ್ರರಾಗುತ್ತಾರೆಂಬು ನಂಬಿಕೆ ಇದೆ. ಹೀಗಾಗಿ ಶಿವರಾತ್ರಿಯಂದು ಭಕ್ತಿಭಾವದಿಂದ ಶಿವನನ್ನು ಶುದ್ಧ ಮನಸ್ಸಿನಿಂದ ಉಪವಾಸ ಹಾಗೂ ಜಾಗರಣೆ ಮೂಲಕ ಬೇಡುವುದುಂಟು.
ಒಂದು ಶಿವರಾತ್ರಿ ವ್ರತವನ್ನು ಆಚರಿಸಿದರೆ, ಸಾವಿರ ಏಕಾದಶಿ ವ್ರತಗಳು ಆಚರಿಸಿದಷ್ಟು ಫಲಗಳು ಹಾಗೂ ಕಾಶಿಯಲ್ಲಿ ಮುಕ್ತಿ ಪಡೆದ ಪುಣ್ಯ ಫಲಗಳು ಸಿಗುತ್ತದೆಂದು ಶಿವ ಪುರಾಣದಲ್ಲಿ ಹೇಳಲಾಗಿದೆ.
ಶಿವರಾತ್ರಿಯಂದು ಮುಕ್ಕಣ್ಣನನ್ನು ಪೂಜಿಸಿ ಜಾಗರಣೆ ಮಾಡುವುದಕ್ಕೂ ಅರ್ಥವಿದೆ. ಮಧ್ಯರಾತ್ರಿಯಲ್ಲಿ ಶಿವನಿಗೂ ಪಾರ್ವತಿಗೂ ಕಲ್ಯಾಣವಾಯಿತು. ಈ ವಿವಾಹಕ್ಕೆ ಮೂರು ಲೋಕಗಳು ಅಂದು ಜಾಗರಣೆ ಮಾಡಿರುತ್ತವೆ. ಈ ಕಾರಣದಿಂದ ಅಂದು ನಿದ್ರೆ ಮಾಡದೆ ಶಿವರಾತ್ರಿ ಜಾಗರಣೆ ಮಾಡಬೇಕೆಂದು ಹೇಳಲಾಗುತ್ತದೆ. ಇದಲ್ಲದೆ, ವರ್ಷಕಾಲ ನಮ್ಮನ್ನು ಕಾಯುವ ಶಿವನಿಗೆ ಒಂದು ದಿನವಾದರೂ ಆತನನ್ನು ನಾವು ಕಾಯಬೇಕು. ಶಿವರಾತ್ರಿಯಂದು ಶಿವನು ಭಕ್ತರನ್ನು ಹರಸುವುದಕ್ಕಾಗಿ ಕೈಲಾಸ ಲೋಕದಿಂದ ಭೂಲೋಕಕ್ಕೆ ಬರುವುದರಿಂದ ಆತನನ್ನು ಭಕ್ತಿ ಭಾವದಿಂದ, ಹೃದಯಪೂರ್ವಕವಾಗಿ ಸ್ವಾಗತಿಸಬೇಕಂತಲೂ ಹೇಳಲಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಶಿವರಾತ್ರಿ ದಿಂದು ಜಾಗರಣೆ ಮಾಡುತ್ತೇನೆಂಬುದು ಫ್ಯಾಶನ್ ಆಗಿಬಿಟ್ಟಂತಿದೆ. ಇಂದು ಜಾಗರಣೆ ಮಾಡುವವರ ಸಂಖ್ಯೆಯೇನೋ ಹೆಚ್ಚಾಗಿದೆ. ಆದರೆ, ಜಾಗರಣೆ ಎಂಬ ಹೆಸರಿನಲ್ಲಿ ಮೋಜು ಹಾಗೂ ಮಸ್ತಿಗಳೇ ಹೆಚ್ಚಾಗಿ ಹೋಗಿದೆ. ಶಿವರಾತ್ರಿ ಜಾಗರಣೆ ಎಂದರೆ ಮೋಜು ಮಸ್ತಿಗಳನ್ನು ಮಾಡುವ ಆಚರಣೆಯಲ್ಲ. ಶಿವರಾತ್ರಿ ಜಾಗರಣೆಯನ್ನು ಪ್ರಾರ್ಥನೆ ಹಾಗೂ ಧ್ಯಾನದ ಮುಖಾಂತರ ಮಾಡಬೇಕು. ಶಿವರಾತ್ರಿಯಂದು ನಮ್ಮ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡು ಶಿವನ ಕಡೆಗೆ ಕೊಂಡೊಯ್ಯಬೇಕು. ಅಲ್ಲದೆ ಅವನ ಸಾನ್ನಿಧ್ಯವನ್ನು ಅನುಭವಿಸಬೇಕು. ನಾವು ಯಾವಾಗ ನಮ್ಮ ಮನಸ್ಸು ಹಾಗೂ ಆತ್ಮವನ್ನು ಶಿವನ ಪಾದಗಳಿಗೆ ಸಮರ್ಪಿಸುತ್ತೇವೆಯೋ ಆಗ ನಮಗೆ ಎಲ್ಲೆಡೆ ಶಿವನ ದರ್ಶನವಾಗುತ್ತದೆ. ಸರ್ವಂ ಶಿವ ಮಯಂ ಎಂಬುದೇ ಶಿವರಾತ್ರಿ ಆಚರಣೆಯ ನಿಜವಾದ ಅರ್ಥ.