ಮ್ಯಾಂಡೋಲಿನ್ ಮಾಂತ್ರಿಕ ಶ್ರೀನಿವಾಸ್ ಇನ್ನಿಲ್ಲ

ಖ್ಯಾತ ಮ್ಯಾಂಡೋಲಿನ್ ವಾದಕ ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತಗಾರ ಉಪ್ಪಾಲಪು ಶ್ರೀನಿವಾಸ್(45) ಅವರು...
ಮ್ಯಾಂಡೋಲಿನ್  ಮಾಂತ್ರಿಕ ಶ್ರೀನಿವಾಸ್ ಇನ್ನಿಲ್ಲ

ಚೆನ್ನೈ: ಖ್ಯಾತ ಮ್ಯಾಂಡೋಲಿನ್ ವಾದಕ ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತಗಾರ ಉಪ್ಪಾಲಪು ಶ್ರೀನಿವಾಸ್(45) ಅವರು ಶುಕ್ರವಾರ ಬೆಳಗ್ಗೆ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

ಲೀವರ್ ಸಮಸ್ಯೆಯಿಂದ ಬಳಲುತ್ತಿದ್ದ ಯು. ಶ್ರೀನಿವಾಸ್ ಅವರು ನಗರದ ಅಪೊಲೋ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ 9.30ರ ಸುಮಾರಿಗೆ ಕೊನೆಯುಸಿರೆಳೆದರು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಸಂಗೀತ ರತ್ನ ಹಾಗೂ ಪದ್ಮಶ್ರೀ ಪ್ರಶಸ್ತಿ ವಿಜೇತ ಶ್ರೀನಿವಾಸ್ ಅವರು 1969, ಫೆ.28ರಂದು ಆಂಧ್ರಪ್ರದೇಶದ ಪಲಕೋಳ್ ಎಂಬಲ್ಲಿ ಜನಸಿದ್ದರು. ತಮ್ಮ 6ನೇ ವಯಸ್ಸಿನಲ್ಲೇ ತಂದೆ ಸತ್ಯನಾರಾಯಣ ಅವರ ಮ್ಯಾಂಡೋಲಿನ್ ಬಾರಿಸಲು ಆರಂಭಿಸಿದ ಶ್ರೀನಿವಾಸ್, 9ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಸಾರ್ವಜನಿಕ ಪ್ರದರ್ಶನ ನೀಡಿದ್ದರು.

ಸತ್ಯ ಸಾಯಿಬಾಬಾ ಅವರ ಪರಮಭಕ್ತರಾಗಿದ್ದ ಶ್ರೀನಿವಾಸ್ ಅವರಿಗೆ 1998ರಲ್ಲಿ ಪದ್ಮಶ್ರೀ, 2010ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗಳು ಸಂದಿವೆ. ಸಂಗೀತ ರತ್ನ, ಸನಾತನ ಸಂಗೀತ ಪುರಸ್ಕಾರ, ಮೈಸೂರು ಟಿ ಚೌಡಯ್ಯ ಪ್ರಶಸ್ತಿ, ರಾಜೀವ್ ಗಾಂಧಿ ರಾಷ್ಟ್ರೀಯ ಭಾವೈಕ್ಯತಾ ಪ್ರಶಸ್ತಿ, ಕಾಂಚಿ ಕಾಮಕೋಟಿ ಪೀಠದ ಆಸ್ಥಾನ ವಿದ್ವಾನ್ ಗೌರವಕ್ಕೆ ಪಾತ್ರರಾಗಿದ್ದರು.

ಶ್ರೀನಿವಾಸ್ ನಿಧನಕ್ಕೆ ಪ್ರಧಾನಿ ಸಂತಾಪ
ಮ್ಯಾಂಡೋಲಿನ್ ಮಾಂತ್ರಿಕ ಯು.ಶ್ರೀನಿವಾಸ್ ಅವರ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ. ಶ್ರೀನಿವಾಸ್ ಅವರ ಅಗಲಿಕೆ ನೋವು ತಂದಿದೆ ಎಂದು ಪ್ರಧಾನಿ ಸಚಿವಾಲಯ ಟ್ವೀಟ್ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com