ರಾಜ್ಯಸಭೆ: ಕೈ ಬಲ ಕುಸಿದರೂ ಬಿಜೆಪಿಗಿಲ್ಲ ಬಹುಮತ

ಇತ್ತೀಚೆಗೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸಾಮರ್ಥ್ಯ ಕುಸಿದಿದೆಯಾದರೂ, ಬಿಜೆಪಿಗೆ ಸ್ಪಷ್ಟ ಬಹುಮತ ಲಭಿಸಿಲ್ಲ ಎಂದು ತಿಳಿದುಬಂದಿದೆ.
ಪ್ರಧಾನಿ ಮೋದಿ ಮತ್ತು ಸೋನಿಯಾ ಗಾಂಧಿ (ಸಂಗ್ರಹ ಚಿತ್ರ)
ಪ್ರಧಾನಿ ಮೋದಿ ಮತ್ತು ಸೋನಿಯಾ ಗಾಂಧಿ (ಸಂಗ್ರಹ ಚಿತ್ರ)

ನವದೆಹಲಿ: ಇತ್ತೀಚೆಗೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸಾಮರ್ಥ್ಯ ಕುಸಿದಿದೆಯಾದರೂ, ಬಿಜೆಪಿಗೆ ಸ್ಪಷ್ಟ ಬಹುಮತ ಲಭಿಸಿಲ್ಲ ಎಂದು ತಿಳಿದುಬಂದಿದೆ.

ರಾಜ್ಯಸಭೆಯ ದ್ವೈಮಾಸಿಕ ಚುನಾವಣೆಗೆ ಶನಿವಾರ ತೆರೆ ಬಿದ್ದಿದ್ದು, ಸಂಸತ್ತಿನ ಮೇಲ್ಮನೆಯ ಸಂಪೂರ್ಣ ಚಿತ್ರಣವೇ ಬದಲಾಗಿ ಹೋಗಿದೆ. ಇಷ್ಟು ದಿನ ರಾಜ್ಯಸಭೆಯಲ್ಲಿ ಬಿಜೆಪಿ ನೇತೃತ್ವದ  ಎನ್‌ಡಿಎಗಿಂತ ಹೆಚ್ಚಿನ ಸಂಖ್ಯೆಯ ಸದಸ್ಯರನ್ನು ಹೊಂದಿದ್ದ, ಯುಪಿಎ ಬಲ ಈಗ ಕುಸಿದಿದ್ದು, ಸದಸ್ಯರ ಸಂಖ್ಯೆಯಲ್ಲಿ ಯುಪಿಎಯನ್ನು ಹಿಂದಿಕ್ಕುವಲ್ಲಿ ಎನ್‌ಡಿಎ ಸಫ‌ಲವಾಗಿದೆ.  245 ಸದಸ್ಯ  ಬಲದ ರಾಜ್ಯಸಭೆಯಲ್ಲಿ 69 ಸದಸ್ಯರನ್ನು ಹೊಂದಿದ್ದ ಎನ್‌ಡಿಎ ಬಲ ಇದೀಗ ಐವರು ಹೊಸ ಸದಸ್ಯರ ಸೇರ್ಪಡೆಯಿಂದಾಗಿ 74ಕ್ಕೆ ಜಿಗಿದಿದ್ದು, 74 ಸದಸ್ಯರನ್ನು ಹೊಂದಿದ್ದ ಯುಪಿಎ ಮೂವರನ್ನು  ಕಳೆದುಕೊಳ್ಳುವ ಮೂಲಕ ಅದರ ಬಲ 71ಕ್ಕೆ ಇಳಿದಿದೆ. ಮತ್ತೂಂದೆಡೆ ಪ್ರಾದೇಶಿಕ ಪಕ್ಷಗಳ ಬಳಿ ಮೊದಲಿನಂತೆಯೇ 89 ಸದಸ್ಯರು ಇದ್ದು, ಯಾವುದೇ ಬದಲಾವಣೆಯಾಗಿಲ್ಲ.

ರಾಜ್ಯಸಭೆ ಚುನಾವಣಾ ಫಲಿತಾಂಶದ ಸಂಪೂರ್ಣ ಚಿತ್ರಣ ಇದೀಗ ಮಾಧ್ಯಮಗಳಿಗೆ ಲಭ್ಯವಾಗಿದ್ದು, ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರೀಕೂಟವನ್ನು ಬಿಜೆಪಿ ನೇತೃತ್ವ ಎನ್ ಡಿಎ  ಮೈತ್ರೀಕೂಟ ಹಿಂದಿಕ್ಕಿದೆಯಾದರೂ ಎನ್‌ಡಿಎಗೆ ರಾಜ್ಯಸಭೆಯಲ್ಲಿ ಬಹುಮತದ ಕೊರತೆ ಇದ್ದು, ಮಹತ್ವದ ಮಸೂದೆಗಳ ಅಂಗೀಕಾರದ ಸಂದರ್ಭದಲ್ಲಿ ಪ್ರಾದೇಶಿಕ ಪಕ್ಷಗಳ ಮೊರೆ  ಹೋಗುವುದು ಅನಿವಾರ್ಯವಾಗಲಿದೆ.

ಇನ್ನು ರಾಜ್ಯಸಭೆ ಚುನಾವಣೆಯಲ್ಲಿ 4 ಸ್ಥಾನಗಳನ್ನು ಹೆಚ್ಚುವರಿಯಾಗಿ ಗಳಿಸಿದ ಸಮಾಜವಾದಿ ಪಕ್ಷದ ಬಳಿ ಈಗ 19 ಸದಸ್ಯರಿದ್ದರೆ, ಜೆಡಿಯು- ಆರ್‌ಜೆಡಿ ಮಿತ್ರಕೂಟದ ಬಳಿ 12 ಸದಸ್ಯರಿದ್ದಾರೆ.  ತೃಣಮೂಲ ಕಾಂಗ್ರೆಸ್‌, ಅಣ್ಣಾ ಡಿಎಂಕೆ ಬಳಿ ತಲಾ 12 ಸದಸ್ಯರಿದ್ದು, ಸಿಪಿಎಂ-8, ಬಿಜೆಡಿ-7, ಬಿಎಸ್ಪಿ-6, ಡಿಎಂಕೆ-5 ನಂತರದ ಸ್ಥಾನಗಳಲ್ಲಿವೆ.

57 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜೂನ್ 3 ರಂದು ಒಟ್ಟು 30 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಆ ಪೈಕಿ 11 ಮಂದಿ ಎನ್‌ಡಿಎ ಮೈತ್ರೀಕೂಟಕ್ಕೆ ಸೇರಿದವರಾಗಿದ್ದಾರೆ.  (ಬಿಜೆಪಿ 7, ಟಿಡಿಪಿ 2, ಶಿವಸೇನೆ, ಅಕಾಲಿ ದಳ ತಲಾ 1). ಇದೇ ವೇಳೆ, ಯುಪಿಎಯಿಂದ ಸ್ಪರ್ಧಿಸಿದ್ದ ಐವರು ಮಾತ್ರ ಚುನಾವಣೆ ಇಲ್ಲದೆ ಅವಿರೋಧವಾಗಿ ಆಯ್ಕೆಯಾಗಿದ್ದರು (ಕಾಂಗ್ರೆಸ್‌ 4,  ಎನ್‌ಸಿಪಿ 1). ಇತರೆ ಪಕ್ಷಗಳಾದ ಜೆಡಿಯು (2), ಆರ್‌ಜೆಡಿ (2), ಎಐಎಡಿಎಂಕೆ (4), ಡಿಎಂಕೆ (2), ಬಿಜೆಡಿ (3)ಯ 13 ಮಂದಿ ಅವಿರೋಧವಾಗಿ ಗೆದ್ದಿದ್ದರು.

ಶನಿವಾರ 27 ಸದಸ್ಯ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 12 (ಹರ್ಯಾಣ 2, ಉತ್ತರಪ್ರದೇಶ 1, ರಾಜಸ್ಥಾನ 5, ಮಧ್ಯಪ್ರದೇಶ 2, ಕರ್ನಾಟಕ 1 ಹಾಗೂ ಜಾರ್ಖಂಡ್‌ 2) ಸ್ಥಾನ  ಗೆದ್ದಿದೆ. ಕಾಂಗ್ರೆಸ್‌ 6 ಸ್ಥಾನ (ಕರ್ನಾಟಕ 4, ಉತ್ತರಪ್ರದೇಶ, ಉತ್ತರಾಖಂಡ, ಮಧ್ಯಪ್ರದೇಶ ತಲಾ 1) ಜಯ ಸಾಧಿಸಿದೆ. ಉತ್ತರಪ್ರದೇಶದಲ್ಲಿನ 11 ಸ್ಥಾನಗಳ ಪೈಕಿ ಎಸ್ಪಿ 7, ಬಿಎಸ್ಪಿ 2, ಬಿಜೆಪಿ  ಹಾಗೂ ಕಾಂಗ್ರೆಸ್‌ ತಲಾ 1 ಸ್ಥಾನ ಗೆದ್ದಿವೆ. ರಾಜ್ಯಸಭೆಯಲ್ಲಿ ಚುನಾಯಿತ ಸದಸ್ಯರಲ್ಲದೆ 12 ನಾಮನಿರ್ದೇಶಿತ ಸದಸ್ಯರೂ ಇದ್ದಾರೆ.

ರಾಜಸಭೆ ಒಟ್ಟಾರೆ ಬಲಾಬಲ ಇಂತಿದೆ.
ಎನ್ ಡಿಎ ಮೈತ್ರೀಕೂಟ-74
ಯುಪಿಎ ಮೈತ್ರೀಕೂಟ-71
ಸಮಾಜವಾದಿ ಪಕ್ಷ-19
ತೃಣಮೂಲ ಕಾಂಗ್ರೆಸ್-21
ಎಐಎಡಿಎಂಕೆ-12
ಆರ್ ಜೆಡಿ-ಜೆಡಿ (ಯು)-12
ಸಿಪಿಎಂ-12
ಬಿಎಸ್ ಪಿ-8
ಬಿಜು ಜನತಾದಳ-7
ಡಿಎಂಕೆ-5

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com