ಮಿಜೋರಾಂ: ಚಕ್ಮ ಸ್ವಾಯತ್ತ ಜಿಲ್ಲಾ ಮಂಡಳಿಯಲ್ಲಿ ಕಾಂಗ್ರೆಸ್-ಬಿಜೆಪಿ ಮೈತ್ರಿ!

ಮಿಜೋರಾಂನಲ್ಲಿ ಕುತೂಹಲಕಾರಿ ರಾಜಕೀಯ ಬೆಳವಣಿಗೆಯೊಂದು ನಡೆದಿದ್ದು, ಚಕ್ಮ ಸ್ವಾಯತ್ತ ಜಿಲ್ಲಾ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಐಜವಾಲ್: ಮಿಜೋರಾಂನಲ್ಲಿ ಕುತೂಹಲಕಾರಿ ರಾಜಕೀಯ ಬೆಳವಣಿಗೆಯೊಂದು ನಡೆದಿದ್ದು,  ಚಕ್ಮ ಸ್ವಾಯತ್ತ ಜಿಲ್ಲಾ ಮಂಡಳಿಯಲ್ಲಿ ಕಾಂಗ್ರೆಸ್ - ಬಿಜೆಪಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ.
ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಬರದ ಹಿನ್ನೆಲೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದ್ದಾರೆ.
20 ಸದಸ್ಯರ ಚಕ್ಮಾ ಮಂಡಳಿಗೆ ಕಳೆದ ಶುಕ್ರವಾರ ಚುನಾವಣೆ ನಡೆದಿತ್ತು. ಅದರ ಫಲಿತಾಂಶ ನಿನ್ನೆ ಪ್ರಕಟಗೊಂಡಿದ್ದು, ಕಾಂಗ್ರೆಸ್ ಆರು ಸ್ಥಾನಗಳಲ್ಲಿ ಹಾಗೂ ಬಿಜೆಪಿ ಐದು ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ.
ಮಿಜೋ ನ್ಯಾಷನಲ್ ಫ್ರಂಟ್ ಎಂಟು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಒಂದು ಸ್ಥಾನಕ್ಕೆ ಮಿಜೋರಾಂ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. 
ಪರಸ್ಪರ ಒಪ್ಪಿಗೆಯ ನಂತರ ಬಿಜೆಪಿ ಜತೆ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳಲಾಗಿದೆ ಎಂದು ಮಿಜೋರಾಂ ಕ್ರೀಡಾ ಸಚಿವ ಹಾಗೂ ಕಾಂಗ್ರೆಸ್ ನಾಯಕ ಝೋಡಿಂಟ್ಲುಂಗಾ ಅವರು ತಿಳಿಸಿದ್ದಾರೆ. ಅಲ್ಲದೆ ಈ ಮೈತ್ರಿ ದೆಹಲಿ ಅಥವಾ ಇತರೆ ಚುನಾವಣೆಗೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆದರೆ ಈ ಅಚ್ಚರಿಯ ಬೆಳವಣಿಗೆ ಬಗ್ಗೆ ರಾಜ್ಯ ಬಿಜೆಪಿ ನಾಯಕರು ತೀವ್ರ ಅಸಮಾಧಾನಗೊಂಡಿದ್ದು, ಚಕ್ಮಾ ಮಂಡಳಿ ಸದಸ್ಯರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಬಿಜೆಪಿ ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com