ಛತ್ತೀಸ್ ಗಢದಲ್ಲಿ ನಕ್ಸಲರ ಅಟ್ಟಹಾಸ: ಐಇಡಿ ಸ್ಫೋಟದಲ್ಲಿ ಬಿಜೆಪಿ ಶಾಸಕ, ಐವರು ಪೊಲೀಸರು ಸಾವು

ಲೋಕಸಭೆ ಚುನಾವಣೆಗೆ ಕೇವಲ ಎರಡು ದಿನ ಬಾಕಿ ಇರುವಾಗಲೇ ಛತ್ತೀಸ್ ಗಢದಲ್ಲಿ ನಕ್ಸಲರು ಅಟ್ಟಹಾಸ ಮೆರೆದಿದ್ದು, ಐಇಡಿ ಸ್ಫೋಟಿಸಿ ಬಿಜೆಪಿ ಶಾಸಕ....
ಸ್ಫೋಟಗೊಂಡ ಕಾರು
ಸ್ಫೋಟಗೊಂಡ ಕಾರು
ರಾಯ್ಪುರ: ಲೋಕಸಭೆ ಚುನಾವಣೆಗೆ ಕೇವಲ ಎರಡು ದಿನ ಬಾಕಿ ಇರುವಾಗಲೇ ಛತ್ತೀಸ್ ಗಢದಲ್ಲಿ ನಕ್ಸಲರು ಅಟ್ಟಹಾಸ ಮೆರೆದಿದ್ದು, ಐಇಡಿ ಸ್ಫೋಟಿಸಿ ಬಿಜೆಪಿ ಶಾಸಕ ಹಾಗೂ ಐವರು ಪೊಲೀಸ್ ಸಿಬ್ಬಂದಿಯನ್ನು ಬಲಿ ಪಡೆದಿದ್ದಾರೆ.
ಛತ್ತೀಸ್ ಗಢದ ನಕ್ಸಲ್​ಪೀಡಿತ ದಾಂತೇವಾಡದಲ್ಲಿ ನಕ್ಸಲರು ಐಇಡಿ ಸ್ಫೋಟಿಸಿದ್ದು, ದಾಳಿಯಲ್ಲಿ ಶಾಸಕ ಭೀಮಾ ಮಾಂಡವಿ ಸೇರಿ ಆರು ಮಂದಿ ಮೃತಪಟ್ಟಿದ್ದಾರೆ.
ನಕ್ಸಲ್​ಪೀಡಿತ ಪ್ರದೇಶದಲ್ಲಿ ಬಿಗಿ ಭದ್ರತೆಯೊಂದಿಗೆ ಚುನಾವಣಾ ಪ್ರಚಾರಕ್ಕಾಗಿ ಭೀಮಾ ಮಾಂಡವಿ ತೆರಳುತ್ತಿದ್ದಾಗ, ನಕ್ಸಲರು ಸುಧಾರಿತ ಸ್ಫೋಟಕ ಬಳಸಿ ದಾಳಿ ನಡೆಸಿದ್ದಾರೆ.
ನಕ್ಸಲರು ಸುಧಾರಿತ ಸ್ಫೋಟಕ ಸಿಡಿಸುತ್ತಿದ್ದಂತೆ ಶಾಸಕ ಭೀಮಾ ಮಾಂಡವಿ ಇದ್ದ ಎಸ್​ಯುವಿ ವಾಹನ ಗಾಳಿಯಲ್ಲಿ ಮೇಲೆದ್ದು, ತುಂಡು ತುಂಡಾಯಿತು ಎನ್ನಲಾಗಿದೆ. 
ಘಟನೆಯಲ್ಲಿ ಶಾಸಕರು ಹಾಗೂ ಅವರ ಬೆಂಗಾವಲು ಪಡೆಯ ಐವರು ಪೊಲೀಸರು ಸ್ಥಳದಲ್ಲೇ ಹುತಾತ್ಮರಾಗಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಛತ್ತೀಸ್​ಗಢದ ಡಿಜಿಪಿ ಡಿ.ಎಂ. ಆವಸ್ತಿ, ಘಟನೆಯಲ್ಲಿ ಐವರು ಪೊಲೀಸ್​ ಸಿಬ್ಬಂದಿ ಮೃತಪಟ್ಟಿರುವ ಬಗ್ಗೆ ಮಾಹಿತಿ ಇದೆ. ಈಗಲೂ ಅಲ್ಲಿ ಗುಂಡಿನ ಚಕಮಕಿ ಮುಂದುವರಿದಿದೆ. ಹಾಗಾಗಿ ಸಾವುನೋವಿನ ಬಗ್ಗೆ ಖಚಿತ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com