ಮೋದಿ ಸರ್ಕಾರಕ್ಕೆ ಭಾರೀ ಹೊಡೆತ; ರಫೆಲ್ ರಹಸ್ಯ ದಾಖಲೆಗಳ ಪರಿಶೀಲನೆಗೆ ಸುಪ್ರೀಂ ಕೋರ್ಟ್ ಅಸ್ತು

ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ನಾಳೆ ನಡೆಯಲಿದ್ದು ಈ ಹೊತ್ತಿನಲ್ಲಿ ಆಡಳಿತಾರೂಢ ಎನ್ ಡಿಎ ಸರ್ಕಾರಕ್ಕೆ ಭಾರೀ ಹಿನ್ನಡೆಯಂತೆ ಸುಪ್ರೀಂ ...

Published: 10th April 2019 12:00 PM  |   Last Updated: 10th April 2019 02:53 AM   |  A+A-


Rafale fighter aircraft

ರಫೆಲ್ ಯುದ್ಧ ವಿಮಾನ

Posted By : SUD SUD
Source : Online Desk
ನವದೆಹಲಿ: ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ನಾಳೆ ನಡೆಯಲಿದ್ದು ಈ ಹೊತ್ತಿನಲ್ಲಿ ಆಡಳಿತಾರೂಢ ಎನ್ ಡಿಎ ಸರ್ಕಾರಕ್ಕೆ ಭಾರೀ ಹಿನ್ನಡೆಯಂತೆ ಸುಪ್ರೀಂ ಕೋರ್ಟ್ ಬುಧವಾರ ಮಹತ್ವದ ತೀರ್ಪು ನೀಡಿದೆ.

ರಫೆಲ್ ಯುದ್ಧ ವಿಮಾನ ಒಪ್ಪಂದ ಬಗ್ಗೆ ನೀಡಿರುವ ತೀರ್ಪನ್ನು ಪ್ರಶ್ನಿಸಿ ಮರುಪರಿಶೀಲನೆ ಅರ್ಜಿ ಸಲ್ಲಿಕೆ ವೇಳೆ ಒದಗಿಸಲಾದ ಕೆಲವು ದಾಖಲೆಗಳg ಅಕ್ರಮವಾಗಿದ್ದು, ಪರಿಶೀಲನೆ ನಡೆಸಬಾರದೆಂದು ಕೇಂದ್ರ ಸರ್ಕಾರ ಸಲ್ಲಿಸಿದ್ದ ಆಕ್ಷೇಪವನ್ನು ಸುಪ್ರೀಂ ಕೋರ್ಟ್ ಬುಧವಾರ ತಳ್ಳಿಹಾಕಿದೆ.ಇದರಿಂದ ಎನ್ ಡಿಎ ಸರ್ಕಾರಕ್ಕೆ ಚುನಾವಣೆ ಹೊಸ್ತಿಲಿನಲ್ಲಿ ತೀವ್ರ ಮುಖಭಂಗವಾಗಿದೆ.

ಅರ್ಜಿದಾರರು ರಫೆಲ್ ಯುದ್ಧ ವಿಮಾನ ಒಪ್ಪಂದದ ತೀರ್ಪನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ದಾಖಲೆಗಳನ್ನು ಸಲ್ಲಿಸಿದ್ದು ಕಳೆದ ವರ್ಷ ಡಿಸೆಂಬರ್ 14ರಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿಗೆ ವಿರುದ್ಧವಾಗಿ ಮರುಪರಿಶೀಲನಾ ಅರ್ಜಿಯಾಗಿದೆ.ಪುನರ್ ಪರಿಶೀಲನಾ ಅರ್ಜಿಯ ಸಮರ್ಥನೆಯನ್ನು ಪ್ರಶ್ನಿಸುವ ಕೇಂದ್ರ ಸರ್ಕಾರದ ಪ್ರಾಥಮಿಕ ಆಕ್ಷೇಪವನ್ನು ನಾವು ನಿರಾಕರಿಸುತ್ತಿದ್ದೇವೆ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಮತ್ತು ನ್ಯಾಯಮೂರ್ತಿಗಳಾದ ಎಸ್ ಕೆ ಕೌಲ್ ಮತ್ತು ಕೆ ಎಂ ಜೋಸೆಫ್ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ.

ಕಳೆದ ಡಿಸೆಂಬರ್ 14ರಂದು ನೀಡಿದ್ದ ತೀರ್ಪಿಗೆ ವಿರುದ್ಧವಾಗಿ ಮರುಪರಿಶೀಲನಾ ಅರ್ಜಿಗಳನ್ನು ಅರ್ಹತೆಗಳ ಆಧಾರದ ಮೇಲೆ ನಿರ್ಧರಿಸಲಾಗುವುದು. ಪುನರ್ ಪರಿಶೀಲನಾ ಅರ್ಜಿಗಳ ವಿಚಾರಣೆಗೆ ದಿನಾಂಕ ನಿಗದಿಪಡಿಸಲಾಗುವುದು ಎಂದು ಸಹ ಇದೇ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ತಿಳಿಸಿದ್ದಾರೆ.ಮುಂದಿನ ವಿಚಾರಣೆ ದಿನಾಂಕವನ್ನು ನ್ಯಾಯಾಲಯ ನಿಗದಿಪಡಿಸಲಿದೆ. ಅರ್ಜಿದಾರರು ಉಲ್ಲೇಖಿಸಿರುವ ಹೊಸ ದಾಖಲೆಗಳ ಆದಾರದಲ್ಲಿ ಮರು ಪರಿಶೀಲನಾ ಅರ್ಜಿಯ ವಿಚಾರಣೆ ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಪುನರ್ ಪರಿಶೀಲನಾ ಅರ್ಜಿಯ ತನಿಖೆ ಹೇಗಿರುತ್ತದೆ: ಮುಂದಿನ ಸಲ ಸುಪ್ರೀಂ ಕೋರ್ಟ್ ಪುನರ್ ಪರಿಶೀಲನಾ ಅರ್ಜಿ ವಿಚಾರಣೆ ಮಾಡುವ ಸಂದರ್ಭದಲ್ಲಿ ಯುದ್ಧ ವಿಮಾನದ ಬೆಲೆಯ ಬಗ್ಗೆ ಪ್ರಶ್ನೆ ಮಾಡುವುದಲ್ಲದೆ ಯುದ್ಧ ವಿಮಾನ ತಯಾರಿಸುವ ಫ್ರಾನ್ಸ್ ನ ಡಸ್ಸೌಲ್ಟ್ ಕಂಪೆನಿಯನ್ನೇ ಕೇಂದ್ರ ಸರ್ಕಾರ ಏಕೆ ಆಯ್ಕೆ ಮಾಡಿಕೊಂಡಿತು ಎಂಬುದರ ಬಗ್ಗೆ ಕೂಡ ವಿಚಾರಣೆ ಮಾಡಲಿದೆ.

ಇದರರ್ಥ, ಕೆಲವು ಮಾಧ್ಯಮಗಳ ವರದಿಯನ್ನು ಸಾಕ್ಷಿಗೆ ಆಧಾರವಾಗಿಟ್ಟುಕೊಂಡು ಸುಪ್ರೀಂ ಕೋರ್ಟ್ ಕಳೆದ ಡಿಸೆಂಬರ್ ನಲ್ಲಿ ನೀಡಿದ ತೀರ್ಪಿನ ಮರು ಪರಿಶೀಲನೆ ನಡೆಸಲಿದೆ. ಕಳೆದ ಬಾರಿ ಕೋರ್ಟ್ ರಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದ ವಿಚಾರದಲ್ಲಿ ಮೋದಿ ಸರ್ಕಾರಕ್ಕೆ ಕ್ಲೀನ್ ಚಿಟ್ ನೀಡಿತ್ತು.

ಇಂದಿನ ವಿಚಾರಣೆ ಸಂದರ್ಭದಲ್ಲಿ ಸರ್ಕಾರದ ಪರ ವಕೀಲ ಅಟೊರ್ನಿ ಜನರಲ್ ಕೆ ಕೆ ವೇಣುಗೋಪಾಲ್, ರಕ್ಷಣಾ ಸಚಿವಾಲಯದಿಂದ ಸೋರಿಕೆಯಾಗಿದೆ ಎಂದು ವಿಶೇಷ ದಾಖಲೆಯಾಗಿ ರಿಲಯನ್ಸ್ ಹೆಸರನ್ನು ಅರ್ಜಿದಾರರು ನೀಡಿದ್ದಾರೆ. ಸಾಕ್ಷಿ ಕಾಯ್ದೆಯ ಸೆಕ್ಷನ್ 123ನ್ನು ಉಲ್ಲೇಖಿಸಿ ಅಧಿಕೃತ ರಹಸ್ಯ ಕಾಯ್ದೆಯಡಿ ಸಂಬಂಧಪಟ್ಟ ಇಲಾಖೆಯ ಅನುಮತಿ ಇಲ್ಲದೆ ಯಾರೂ ಕೂಡ ದಾಖಲೆಗಳನ್ನು ಕೋರ್ಟ್ ಗೆ ಹಾಜರುಪಡಿಸಲು ಸಾಧ್ಯವಿಲ್ಲ ಎಂದು ವಾದಿಸಿದರು.

ಆದರೆ ಈ ದಾಖಲೆಗಳು ಈಗಾಗಲೇ ಪ್ರಕಟವಾಗಿದ್ದು ಸಾರ್ವಜನಿಕರಿಗೆ ಲಭ್ಯವಿದೆ ಎಂದು ಅರ್ಜಿದಾರ ಹಾಗೂ ಅಡ್ವೊಕೇಟ್ ಪ್ರಶಾಂತ್ ಭೂಷಣ್ ವಾದಿಸಿದರು. ಅಮೆರಿಕಾದ ಪೆಂಟಗಾನ್ ಪೇಪರ್ಸ್ ಕೇಸನ್ನು ಉಲ್ಲೇಖಿಸಿದ ಅವರು ವಿಯೆಟ್ನಾಂ ಯುದ್ಧಕ್ಕೆ ಸಂಬಂಧಪಟ್ಟಂತೆ ರಕ್ಷಣಾ ದಾಖಲೆಗಳನ್ನು ಸಾರ್ವಜನಿಕವಾಗಿ ಪ್ರಕಟಿಸಲು ಅನುವು ಮಾಡಿಕೊಡಲಾಗಿತ್ತು. ಯುದ್ಧದ ಬಗ್ಗೆ ವರದಿ ಪ್ರಕಟಿಸಿದ್ದನ್ನು ಅಲ್ಲಿನ ಸುಪ್ರೀಂ ಕೋರ್ಟ್ ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ನಿರಾಕರಿಸಿತ್ತು ಎಂದು ಪ್ರತಿವಾದ ಮಂಡಿಸಿದರು.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp