ಮುಖ್ಯಮಂತ್ರಿಯಾಗಿ ಮುಂದುವರೆಯಬೇಕಾದರೆ ಮೈತ್ರಿ ಅಭ್ಯರ್ಥಿ ಗೆಲ್ಲಿಸಿ: ಸಿಎಂ ಕುಮಾರಸ್ವಾಮಿ

ಮೈತ್ರಿ ಅಭ್ಯರ್ಥಿ ವಿರುದ್ಧ ಜೆಡಿಎಸ್ ಪಕ್ಷದಿಂದಲೇ ಅಪಪ್ರಚಾರ ಮಾಡಲಾಗುತ್ತಿದೆ ಎಂಬ ಮಾಹಿತಿ ಇದೆ. ಮತದಾರರು ಗೊಂದಲಕ್ಕೆ ಒಳಗಾಗದೆ ಅಭ್ಯರ್ಥಿ....
ಎಚ್ ಡಿ ಕುಮಾರಸ್ವಾಮಿ
ಎಚ್ ಡಿ ಕುಮಾರಸ್ವಾಮಿ
ಕೋಲಾರ: ಮೈತ್ರಿ ಅಭ್ಯರ್ಥಿ ವಿರುದ್ಧ ಜೆಡಿಎಸ್ ಪಕ್ಷದಿಂದಲೇ ಅಪಪ್ರಚಾರ ಮಾಡಲಾಗುತ್ತಿದೆ ಎಂಬ ಮಾಹಿತಿ ಇದೆ. ಮತದಾರರು ಗೊಂದಲಕ್ಕೆ ಒಳಗಾಗದೆ ಅಭ್ಯರ್ಥಿ ಕೆ.ಎಚ್. ಮುನಿಯಪ್ಪ ಅವರನ್ನು ಬೆಂಬಲಿಸಬೇಕು ಎಂದು ಮುಖ್ಯಮಂತ್ರಿ‌ ಎಚ್.ಡಿ.ಕುಮಾರಸ್ವಾಮಿ ಮನವಿ‌ ಮಾಡಿದ್ದಾರೆ.
ಇಂದು ಕೋಲಾರದಲ್ಲಿ ನಡೆದ ಕಾಂಗ್ರೆಸ್-ಜೆಡಿಎಸ್ ಪರಿವರ್ತನಾ ಸಮಾವೇಶದಲ್ಲಿ ಮಾತನಾಡಿದ ಅವರು, ಮೈತ್ರಿ ಪಕ್ಷದ ಅಭ್ಯರ್ಥಿ ಬಗ್ಗೆ ಮಾಲೂರಿನಲ್ಲಿ ಜೆಡಿಎಸ್ ಪಕ್ಷದಿಂದಲೇ ಅಪಪ್ರಚಾರ ಮಾಡಲಾಗುತ್ತಿದೆ ಎಂಬುದು ತಮ್ಮ ಗಮನಕ್ಕೆ ಬಂದಿದೆ. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಯಾಗಿ ಮುಂದುವರೆಯಬೇಕಾದರೆ ಕೋಲಾರದಲ್ಲಿ ಕೆ.ಎಚ್.ಮುನಿಯಪ್ಪ ಅವರನ್ನು ಗೆಲ್ಲಿಸಬೇಕು ಎಂದು ಕರೆ ನೀಡಿದರು. 
ದೇಶದ ಹಿತದೃಷ್ಟಿಯಿಂದ ದೇಶಕ್ಕೆ ತಲೆದೋರಿರುವ ಅಭದ್ರತೆಯಿಂದ ಮೈತ್ರಿ ಸರ್ಕಾರ ರಚನೆಯಾಗಿದೆ. ಮೈತ್ರಿ ಸರ್ಕಾರದಲ್ಲಿ ಜನಪರ ಯೋಜನೆಗಳೂ ಸೇರಿದಂತೆ ಸಿದ್ದರಾಮಯ್ಯ ಅವರು‌ ಜಾರಿಗೊಳಿಸಿದ ಯೋಜನೆಗಳನ್ನು ಜಾರಿಗೊಳಿಸಲಾಗಿದೆ‌. ಸಾಲಮನ್ನಾ ಬಗ್ಗೆ ಕೆಲವರು ಅಪಪ್ರಚಾರ ಮಾಡುತ್ತಿದ್ದು, ಸುಳ್ಳು ಅಪಪ್ರಚಾರಗಳಿಗೆ ಜನರು ಕಿವಿಗೊಡಬಾರದು ಎಂದು ಮನವಿ ಮಾಡಿದರು.
ಕೋಲಾರದ ರೇಷ್ಮೆ ಬೆಳೆಗಾರರ ಸಮಸ್ಯೆಗಳ ಬಗ್ಗೆ ವಿಧಾನಸೌಧದಲ್ಲಿ ಸಭೆ ನಡೆಸಿ ಬೆಂಬಲ ಬೆಲೆ‌ ಬದಲಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಯೋಜನೆ ರೂಪಿಸಲಾಗಿದೆ. ಕೆ.ಸಿ.ವ್ಯಾಲಿ ಮೇಲಿನ ತಡೆಯನ್ನು ನ್ಯಾಯಾಲಯ ತೆರವುಗೊಳಿಸಿದೆ. ಶುದ್ದೀಕರಣ ಘಟಕವನ್ನು ಕೆ.ಸಿ.ವ್ಯಾಲಿಯಲ್ಲಿ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ.‌ ಮೇಕೆದಾಟು ಯೋಜನೆಗೆ ಅನುಮತಿ ಕೋರಿದ್ದರೂ ತಮಿಳುನಾಡು ಸರ್ಕಾರ ಆಕ್ಷೇಪದಿಂದ ಕೇಂದ್ರ ಸರ್ಕಾರ ಮೀನಾಮೇಷ‌ ಎಣಿಸುತ್ತಿದೆ ಎಂದು ದೂರಿದರು.
ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಗೆ 6 ರೂ. ಪ್ರೋತ್ಸಾಹ ಧನ ನೀಡಲಾಗಿದೆ. ರೇಷ್ಮೆ ಬೆಳೆಗೆ ಪ್ರೋತ್ಸಾಹ ಧನ ನೀಡಲು ಚರ್ಚೆ ನಡೆಸಿದ್ದೇವೆ. 350 ರೂ. ನಿಂದ 400 ರೂ. ಏರಿಕೆಗೆ ಚಿಂತನೆ ನಡೆದಿದೆ. ಗೃಹ ಲಕ್ಷ್ಮಿ ಬೆಳೆಸಾಲ ಯೋಜನೆ ಜಾರಿಗೆ ತರುತ್ತಿದ್ದೇವೆ. ಸಾಲಕ್ಕೆ ಸರ್ಕಾರವೇ ಬಡ್ಡಿ ಕಟ್ಟಲಿದೆ. ಎತ್ತಿನಹೊಳೆ ಯೋಜನೆ ತ್ವರಿತ ಕಾಮಗಾರಿ ಮುಗಿಸಲಿದ್ದೇವೆ. ಯೋಜನೆ ಜಾರಿಯಾದರೆ  ಕೋಲಾರಕ್ಕೂ ಕುಡಿಯುವ ನೀರು ದೊರೆಯಲಿದೆ ಎಂದರು. 
ಕೇಂದ್ರದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುವುದಿಲ್ಲ. ಮೋದಿ ಮತ್ತೆ ಪ್ರಧಾನಿಯಾಗಲು ಸಾಧ್ಯವಿಲ್ಲ. ರಾಹುಲ್ ಗಾಂಧಿ ನೇತೃತ್ವದಲ್ಲಿ ಕೇಂದ್ರದಲ್ಲಿ ಸರ್ಕಾರ ರಚನೆಯಾಗಲಿದೆ ಎಂದು ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com