ನೋಟ್ ಬ್ಯಾನ್ ನಂತರ ದೇಶದಲ್ಲಿ 50 ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ: ವರದಿ

2016ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗರಿಷ್ಠ ಮೌಲ್ಯದ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ನಂತರ ಕಳೆದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: 2016ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗರಿಷ್ಠ ಮೌಲ್ಯದ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ನಂತರ ಕಳೆದ ಎರಡು ವರ್ಷಗಳಲ್ಲಿ ದೇಶದಲ್ಲಿ ಬರೋಬ್ಬರಿ 50 ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂಬ ಕಳವಳಕಾರಿ ಅಂಶ ಈಗ ಬಹಿರಂಗವಾಗಿದೆ.
ಅಜೀಮ್ ಪ್ರೇಮ್​ಜೀ ವಿಶ್ವವಿದ್ಯಾಲಯದ ಸೆಂಟರ್‌ ಫಾರ್‌ ಸಸ್ಟೈನೇಬಲ್‌ ಎಂಪ್ಲಾಯ್ಮೆಂಟ್‌ ಮಂಗಳವಾರ ಬಿಡುಗಡೆ ಮಾಡಿರುವ 'ಸ್ಟೇಟ್‌ ಆಫ್‌ ವರ್ಕಿಂಗ್‌ ಇಂಡಿಯಾ 2019'ರ ವರದಿ ಪ್ರಕಾರ, 2016ರ ನಂತರ ದೇಶದಲ್ಲಿ ನಿರುದ್ಯೋಗ ಪ್ರಮಾಣದಲ್ಲಿ ತೀವ್ರ ಹೆಚ್ಚಳವಾಗಿದ್ದು, ಕಳೆದ ಎರಡು ವರ್ಷಗಳಲ್ಲಿ 50 ಲಕ್ಷ ಪುರುಷರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ತಿಳಿಸಿದೆ.
ಕಳೆದ ಒಂದು ದಶಕದಿಂದಲೂ ದೇಶದಲ್ಲಿ ನಿರುದ್ಯೋಗ ಪ್ರಮಾಣ ನಿರಂತರವಾಗಿ ಏರಿಕೆಯಾಗುತ್ತಲೇ ಇದೆ. ಆದರೆ, 2016ರ ನಂತರ ನಿರುದ್ಯೋಗ ಪ್ರಮಾಣ ಉಚ್ಛ್ರಾಯ ಮಟ್ಟ ತಲುಪಿತು ಎಂದು ಈ ವರದಿ ಹೇಳುತ್ತಿದೆ. 
ವರದಿಯ ಪ್ರಕಾರ, 20-24 ವಯೋಮಾನದ ಯುವಸಮುದಾಯದವರ ಉದ್ಯೋಗಕ್ಕೇ ಅತಿ ಹೆಚ್ಚು ಕುತ್ತು ಬಂದಿದೆ. ನಗರ, ಗ್ರಾಮೀಣ ಎರಡೂ ಭಾಗದವರಿಗೂ ನಿರುದ್ಯೋಗದ ಬಿಸಿ ತಟ್ಟಿದೆ. 
ಉದ್ಯೋಗ ವಿಚಾರದಲ್ಲಿ ಸದಾ ಹಿನ್ನಡೆಯಲ್ಲಿರುವ ಮಹಿಳೆಯರಿಗೆ 2016ರ ನಂತರ ಅತೀ ಹೆಚ್ಚು ಸಂಕಷ್ಟದ ಪರಿಸ್ಥಿತಿ ಎದುರಾಗಿದೆ. ಹಾಗೆಯೇ, ಸುಶಿಕ್ಷಿತರ ನಿರುದ್ಯೋಗದಲ್ಲೂ ಭಾರೀ ಏರಿಕೆಯಾಗಿದೆ ಎಂದು ವರದಿ ವಿವರಿಸಿದೆ. 
ಪ್ರಧಾನಿ ಮೋದಿ ಅವರು ರಾತ್ರೋರಾತ್ರಿ ಭ್ರಷ್ಟಾಚಾರ, ಕಪ್ಪು ಹಣ ಹಾಗೂ ಭಯೋತ್ಪಾದನೆ ಹಣಕಾಸಿನ ನೆರವು ತಡೆಯಲು 500 ಹಾಗೂ 1000 ರುಪಾಯಿ ನೋಟ್ ನಿಷೇಧಿಸುತ್ತಿರುವುದಾಗಿ ಘೋಷಿಸಿದ್ದರು. ಆದರೆ ನಿಷೇಧಗೊಂಡಿದ್ದ ನೋಟುಗಳ ಪೈಕಿ ಶೇ.99.3ರಷ್ಟು ನೋಟುಗಳು ಆರ್‌ಬಿಐಗೆ ಮರಳಿದ್ದವು. ನೋಟು ನಿಷೇಧ ಕ್ರಮ ಸಂಪೂರ್ಣ ವಿಫಲವಾಗಿದೆ ಎಂದು ವಿತ್ತ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ನ್ಯಾಷನಲ್‌ ಸ್ಯಾಂಪಲ್‌ ಸರ್ವೇ ಆಫೀಸ್‌ (ಎನ್‌ಎಸ್‌ಎಸ್‌ಒ) ಬಿಡುಗಡೆ ಮಾಡಿದ 2017-18ರ ಎಂಪ್ಲಾಯ್ಮೆಂಟ್‌ ಸರ್ವೇಯಲ್ಲಿ ಉದ್ಯೋಗ ನಷ್ಟ 40 ವರ್ಷಗಳಲ್ಲೇ ಅಧಿಕ ಎನಿಸಿಕೊಂಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com