ಬೆಂಗಳೂರು ಪತ್ರಕರ್ತನ ಮನವಿಗೆ ಸ್ಪಂದಿಸಿದ ಛತ್ತೀಸ್ ಘಡ ಪೊಲೀಸರು: ಬುಡಕಟ್ಟು ಕುಟುಂಬಕ್ಕೆ ನೆರವು

ಆಸ್ಪತ್ರೆಯ ವೈದ್ಯಕೀಯ ಚಿಕಿತ್ಸೆಯ ಬಿಲ್ ಪಾವತಿಸಲು ಸಾಧ್ಯವಾಗದೇ ತೊಂದರೆಯಲ್ಲಿದ್ದ ಬೈಗಾ ಬುಡಕಟ್ಟು ಸಮುದಾಯಕ್ಕೆ ಸೇರಿದ ಮಹಿಳೆಯ ಮೃತ ದೇಹವನ್ನು ಸಂಬಂಧಿಕರಿಗೆ ಒಪ್ಪಿಸಲು ಛತ್ತೀಸ್ ಗಡ ಪೊಲೀಸರು ಸ್ಪಂದಿಸಿ ಮಾನವೀಯತೆ ಮೆರೆದ ಘಟನೆಯೊಂದು ವರದಿಯಾಗಿದೆ.

Published: 29th April 2019 12:00 PM  |   Last Updated: 29th April 2019 08:26 AM   |  A+A-


DM Awasthi

ಡಿ.ಎಂ. ಅಶ್ವತಿ

Posted By : ABN ABN
Source : UNI
ರಾಯಪುರ: ಆಸ್ಪತ್ರೆಯ ವೈದ್ಯಕೀಯ ಚಿಕಿತ್ಸೆಯ ಬಿಲ್ ಪಾವತಿಸಲು ಸಾಧ್ಯವಾಗದೇ ತೊಂದರೆಯಲ್ಲಿದ್ದ ಬೈಗಾ ಬುಡಕಟ್ಟು ಸಮುದಾಯಕ್ಕೆ ಸೇರಿದ ಮಹಿಳೆಯ ಮೃತ ದೇಹವನ್ನು ಸಂಬಂಧಿಕರಿಗೆ ಒಪ್ಪಿಸಲು ಛತ್ತೀಸ್ ಗಡ ಪೊಲೀಸರು ಸ್ಪಂದಿಸಿ ಮಾನವೀಯತೆ ಮೆರೆದ ಘಟನೆಯೊಂದು ವರದಿಯಾಗಿದೆ.

ಸುಟ್ಟ ಗಾಯಗಳ ವಿಭಾಗದಲ್ಲಿ ಈ ಬುಡಕಟ್ಟು ಸಮುದಾಯದ ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟಿದ್ದಳು. ಆಸ್ಪತ್ರೆ ಚಿಕಿತ್ಸಾ ಮೊತ್ತ 80 ಸಾವಿರ ರೂ ಪಾವತಿಸಲು ಸಾಧ್ಯವಾಗದ ಕಾರಣ ಆಸ್ಪತ್ರೆ ಆಡಳಿತ ಮಂಡಳಿ  ಮೃತ ದೇಹವನ್ನು ವಾರಸುದಾರರಿಗೆ ನೀಡಿರಲಿಲ್ಲ.

ಈ ಮಾಹಿತಿಯನ್ನು ಬೆಂಗಳೂರು ಮೂಲದ ರಾಷ್ಟ್ರೀಯ ಸುದ್ದಿ ಸಂಸ್ಥೆಯ ಪತ್ರಕರ್ತ ಮಂಜು ಸಾಯಿನಾಥ್ ಮೂಲಕ ತಿಳಿದುಕೊಂಡ ಪೊಲೀಸ್ ಮಹಾನಿರ್ದೇಶಕ ಮಹಾ ನಿರ್ದೇಶಕ ಡಿ.ಎಂ. ಅಶ್ವತಿ ಅವರು ಮಧ್ಯ ಪ್ರವೇಶಿಸಿ ಮೃತ ದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಧ್ಯಪ್ರದೇಶದ ಶಾಹ್ ದೋಲ್ ವಾಸಿಯಾದ ಕೇಶವ್ ಪ್ರಸಾದ್ ಎಂಬುವರ ಪತ್ನಿಯ ಮೃತದೇಹವನ್ನು ವಾರಸುದಾರರಿಗೆ ಒಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸ್ ಮಹಾನಿರ್ದೇಶಕರು ದುರ್ಗ್ ವಲಯದ ಪೊಲೀಸ್ ಮಹಾ ನಿರೀಕ್ಷಕರ ಹಿಮಾಂಶು ಗುಪ್ತ ಅವರಿಗೆ ಸೂಚನೆ ನೀಡಿದ್ದರು.

ಗುಪ್ತ ಅವರು ತಕ್ಷಣವೇ ಬಿಲಾಯಿ ಸ್ಟೀಲ್ ಪ್ಲಾಂಟ್ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಮೊತ್ತವನ್ನು ಮನ್ನಾ ಮಾಡುವಂತೆ ಹಾಗೂ ಮೃತದೇಹವನ್ನು ಕುಟುಂಬಕ್ಕೆ ಒಪ್ಪಿಸುವಂತೆ ಮಾಡಿದ ಮನವಿಗೆ ಆಸ್ಪತ್ರೆ ಸಹ ಸ್ಪಂದಿಸಿದೆ ಎನ್ನಲಾಗಿದೆ.

ವೈದ್ಯಕೀಯ ಮೊತ್ತ ಪಾವತಿಸದ ಕಾರಣ ಬಿಲಾಯಿ ಸ್ಟೀಲ್ ಪ್ಲಾಂಟ್ ಆಸ್ಪತ್ರೆಯ ಕಾರ್ಯ ನಿರ್ವಹಣಾಧಿಕಾರಿಗಳು ಮೃತ ದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲು ನಿರಾಕರಿಸಿದ್ದೇ ಈ ಘಟನೆಗೆ ಕಾರಣವಾಗಿದೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp