ಉನ್ನಾವೊ ರೇಪ್ ಕೇಸ್: ಸಿಬಿಐ ಅಧಿಕಾರಿಗೆ ಸುಪ್ರೀಂ ಕೋರ್ಟ್ ಸಮ್ಮನ್ಸ್

ಉನ್ನಾವೊ ಅತ್ಯಾಚಾರ ಪ್ರಕರಣದ ತನಿಖೆಯ ಪ್ರಗತಿ ಕುರಿತು ವಿವರ ಪಡೆಯಲು ಸಿಬಿಐ ಅಧಿಕಾರಿಗೆ ...
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
ನವದೆಹಲಿ: ಉನ್ನಾವೊ ಅತ್ಯಾಚಾರ ಪ್ರಕರಣದ ತನಿಖೆಯ ಪ್ರಗತಿ ಕುರಿತು ವಿವರ ಪಡೆಯಲು ಸಿಬಿಐ ಅಧಿಕಾರಿಗೆ ಸುಪ್ರೀಂ ಕೋರ್ಟ್ ಗುರುವಾರ ಮಧ್ಯಾಹ್ನ 12 ಗಂಟೆಗೆ ನ್ಯಾಯಾಲಯಕ್ಕೆ ಬರುವಂತೆ ಸಮ್ಮನ್ಸ್ ನೀಡಿದೆ.
ಕೇಸಿನ ತನಿಖೆಯಲ್ಲಿ ಯಾವ ರೀತಿಯ ಪ್ರಗತಿಯಾಗಿದೆ ಎಂದು ವಿವರಿಸುವಂತೆ ನ್ಯಾಯಾಲಯಕ್ಕೆ ತಿಳಿಸುವಂತೆ ಸಿಬಿಐ ಅಧಿಕಾರಿಗೆ ಸೂಚನೆ ನೀಡಲಾಗಿದೆ. ತನಿಖೆಯ ಸ್ಥಿತಿಗತಿಯ ಕುರಿತು ಕೂಡ ಸಿಬಿಐ ಅಧಿಕಾರಿ ಬಳಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ನ್ಯಾಯಮೂರ್ತಿ ರಂಜನ್ ಗೊಗೊಯ್ ವಿವರಣೆ ಕೇಳಿದ್ದಾರೆ. 
ಈ ಮಧ್ಯೆ ಸುಪ್ರೀಂ ಕೋರ್ಟ್ ಕೇಸಿನ ವಿಚಾರಣೆಯನ್ನು ಬೇರೆ ನ್ಯಾಯಾಲಯಕ್ಕೆ ವರ್ಗಾಯಿಸುವ ಸಾಧ್ಯತೆಯಿದೆ.
ಸಿಬಿಐ ಅಧಿಕಾರಿ ಲಕ್ನೊದಲ್ಲಿ ಇರುವುದರಿಂದ ಮಧ್ಯಾಹ್ನ 12 ಗಂಟೆಗೆ ದೆಹಲಿ ತಲುಪುವುದು ಕಷ್ಟವಾಗುತ್ತದೆ, ನಾಳೆ ಬೆಳಗ್ಗೆ 10.30ಕ್ಕೆ ವಿಚಾರಣೆಯನ್ನು ಮುಂದೂಡಬಹುದೇ ಎಂದು ಮನವಿ ಮಾಡಿಕೊಂಡಿರುವುದಾಗಿ ಹಿರಿಯ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮಾಡಿಕೊಂಡಿರುವ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಗೊಗೊಯ್ ತಿರಸ್ಕರಿಸಿದ್ದಾರೆ. 
ಕೇಸಿನ ಬಗ್ಗೆ ಇದುವರೆಗೆ ನಡೆಸಿರುವ ತನಿಖೆಯ ಸಂಪೂರ್ಣ ವಿವರಣೆ ನೀಡುವಂತೆ ಮುಖ್ಯ ನ್ಯಾಯಮೂರ್ತಿಗಳು ಆದೇಶಿಸಿದ್ದಾರೆ.
ಅಗತ್ಯಬಿದ್ದರೆ ಚೇಂಬರ್ ವಿಚಾರಣೆ ನಡೆಯಬಹುದು. ಅತ್ಯಾಚಾರ ಸಂತ್ರಸ್ತೆಯ ಕುಟುಂಬದವರು ಈಗಾಗಲೇ ನ್ಯಾಯಪೀಠಕ್ಕೆ ಮನವಿ ಮಾಡಿ ಶಾಸಕ ಸೆಂಗರ್ ವಿರುದ್ಧದ ಕೇಸು ಸೇರಿದಂತೆ ಎಲ್ಲಾ ನಾಲ್ಕು ಕೇಸುಗಳನ್ನು ದೆಹಲಿಗೆ ವರ್ಗಾಯಿಸುವಂತೆ ಕೇಳಿಕೊಂಡಿದ್ದಾರೆ. 
ಎರಡು ವರ್ಷಗಳ ಹಿಂದೆ ಉನ್ನಾವೊದಲ್ಲಿ ಬಿಜೆಪಿ ಶಾಸಕ ಕುಲ್ದೀಪ್ ಸಿಂಗ್ ಸೆಂಗರ್ ನಿಂದ ಅತ್ಯಾಚಾರಕ್ಕೊಳಗಾದ 19 ವರ್ಷದ ಯುವತಿ ಕಳೆದ ಭಾನುವಾರ ನಡೆದ ಕಾರು ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದಾಳೆ.
ಇದೀಗ ಬಂದಿರುವ ಮಾಹಿತಿ ಪ್ರಕಾರ, ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡಿರುವ ಅವನೀಶ್ ಅವಸ್ತಿ ತನಿಖೆಯ ಇದುವರೆಗಿನ ಬೆಳವಣಿಗೆ ಕುರಿತು ವರದಿ ಕೇಳಿದ್ದಾರೆ. 

ಸುಪ್ರೀಂ ಕೋರ್ಟ್ ಸಮ್ಮನ್ಸ್ ನಂತೆ ಸಿಬಿಐ ಜಂಟಿ ನಿರ್ದೇಶಕ ಸಂಪತ್ ಮೀನಾ ಸುಪ್ರೀಂ ಕೋರ್ಟ್ ಕಚೇರಿಗೆ ತಲುಪಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com