ಯುಎಪಿಎ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರ

ಸಮಾಜದಲ್ಲಿ ಕಾನೂನುಬಾಹಿರ ಚಟುವಟಿಕೆ ನಡೆಸುವ ವ್ಯಕ್ತಿಯನ್ನು ಭಯೋತ್ಪಾದಕ ಎಂದು ಘೋಷಿಸಿ ಆತನ ಆಸ್ತಿಯನ್ನು ಮುಟ್ಟುಗೋಲು ಹಾಕುವುದಕ್ಕೆ ...
ರಾಜ್ಯಸಭೆ
ರಾಜ್ಯಸಭೆ
ನವದೆಹಲಿ: ಸಮಾಜದಲ್ಲಿ ಕಾನೂನುಬಾಹಿರ ಚಟುವಟಿಕೆ ನಡೆಸುವ ವ್ಯಕ್ತಿಯನ್ನು ಭಯೋತ್ಪಾದಕ ಎಂದು ಘೋಷಿಸಿ ಆತನ ಆಸ್ತಿಯನ್ನು ಮುಟ್ಟುಗೋಲು ಹಾಕುವುದಕ್ಕೆ ಅವಕಾಶ ಮಾಡಿಕೊಡುವ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2019ಕ್ಕೆ(ಯುಎಪಿಎ) ರಾಜ್ಯಸಭೆಯಲ್ಲಿ ಅನುಮೋದನೆ ಸಿಕ್ಕಿದೆ. 
ಶುಕ್ರವಾರ ರಾಜ್ಯಸಭೆ ಕಲಾಪ ಆರಂಭಗೊಂಡ ನಂತರ ಕೆಲ ಹೊತ್ತಿನ ಬಳಿಕ ಮಸೂದೆ ಪರ-ವಿರೋಧವಾಗಿ ಮತ ಚಲಾವಣೆ ನಡೆಯಿತು. ಮಸೂದೆಯನ್ನು ಪರಿಶೀಲನೆಗೆ ಆಯ್ಕೆ ಸಮಿತಿಗೆ ಕಳುಹಿಸಬೇಕೆಂದು ವಿರೋಧ ಪಕ್ಷಗಳು ನಿಲುವಳಿ ಮಂಡಿಸಿದವು, ಇದಕ್ಕೆ ಸದನದಲ್ಲಿ ವಿರುದ್ಧವಾಗಿ 104 ಮತಗಳು ಮತ್ತು ಪರವಾಗಿ 85 ಮತಗಳು ಬಿದ್ದುದರಿಂದ ಆಯ್ಕೆ ಸಮಿತಿಗೆ ಹೋಗದೆ ರಾಜ್ಯಸಭೆಯಲ್ಲಿ ಅಂಗೀಕಾರವಾಯಿತು. 
ಸಮಾಜದಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಸುವ ವ್ಯಕ್ತಿಯನ್ನು ಭಯೋತ್ಪಾದಕ ಎಂದು ಘೋಷಿಸಲು ಸರ್ಕಾರಕ್ಕೆ ಬಲವನ್ನು ನೀಡುವ ಮಸೂದೆ ಇದಾಗಿದೆ. ವ್ಯಕ್ತಿಯೊಬ್ಬನನ್ನು ಭಯೋತ್ಪಾದಕ ಎಂದು ಹೇಗೆ ಪರಿಗಣಿಸುವುದು ಎಂದು ಮಸೂದೆಯಲ್ಲಿ ಸ್ಪಷ್ಟವಾಗಿ ನಮೂದಿಸಿಲ್ಲ, ಇದು ಕಠಿಣವಾಗಿದೆ, ಹೀಗಾಗಿ ಮಸೂದೆಯನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿದೆ ಎಂದು ವಿರೋಧ ಪಕ್ಷಗಳು ಆರಂಭದಲ್ಲಿ ಸದನದಲ್ಲಿ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದವು. 
1967ರ ಕಾನೂನು ಬಾಹಿರ ಚಟುವಟಿಕೆಗಳು(ತಡೆಗಟ್ಟುವಿಕೆ)ಕಾಯ್ದೆಗೆ ತಿದ್ದುಪಡಿ ಕೋರಿ ಲೋಕಸಭೆಯಲ್ಲಿ ಕಳೆದ ವಾರ ಮಂಡಿಸಲಾಗಿದ್ದ ಕಾನೂನುಬಾಹಿರ ಚಟುವಟಿಕೆಗಳು(ತಿದ್ದುಪಡಿ)ವಿಧೇಯಕ ಮಸೂದೆ 2019ಕ್ಕೆ ಧ್ವನಿಮತದ ಮೂಲಕ ಅಂಗೀಕಾರ ಸಿಕ್ಕಿತ್ತು. ಇಂದು ರಾಜ್ಯಸಭೆಯಲ್ಲಿ ಕೂಡ ಧ್ವನಿಮತದ ಮೂಲಕ ನಡೆದ ಪ್ರಕ್ರಿಯೆಯಲ್ಲಿ ಅಂಗೀಕಾರ ಸಿಕ್ಕಿದೆ.
ಇಂದು ರಾಜ್ಯಸಭೆಯಲ್ಲಿ ತಿದ್ದುಪಡಿ ಮಸೂದೆ ಪರ 147 ಮತಗಳು ಚಲಾವಣೆಯಾದರೆ ವಿರುದ್ಧವಾಗಿ ಕೇವಲ 42 ಮತಗಳು ಮಾತ್ರ ಬಿದ್ದವು. ಹೀಗಾಗಿ ಸುಗಮವಾಗಿ ಮೇಲ್ಮನೆಯಲ್ಲಿ ಕೂಡ ಅಂಗೀಕಾರವಾಯಿತು. 
ಇಂದು ರಾಜ್ಯಸಭೆ ಕಲಾಪದಲ್ಲಿ ಮಾತನಾಡಿದ ಗೃಹ ಸಚಿವ ಅಮಿತ್ ಶಾ, ಯುಎಪಿಎ ಮಸೂದೆ ಇರುವುದು ದೇಶದಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಟ ನಡೆಸುವುದಕ್ಕೆ ಹೊರತು ಬೇರೆ ಯಾವ ಉದ್ದೇಶಕ್ಕೆ ಕೂಡ ಅಲ್ಲ, ಭಯೋತ್ಪಾದಕ ಸಂಘಟನೆಯನ್ನು ಈಗಾಗಲೇ ನಿಷೇಧಿಸಿರುವಾಗ ಅದರ ಜೊತೆ ಗುರುತಿಸಿಕೊಂಡ ವ್ಯಕ್ತಿಯನ್ನು ಭಯೋತ್ಪಾದಕ ಎಂದು ಏಕೆ ಹೆಸರಿಸಬೇಕು ಎಂದು ಕಾಂಗ್ರೆಸ್ ನಾಯಕ ಚಿದಂಬರಂ ಅವರು ಪ್ರಶ್ನಿಸಿದ್ದಾರೆ.
ನಾವು ಒಂದು ಸಂಘಟನೆಯನ್ನು ನಿಷೇಧಿಸಿದರೆ ಆ ಸಂಘಟನೆಯ ವ್ಯಕ್ತಿ ಇನ್ನೊಂದು ಭಯೋತ್ಪಾದಕ ಸಂಘಟನೆಯನ್ನು ಹುಟ್ಟುಹಾಕಬಹುದು. ನಾವು ಎಲ್ಲಿಯವರೆಗೆ ಭಯೋತ್ಪಾದಕ ಸಂಘಟನೆಯನ್ನು ನಿಷೇಧಿಸುತ್ತಾ ಹೋಗುವುದು ಹಾಗಾದರೆ ಎಂದು ಪ್ರಶ್ನಿಸಿದರು.
ಈ ದೇಶದಲ್ಲಿ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಏನಾಯಿತು? ಎಲ್ಲಾ ಮಾಧ್ಯಮಗಳ ಮೇಲೆ ನಿಷೇಧ ಹೇರಲಾಗಿತ್ತು. ವಿರೋಧ ಪಕ್ಷದ ನಾಯಕರನ್ನು ಜೈಲಿಗೆ ಹಾಕಲಾಯಿತು. 19 ತಿಂಗಳ ಕಾಲ ಈ ದೇಶದಲ್ಲಿ ಪ್ರಜಾಪ್ರಭುತ್ವ ಇರಲಿಲ್ಲ, ವಿರೋಧ ಪಕ್ಷದ ನಾಯಕರಾದ ನೀವು ಇತಿಹಾಸವನ್ನೊಮ್ಮೆ ನೆನಪು ಮಾಡಿಕೊಳ್ಳಿ, ಇಂದು ಈ ಕಾಯ್ದೆ ಜಾರಿಗೆ ಬಂದರೆ ಕಾನೂನು ದುರುಪಯೋಗವಾಗುವ ಸಾಧ್ಯತೆಯಿದೆ ಎಂದು ಹೇಳುತ್ತೀರಿ ಎಂದು ಪ್ರತಿಪಕ್ಷ ಕಾಂಗ್ರೆಸ್ ನಾಯಕರಿಗೆ ಅಮಿತ್ ಶಾ ತಿರುಗೇಟು ನೀಡಿದರು.
ಸರ್ಕಾರದ ಉದ್ದೇಶಿತ ಮಸೂದೆ ಬಗ್ಗೆ ಸದನದಲ್ಲಿ ಇಂದು ಮಾತನಾಡಿದ ಸಿಪಿಎಂನ ಎಲಮರಮ್ ಕರೀಮ್, ಸರ್ಕಾರ ದೇಶೀಯ ಭಯೋತ್ಪಾದನೆಯನ್ನು ಹೇರಿಕೆ ಮಾಡುತ್ತಿದ್ದು ಭಿನ್ನ ನಿಲುವು ತಳೆದ ವ್ಯಕ್ತಿಗಳನ್ನು ಭಯೋತ್ಪಾದಕರೆಂದು ಘೋಷಿಸುವ ಸಾಧ್ಯತೆಯಿದ್ದು ಇದರಿಂದ ದೊಡ್ಡ ಮಟ್ಟದಲ್ಲಿ ವ್ಯಕ್ತಿಗಳ ಮೇಲೆ ಕಿರುಕುಳ ನೀಡುವ ಸಾಧ್ಯತೆಯಿರುತ್ತದೆ ಮತ್ತು ಅನ್ಯಾಯವಾಗಬಹುದು ಎಂದರು.
ಅಮಿತ್ ಶಾ ಭಾಷಣದ ಸಾರಾಂಶ: ತಿದ್ದುಪಡಿ ವಿಧೇಯಕದಲ್ಲಿ ನಾಲ್ಕು ಹಂತಗಳ ಪರಿಶೀಲನೆ ಮಾಡಲಾಗಿದ್ದು ಇಲ್ಲಿ ಯಾವುದೇ ರೀತಿಯಲ್ಲಿಯೂ ಮಾನವ ಹಕ್ಕುಗಳ ಉಲ್ಲಂಘನೆಯಾಗುವುದಿಲ್ಲ.
ಭಯೋತ್ಪಾದನೆ ಸಂಘಟನೆಗಳನ್ನು ಮಾತ್ರ ನಿಷೇಧಿಸಿದರೆ ಭಯೋತ್ಪಾದಕ ಮತ್ತೊಂದು ಸಂಘಟನೆ ಹುಟ್ಟುಹಾಕುವ ಸಾಧ್ಯತೆಯಿರುವುದರಿಂದ ಅಕ್ರಮ ಮತ್ತು ಸಮಾಜಘಾತುಕ ಚಟುವಟಿಕೆಗಳಲ್ಲಿ ತೊಡಗಿಕೊಂಡವರನ್ನು ಭಯೋತ್ಪಾದಕ ಎಂದು ಘೋಷಿಸಿದರೆ ಮಾತ್ರ ಈ ಪಿಡುಗನ್ನು ದೇಶದಿಂದ ಹೋಗಲಾಡಿಸಲು ಸಾಧ್ಯ.
ಭಯೋತ್ಪಾದನೆ ಚಟುವಟಿಕೆ ಅಥವಾ ಭಯೋತ್ಪಾದಕರಿಗೆ ಪ್ರೋತ್ಸಾಹ ನೀಡುವ ಚಟುವಟಿಕೆಯಲ್ಲಿ ತೊಡಗಿದವರನ್ನು ಭಯೋತ್ಪಾದಕ ಎಂದು ಘೋಷಿಸಲಾಗುತ್ತದೆ. 
ಭಯೋತ್ಪಾದನೆಗೆ ಸಂಬಂಧಪಟ್ಟ ಕೇಸುಗಳ ತ್ವರಿತ ವಿಚಾರಣೆಗೆ ಈ ಕಾಯ್ದೆಯಿಂದ ಸಹಕಾರಿ.
ಭಯೋತ್ಪಾದನೆಗೆ ಜಾತಿ, ಧರ್ಮವಿಲ್ಲ, ಅದು ಮಾನವ ಕುಲಕ್ಕೆ ವಿರುದ್ಧವಾದುದು, ಇದಕ್ಕೆ ಎಲ್ಲಾ ಪಕ್ಷಗಳು ಸಹಕರಿಸಬೇಕು. 
ರಾಷ್ಟ್ರೀಯ ತನಿಖಾ ಸಂಸ್ಥೆಯ ದಾಖಲೆ ಪ್ರಕಾರ ದಾಖಲಾಗಿರುವ 278 ಭಯೋತ್ಪಾದಕ ಕೇಸುಗಳ ಪೈಕಿ 204 ಕೇಸುಗಳಿಗೆ ಆರೋಪಪಟ್ಟಿ ಸಲ್ಲಿಸಲಾಗಿದೆ.
ತೀರ್ಪುಗಳು ಬಂದ 54 ಪ್ರಕರಣಗಳಲ್ಲಿ 48 ಪ್ರಕರಣಗಳಲ್ಲಿ ಅಪರಾಧ ಸಾಬೀತಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com