ಲಕ್ನೊದಲ್ಲಿಯೇ ಚಿಕಿತ್ಸೆ ಮುಂದುವರಿಯಲಿ; ಕೋರ್ಟ್ ಗೆ ಉನ್ನಾವೊ ಅತ್ಯಾಚಾರ ಸಂತ್ರಸ್ತೆಯ ಕುಟುಂಬಸ್ಥರ ಹೇಳಿಕೆ

ಕಳೆದ ಭಾನುವಾರ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ಉನ್ನಾವೊ ಅತ್ಯಾಚಾರ ಸಂತ್ರಸ್ತೆಗೆ ಲಕ್ನೊದ ಕಿಂಗ್ ಜಾರ್ಜ್ ಮೆಡಿಕಲ್ ಕಾಲೇಜಿನಲ್ಲಿಯೇ ಚಿಕಿತ್ಸೆ ...
ಸುಪ್ರೀಂ ಕೋರ್ಟ್(ಸಂಗ್ರಹ ಚಿತ್ರ)
ಸುಪ್ರೀಂ ಕೋರ್ಟ್(ಸಂಗ್ರಹ ಚಿತ್ರ)
ನವದೆಹಲಿ: ಕಳೆದ ಭಾನುವಾರ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ಉನ್ನಾವೊ ಅತ್ಯಾಚಾರ ಸಂತ್ರಸ್ತೆಗೆ ಲಕ್ನೊದ ಕಿಂಗ್ ಜಾರ್ಜ್ ಮೆಡಿಕಲ್ ಕಾಲೇಜಿನಲ್ಲಿಯೇ ಚಿಕಿತ್ಸೆ ಮುಂದುವರಿಸಬೇಕೆಂದು ಆಕೆಯ ಕುಟುಂಬಸ್ಥರು ಸುಪ್ರೀಂ ಕೋರ್ಟ್ ಗೆ ಶುಕ್ರವಾರ ತಿಳಿಸಿದ್ದಾರೆ.
ಲಕ್ನೊ ಆಸ್ಪತ್ರೆಯಿಂದ ದೆಹಲಿಯ ಏಮ್ಸ್ ಆಸ್ಪತ್ರೆಗೆ ಅಗತ್ಯವಿದ್ದರೆ ವರ್ಗಾಯಿಸಬಹುದು, ಈ ವಿಷಯದಲ್ಲಿ ಸಂತ್ರಸ್ತೆಯ ಕುಟುಂಬಸ್ಥರು ಸಂಪೂರ್ಣ ಸ್ವಾತಂತ್ರ್ಯ ಹೊಂದಿದ್ದಾರೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಅತ್ಯಾಚಾರ ಸಂತ್ರಸ್ತೆ, ಆಕೆಯ ಪರ ವಕೀಲರು ಮತ್ತು ಕುಟುಂಬ ಸದಸ್ಯರಿಗೆ ಭದ್ರತೆ ಒದಗಿಸಲು ಈಗಾಗಲೇ ಕ್ರಮ ಕೈಗೊಂಡಿದ್ದೇವೆ ಎಂದು ಸಿಆರ್ ಪಿಎಫ್ ಕೂಡ ನ್ಯಾಯಾಲಯಕ್ಕೆ ತಿಳಿಸಿದೆ.
ಸಂತ್ರಸ್ತೆಯ ಚಿಕ್ಕಪ್ಪ ಮಹೇಶ್ ಸಿಂಗ್ ನ್ನು ರಾಯ್ ಬರೇಲಿ ಜೈಲಿನಿಂದ ತಿಹಾರ್ ಜೈಲಿಗೆ ವರ್ಗಾಯಿಸುವಂತೆ ಆದೇಶ ನೀಡಿದ ಸುಪ್ರೀಂ ಕೋರ್ಟ್, ಸುದ್ದಿ ಮಾಧ್ಯಮದವರು ವರದಿ ಮಾಡುವಾಗ ಅತ್ಯಾಚಾರ ಸಂತ್ರಸ್ತೆಯ ಹೆಸರನ್ನು ಎಲ್ಲಿಯೂ ಬಹಿರಂಗಪಡಿಸದಂತೆ ಸೂಚನೆ ನೀಡಿದೆ.
ಅತ್ಯಾಚಾರ ಸಂತ್ರಸ್ತೆಯ ಅಪಘಾತ ಹಿನ್ನಲೆಯಲ್ಲಿ ಚಿಕಿತ್ಸೆ ಖರ್ಚಿಗೆ ಆಕೆಯ ತಾಯಿಯ ಖಾತೆಗೆ 25 ಲಕ್ಷ ರೂಪಾಯಿ ಮಧ್ಯಂತರ ಪರಿಹಾರವನ್ನು ನ್ಯಾಯಾಲಯದ ಆದೇಶದ ಪ್ರಕಾರ ಠೇವಣಿ ಇಡಲಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.
ನಿನ್ನೆ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಅತ್ಯಾಚಾರ ಸಂತ್ರಸ್ತೆಗೆ ಸಂಬಂಧಿಸಿದ ಎಲ್ಲಾ 5 ಕೇಸುಗಳನ್ನು ಉತ್ತರ ಪ್ರದೇಶದಿಂದ ದೆಹಲಿ ಕೋರ್ಟ್ ಗೆ ವರ್ಗಾಯಿಸುವಂತೆ ಆದೇಶ ನೀಡಿತ್ತು. 
ಪ್ರತಿದಿನ ವಿಚಾರಣೆಯಂತೆ ಮುಖ್ಯ ಕೇಸುಗಳ ತನಿಖೆಯನ್ನು 45 ದಿನಗಳಲ್ಲಿ ಮುಗಿಸುವಂತೆ ಸುಪ್ರೀಂ ಕೋರ್ಟ್ ದೆಹಲಿ ಕೋರ್ಟ್ ಗೆ ನಿಗದಿಪಡಿಸಿ ಸಂತ್ರಸ್ತೆಗೆ ಮಧ್ಯಂತರ ಪರಿಹಾರವಾಗಿ ಉತ್ತರ ಪ್ರದೇಶ ಸರ್ಕಾರ 25 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶ ನೀಡಿತ್ತು.
2017ರಲ್ಲಿ ಅಪ್ರಾಪ್ತೆಯಾಗಿದ್ದಾಗ ಯುವತಿ ಮೇಲೆ ಬಿಜೆಪಿ ಶಾಸಕ ಕುಲ್ ದೀಪ್ ಸಿಂಗ್ ಸೆಂಗರ್ ಅತ್ಯಾಚಾರವೆಸಗಿದ್ದಾರೆ ಎಂಬುದು ಮುಖ್ಯ ಆರೋಪವಾಗಿದ್ದು ಈ ಹಿನ್ನಲೆಯಲ್ಲಿ ಆ ಶಾಸಕನನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.
ಈ ಮಧ್ಯೆ ಪ್ರಕಟಣೆ ಹೊರಡಿಸಿರುವ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯ, ಅಪಘಾತದಲ್ಲಿ ಗಾಯಕ್ಕೀಡಾದ ಅತ್ಯಾಚಾರ ಸಂತ್ರಸ್ತೆಯ ಪರಿಸ್ಥಿತಿ ಸ್ಥಿರವಾಗಿದ್ದು ಈಗಲೂ ವೆಂಟಿಲೇಟರ್ ನಲ್ಲಿದ್ದಾರೆ. ಇನ್ನು ಅವರ ಪರ ವಕೀಲರನ್ನು ವೆಂಟಿಲೇಟರ್ ಅಳವಡಿಕೆಯಿಂದ ತೆಗೆಯಲಾಗಿದೆ ಎಂದು ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com