ವಿಶೇಷ ಸ್ಥಾನಮಾನಕ್ಕೆ ಧಕ್ಕೆಯಾದರೆ ಕಣಿವೆ ರಾಜ್ಯ ಹೊತ್ತಿ ಉರಿಯಲಿದೆ: ಕೇಂದ್ರಕ್ಕೆ ಒಮರ್ ಅಬ್ದುಲ್ಲಾ ಎಚ್ಚರಿಕೆ

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನಕ್ಕೆ ಧಕ್ಕೆಯಾದರೆ ಕಣಿವೆ ರಾಜ್ಯ ಹೊತ್ತಿ ಉರಿಯಲಿದೆ ಎಂದು ಮಾಜಿ ಸಿಎಂ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಒಮರ್ ಅಬ್ದುಲ್ಲಾ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನಕ್ಕೆ ಧಕ್ಕೆಯಾದರೆ ಕಣಿವೆ ರಾಜ್ಯ ಹೊತ್ತಿ ಉರಿಯಲಿದೆ ಎಂದು ಮಾಜಿ ಸಿಎಂ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಒಮರ್ ಅಬ್ದುಲ್ಲಾ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಸ್ತುತ ಸೃಷ್ಟಿಯಾಗಿರುವ ಪ್ರಕ್ಷಬ್ಧ ವಾತಾವರಣದ ಹಿನ್ನಲೆಯಲ್ಲಿ ನಿನ್ನೆ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಅವರು ಕರೆದಿದ್ದ ಸರ್ವಪಕ್ಷ ಸಭೆಯಲ್ಲಿ ಪಾಲ್ಗೊಂಡಿದ್ದ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಒಮರ್ ಅಬ್ದುಲ್ಲಾ ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನದ ಹಕ್ಕಿನೊಂದಿಗೆ ಆಟವಾಡಬಾರದು. ಒಂದು ವೇಳೆ ಮೋದಿ ಸರ್ಕಾರ ಇಂತಹ ದುಸ್ಸಾಹಸಕ್ಕೆ ಕೈಹಾಕಿದರೆ ಇಡೀ ಕಣಿವೆ ರಾಜ್ಯವೇ ಹೊತ್ತಿ ಉರಿಯಲಿದೆ. ಅಲ್ಲದೆ ಕಣಿವೆ ರಾಜ್ಯವನ್ನು 2 ಅಥವಾ 3 ರಾಜ್ಯಗಳಾಗಿ ಇಬ್ಭಾಗಿಸುವ ಪ್ರಯತ್ನಕ್ಕೆ ಕೈ ಹಾಕಿದರೂ ನಾವು ನೋಡುತ್ತ ಸುಮ್ಮನೆ ಕೂರುವುದಿಲ್ಲ ಎಂದು ಹೇಳಿದ್ದಾರೆ.
ಅಂತೆಯೇ ಕಣಿವೆ ರಾಜ್ಯದಲ್ಲಿ ಶಾಂತಿ ಕದಡುವ ಯಾವುದೇ ಪ್ರಯತ್ನಕ್ಕೆ ಭಾರತ ಮತ್ತು ಪಾಕಿಸ್ತಾನ ಸರ್ಕಾರಗಳು ಕೈ ಹಾಕಬಾರದು ಎಂದಿರುವ ಫಾರೂಕ್, ಏನೇ ಆದರೂ ಸಂಯಮ ಕಾಯ್ದುಕೊಳ್ಳುವಂತೆ ಕಾಶ್ಮೀರ ಜನತೆಗೆ ಮನವಿ ಮಾಡಿದ್ದಾರೆ. 
ಇದೇ ವೇಳೆ ನಿನ್ನೆ ನಡೆದ ಸಭೆಯಲ್ಲಿ ನಾಯಕರು ಒಕ್ಕೋರಲಿನ ನಿರ್ಣಯ ಕೈಗೊಂಡಿದ್ದು, ಶೀಘ್ರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ. ಮನವಿಯಲ್ಲಿ ಯಾವುದೇ ಕಾರಣಕ್ಕೂ ಸಂವಿಧಾನ ಆರ್ಚಿಕಲ್ 370 ಮತ್ತು 35ಎ ಮೂಲಕ ಕಾಶ್ಮೀರಕ್ಕೆ ನೀಡಿರುವ ಹಕ್ಕನ್ನು ಕಿತ್ತುಕೊಳ್ಳದಂತೆ ಕೋರಿದ್ದಾರೆ. ಅಲ್ಲದೆ ಯಾವುದೇ ಕಾರಣಕ್ಕೂ ರಾಜ್ಯವನ್ನು ಇಬ್ಭಾಗಿಸುವ ಪ್ರಯತ್ನ ಕೂಡ ಮಾಡಬಾರದು ಎಂದು ಮನವಿ ಮಾಡಿದ್ದಾರೆ.
ಇದೇ ವೇಳೆ ಪಾಕಿಸ್ತಾನ ಸರ್ಕಾರಕ್ಕೂ ಈ ಮೂಲಕ ಮನವಿ ಮಾಡಿರುವ ನಾಯಕರು ಭಾರತ ಸರ್ಕಾರದ ನಡೆಯಿಂದಾಗಿ ಕಣಿವೆಯಲ್ಲಿ ಶಾಂತಿ ಸುವ್ಯವಸ್ಥೆ ಕದಡುವ ಯಾವುದೇ ಪ್ರಯತ್ನಕ್ಕೂ ಕೈಹಾಕಬೇಡಿ ಎಂದು ಮನವಿ ಮಾಡಿದ್ದಾರೆ.
ಸಭೆಯಲ್ಲಿ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಮೆಹಬೂಬಾ ಮುಫ್ತಿ, ಎನ್‌ಸಿಯ ಒಮರ್ ಅಬ್ದುಲ್ಲಾ, ಕಾಂಗ್ರೆಸ್‌ ನ ತಾಜ್ ಮೊಹಿಯುದ್ದೀನ್, ಪಿಡಿಪಿಯ ಮುಜಾಫರ್ ಬೀಗ್, ಸಜಾದ್ ಲೋನ್ ಮತ್ತು ಪೀಪಲ್ಸ್ ಕಾನ್ಫರೆನ್ಸ್‌ ನ ಇಮ್ರಾನ್ ಅನ್ಸಾರಿ, ಜೆ & ಕೆ ಪೀಪಲ್ಸ್ ಮೂವ್‌ ಮೆಂಟ್‌ನ ಶಾ ಫಾಸಲ್ ಮತ್ತು ಎಂ.ವೈ. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾರ್ಕ್ಸ್ವಾದಿ ಮುಖಂಡರು ಭಾಗಿಯಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com