ರಾಜ್ಯಸಭೆಯಲ್ಲಿ ಕಾಶ್ಮೀರ ಪುನರ್ ರಚನೆ ಮಸೂದೆ ಅಂಗೀಕಾರ, ಮತ್ತೆ ಪೂರ್ಣ ಪ್ರಮಾಣದ ರಾಜ್ಯ ಮಾಡಲು ಸಿದ್ಧ ಎಂದ ಅಮಿತ್ ಶಾ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೋಮವಾರ ಮಂಡಿಸಿದ್ದ ಜಮ್ಮು ಮತ್ತು ಕಾಶ್ಮೀರ ಪುನರ್‌ ರಚನೆ ಮಸೂದೆ 2019 ರಾಜ್ಯಸಭೆಯಲ್ಲಿ ಅಂಗೀಕಾರವಾಗಿದೆ...
ಅಮಿತ್ ಶಾ
ಅಮಿತ್ ಶಾ
ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೋಮವಾರ ಮಂಡಿಸಿದ್ದ ಜಮ್ಮು ಮತ್ತು ಕಾಶ್ಮೀರ ಪುನರ್‌ ರಚನೆ ಮಸೂದೆ 2019 ರಾಜ್ಯಸಭೆಯಲ್ಲಿ ಅಂಗೀಕಾರವಾಗಿದೆ. ಈ ಮೂಲಕ ಕಣಿವೆ ರಾಜ್ಯವನ್ನು ಎರಡು ಭಾಗ ಮಾಡಿ ಕೇಂದ್ರಾಡಳಿತ  ಪ್ರದೇಶ ಎಂದು ಘೋಷಿಸಲಾಗಿದೆ.
ಅಮಿತ್ ಶಾ ಅವರು ಇಂದು ರಾಜ್ಯಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370 (3) ನೇ ವಿಧಿಯನ್ನು ರದ್ದುಗೊಳಿಸಿ, ಲಡಾಖ್ ಮತ್ತು ಜಮ್ಮು -ಕಾಶ್ಮೀರ ಎಂಬ ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಕ್ಕೆ ಅವಕಾಶ ಮಾಡಿಕೊಡುವ ಕಾಶ್ಮೀರ ಪುನರ್‌ ರಚನೆ ಮಸೂದೆಯನ್ನು ಮಂಡಿಸಿದರು.
ಮಸೂದೆ ಮಂಡಿಸಿ ಮಾತನಾಡಿದ ಅಮಿತ್ ಶಾ, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ 370 ಮತ್ತು 35ಎ ವಿಧಿ ರದ್ದತಿಯನ್ನು ವಿರೋಧಿಸುವವರ ಮಕ್ಕಳು ಲಂಡನ್ ಮತ್ತು ಯುರೋಪ್‌ ದೇಶಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಜನಸಾಮಾನ್ಯರಿಗೆ 370ನೇ ವಿಧಿಯಿಂದ ಯಾವುದೇ ಅನುಕೂಲ ಆಗಿಲ್ಲ. ಜಮ್ಮು-ಕಾಶ್ಮೀರವನ್ನು ಹಾಳು ಮಾಡಿರುವ 370ನೇ ವಿಧಿಯೇ ಅಲ್ಲಿಯ ಬಡತನಕ್ಕೆ ಕಾರಣ ಎಂದು ಆರೋಪಿಸಿದರು.
370ನೇ ವಿಧಿ ಕೇವಲ ಮೂರು ಕುಟುಂಬಗಳನ್ನು ಮಾತ್ರ ರಕ್ಷಿಸಿದೆ ಎಂದ ಅಮಿತ್ ಶಾ, ಕಾಶ್ಮೀರದ ಸಂಸ್ಕೃತಿಯನ್ನು ಹೇಗೆ ರಕ್ಷಿಸುತ್ತದೆ? ಎಂದು ಪ್ರಶ್ನಿಸಿದರು.
370ನೇ ವಿಧಿ ರದ್ದತಿ ಬಳಿಕ ಜಮ್ಮು-ಕಾಶ್ಮೀರ ನಿಜವಾಗಿಯೂ ಭಾರತದ ಅವಿಭಾಜ್ಯ ಅಂಗವಾಗಲಿದೆ. ನಮಗೆ 10 ವರ್ಷ ಕಾಲಾವಕಾಶ ಕೊಡಿ. ಕಣಿವೆ ರಾಜ್ಯವನ್ನು ನಾವು ಸಮೃದ್ಧ ರಾಜ್ಯವನ್ನಾಗಿ ಮಾಡುತ್ತೇವೆ ಅಮಿತ್ ಶಾ ಭರವಸೆ ನೀಡಿದರು. ಅಲ್ಲದೆ ಕಾಶ್ಮೀರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಾವು 370ನೇ ವಿಧಿಯನ್ನು ರದ್ದುಗೊಳಿಸುತ್ತೇವೆ. ಜಮ್ಮು ಮತ್ತು ಕಾಶೀರವನ್ನು ಮತ್ತೆ ಪೂರ್ಣ ಪ್ರಮಾಣದ ರಾಜ್ಯವನ್ನಾಗಿ ಮಾಡಲು ಸಿದ್ಧ ಎಂದು ಕಾಂಗ್ರೆಸ್ ನಾಯಕ ಚಿದಂಬರಂ ಅವರ ಪ್ರಶ್ನೆಯೊಂದಕ್ಕೆ ಅಮಿತ್ ಶಾ ಉತ್ತರಿಸಿದರು..
ರಾಜ್ಯಸಭೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಹೊಂದಿಲ್ಲ. ಆದರೂ ಸುದೀರ್ಘ ಚರ್ಚೆಯ ಬಳಿಕ ಜಮ್ಮು ಮತ್ತು ಕಾಶ್ಮೀರ ಪುನರ್‌ ರಚನೆ ಮಸೂದೆ 2019 ಅನ್ನು ಮತಕ್ಕೆ ಹಾಕಲಾಯಿತು. ಮಸೂದೆ ಪರವಾಗಿ 125 ಮತಗಳು ಹಾಗೂ ವಿರುದ್ಧವಾಗಿ 61 ಮತಗಳು ಚಲಾವಣೆಯಾದವು.
ಇನ್ನು ಲೋಕಸಭೆಯಲ್ಲಿ ಕೇಂದ್ರ ಸರ್ಕಾರದ ನೀತಿಯನ್ನು ವಿರೋಧಿಸಿ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷದ ಸದಸ್ಯರು ಲೋಕಸಭಾ ಕಲಾಪ ಬಹಿಷ್ಕರಿಸಿ ಹೊರನಡೆದವು.
ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕ ಅಧೀರ್ ರಂಜನ್ ಚೌಧರಿ, ಸೌಗತಾ ರಾಯ್ (ತೃಣಮೂಲ ಕಾಂಗ್ರೆಸ್) ಮತ್ತು ಟಿ ಆರ್ ಬಾಲು (ಡಿಎಂಕೆ) ಮತ್ತಿತರ ಸದಸ್ಯರು ಜಮ್ಮು ಮತ್ತು ಕಾಶ್ಮೀರದ ಮೇಲಿನ ನಿರ್ಣಯವನ್ನು ಕಾರ್ಯರೂಪಕ್ಕೆ ತರಲು ಯತ್ನಿಸಿದ ಸರ್ಕಾರದ ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸಿದರು. 
ಇದು ಕಾನೂನುಬಾಹಿರವಾದ್ದರಿಂದ ಕಲಾಪ ಬಹಿಷ್ಕರಿಸಿ ಹೊರನಡೆಯುತ್ತಿದ್ದೇವೆ ಎಂದು ಅಧೀರ್‌ ರಂಜನ್‌ ಚೌಧರಿ ಹೇಳಿದರು.
ಮಸೂದೆಯನ್ನು ಮಂಡಿಸುವ ಮೊದಲೇ ನಿರ್ಣಯವನ್ನು ಅಂಗೀಕರಿಸುವುದು ಸಂಸತ್ತಿನ ನೀತಿಗೆ ವಿರುದ್ಧವಾಗಿದೆ ಎಂದು ತೃಣಮೂಲ ಸಂಸದ ರಾಯ್ ಆರೋಪಿಸಿದರು.
ನಿರ್ಣಯದ ಪ್ರತಿಗಳನ್ನು ಹಸ್ತಾಂತರಿಸುತ್ತಿದ್ದಂತೆ, ಹಲವಾರು ಸಂಸದರು ಪ್ರತಿಗಳನ್ನು ಹರಿದು ಹಾಕಿ ಪ್ರತಿಭಟಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com