ಕಾಶ್ಮೀರ ಕಗ್ಗಂಟು: ಇಂದು ಮಹತ್ವದ ಸಂಪುಟ ಸಭೆ, ಮೋದಿ-ಶಾ ನಡೆ ಇನ್ನೂ ನಿಗೂಢ!

ಜಮ್ಮು ಮತ್ತು ಕಾಶ್ಮೀರ ವಿಚಾರವಾಗಿ ನಡೆಯುತ್ತಿರುವ ಶೀಥಲಸಮರ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮಹತ್ವದ ಸಂಪುಟ ಸಭೆ ನಡೆಯಲಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಜಮ್ಮು ಮತ್ತು ಕಾಶ್ಮೀರ ವಿಚಾರವಾಗಿ ನಡೆಯುತ್ತಿರುವ ಶೀಥಲಸಮರ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮಹತ್ವದ ಸಂಪುಟ ಸಭೆ ನಡೆಯಲಿದೆ.
ಇಂದು ಬೆಳಗ್ಗೆ 9.30 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರ ದೆಹಲಿ ನಿವಾಸದಲ್ಲಿ ಸಭೆ ನಡೆಯಲಿದ್ದು, ಸಭೆಗೆ ಕೇಂದ್ರ ಸಚಿವರು ಮಾತ್ರವಲ್ಲದೆ ರಕ್ಷಣೆ ಮತ್ತು ಗೃಹ ಇಲಾಖೆ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳ ಉನ್ನತ ಮಟ್ಟದ ಅಧಿಕಾರಿಗಳು ಭಾಗಿಯಾಗಲಿದ್ದಾರೆ. ಇನ್ನು ಇದೇ ಸಂಪುಟಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಿದೆ ಎಂಬ ವದಂತಿ ದಟ್ಟವಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಹಿರಿಯ ಅಧಿಕಾರಿಗಳ ಜತೆಗೆ ಭಾನುವಾರ ಸಭೆ ನಡೆಸಿ ಕಾಶ್ಮೀರದ ಪರಿಸ್ಥಿತಿ ಕುರಿತು ಚರ್ಚೆ ನಡೆಸಿದ್ದಾರೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಧೋವಲ್, ಗುಪ್ತಚರ ಘಟಕದ (ಐ.ಬಿ) ಮುಖ್ಯಸ್ಥ ಅರವಿಂದ ಕುಮಾರ್‌, ಗೃಹ ಕಾರ್ಯದರ್ಶಿ ರಾಜೀವ್‌ ಗೌಬಾ ನಿನ್ನೆಯ ಸಭೆಯಲ್ಲಿದ್ದರು. ಈ ಸಭೆಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಅಧಿಕಾರಿಗಳು ಬಹಿರಂಗ ಮಾಡಿಲ್ಲ. 
ಇನ್ನು ಸಂಸತ್‌ ಅಧಿವೇಶನದಲ್ಲಿ ಕಾಶ್ಮೀರ ವಿಚಾರ ಚರ್ಚೆಯಾಗುವ ಸಾಧ್ಯತೆ ಇದೆ. ಕಲಾಪ ಆರಂಭವಾಗುವುದಕ್ಕೆ ಮೊದಲೇ ಸಂಪುಟ ಸಭೆ ನಡೆಯಲಿದೆ.  ಅಮರನಾಥ ಯಾತ್ರೆಯನ್ನು ರದ್ದು ಮಾಡಿ, ಪ್ರವಾಸಿಗರೆಲ್ಲರೂ ಕಾಶ್ಮೀರ ಬಿಟ್ಟು ಹೋಗಬೇಕು ಎಂದು ಸರ್ಕಾರ ಕಳೆದ ವಾರ ಆದೇಶ ಕೊಟ್ಟಿದೆ. ಜತೆಗೆ ರಾಜ್ಯದಲ್ಲಿ ಭಾರಿ ಸಂಖ್ಯೆಯಲ್ಲಿ ಯೋಧರನ್ನು ನಿಯೋಜಿಸಲಾಗಿದೆ. 
ಕಾಶ್ಮೀರ ನೀತಿಯಲ್ಲಿ ಬದಲಾವಣೆ ಇಲ್ಲ ಎಂದು ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ ಮಲಿಕ್‌ ಸ್ಪಷ್ಟನೆ ನೀಡಿದ್ದಾರೆ. ಆದರೂ, ಕಾಶ್ಮೀರದಲ್ಲಿ ವಿವಿಧ ರೀತಿಯ ವದಂತಿ ಹರಿದಾಡುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಅಥವಾ ಶಾ ಅವರು ಮೌನ ಮುರಿದಿಲ್ಲ. ಹೀಗಾಗಿ ಇಂದು ನಡೆಯಲಿರುವ ಸಂಪುಟ ಸಭೆ ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com