370 ರದ್ದು: ಜನರಿಂದ ರಾಷ್ಟ್ರ ನಿರ್ಮಾಣ, ತುಂಡು ಭೂಮಿಯಿಂದಲ್ಲ- ರಾಹುಲ್; ಸಂಯುಕ್ತ ರಚನೆ ಮೇಲೆ ದೊಡ್ಡ ಹೊಡೆತ- ಮನೀಶ್ ತಿವಾರಿ

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕೋರಿ ನೀಡಲಾಗಿದ್ದ 370 ಕಲಂ ರದ್ದು ಮಾಡಿರುವುದಕ್ಕೆ ಲೋಕಸಭೆಯಲ್ಲಿ ಮಂಗಳವಾರ ಗೃಹ ಸಚಿವ ಅಮಿತ್ ಶಾ ನೀಡಿರುವ ...
ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಮನೀಶ್ ತಿವಾರಿ(ಸಂಗ್ರಹ ಚಿತ್ರ)
ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಮನೀಶ್ ತಿವಾರಿ(ಸಂಗ್ರಹ ಚಿತ್ರ)
ನವದೆಹಲಿ: ಜಮ್ಮು ಮತ್ತು ಕಾಶ್ಮೀರವನ್ನು ಏಕಪಕ್ಷೀಯ ನಿರ್ಧಾರ ತೆಗೆದುಕೊಂಡು ವಿಭಜಿಸುವುದು, ಚುನಾಯಿತ ಪ್ರತಿನಿಧಿಗಳನ್ನು ಸೆರೆಹಿಡಿಯುವುದು ಮತ್ತು ನಮ್ಮ ಸಂವಿಧಾನವನ್ನು ಉಲ್ಲಂಘಿಸುವುದು ರಾಷ್ಟ್ರೀಯ ಏಕೀಕರಣವಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಂವಿಧಾನ ವಿಧಿ 370 ರದ್ದತಿ ಕುರಿತು ಕೇಂದ್ರ ಸರ್ಕಾರದ ನಿರ್ಧಾರವನ್ನು ಕಟುವಾಗಿ ಟೀಕಿಸಿರುವ ಅವರು, ಈ ದೇಶ 120 ಕೋಟಿ ಜನತೆಯಿಂದ ಆಗಿದ್ದೇ ಹೊರತು ಒಂದು ತುಂಡು ಭೂಮಿಯಿಂದಲ್ಲ. ಕೇಂದ್ರ ಸರ್ಕಾರದ ಕ್ರಮ ಅಧಿಕಾರದ ದುರುಪಯೋಗವಾಗಿದ್ದು ನಮ್ಮ ದೇಶದ ಭದ್ರತೆ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕೋರಿ ನೀಡಲಾಗಿದ್ದ 370 ಕಲಂ ರದ್ದು ಮಾಡಿರುವುದಕ್ಕೆ ಲೋಕಸಭೆಯಲ್ಲಿ ಮಂಗಳವಾರ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆಗೆ ಕಾಂಗ್ರೆಸ್ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ ಘಟನೆ ನಡೆಯಿತು.
ಲೋಕಸಭೆಯಲ್ಲಿಂದು ಮಾತನಾಡಿದ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ, ಕಳೆದ 70 ವರ್ಷಗಳ ದೇಶದ ಇತಿಹಾಸದಲ್ಲಿ ಕೇಂದ್ರಾಡಳಿತ ಪ್ರದೇಶಗಳನ್ನು ರಾಜ್ಯಗಳಾಗಿ ಬದಲಾಯಿಸಬೇಕೆಂಬ ಬೇಡಿಕೆ ಬಹಳವಾಗಿತ್ತು. ಆದರೆ ಬಹುಶಃ ದೇಶದ ಇತಿಹಾಸದಲ್ಲಿ ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಬದಲಾಯಿಸಿದ್ದು ಬಹುಶಃ ಇದೇ ಮೊದಲಿರಬೇಕು. ದೇಶದ ಸಂಯುಕ್ತ ಒಕ್ಕೂಟಕ್ಕೆ ಇದರಿಂದ ದೊಡ್ಡ ಹೊಡೆತ ಬೇರೆ ಇರಲಿಕ್ಕಿಲ್ಲ ಎಂದರು.
ರಾಜ್ಯ ಸರ್ಕಾರದ ಸಂಪೂರ್ಣ ಒಪ್ಪಿಗೆ ಪಡೆದು ಹಿಂದಿನ ಯುಪಿಎ ಸರ್ಕಾರ ಆಂಧ್ರ ಪ್ರದೇಶವನ್ನು ವಿಭಜನೆ ಮಾಡಿತ್ತು. ಹಿಂದೆ ಜಮ್ಮು-ಕಾಶ್ಮೀರವನ್ನು ಪಾಕಿಸ್ತಾನದಿಂದ ರಕ್ಷಿಸಿದವರು ಪಂಡಿತ್ ಜವಹರಲಾಲ್ ನೆಹರೂ ಅವರು, ಭಾರತದ ಸಂವಿಧಾನದಲ್ಲಿ ವಿಧಿ 370 ಮಾತ್ರ ಇರುವುದಲ್ಲ. 371ಎಯಿಂದ ಐವರೆಗೆ ಇದೆ. ಅವುಗಳಡಿಯಲ್ಲಿ ನಾಗಾಲ್ಯಾಂಡ್, ಅಸ್ಸಾಂ, ಮಣಿಪುರ, ಆಂಧ್ರ ಪ್ರದೇಶ, ಸಿಕ್ಕಿಮ್ ಮೊದಲಾದವುಗಳಿಗೆ ವಿಶೇಷ ಸ್ಥಾನಮಾನ ಕಲ್ಪಿಸಲಾಗಿದೆ. ಇಂದು ನೀವು 370ನೇ ವಿಧಿಯನ್ನು ರದ್ದುಪಡಿಸಿದ್ದೀರಿ ಎಂದರೆ ಈ ರಾಜ್ಯಗಳಿಗೆ ಏನು ಸಂದೇಶ ನೀಡುತ್ತೀರಿ ಎಂದು ಮನೀಸ್ ತಿವಾರಿ ಪ್ರಶ್ನಿಸಿದರು.
ನಾಳೆ ನೀವು 371ನೇ ವಿಧಿಯನ್ನು ಕೂಡ ತೆಗೆದುಹಾಕಬಹುದು. ಈಶಾನ್ಯ ರಾಜ್ಯಗಳಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆ ಮಾಡಿ ಅಲ್ಲಿನ ವಿಧಾನಸಭೆಗಳ ಹಕ್ಕುಗಳನ್ನು ಸಂಸತ್ತಿನಲ್ಲಿ ಬಳಸಿದರೆ 371ನೇ ವಿಧಿಯನ್ನು ಕೂಡ ಕಿತ್ತುಹಾಕಬಹುದು. ಹಾಗಾದರೆ ನೀವು ದೇಶದಲ್ಲಿ ಯಾವ ರೀತಿಯ ಸಾಂವಿಧಾನಿಕ ನಿದರ್ಶನ ತೋರಿಸಲು ಹೊರಟಿದ್ದೀರಿ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು.
ಸದನದಲ್ಲಿ ಮಾತನಾಡಿದ ಡಿಎಂಕೆ ಸಂಸದ ದಯಾನಿಧಿ ಮಾರನ್, ಲೋಕಸಭೆಯ ಸದಸ್ಯರಾದ ಫಾರೂಕ್ ಅಬ್ದುಲ್ಲಾ ಅವರು ಸದನದಲ್ಲಿಲ್ಲ. ಅವರ ಬಂಧನವಾಗಿದೆ. ಆದರೆ ನಮಗೆ ಈ ಬಗ್ಗೆ ಯಾವುದೇ ಮಾಹಿತಿಯಿಲ್ಲ, ಲೋಕಸಭಾ ಸ್ಪೀಕರ್ ಏಕಪಕ್ಷೀಯತೆ ತೋರದೆ ನ್ಯಾಯಸಮ್ಮತವಾಗಿ ವರ್ತಿಸಿ ಸದನದ ಸದಸ್ಯರನ್ನು ಕಾಪಾಡಬೇಕು ಎಂದರು.
ಜಮ್ಮು ಕಾಶ್ಮೀರದ ಇತಿಹಾಸ ನೆನಪಿಸಬೇಕಿದೆ, ಆಧುನಿಕ ಜಮ್ಮು ಕಾಶ್ಮೀರ ಹೇಗಾಯಿತು ಎಂದು ತಿಳಿದುಕೊಳ್ಳಬೇಕಿದೆ. 1846ರಲ್ಲಿ ಬ್ರಿಟಿಷ್ -ದಿಲೀಪ್ ಸಿಂಗ್ ನಡುವೆ ಯುದ್ಧ ನಡೆದ ಬಳಿಕ 1940ರಲ್ಲಿ ಲಾಹೋರ್ ಮಾತುಕತೆ, ಬಿಯಾಸ್-ಸಿಂಧೂ ನದಿ ದಡ ಬ್ರಿಟಿಷರಿಗೆ ಕೊಡಬೇಕೆಂದು ಮಾತುಕತೆ ನಡೆದಿತ್ತು ಎಂದು ತಿಳಿಸಿದರು. 

ಕಾಶ್ಮೀರದ ಜನರನ್ನು ಬದಿಗಿಟ್ಟು ನಿರ್ಧಾರ ತೆಗೆದುಕೊಳ್ಳಲಾಗಿದೆ. ಸ್ಥಳೀಯರನ್ನು ಕತ್ತಲಲ್ಲಿ ಇಡಲಾಗಿದೆ ಎಂದು ದೂರಿದರು. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಜನಾದೇಶವಿಲ್ಲದೆ ಒಂದು ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿರುವುದು ಪ್ರಜಾಪ್ರಭುತ್ವಕ್ಕೆ ಮಾರಕವಾದದ್ದು ಎಂದು ಕಾಂಗ್ರೆಸ್ ಸಂಸದ ಮನೀಷ್ ತಿವಾರಿ ಅಭಿಪ್ರಾಯಪಟ್ಟರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com