ಭಾರತದ ಹೊಸ ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರ, ಲಡಾಖ್ ಹೇಗೆ ಕಾರ್ಯನಿರ್ವಹಿಸಲಿದೆ?

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370ನೇ ವಿಧಿಯನ್ನು ತೆಗೆದುಹಾಕುವ ನಿರ್ಧಾರವನ್ನು ಕೇಂದ್ರ ಸರ್ಕಾರ ಪ್ರಕಟಿಸಿದ ನಂತರ ಜಮ್ಮು-ಕಾಶ್ಮೀರ ಪುನರ್ ...
ಜಮ್ಮು-ಕಾಶ್ಮೀರಕ್ಕೆ ವಿಶೇಷ ಪ್ರಾತಿನಿಧ್ಯ ಕಲ್ಪಿಸಿದ್ದ ಸಂವಿಧಾನ ವಿಧಿ 370ನ್ನು ತೆಗೆದುಹಾಕುವುದಾಗಿ ರಾಜ್ಯಸಭೆಯಲ್ಲಿ ಪ್ರಕಟಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ
ಜಮ್ಮು-ಕಾಶ್ಮೀರಕ್ಕೆ ವಿಶೇಷ ಪ್ರಾತಿನಿಧ್ಯ ಕಲ್ಪಿಸಿದ್ದ ಸಂವಿಧಾನ ವಿಧಿ 370ನ್ನು ತೆಗೆದುಹಾಕುವುದಾಗಿ ರಾಜ್ಯಸಭೆಯಲ್ಲಿ ಪ್ರಕಟಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ
ನವದೆಹಲಿ: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370ನೇ ವಿಧಿಯನ್ನು ತೆಗೆದುಹಾಕುವ ನಿರ್ಧಾರವನ್ನು ಕೇಂದ್ರ ಸರ್ಕಾರ ಪ್ರಕಟಿಸಿದ ನಂತರ ಜಮ್ಮು-ಕಾಶ್ಮೀರ ಪುನರ್ ವಿಂಗಡಣೆ ಮಸೂದೆ 2019ನ್ನು ತಂದಿದೆ. ಇದರಡಿ ಜಮ್ಮು-ಕಾಶ್ಮೀರವನ್ನು ಇಬ್ಬಾಗ ಮಾಡಿ ಎರಡು ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರ ಎಂದು ಮತ್ತು ಲಡಾಕ್ ರಾಜ್ಯವನ್ನಾಗಿ ಪುನರ್ ವಿಂಗಡಣೆ ಮಾಡಲಾಗಿದೆ.
ನಿನ್ನೆ ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ನಿರ್ಧಾರ ಪ್ರಕಟಿಸಿದ ನಂತರ ಎರಡು ನಿರ್ಣಯಗಳನ್ನು ಮತ್ತು ಎರಡು ಮಸೂದೆಗಳನ್ನು ಮಂಡಿಸಿದರು. ಹೊಸ ನಿರ್ಣಯಗಳು ಹೇಗೆ ಕೆಲಸ ಮಾಡುತ್ತವೆ ಎಂದು ತಿಳಿದುಕೊಳ್ಳೋಣ.
1. ಸಂವಿಧಾನ(ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯ) ಆದೇಶ 2019: ಇದು ಸಂವಿಧಾನ ವಿಧಿ 370(1)ರ ಪ್ರಕಾರ ಕಾರ್ಯನಿರ್ವಹಿಸಲಿದೆ. ರಾಷ್ಟ್ರಪತಿಗಳು ತಮ್ಮ ಅಧಿಕಾರ ಬಳಸಿ ಸಂವಿಧಾನ ವಿಧಿ 370ನ್ನು ತೆಗೆದುಹಾಕಿದ್ದಾರೆ. ಕಾಲಕಾಲಕ್ಕೆ ತಿದ್ದುಪಡಿ ಮಾಡಿರುವಂತೆ ಸಂವಿಧಾನ ಆದೇಶ 1954(ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯ)ರ ಸ್ಥಾನವನ್ನು ಪಡೆದುಕೊಂಡು ಕೇಂದ್ರ ಸರ್ಕಾರದ ನೂತನ ಆದೇಶ ಜಾರಿಗೆ ಬರಲಿದೆ.
2. ಸಂವಿಧಾನ ವಿಧಿ 370ಕ್ಕೆ ನಿರ್ಣಯ: ಸಂವಿಧಾನ ವಿಧಿ 370(3)ರ ಪ್ರಕಾರ 370ನೇ ವಿಧಿಯನ್ನು ಕೊನೆಗೊಳಿಸಲಾಗಿದೆ. ಇಂದಿನ ಸ್ಥಿತಿಗತಿಯಲ್ಲಿ ಎರಡೂ ಸದನಗಳ ಸರಳ ಬಹುಮತದ ಮೂಲಕ ನಿರ್ಣಯ ಹೊರಡಿಸಲಾಗುತ್ತದೆ. ಸಂವಿಧಾನದ ಷರತ್ತು (2)ರಲ್ಲಿ ಉಲ್ಲೇಖಿಸಿದಂತೆ ರಾಜ್ಯದ ಸಾಂವಿಧಾನಿಕ ಸದನ ಇನ್ನು ಮುಂದೆ ರಾಜ್ಯದ ವಿಧಾನಸಭೆಯಾಗಲಿದೆ.
3. ಜಮ್ಮು ಮತ್ತು ಕಾಶ್ಮೀರದ ಪುನರ್ ವಿಂಗಡಣೆಗೆ ಮಸೂದೆ: ಜಮ್ಮು ಮತ್ತು ಕಾಶ್ಮೀರ ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶ ಹಾಗೂ ಲಡಾಕ್ ನ ಪುನರ್ ವಿಂಗಡಣೆಗೆ ಸಂಬಂಧಿಸಿದ್ದಾಗಿದೆ. ಜಮ್ಮು ಮತ್ತು ಕಾಶ್ಮೀರ ಎರಡು ಪ್ರತ್ಯೇಕವಾದ ಕೇಂದ್ರಾಡಳಿತ ಪ್ರದೇಶವಾದರೂ ವಿಧಾನಸಭೆಯಿರುತ್ತದೆ. ಕೆಲವೊಂದು ಆಡಳಿತ ತೀರ್ಮಾನಗಳು ಬಿಟ್ಟರೆ ಇಲ್ಲಿ ಉಳಿದೆಲ್ಲ ಆಡಳಿತಗಳು ಕೇಂದ್ರ ಸರ್ಕಾರದ ಅಧೀನದಲ್ಲಿ ಬರುತ್ತದೆ. ಪ್ರತ್ಯೇಕ ಲಡಾಕ್ ನಲ್ಲಿ ವಿಧಾನಸಭೆಯಿರುವುದಿಲ್ಲ. 
ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶಗಳು ಈಗಿರುವ ಜಮ್ಮು ಮತ್ತು ಕಾಶ್ಮೀರ ಪ್ರದೇಶಗಳನ್ನು ಒಳಗೊಂಡಿರುತ್ತದೆ. ಜಮ್ಮು ಮತ್ತು ಕಾಶ್ಮೀರದ ಗವರ್ನರ್ ನೂತನ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್ ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್ ಆಗಿರುತ್ತಾರೆ.
ನೂತನ ಜಮ್ಮು ಮತ್ತು ಕಾಶ್ಮೀರಕ್ಕೆ 5 ವರ್ಷಗಳ ಕಾಲಾವಧಿಯ ಚುನಾವಣೆ ನಡೆಯುತ್ತದೆ. 107 ಶಾಸಕರ ಸದಸ್ಯಲ ಬಲದ ವಿಧಾನಸಭೆ ಹೊಂದಿರುತ್ತವೆ. 107 ಶಾಸಕರಲ್ಲಿ ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶಕ್ಕೆ 24 ಸ್ಥಾನಗಳು ಖಾಲಿ ಉಳಿಯುತ್ತವೆ. ನಿರ್ಗಮಿತ ವಿಧಾನಸಭೆಯಲ್ಲಿ 111 ಸದಸ್ಯ ಬಲವಿದೆ. ಅವರಲ್ಲಿ 87 ಚುನಾಯಿತ ಪ್ರತಿನಿಧಿಗಳು, ಇಬ್ಬರು ನಾಮ ನಿರ್ದೇಶಿತ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ 24 ಸೀಟುಗಳು ಖಾಲಿ ಉಳಿಸಲಾಗುತ್ತದೆ.
ರಾಜ್ಯಸಭೆಯಲ್ಲಿ ಈಗಿರುವ ಜಮ್ಮು ಮತ್ತು ಕಾಶ್ಮೀರದ ನಾಲ್ವರು ಸದಸ್ಯರು ಮುಂದುವರಿಯಲಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶಕ್ಕೆ 5 ಲೋಕಸಭಾ ಸ್ಥಾನ ಮತ್ತು ಲಡಾಕ್ ಕೇಂದ್ರಾಡಳಿತ ಪ್ರದೇಶಕ್ಕೆ ಒಂದು ಸ್ಥಾನವಿರುತ್ತದೆ. ವಿಧಾನಸಭೆಯಲ್ಲಿ ಅಂಗೀಕಾರಗೊಂಡ ಎಲ್ಲಾ ಮಸೂದೆಗಳು ಲೆಫ್ಟಿನೆಂಟ್ ಗವರ್ನರ್ ಒಪ್ಪಿಗೆಗೆ ಹೋಗುತ್ತದೆ. ಲೆಫ್ಟಿನೆಂಟ್ ಗವರ್ನರ್ ಮಸೂದೆಗೆ ಒಪ್ಪಿಗೆ ನೀಡಬಹುದು, ತಡೆಹಿಡಿಯಬಹುದು ಅಥವಾ ರಾಷ್ಟ್ರಪತಿಗಳ ಪರಿಗಣನೆಗೆ ಕಳುಹಿಸಬಹುದು.
4. ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಥಿಕ ದುರ್ಬಲರಿಗೆ ಶೇಕಡಾ 10ರಷ್ಟು ಮೀಸಲಾತಿ ಮಸೂದೆ: ರಾಜ್ಯದಲ್ಲಿ ಆರ್ಥಿಕವಾಗಿ ದುರ್ಬಲವಿರುವವರಿಗೆ ಶೇಕಡಾ 10ರಷ್ಟು ಮೀಸಲಾತಿ ಒದಗಿಸುವ ಜಮ್ಮು ಮತ್ತು ಕಾಶ್ಮೀರ ಮೀಸಲಾತಿ(ಎರಡನೇ ತಿದ್ದುಪಡಿ) ಮಸೂದೆ, 2019 ಜಾರಿಗೆ ತರಲಾಗುತ್ತದೆ. ಸಂಸತ್ತಿನಲ್ಲಿ ಇದು ಅನುಮೋದನೆಗೊಂಡ ನಂತರ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶಗಳ ವರ್ಷಕ್ಕೆ 8 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ನಿವಾಸಿಗಳಿಗೆ ಶೇಕಡಾ 10ರಷ್ಟು ಮೀಸಲಾತಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ದೊರಕಲಿದೆ. ಇದಕ್ಕೆ ಕೇಂದ್ರ ಸಚಿವ ಸಂಪುಟದಿಂದ ಕಳೆದ ಜುಲೈ 31ರಂದು ಅನುಮೋದನೆ ಸಿಕ್ಕಿತು.
ವಿಸರ್ಜಿತ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಆರ್ಥಿಕವಾಗಿ ದುರ್ಬಲವಿರುವವರಿಗೆ ಶೇಕಡಾ 10ರಷ್ಟು ಮೀಸಲಾತಿಯ ಶಾಸನವನ್ನು ತಂದಿರಲಿಲ್ಲ. ಅದಕ್ಕೆ ಮೊದಲು ಸಂಸತ್ತು ಜಮ್ಮು ಮತ್ತು ಕಾಶ್ಮೀರ ಮೀಸಲಾತಿ (ತಿದ್ದುಪಡಿ)ಮಸೂದೆ 2019ನ್ನು ಅನುಮೋದಿಸಿತ್ತು. ಅದರಡಿ ಜಮ್ಮು ಮತ್ತು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿಯ ಸಮೀಪ ವಾಸಿಸುತ್ತಿರುವವರಿಗೆ ಉದ್ಯೋಗ, ಬಡ್ತಿ, ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ಸೌಲಭ್ಯ ದೊರೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com