ಪ್ರಧಾನಿ ಮೋದಿ, ಕೇಂದ್ರ ಸಚಿವರನ್ನು ಭೇಟಿಯಾದ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ನಿಯೋಗ

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ನವದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಾಜ್ಯದ ನೀರಾವರಿ ಯೋಜನೆಗಳು ಮತ್ತು ಇತರ ವಿಷಯಗಳ ಕುರಿತು ಚರ್ಚಿಸಿದರು.
ಪ್ರಧಾನಿ- ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ: ರಾಜ್ಯದ ನೀರಾವರಿ ಯೋಜನೆ ಕುರಿತು ಚರ್ಚೆ
ಪ್ರಧಾನಿ- ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ: ರಾಜ್ಯದ ನೀರಾವರಿ ಯೋಜನೆ ಕುರಿತು ಚರ್ಚೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವರನ್ನು ಭೇಟಿಯಾದ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ನಿಯೋಗ
ನವದೆಹಲಿ,ಆ 6 (ಯುಎನ್ಐ) ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಇಂದು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವರನ್ನು ಭೇಟಿಯಾಗಿ ವಿವಿಧ ಯೋಜನೆಗಳು, ಬಾಕಿ ಉಳಿದಿರುವ ಅನುದಾನ, ಹೊಸ ಯೋಜನೆಗಳಿಗೆ ಹೆಚ್ಚಿನ ನೆರವು ಹಾಗೂ ಸಹಕಾರ ನೀಡುವಂತೆ ಮನವಿ ಸಲ್ಲಿಸಿದರು.
ಸಂಸತ್ತಿನಲ್ಲಿ ಪ್ರಧಾನಿ ಅವರ ಕಚೇರಿಯಲ್ಲಿ ಮೋದಿ ಅವರನ್ನು ಭೇಟಿಯಾಗಿ ಕೃಷ್ಣಾ ನದಿ ಜಲ ವಿವಾದ ನ್ಯಾಯಾಧಿಕರಣ-2ರ  ತೀರ್ಪು ಹಾಗೂ ಮಹಾದಾಯಿ ನದಿ ಜಲ ನ್ಯಾಯಾಧಿಕರಣಗಳ ತೀರ್ಪುನ್ನು ಗಜೆಟ್ ಅಧಿಸೂಚನೆ ಹೊರಡಿಸುವಂತೆ ಮತ್ತು ಮೇಕೆದಾಟು ಕುಡಿಯುವ ನೀರು ಉದ್ದೇಶದ ಸಮತೋಲಿತ ಸಂಗ್ರಹ ಜಲಾಶಯ (Balancing Reservoir) ಯೋಜನೆಯ ವಿಸ್ತೃತ ಯೋಜನಾ ವರದಿಗೆ ಅನುಮೋದನೆ ನೀಡುವಂತೆ ಕೋರಿದರು. 
ಜೊತೆಗೆ  ಕೃಷ್ಣಾ ಮೇಲ್ದಂಡೆ ಯೋಜನೆ ಹಂತ 3 ನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿ, ಅಗತ್ಯ ಆರ್ಥಿಕ ನೆರವು ನೀಡುವುದು, ಹುಬ್ಬಳ್ಳಿ - ಧಾರವಾಡದಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್)ಸ್ಥಾಪಿಸುವಂತೆ ಇದೇ ಸಂದರ್ಭದಲ್ಲಿ ಮನವಿ ಮಾಡಿದರು. 
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾದ ಯಾಡಿಯೂರಪ್ಪ ನೇತೃತ್ವದ ನಿಯೋಗ ರಾಜ್ಯದ ವಿವಿಧ ಯೋಜನೆಗಳ ಕುರಿತು ಚರ್ಚಿಸಿತು. ರಾಜ್ಯದ ಕೆಲವು ಪ್ರಮುಖ ಹೆದ್ದಾರಿ ಯೋಜನೆಗಳನ್ನು ಆದ್ಯತೆಯ ಮೇಲೆ ಕೈಗೆತ್ತಿಕೊಳ್ಳುವಂತೆ ಹಾಗೂ ಶಿವಮೊಗ್ಗ ನಗರಕ್ಕೆ ವರ್ತುಲ ರಸ್ತೆ ನಿರ್ಮಿಸುವ ಯೋಜನೆಗೆ ಅನುಮೋದನೆ ನೀಡುವಂತೆ ಕೋರಿತು.
ಬೆಳೆವಿಮೆ ನೋಂದಣಿ ಅವಧಿ ವಿಸ್ತರಣೆಗೆ ಮನವಿ
ಕೇಂದ್ರ ಕೃಷಿ ಮತ್ತು ಗ್ರಾಮೀಣಾಭಿವೃಧ್ಧಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ಭೇಟಿಯಾಗಿ  ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ನೋಂದಣಿ ಅವಧಿಯನ್ನು ಆಗಸ್ಟ್ 14 ರ ವರೆಗೆ ವಿಸ್ತರಿಸುವಂತೆ ಹಾಗೂ ಬೆಳೆವಿಮೆಯ ಹಿಂದಿನ ಕ್ಲೇಮುಗಳನ್ನು ಆದಷ್ಟು ಶೀಘ್ರದಲ್ಲಿ ಇತ್ಯರ್ಥ ಪಡಿಸಲು ಕ್ರಮ ವಹಿಸುವಂತೆಯೂ ಮನವಿ ಮಾಡಿದರು. 
ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ 2019-20ರ ಅನುದಾನ ಬಿಡುಗಡೆ ಹಾಗೂ ರಾಜ್ಯ ಸರ್ಕಾರವು 2015-16, 2016-17 ಮತ್ತು 2019-20ರಲ್ಲಿ ಪಾವತಿಸಿರುವ ಮುಂಗಡ ಅನುದಾನ 2000 ಕೋಟಿ ರೂಗಳನ್ನು ತ್ವರಿತವಾಗಿ ಬಿಡುಗಡೆ ಮಾಡುವಂತೆ ಮನವಿ ಮಾಡಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರಾಜ್ಯದ ಎಲ್ಲ ಅರ್ಹ ರೈತರಿಗೂ ಹಣ ಬಿಡುಗಡೆ ಮಾಡುವಂತೆ ಇದೇ ವೇಳೆ ಸಚಿವರನ್ನು ಕೋರಿದ್ದಾರೆ.
ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವಾತ್ ಅವರನ್ನು ಭೇಟಿಯಾಗಿ ರಾಜ್ಯದ ಅಭಿವೃದ್ಧಿ ಚಟುವಟಿಕೆಗಳ ಬಗ್ಗೆ ಚರ್ಚಿಸಿ ಕೇಂದ್ರ ಸರ್ಕಾರದ ಸಹಕಾರ ಕೋರಿದರು.ಇದೇ ವೇಳೆ ಕೇಂದ್ರ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಅಗತ್ಯ ಸಹಕಾರ ನೀಡುವಂತೆ ಮನವಿ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com