ಉತ್ತಮ ವಾಗ್ಮಿ, 'ಜನನಾಯಕಿ'ಯನ್ನು ಕಳೆದುಕೊಂಡ ಭಾರತ

ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೃದಯಾಘಾತದಿಂದ ಹಠಾತ್ ನಿಧನ ಹೊಂದಿದ್ದು ...
ಸುಷ್ಮಾ ಸ್ವರಾಜ್
ಸುಷ್ಮಾ ಸ್ವರಾಜ್
ನವದೆಹಲಿ: ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೃದಯಾಘಾತದಿಂದ ಹಠಾತ್ ನಿಧನ ಹೊಂದಿದ್ದು ಕೇವಲ ಬಿಜೆಪಿ ನಾಯಕರಿಗೆ ಮಾತ್ರವಲ್ಲದೆ ಪಕ್ಷಾತೀತವಾಗಿ ಜನ ನಾಯಕರು ಸೇರಿದಂತೆ ದೇಶದ ಜನತೆಗೆ ಆಘಾತವನ್ನುಂಟುಮಾಡಿದೆ. 
67ನೇ ವಯಸ್ಸಿನಲ್ಲಿ ನಿಧನರಾದ ಸುಷ್ಮಾ ಸ್ವರಾಜ್ ಮೂಲತಃ ಒಬ್ಬ ಕವಯಿತ್ರಿ, ವಕೀಲೆ, ರಾಜಕಾರಣಿ ಹೀಗೆ ಹಲವು ಕಿರೀಟಗಳನ್ನು ಮುಡಿಗೇರಿಸಿಕೊಂಡವರು. ಹಿಂದಿನ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದಲ್ಲಿ ವಿದೇಶಾಂಗ ಸಚಿವೆಯಾಗಿ ಅವರು ನಾಗರಿಕರ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸುತ್ತಿದ್ದ ರೀತಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿತ್ತು.
ಸುಷ್ಮಾ ಸ್ವರಾಜ್ ಹಿನ್ನಲೆ: ಸುಷ್ಮಾ ಸ್ವರಾಜ್ ಅವರು ಸಾಮಾಜವಾದಿ ಹಿನ್ನಲೆಯಿಂದ ಬಂದವರು. ಬಿಜೆಪಿಗೆ ಸೇರುವ ಮುನ್ನ ಸಂಘ ಪರಿವಾರದಲ್ಲಿ ಸಕ್ರಿಯರಾಗಿದ್ದರು. ಅದು ಈ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದ ಸಂದರ್ಭ, ಸಾಮಾಜಿಕ ಕಳಕಳಿಯ ಉದ್ದೇಶವನ್ನಿಟ್ಟುಕೊಂಡು ಕೇಸರಿ ಪಕ್ಷಕ್ಕೆ ಸೇರಿದ್ದರು.
25ರ ತರುಣಿಯಿರುವಾಗಲೇ ಹರ್ಯಾಣ ರಾಜ್ಯ ಸಂಪುಟದಲ್ಲಿ ಸಚಿವೆಯಾಗಿ ಅಧಿಕಾರ ವಹಿಸಿಕೊಂಡ ಗಟ್ಟಿಗಿತ್ತಿ. ಇನ್ನು ಸುಷ್ಮಾ ಸ್ವರಾಜ್ ಜನಪ್ರಿಯತೆ ಗಳಿಸಿದ್ದು ತಮ್ಮ ವಾಗ್ಚಾತುರ್ಯ, ಬೆಂಕಿ ಚೆಂಡಿನಂತಹ ಮಾತುಗಳಿಂದ. ತಮ್ಮ ಮಾತುಗಾರಿಕೆಯಿಂದಲೇ ಬಿಜೆಪಿಯಲ್ಲಿ ಮುನ್ನಲೆಗೆ ಬಂದು ಪಕ್ಷದ ವಕ್ತಾರೆ ಕೂಡ ಆದರು. 
ಅದು 1990ರ ದಶಕ. ಭಾರತೀಯ ಜನತಾ ಪಾರ್ಟಿ ದೇಶದ ರಾಜಕೀಯದಲ್ಲಿ ಗಟ್ಟಿಯಾಗಿ ಬೇರೂರಲು ಪ್ರಾರಂಭವಾಗಿತ್ತು. ರಾಮ ಮಂದಿರ ವಿವಾದ, ಹಿಂದುತ್ವದ ಅಜೆಂಡಾ ಇಟ್ಟುಕೊಂಡು ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ, ಎಲ್ ಕೆ ಆಡ್ವಾಣಿ ನೇತೃತ್ವದಲ್ಲಿ ದೇಶಾದ್ಯಂತ ಪ್ರಚಾರ ಮಾಡಿ ಪಕ್ಷವನ್ನು ಬಲಪಡಿಸುವ ಕಾಯಕದಲ್ಲಿ ತೊಡಗಿದ್ದರು. ಮಾಜಿ ಸಚಿವ ದಿವಂಗತ ಪ್ರಮೋದ್ ಮಹಾಜನ್, ಗೋವಿಂದಾಚಾರ್ಯ, ಉಮಾ ಭಾರತಿಯವರಂತೆ ಸುಷ್ಮಾ ಸ್ವರಾಜ್ ಬಿಜೆಪಿಯ ಅಗ್ರನಾಯಕರಲ್ಲಿ ಗುರುತಿಸಿಕೊಂಡರು.
2000ದ ನಂತರ ಪಕ್ಷದ ನಾಯಕತ್ವದಲ್ಲಿ ಬದಲಾವಣೆಯ ಪರ್ವ ಆರಂಭವಾಯಿತು. ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್ ಕೆ ಅಡ್ವಾಣಿಯವರು ಹಿಂದೆ ಸರಿಯಲು ಆರಂಭವಾದಾಗ ಲೋಕಸಭೆಯ ಪ್ರತಿಪಕ್ಷದ ನಾಯಕಿಯಾದವರು ಸುಷ್ಮಾ ಸ್ವರಾಜ್. ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕ ಅರುಣ್ ಜೇಟ್ಲಿ. ಇವರಿಬ್ಬರೂ ಅಡ್ವಾಣಿಯವರ ಶಿಷ್ಯರು, ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದಲ್ಲಿ 2009ರಿಂದ 2014ರವರೆಗೆ ಸದನದಲ್ಲಿ ಚರ್ಚೆಯಲ್ಲಿ ಭಾರೀ ಪೈಪೋಟಿ ನೀಡುತ್ತಿದ್ದರು.
ಸುಷ್ಮಾ ಸ್ವರಾಜ್ ಒಬ್ಬ ಜನನಾಯಕಿ, ಇದಕ್ಕೆ ಅವರು ಏಳು ಬಾರಿ ಲೋಕಸಭೆ ಚುನಾವಣೆ ಗೆದ್ದಿರುವುದೇ ಸಾಕ್ಷಿ. ತಮ್ಮ ಅನಾರೋಗ್ಯ ಹಿನ್ನಲೆಯಲ್ಲಿ ಈ ಬಾರಿಯ ಲೋಕಸಭೆ ಚುನಾವಣೆಯಿಂದ ಅವರಾಗಿಯೇ ಸ್ಪರ್ಧೆಯಿಂದ ದೂರವುಳಿದಿದ್ದರು. 
ಕಳೆದ ಬಾರಿ ಅವರಿಗೆ ಅನಾರೋಗ್ಯವಾಗಿ ಮೂತ್ರಪಿಂಡ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇಷ್ಟು ಬೇಗನೆ ಅವರು ಕಣ್ಮರೆಯಾಗುತ್ತಾರೆ ಎಂದು ಯಾರೂ ಭಾವಿಸಿರಲಿಲ್ಲ. ಅವರ ಹಠಾತ್ ನಿಧನ ಅನೇಕರಿಗೆ ನೋವುಂಟುಮಾಡಿದ್ದು ಸುಳ್ಳಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com