ರಾಜ್ಯ ಸಂಬಂಧಿತ ನಿರ್ಧಾರಗಳನ್ನು ಅಲ್ಲಿನ ಜನರ ಸಲಹೆ ಪಡೆದು ತೆಗೆದುಕೊಳ್ಳಬೇಕು: ಮಮತಾ ಬ್ಯಾನರ್ಜಿ

ರಾಜ್ಯಗಳಿಗೆ ಸಂಬಂಧಪಟ್ಟ ನಿರ್ಧಾರಗಳನ್ನು ಆಯಾ ರಾಜ್ಯಗಳ ಜನರ ಜೊತೆ ಸಮಾಲೋಚಿಸಿ ತೆಗೆದುಕೊಳ್ಳಬೇಕೆ ಹೊರತು ...
ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿಯವರ ಮೊದಲ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಮಮತಾ ಬ್ಯಾನರ್ಜಿ, ಎಂ ಕೆ ಸ್ಟಾಲಿನ್
ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿಯವರ ಮೊದಲ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಮಮತಾ ಬ್ಯಾನರ್ಜಿ, ಎಂ ಕೆ ಸ್ಟಾಲಿನ್
ಚೆನ್ನೈ: ರಾಜ್ಯಗಳಿಗೆ ಸಂಬಂಧಪಟ್ಟ ನಿರ್ಧಾರಗಳನ್ನು ಆಯಾ ರಾಜ್ಯಗಳ ಜನರ ಜೊತೆ ಸಮಾಲೋಚಿಸಿ ತೆಗೆದುಕೊಳ್ಳಬೇಕೆ ಹೊರತು ಏಕಪಕ್ಷೀಯವಾಗಿ ಅಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿದ್ದ ಸಂವಿಧಾನ ವಿಧಿ 370ನ್ನು ರದ್ದುಪಡಿಸಿದ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಮಮತಾ ಬ್ಯಾನರ್ಜಿ ಈ ಪ್ರತಿಕ್ರಿಯೆ ನೀಡಿದ್ದಾರೆ.
ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಕಳೆದ ಮಂಗಳವಾರ ಸಂವಿಧಾನ ವಿಧಿ 370ನ್ನು ರದ್ದುಪಡಿಸಿ ಜಮ್ಮು-ಕಾಶ್ಮೀರ ಪುನರ್ ವಿಂಗಡಣೆ ಮಸೂದೆಯನ್ನು ತಂದಿದೆ. ಇದಕ್ಕೆ ಎರಡೂ ಸದನಗಳಲ್ಲಿ ಒಪ್ಪಿಗೆ ಸಿಕ್ಕಿದೆ. ರಾಷ್ಟ್ರಪತಿಗಳು ಅದಕ್ಕೆ ನಿನ್ನೆ ಅಂಕಿತ ಹಾಕಿದ್ದು ಸಂವಿಧಾನಕ್ಕೆ ಸೇರ್ಪಡೆಯಾಗಲಿದೆ.
ಈ ಕುರಿತು ನಿನ್ನೆ ಚೆನ್ನೈಯಲ್ಲಿ ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿಯವರ ಮೊದಲ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ಸಂವಿಧಾನ ವಿಧಿ 370 ರದ್ದುಪಡಿಸಿರುವ ಬಗ್ಗೆ ನಮಗೆ ನಿಜಕ್ಕೂ ಆತಂಕವಿದೆ. ಕೆಲವೊಮ್ಮೆ ರಾಜಕೀಯ ಪಕ್ಷಗಳು ನಿರ್ಧಾರ ತೆಗೆದುಕೊಳ್ಳಬಹುದು. ಆದರೆ ಆಯಾ ರಾಜ್ಯಕ್ಕೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳುವ ಮುನ್ನ ಆ ರಾಜ್ಯಗಳ ಜನರ ಅಭಿಪ್ರಾಯ ಪಡೆದುಕೊಂಡು ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರ ನಿರ್ಧಾರ ಪ್ರಕಟಿಸಬೇಕಾಗುತ್ತದೆ ಎಂದರು.
ಶ್ರೀನಗರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರನ್ನು ಗೃಹ ಬಂಧನದಲ್ಲಿರಿಸಲಾಗಿದೆ. ಇಂದು ಅವರು ಈ ಸಭೆಯಲ್ಲಿ ಭಾಗವಹಿಸಬೇಕಿತ್ತು. ಆದರೆ ಅವರಿಗೆ ಬರಲಾಗಲಿಲ್ಲ. ನಿನ್ನೆ ಅವರದೊಂದು ವಿಡಿಯೊ ನೋಡಿದೆ, ಅದರಲ್ಲಿ ಅವರು ಅಳುತ್ತಿದ್ದಾರೆ, ಅವರ ಮಗಳ ಮನೆಗೆ ಸಹ ಅವರಿಗೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಮಮತಾ ಆರೋಪಿಸಿದರು.
ಇದಕ್ಕೂ ಮುನ್ನ ಕಾರ್ಯಕ್ರಮದ ಆರಂಭಕ್ಕೆ ಕರುಣಾನಿಧಿಯವರ ಪುತ್ಥಳಿಯನ್ನು ಕೊಡಂಬಕ್ಕಮ್ ನಲ್ಲಿ ಅನಾವರಣ ಮಾಡಲಾಯಿತು. 
ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಎಂ ಕರುಣಾನಿಧಿಯವರು ದೀರ್ಘಾವಧಿಯವರೆಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ತಮ್ಮ 94ನೇ ವಯಸ್ಸಿನಲ್ಲಿ ವಯೋಸಹಜ ಕಾಯಿಲೆಯಿಂದ ಕಳೆದ ವರ್ಷ ನಿಧನರಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com