ಕಾಶ್ಮೀರಕ್ಕೆ ಭೇಟಿ ನೀಡುತ್ತೇನೆ, ಅದಕ್ಕೆ ವಿಶೇಷ ವಿಮಾನ ಬೇಡ: ಸತ್ಯಪಾಲ್ ಮಲಿಕ್ ಗೆ ರಾಹುಲ್ ತಿರುಗೇಟು
ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರ ಸವಾಲನ್ನು ಸ್ವೀಕರಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಪ್ರತಿಪಕ್ಷ ನಾಯಕರ ನಿಯೋಗ ಕಾಶ್ಮೀರಕ್ಕೆ ಭೇಟಿ ನೀಡಲಿದೆ.
Published: 13th August 2019 03:02 PM | Last Updated: 13th August 2019 03:02 PM | A+A A-

ರಾಹುಲ್ ಗಾಂಧಿ
ನವದೆಹಲಿ: ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರ ಸವಾಲನ್ನು ಸ್ವೀಕರಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಪ್ರತಿಪಕ್ಷ ನಾಯಕರ ನಿಯೋಗ ಕಾಶ್ಮೀರಕ್ಕೆ ಭೇಟಿ ನೀಡಲಿದೆ. ಆದರೆ ಇದಕ್ಕಾಗಿ ವಿಶೇಷ ವಿಮಾನದ ಅಗತ್ಯ ಇಲ್ಲ ಎಂದು ಮಂಗಳವಾರ ತಿರುಗೇಟು ನೀಡಿದ್ದಾರೆ.
ರಾಜ್ಯಪಾಲ ಮಲಿಕ್ ಅವರು ಪ್ರತಿಪಕ್ಷಗಳ ಇತರೆ ನಾಯಕರಿಗೂ ಕಾಶ್ಮೀರದಲ್ಲಿ ಸ್ಥಳೀಯರನ್ನು ಭೇಟಿ ಮಾಡಲು ಮತ್ತು ಯೋಧರ ಭೇಟಿಗೆ ಅವಕಾಶ ನೀಡಬೇಕು ಎಂದು ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.
ಆತ್ಮೀಯ ರಾಜ್ಯಪಾಲ ಮಲಿಕ್ ಅವರೆ, ನಿಮ್ಮ ಆಹ್ವಾನದಂತೆ ನಾನು ಮತ್ತು ಪ್ರತಿಪಕ್ಷಗಳ ನಾಯಕ ನಿಯೋಗ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಗೆ ಭೇಟಿ ನೀಡುತ್ತೇವೆ. ಇದಕ್ಕಾಗಿ ನಮಗೆ ವಿಶೇಷ ವಿಮಾನದ ಬೇಕಾಗಿಲ್ಲ. ಆದರೆ ನಾವು ಮುಕ್ತವಾಗಿ ಸಂಚರಿಸಲು ಮತ್ತು ಅಲ್ಲಿನ ಜನರನ್ನು, ಯೋಧರನ್ನು ಹಾಗೂ ಪ್ರಮುಖ ನಾಯಕರನ್ನು ಭೇಟಿ ಮಾಡಲು ಅವಕಾಶ ನೀಡಬೇಕು ಎಂದು ರಾಹುಲ್ ಗಾಂಧಿ ಅವರು ಟ್ವೀಟ್ ಮಾಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ನಂತರ ಕಣಿವೆ ರಾಜ್ಯದಲ್ಲಿ ಹಿಂಸಾಚಾರ ನಡೆಯುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಮಲಿಕ್ ಅವರು, ರಾಹುಲ್ ಗಾಂಧಿ ಅವರು ಸ್ವತಃ ಕಾಶ್ಮೀರಕ್ಕೆ ಭೇಟಿ ನೀಡಿ, ಎಲ್ಲವನ್ನೂ ಪರಿಶೀಲಿಸಿ ಆ ಬಳಿಕ ಮಾತನಾಡಿ. ನಾನು ಬೇಕಿದ್ದರೆ ವಿಶೇಷ ವಿಮಾನದ ವ್ಯವಸ್ಥೆ ಮಾಡುತ್ತೇನೆ ಎಂದು ಟಾಂಗ್ ನೀಡಿದ್ದರು.