ಕಾಶ್ಮೀರ ಕುರಿತು ನಮ್ಮ ನಿರ್ಧಾರ ಬೇರೆಲ್ಲದ್ದಕ್ಕಿಂತ ಮಹತ್ವದ್ದು: ಪ್ರಧಾನಿ ಮೋದಿ

ನರೇಂದ್ರ ಮೋದಿ ನೇತೃತ್ವದ ಎನ್ ಡಿಎ-2 ಸರ್ಕಾರ ಅಧಿಕಾರಕ್ಕೆ ಬಂದು 75 ದಿನಗಳಾಗಿವೆ. ಈ ಸಂದರ್ಭದಲ್ಲಿ ದೇಶದ ಪ್ರಧಾನ ಮಂತ್ರಿಯಾಗಿ ತಮ್ಮ ಆದ್ಯತೆಗಳೇನು, ಮುಂದಿನ ಗುರಿಗಳು ಏನು, ದೇಶದ ಹತ್ತು ಹಲವು ಸೂಕ್ಷ್ಮ ವಿಷಯಗಳ ಕುರಿತು ಐಎಎನ್ಎಸ್ ಸುದ್ದಿಸಂಸ್ಥೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ನರೇಂದ್ರ ಮೋದಿ ಮಾತನಾಡಿದ್ದಾರೆ. ಅದರ ಸಾರಾಂಶ ಇಲ್ಲಿದೆ.

Published: 14th August 2019 12:49 PM  |   Last Updated: 14th August 2019 01:12 PM   |  A+A-


Narendra Modi

ನರೇಂದ್ರ ಮೋದಿ

Posted By : sumana
Source : IANS

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಎನ್ ಡಿಎ-2 ಸರ್ಕಾರ ಅಧಿಕಾರಕ್ಕೆ ಬಂದು 75 ದಿನಗಳಾಗಿವೆ. ಈ ಸಂದರ್ಭದಲ್ಲಿ ದೇಶದ ಪ್ರಧಾನ ಮಂತ್ರಿಯಾಗಿ ತಮ್ಮ ಆದ್ಯತೆಗಳೇನು, ಮುಂದಿನ ಗುರಿಗಳು ಏನು, ದೇಶದ ಹತ್ತು ಹಲವು ಸೂಕ್ಷ್ಮ ವಿಷಯಗಳ ಕುರಿತು ಐಎಎನ್ಎಸ್ ಸುದ್ದಿಸಂಸ್ಥೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ನರೇಂದ್ರ ಮೋದಿ ಮಾತನಾಡಿದ್ದಾರೆ. ಅದರ ಸಾರಾಂಶ ಇಲ್ಲಿದೆ.


ಇಂದಿಗೆ ನಿಮ್ಮ ಸರ್ಕಾರ 75 ದಿನಗಳನ್ನು ಪೂರೈಸಿದೆ. ಪ್ರತಿ ಸರ್ಕಾರ ಇಂತಹ ಮೈಲುಗಲ್ಲುಗಳನ್ನು ದಾಟಿದಾಗ ತೆಗೆದುಕೊಂಡ ಕ್ರಮಗಳು, ನಡೆದ ಹಾದಿಯ ಬಗ್ಗೆ ಮಾತನಾಡುತ್ತವೆ. ಈ ಸಂದರ್ಭದಲ್ಲಿ ನಿಮ್ಮ ಸರ್ಕಾರ ಹೇಗೆ ಭಿನ್ನ ಎಂದು ಹೇಳುತ್ತೀರಿ?
-ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಮಹತ್ವಪೂರ್ಣವಾದುದನ್ನೇ ಸಾಧಿಸಿದೆ. ಸ್ಪಷ್ಟ ನೀತಿ, ಸಹಿ ದಿಶಾ(ಸರಿಯಾದ ಉದ್ದೇಶ, ಸ್ಪಷ್ಟ ನೀತಿ)ಯ ಕಾರಣದಿಂದ ಅದನ್ನು ಸಾಧಿಸಲು ಸಾಧ್ಯವಾಯಿತು. ಕೇವಲ 75 ದಿನಗಳಲ್ಲಿ ನಮ್ಮ ಸರ್ಕಾರ ಸಾಕಷ್ಟು ಕೆಲಸ ಮಾಡಿದೆ. ಮಕ್ಕಳ ಸುರಕ್ಷತೆಯಿಂದ ಹಿಡಿದು ಚಂದ್ರಯಾನ-2ರವರೆಗೆ, ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಳ್ಳುವುದರಿಂದ ಹಿಡಿದು ತ್ರಿವಳಿ ತಲಾಖ್ ನಿಂದ ಮುಸ್ಲಿಮ್ ಮಹಿಳೆಯರಿಗೆ ಮುಕ್ತಿ ನೀಡುವವರೆಗೆ, ಕಾಶ್ಮೀರದಿಂದ ಕಿಸಾನ್(ರೈತರವರೆಗೆ) ಜನರಿಂದ ಸ್ಪಷ್ಟ ಬಹುಮತ ಪಡೆದ ದೃಢ ನಿಶ್ಚಯದ ಸರ್ಕಾರ ಏನು ಮಾಡಬಹುದು ಎಂಬುದನ್ನು ನಮ್ಮ ಸರ್ಕಾರ ಮಾಡಿ ತೋರಿಸಿದೆ.


ಈ ಬಾರಿಯ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಸಿಕ್ಕಿರುವುದು ನಿಮ್ಮ ಯೋಜನೆಗೆ ಪೂರಕವಾಯಿತೇ?
-ಹಿಂದಿನ 5 ವರ್ಷಗಳಲ್ಲಿ ನಾವು ಕಟ್ಟಿಕೊಂಡು ಬಂದಿದ್ದನ್ನು ಕಳೆದ 75 ದಿನಗಳಲ್ಲಿ ದೇಶಕ್ಕೆ ಕೊಡಲಾಯಿತು. 17ನೇ ಲೋಕಸಭೆಯ ಮೊದಲ ಅಧಿವೇಶನ 1952ರ ನಂತರ ನಡೆದ ಬಹಳ ಉತ್ತಮ, ಫಲಕಾರಿ ಅಧಿವೇಶನ ಎಂಬ ಹೆಸರು ಗಳಿಸಿತು. ಸಂಸತ್ತಿನ ಸದಸ್ಯರು ದೇಶದ ಜನರ ಅಗತ್ಯ ಮತ್ತು ಆಶೋತ್ತರಗಳಿಗೆ ಇನ್ನಷ್ಟು ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು ಎಂಬುದು ನನ್ನ ಭಾವನೆ.


ರೈತರಿಗೆ ಮತ್ತು ವ್ಯಾಪಾರಿಗಳಿಗೆ ಪಿಂಚಣಿ ಯೋಜನೆ, ವೈದ್ಯಕೀಯ ವಲಯದಲ್ಲಿ ಸುಧಾರಣೆ, ಕಾರ್ಮಿಕ ಸುಧಾರಣೆಗಳ ಪ್ರಾರಂಭ, ದಿವಾಳಿತನ ಮತ್ತು ದಿವಾಳಿತನ ಸಂಹಿತೆಯಲ್ಲಿ ಪ್ರಮುಖ ತಿದ್ದುಪಡಿಗಳನ್ನು ನಮ್ಮ ಸರ್ಕಾರ ಜಾರಿಗೆ ತಂದಿದೆ. ಉದ್ದೇಶ ಸರಿಯಿದ್ದಾಗ ಆ ಉದ್ದೇಶ ಮತ್ತು ಜಾರಿಯಲ್ಲಿ ಸ್ಪಷ್ಟತೆಯಿರುತ್ತದೆ,ಜನರಿಂದ ಕೂಡ ಬೆಂಬಲ ಸಿಗುತ್ತದೆ. ನಾವು ಮಾಡುವ ಕೆಲಸಗಳಿಗೆ ಇತಿಮಿತಿ ಇರುವುದಿಲ್ಲ.


ಇಂದು ದೇಶದಲ್ಲಿ ಶಿಕ್ಷಣ ಗಳಿಸುವುದು ದುಬಾರಿಯಾಗುತ್ತಿದೆ. ನಿಮ್ಮ ಸರ್ಕಾರ ಬಡ ಮತ್ತು ಮಧ್ಯಮ ವರ್ಗದ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಲು ಏನು ಮಾಡುತ್ತದೆ?
ದೇಶದಲ್ಲಿ ತಂತ್ರಜ್ಞಾನ ಆಧಾರಿತ, ಅಂತರ್ಗತ, ಜನರ ಕೇಂದ್ರಿತ ಮತ್ತು ಜನರ ಚಾಲಿತ ಬೆಳವಣಿಗೆಯಾಗಲು ಉತ್ತಮ ಶಿಕ್ಷಣ ಅತ್ಯಗತ್ಯ. ಜೀವನದ ಮಟ್ಟ ಸುಧಾರಿಸುವುದು ಮಾತ್ರವಲ್ಲದೆ ದೇಶದ ಭವಿಷ್ಯಕ್ಕೆ ಕೂಡ ಶಿಕ್ಷಣ ಬೇಕು. ಶಾಲಾ ಮಟ್ಟದಲ್ಲಿ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು, ಕಲಿಕೆಯ ಫಲಿತಾಂಶಗಳನ್ನು ಸುಧಾರಿಸಲು, ನಾವೀನ್ಯತೆ ಮತ್ತು ವೈಜ್ಞಾನಿಕ ಮನೋಭಾವಕ್ಕೆ ಉತ್ತೇಜಿಸಲು, ಮೂಲಸೌಕರ್ಯಗಳನ್ನು ಸುಧಾರಿಸಲು, ವಿದ್ಯಾರ್ಥಿಗಳಲ್ಲಿ ತಿಳುವಳಿಕೆಯನ್ನು ಸುಧಾರಿಸಲು ತಂತ್ರಜ್ಞಾನವನ್ನು ಬಳಸುವುದಕ್ಕೆ ವಿಶೇಷ ಗಮನ ನೀಡಲಾಗುತ್ತಿದೆ. ಶಾಲಾ ಶಿಕ್ಷಣವನ್ನು ಸುಧಾರಿಸಲು ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆಯಂತಹ ತಂತ್ರಜ್ಞಾನವನ್ನು ಹತೋಟಿಗೆ ತರಲು ನಾವು ಪ್ರಯತ್ನಿಸುತ್ತಿದ್ದೇವೆ.


ಉನ್ನತ ಶಿಕ್ಷಣದಲ್ಲಿ ನಾವು ನಿರಂತರವಾಗಿ ಸ್ಥಾನಗಳನ್ನು ಹೆಚ್ಚಿಸಲು, ದೇಶಾದ್ಯಂತ ಪ್ರಧಾನ ಸಂಸ್ಥೆಗಳ ಉಪಸ್ಥಿತಿಯನ್ನು ಹೆಚ್ಚಿಸಲು, ಸಂಸ್ಥೆಗಳಿಗೆ ಹೆಚ್ಚಿನ ಸ್ವಾಯತ್ತತೆಯನ್ನು ನೀಡಲು ಮತ್ತು ಸಂಶೋಧನೆ ಮತ್ತು ನಾವೀನ್ಯತೆಯನ್ನು ಹೆಚ್ಚಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದೇವೆ.


2022ರ ವೇಳೆಗೆ ಉನ್ನತ ಶಿಕ್ಷಣ ಹಣಕಾಸು ಸಂಸ್ಥೆ(ಹೆಚ್ ಇಎಫ್ಎ)ಯನ್ನು ಸ್ಥಾಪಿಸಿ ಆ ಮೂಲಕ 1 ಲಕ್ಷದವರೆಗೆ ಹಣ ಒದಗಿಸುತ್ತೇವೆ. ಇದುವರೆಗೆ 21 ಸಾವಿರ ಕೋಟಿ ರೂಪಾಯಿಗಳನ್ನು ಒದಗಿಸಲಾಗಿದೆ. ಈ ವಿಶ್ವವಿದ್ಯಾನಿಲಯಗಳು ಯುಜಿಸಿಯ ವ್ಯಾಪ್ತಿಯಲ್ಲಿರುತ್ತವೆ. ಹೊಸ ಕೋರ್ಸ್‌ಗಳು, ಕ್ಯಾಂಪಸ್ ಕೇಂದ್ರಗಳು, ಕೌಶಲ್ಯ ಅಭಿವೃದ್ಧಿ ಕೋರ್ಸ್‌ಗಳು, ಸಂಶೋಧನಾ ಪಾರ್ಕ್ ಮತ್ತು ಯಾವುದೇ ಹೊಸ ಶೈಕ್ಷಣಿಕ ಕಾರ್ಯಕ್ರಮಗಳನ್ನು ಪ್ರಾರಂಭಿಸುವ ಸ್ವಾತಂತ್ರ್ಯವನ್ನು ಹೊಂದಿರುತ್ತದೆ. ವಿದೇಶಿ ಅಧ್ಯಾಪಕರನ್ನು ನೇಮಿಸಿಕೊಳ್ಳಲು, ವಿದೇಶಿ ವಿದ್ಯಾರ್ಥಿಗಳನ್ನು ದಾಖಲಿಸಲು, ಬೋಧಕವರ್ಗಕ್ಕೆ ಪ್ರೋತ್ಸಾಹ ಆಧಾರಿತ ಸಂಬಳವನ್ನು ನೀಡಲು, ಶೈಕ್ಷಣಿಕ ಸಹಯೋಗಕ್ಕೆ ಪ್ರವೇಶಿಸಲು ಮತ್ತು ಮುಕ್ತ ದೂರಶಿಕ್ಷಣ ಕಾರ್ಯಕ್ರಮಗಳನ್ನು ನಡೆಸಲು ಅವರಿಗೆ ಸ್ವಾತಂತ್ರ್ಯವಿರುತ್ತದೆ.


ರಾಷ್ಟ್ರೀಯ ಶಿಕ್ಷಣ ನೀತಿಯಡಿ ಪಂಚಾಯತ್ ಮಟ್ಟದಿಂದ ಹಿಡಿದು ಉನ್ನತ ಮಟ್ಟದವರೆಗೆ ಯಾವ ರೀತಿ ಶಿಕ್ಷಣ ನೀಡಬೇಕು, ಶುಲ್ಕ ಇತ್ಯಾದಿಗಳ ಬಗಗೆ ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳು, ಸಮಾಲೋಚನಕಾರರನ್ನು ಒಳಗೊಂಡು ಅಭಿಪ್ರಾಯ ಕೇಳಲಾಗುತ್ತದೆ.

'ನಾವು 2014ರಲ್ಲಿ ಸರ್ಕಾರ ರಚಿಸಿದಾಗ, ಅಸ್ತಿತ್ವದಲ್ಲಿದ್ದ ವೈದ್ಯಕೀಯ ಶಿಕ್ಷಣ ವ್ಯವಸ್ಥೆಯ ಬಗ್ಗೆ ಅನೇಕ ಆತಂಕಗಳು ಇದ್ದವು. ಈ ಹಿಂದೆ, ನ್ಯಾಯಾಲಯಗಳು ದೇಶದ ವೈದ್ಯಕೀಯ ಶಿಕ್ಷಣದ ಬಗ್ಗೆ  'ಭ್ರಷ್ಟಾಚಾರದ ಗುಹೆ' ಎಂದು ಜರಿದಿದ್ದವು. ಹಿಂದಿನ ಸರ್ಕಾರಗಳು ಸಹ ಈ ವಲಯವನ್ನು ಸುಧಾರಿಸುವ ಬಗ್ಗೆ ಚಿಂತನೆ ನಡೆಸಿರಲಿಲ್ಲ. ನಾವು ಬದಲಾವಣೆಗೆ ದಿಟ್ಟ ಹೆಜ್ಜೆ ಇಟ್ಟಿದ್ದೇವೆ, ಹಲವು ಸುಧಾರಣಾ ಕ್ರಮ ಕೈಗೊಂಡಿದ್ದೇವೆ, ನಾವು ಇದನ್ನು ಮುಂದುವರಿಸಲು ನಿರ್ಧರಿಸಿದ್ದೇವೆ, ಏಕೆಂದರೆ ಇದು ನಮ್ಮ ಜನರ ಆರೋಗ್ಯ ಮತ್ತು ಯುವಕರ ಭವಿಷ್ಯದ ಬಗ್ಗೆ ಲಘುವಾಗಿ ತೆಗೆದುಕೊಳ್ಳಬಹುದಾದ ವಿಷಯವಲ್ಲ.
 


ಭ್ರಷ್ಟಾಚಾರ ನಿಗ್ರಹಕ್ಕೆ ನಿಮ್ಮ ಸರ್ಕಾರದ ಕ್ರಮ ಏನು?
ಭಾರತ ಸ್ವಾತಂತ್ರ್ಯ ಹೊಂದಿದ ನಂತರ ಇಷ್ಟು ವರ್ಷಗಳಲ್ಲಿ ದೇಶ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಒಂದು ಭ್ರಷ್ಟಾಚಾರ. ಭ್ರಷ್ಟಾಚಾರ ಇಂದು ಯಾವ ವರ್ಗದ ಜನರನ್ನೂ ಬಿಟ್ಟಿಲ್ಲ. ಎಲ್ಲಾ ಕಡೆಯೂ ಇದೆ. ಈ ಭ್ರಷ್ಟಾಚಾರದ ವಿರುದ್ಧ ಯಾರು ಹೋರಾಟ ಆರಂಭಿಸುವುದು, ಎಲ್ಲಿಂದ ಎಂಬುದು ಪ್ರಶ್ನೆ. ಇದನ್ನು ನಾವು ಯಾವುದೇ ರಾಜಕೀಯ ಪರಿಣಾಮಗಳನ್ನು ಲೆಕ್ಕಿಸದೆ ಆರಂಭಿಸಿದ್ದೇವೆ. ಅದು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ಕಳೆದ 5 ವರ್ಷಗಳಲ್ಲಿ ಆದಾಯ ತೆರಿಗೆ ಪಾವತಿಸುವವರು ಸಂಖ್ಯೆ ದುಪ್ಪಟ್ಟು ಆಗಿದೆ. 


ಸಂವಿಧಾನ ವಿಧಿ 370 ರದ್ದುಪಡಿಸಿದ್ದಕ್ಕೆ ಹಲವರಿಂದ ಬೆಂಬಲ ಮತ್ತು ಕೆಲವರಿಂದ ವಿರೋಧ ವ್ಯಕ್ತವಾಗಿದೆ. ಸದ್ಯ ಸಂದಿಗ್ಧತೆ, ಅನಿಶ್ಚಿತ ಪರಿಸ್ಥಿತಿಯಿದೆ. ಈ ಸಂದರ್ಭದಲ್ಲಿ ಜಮ್ಮು-ಕಾಶ್ಮೀರದ ಜನರು ನಿಮ್ಮೊಂದಿಗಿರಬೇಕೆಂದು ಏಕೆ ಭಾವಿಸುತ್ತೀರಿ?
-ಪಟ್ಟಭದ್ರ ಹಿತಾಸಕ್ತಿ ಜನರು, ಅಲ್ಲಿನ ರಾಜಕೀಯ ಪರಂಪರೆಯವರು, ಭಯೋತ್ಪಾದಕರ ಮೇಲೆ ಒಲವು ತೋರುವವರು ಮತ್ತು ವಿರೋಧ ಪಕ್ಷದ ಕೆಲವರು ನಮ್ಮ ನಿರ್ಧಾರವನ್ನು ವಿರೋಧಿಸಿದ್ದಾರೆ. ಇದು ದೇಶಕ್ಕೆ ಸಂಬಂಧಿಸಿದ ವಿಷಯ, ಇದರಲ್ಲಿ ರಾಜಕೀಯ ಇಲ್ಲ. ಭಾರತ ದೇಶದ ಜನರು ಸ್ವಾಗತಿಸಿದ್ದಾರೆ.


ಹಲವು ದಶಕಗಳವರೆಗೆ ಬೆದರಿಕೆಯಲ್ಲಿಯೇ ಜಮ್ಮು-ಕಾಶ್ಮೀರ, ಲಡಾಕ್ ನ ಜನರು ಕಳೆದಿದ್ದಾರೆ. ಸ್ವಾತಂತ್ರ್ಯವನ್ನು ಅವರು ಕಂಡಿರಲಿಲ್ಲ. ಮುಂದಿನ ದಿನಗಳಲ್ಲಿ ಅಲ್ಲಿನ ಜನರ ಜೀವನದಲ್ಲಿ ಆಶಾಕಿರಣವೊಂದು ಮೂಡಿದೆ. ನಮ್ಮ ಸರ್ಕಾರದ ನಿರ್ಧಾರವನ್ನು ವಿರೋಧಿಸುವವರು ಒಂದು ಪ್ರಶ್ನೆಗೆ ಉತ್ತರಿಸಬೇಕು, ಸಂವಿಧಾನ ವಿಧಿ 370 ಮತ್ತು 35(ಎ) ಉಳಿಸಿಕೊಂಡು ಅವರು ಏನು ಮಾಡುತ್ತಾರೆ. ಅದಕ್ಕೆ ಅವರಲ್ಲಿ ಉತ್ತರವಿಲ್ಲ. ಇದನ್ನು ವಿರೋಧಿಸುವವರೇ ದೇಶದ ಜನತೆಗೆ ಉಪಯೋಗವಾಗುವಂತಹ ಎಂತಹ ಕೆಲಸಗಳನ್ನು ಮಾಡಿದರೂ ವಿರೋಧಿಸುತ್ತಾರೆ. 


ಆದರೆ ಪ್ರಜಾಪ್ರಭುತ್ವ ಬಗ್ಗೆ ಆತಂಕವಿದೆಯಲ್ಲವೇ ? ಕಾಶ್ಮೀರ ಜನತೆಯ ಮಾತುಗಳನ್ನು ಕೇಳಲಿಲ್ಲ ಎಂದು ಹೇಳಲಾಗುತ್ತಿದೆಯಲ್ಲವೇ?
ಪ್ರಜಾಪ್ರಭುತ್ವ ವಿಚಾರದಲ್ಲಿ ಕಾಶ್ಮೀರ ಯಾವತ್ತೂ ತನ್ನ ಬದ್ಧತೆಯನ್ನು ಪ್ರದರ್ಶಿಸಲಿಲ್ಲ. ಕಳೆದ ನವೆಂಬರ್, ಡಿಸೆಂಬರ್ ನಲ್ಲಿ ನಡೆದ ಚುನಾವಣೆಯಲ್ಲಿ 35 ಸಾವಿರ ಸರ್ಪಂಚಿಗಳು ಚುನಾಯಿತರಾಗಿದ್ದರು. ಶೇಕಡಾ 74ರಷ್ಟು ಮತದಾನವಾಗಿತ್ತು. ಪಂಚಾಯತ್ ಚುನಾವಣೆಯಲ್ಲಿ ಯಾವುದೇ ಹಿಂಸಾಚಾರ ನಡೆದಿರಲಿಲ್ಲ. ರಕ್ತಪಾತವಾಗಿರಲಿಲ್ಲ. ಆದರೆ ಇದುವರೆಗೆ ಅಧಿಕಾರದಲ್ಲಿದ್ದವರು ಪಂಚಾಯತ್ ನ್ನು ಬಲಪಡಿಸುವತ್ತ ಗಮನ ಹರಿಸಲೇ ಇಲ್ಲ. 73ನೇ ತಿದ್ದುಪಡಿ ಜಮ್ಮು-ಕಾಶ್ಮೀರಕ್ಕೆ ಅನ್ವಯವಾಗುತ್ತಿರಲಿಲ್ಲ ಎನ್ನುವುದೇ ಬೇಸರದ ಸಂಗತಿ. ಇಂತಹ ಅನ್ಯಾಯಗಳನ್ನು ಸಹಿಸುವುದು ಹೇಗೆ?


ಜಮ್ಮು-ಕಾಶ್ಮೀರದಲ್ಲಿ ಬ್ಲಾಕ್ ಪಂಚಾಯತ್ ಚುನಾವಣೆಗಳನ್ನು ನಡೆಸುವುದಕ್ಕೆ ನಾನು ರಾಜ್ಯಪಾಲರಿಗೆ ಮನವಿ ಮಾಡುತ್ತೇನೆ. 
ಸ್ವಚ್ಛ ಭಾರತ, ಗ್ರಾಮೀಣ ವಿದ್ಯುದ್ದೀಕರಣ ಮೊದಲಾದ ಉಪಕ್ರಮಗಳು ತಳಮಟ್ಟವನ್ನು ತಲುಪುತ್ತಿವೆ.ಇದು ಪ್ರಜಾಪ್ರಭುತ್ವದ ನಿಜವಾದ ಅರ್ಥ. 

ಸಮಯ ವ್ಯರ್ಥಮಾಡದೆ ಹೆಚ್ಚು ಸಮಯದವರೆಗೆ ವಿಷಯಗಳನ್ನು ಎಳೆದುಕೊಂಡು ಹೋಗಿ  ತಲೆಕೆಡಿಸಿಕೊಳ್ಳುವ ಬದಲಾಗಿ ಅವುಗಳನ್ನು ಶೀರ್ಘಗತಿಯಲ್ಲಿ ಕಾರ್ಯಗತಗೊಳಿಸಲು, ಗಟ್ಟಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕಾಶ್ಮೀರದ ನಿರ್ಧಾರ ಅಲ್ಲಿನ ಜನರಿಗೆ ಭವಿಷ್ಯದಲ್ಲಿ ಬಹಳ ದೊಡ್ಡಮಟ್ಟದಲ್ಲಿ ಲಾಭ ತಂದುಕೊಡಲಿದೆ. ಯುವಕರಿಗೆ ಹೆಚ್ಚಿನ ಪ್ರಮಾಣದ ಉದ್ಯೋಗ ದೊರಕಿ ಅವರ ಬದುಕು ಹಸನಾಗಲಿದೆ ಎಂದು ಹೇಳಿದರು. ಎಲ್ಲಕಿಂತ ಮೇಲಾಗಿ ರಾಜ್ಯಕ್ಕೆ ಹೆಚ್ಚಿನ ಬಂಡವಾಳ ಹರಿದುಬರುವುದರಿಂದ ಕಾಶ್ಮೀರ ಹೆಚ್ಚಿನ ಆರ್ಥಿಕ ಪ್ರಗತಿ ಕಾಣಲಿದೆ.


Stay up to date on all the latest ರಾಷ್ಟ್ರೀಯ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp