'ರಕ್ಷಣಾ ಸಿಬ್ಬಂದಿ ಮುಖ್ಯಸ್ಥ'ರ ನೇಮಕ: ಪ್ರಧಾನಿ ನರೇಂದ್ರ ಮೋದಿ ಘೋಷಣೆ 

ದೇಶದ ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆಗಳಿಗೆ ಮುಖ್ಯಸ್ಥರಾಗಿ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರನ್ನು(ಸಿಡಿಎಸ್) ನೇಮಿಸುವುದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದಾರೆ.  
ಪ್ರಧಾನ ಮಂತ್ರಿ ನರೇಂದ್ರ ಮೋದಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ

ನವದೆಹಲಿ: ದೇಶದ ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆಗಳ ಸಮನ್ವಯಕ್ಕೆ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರನ್ನು(ಸಿಡಿಎಸ್) ನೇಮಿಸುವುದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದಾರೆ. 


ದೆಹಲಿಯ ಕೆಂಪುಕೋಟೆಯಿಂದ 73ನೇ ಸ್ವಾತಂತ್ರ್ಯ ದಿನದ ಅಂಗವಾಗಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಿಡಿಎಸ್ ದೇಶದ ಮೂರೂ ಸೇವೆಗಳಿಗೆ ಮಖ್ಯಸ್ಥನಾಗಿ ಪರಿಣಾಮಕಾರಿ ನಾಯಕತ್ವ ವಹಿಸಿ ಉತ್ತಮ ಸೇವೆ ಒದಗಿಸಲು ಸಹಕಾರಿಯಾಗಲಿದೆ ಎಂದರು.


ನಮ್ಮ ಸರ್ಕಾರ ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥರ ನೇಮಕಕ್ಕೆ ನಿರ್ಧಾರ ಮಾಡಿದೆ. ‘ಚೀಫ್ ಆಫ್ ಡಿಫೆನ್ಸ್’ ನೇಮಕದಿಂದಾಗಿ ಯುದ್ಧ, ಸುರಕ್ಷತೆ ಮತ್ತಷ್ಟು ಹೆಚ್ಚಲಿದ್ದು, ಮೂರು ಸೇನಾ ಪಡೆಗಳಿಗೆ ಚೀಫ್ ಆಫ್ ಡಿಫೆನ್ಸ್ ಸಲಹೆ, ಸೂಚನೆ ನೀಡುತ್ತಾರೆ. ಹೀಗಾಗಿ ವಾಯು, ಭೂ ಮತ್ತು ನೌಕಾಸೇನೆಗೆ ಒಬ್ಬರ ನೇತೃತ್ವ ಎಂದು ಮೋದಿ ಇಂದಿನ ಭಾಷಣದಲ್ಲಿ ಘೋಷಿಸಿದ್ದಾರೆ. 


1999ರಲ್ಲಿ ಕಾರ್ಗಿಲ್ ಯುದ್ಧವಾದ ಬಳಿಕ ದೇಶದ ಭದ್ರತಾ ವ್ಯವಸ್ಥೆಯಲ್ಲಿನ ಅಂತರವನ್ನು ಪರೀಕ್ಷಿಸಲು ಉನ್ನತ ಮಟ್ಟದ ಸಮಿತಿ ರಚಿಸಲಾಗಿತ್ತು. ಆ ಸಮಿತಿಯು ರಕ್ಷಣಾ ಸಚಿವರಿಗೆ ಮಿಲಿಟರಿ ಸಲಹೆಗಾರರಾಗಿ ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥರನ್ನು ನೇಮಕ ಮಾಡುವಂತೆ ಸಲಹೆ ನೀಡಿತ್ತು. 


ದೇಶದ ಭದ್ರತಾ ವ್ಯವಸ್ಥೆಯ ಸುಧಾರಣೆಗೆ ಸಂಬಂಧಪಟ್ಟ ಅಗತ್ಯಗಳನ್ನು ಸಚಿವರ ಗುಂಪು ವಿಶ್ಲೇಷಿಸಿ ರಕ್ಷಣಾ ಇಲಾಖೆ ಸಿಬ್ಬಂದಿ ಮುಖ್ಯಸ್ಥರ ನೇಮಕಕ್ಕೆ ಒಲವು ತೋರಿಸಿತ್ತು. 2012ರಲ್ಲಿ ನರೇಶ್ ಚಂದ್ರ ಕಾರ್ಯಪಡೆ ಸಿಬ್ಬಂದಿ ಸಮಿತಿಯ(ಸಿಒಎಸ್ ಸಿ) ಮುಖ್ಯಸ್ಥರಾಗಿ ಶಾಶ್ವತ ಅಧ್ಯಕ್ಷ ಹುದ್ದೆಯನ್ನು ಸೃಷ್ಟಿ ಮಾಡುವಂತೆ ಶಿಫಾರಸು ಮಾಡಿತ್ತು. 


ದೇಶದ ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆಯ ಮುಖ್ಯಸ್ಥರು ಮತ್ತು ಇವರಲ್ಲಿ ಸೇವೆಯಲ್ಲಿ ಅತ್ಯಂತ ಹಿರಿತನ ಹೊಂದಿರುವವರು ಅಧ್ಯಕ್ಷರಾಗುತ್ತಾರೆ ಎಂಬುದು ಈಗಿರುವ ನಿಯಮವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com