ಜಮ್ಮು-ಕಾಶ್ಮೀರದ ಐದು ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆ ಇಂದು ಆರಂಭ

ಇಷ್ಟು ದಿನಗಳ ನಿಷೇಧಾಜ್ಞೆಯ ಬಳಿಕ ಜಮ್ಮು-ಕಾಶ್ಮೀರದ ಐದು ಜಿಲ್ಲೆಗಳಲ್ಲಿ ಶನಿವಾರ 2ಜಿ ವೇಗದಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಪುನರಾರಂಭವಾಗಿದೆ. 
 

Published: 17th August 2019 10:48 AM  |   Last Updated: 17th August 2019 11:11 AM   |  A+A-


Representational image

ಸಾಂದರ್ಭಿಕ ಚಿತ್ರ

Posted By : Sumana Upadhyaya
Source : PTI

ಜಮ್ಮು: ಇಷ್ಟು ದಿನಗಳ ನಿಷೇಧಾಜ್ಞೆಯ ಬಳಿಕ ಜಮ್ಮು-ಕಾಶ್ಮೀರದ ಐದು ಜಿಲ್ಲೆಗಳಲ್ಲಿ ಶನಿವಾರ 2ಜಿ ವೇಗದಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಪುನರಾರಂಭವಾಗಿದೆ. 


ಇಂದು ಬೆಳಗ್ಗೆಯಿಂದಲೇ ಜಮ್ಮು, ರಜೌರಿ ಜಿಲ್ಲೆಯಲ್ಲಿ ಕೂಡ ನಿಷೇಧವನ್ನು ತೆರವುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಮಧ್ಯರಾತ್ರಿಯಿಂದ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಜಮ್ಮು, ರಿಯಾಸಿ, ಸಾಂಬಾ, ಕಥುವಾ ಮತ್ತು ಉಧಂಪುರ್ ಜಿಲ್ಲೆಗಳಲ್ಲಿ ಮರು ಆರಂಭಿಸಲಾಗಿದ್ದು 2ಜಿ ಸ್ಪೀಡ್ ಹೊಂದಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಾವುದೇ ರೀತಿಯ ವದಂತಿ ಹಬ್ಬಿಸುವುದು ಅಥವಾ ಅನಪೇಕ್ಷಿತ, ಆಕ್ಷೇಪಾರ್ಹ ವಿಷಯಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಾಕುವಂತಿಲ್ಲ ಎಂದು ಹೇಳಿದ್ದಾರೆ.


ಇಂತಹ ಅನಗತ್ಯ ವದಂತಿಗಳು ಹರಡದಂತೆ, ಗೊಂದಲ, ಆತಂಕಕಾರಿ ವಾತಾವರಣ ಸೃಷ್ಟಿಯಾಗಬಾರದೆಂದು ಮೊಬೈಲ್ ಇಂಟರ್ನೆಟ್ ಸೇವೆಯನ್ನು ರದ್ದುಗೊಳಿಸುವ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ. ಭಾಗಶಃ ಇಂದು ಮೊಬೈಲ್ ಮತ್ತು ಇಂಟರ್ನೆಟ್ ಸೇವೆ ಆರಂಭವಾಗಿದ್ದು ಹೈಸ್ಪೀಡ್ ಸದ್ಯದಲ್ಲಿಯೇ ಆರಂಭವಾಗಲಿದೆ ಎಂದು ಹೇಳಿದರು.


ಜಮ್ಮು-ಕಾಶ್ಮೀರ ಮತ್ತು ಲಡಾಕ್ ಗೆ  ನೀಡಲಾಗಿದ್ದ ಸಂವಿಧಾನ ವಿಧಿ 370ನ್ನು ರದ್ದು ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದ ನಂತರ ಕಳೆದ ಆಗಸ್ಟ್ 4ರಂದು ಮಧ್ಯರಾತ್ರಿಯಿಂದ ಮೊಬೈಲ್ ಇಂಟರ್ನೆಟ್ ಸೇವೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. 


ಜಮ್ಮು-ಕಾಶ್ಮೀರ ಮತ್ತು ಲಡಾಕ್ ನಲ್ಲಿ ಜಿಲ್ಲಾಡಳಿತ ಅಲ್ಲಿನ ವಾಸ್ತವ ಪರಿಸ್ಥಿತಿ ಬಗ್ಗೆ ನಿಗಾವಹಿಸುತ್ತಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಕಣ್ಗಾವಲು ಇರಿಸಿದೆ. ಈ ಮಧ್ಯೆ ರಜೌರಿ ಜಿಲ್ಲೆಯಲ್ಲಿ ಹಗಲು ಹೊತ್ತಿನಲ್ಲಿ ನಿಷೇಧ ಸಡಿಲಿಸಲಾಗಿದ್ದು ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಸೆಕ್ಷನ್ 144 ಜಾರಿಯಲ್ಲಿರುತ್ತದೆ. 


ಮೊಬೈಲ್ ಇಂಟರ್ನೆಟ್ ಸೇವೆ ಆರಂಭವಾಗುತ್ತಿದ್ದಂತೆ ಜಮ್ಮು-ಕಾಶ್ಮೀರ ಮತ್ತು ಲಡಾಕ್ ನ ಜನರು ಫೇಸ್ ಬುಕ್ ಮತ್ತು ವಾಟ್ಸಾಪ್ ಗಳಲ್ಲಿ ಪರಸ್ಪರ ಸಂದೇಶ ವಿನಿಮಯ ಮಾಡಿಕೊಳ್ಳುತ್ತಿರುವುದು ಕಂಡುಬಂತು.


ಕಾಶ್ಮೀರ ಕಣಿವೆಯಲ್ಲಿ ಕೂಡ ಸ್ಥಿರ ದೂರವಾಣಿ ಸೇವೆ 17 ವಿನಿಮಯ ಕೇಂದ್ರಗಳಲ್ಲಿ ಮರುಸ್ಥಾಪನೆಯಾಗಿದೆ. ಸುಮಾರು 100 ಟೆಲಿಫೋನ್ ಎಕ್ಸ್ ಚೇಂಜ್ ಗಳಲ್ಲಿ 17 ವಿನಿಮಯ ಕೇಂದ್ರಗಳಲ್ಲಿ ಕಾರ್ಯನಿರ್ವಹಣೆ ಆರಂಭವಾಗಿದೆ. ಸಿವಿಲ್ ಲೈನ್ ಏರಿಯಾಗಳು, ಕಂಟೋನ್ಮೆಂಟ್ ಏರಿಯಾಗಳು, ಶ್ರೀನಗರ ಜಿಲ್ಲೆಯ ವಿಮಾನ ನಿಲ್ದಾಣಗಳಲ್ಲಿ ಈ ಸ್ಥಿರ ದೂರವಾಣಿ ವಿನಿಮಯ ಕೇಂದ್ರಗಳಿವೆ.


ಬುದ್ಗಾಮ್, ಸೋನಮಾರ್ಗ್ ಮತ್ತು ಮನಿಗಮ್ ಪ್ರದೇಶಗಳಲ್ಲಿ, ಉತ್ತರ ಕಾಶ್ಮೀರದ ಗುರೆಝ್, ತಂಗ್ ಮಾರ್ಗ್, ಉರಿ ಕೆರನ್ ಕರ್ನಾ ಮತ್ತು ಟಂಗ್ ದಾರ್ ಪ್ರದೇಶಗಳಲ್ಲಿ ಕೂಡ ಸ್ಥಿರ ದೂರವಾಣಿ ಸೇವೆ ಮರು ಆರಂಭವಾಗಿದೆ. ದಕ್ಷಿಣ ಕಾಶ್ಮೀರದ ಖ್ವಾಜಿಗುಂಡ್ ಮತ್ತು ಪಹಲ್ಗಾಮ್ ಪ್ರದೇಶಗಳಲ್ಲಿ ಕೂಡ ಸ್ಥಿರ ದೂರವಾಣಿ ಸೇವೆಗಳನ್ನು ಮರು ಆರಂಭಿಸಲಾಗಿದೆ. 


ನಿನ್ನೆ ಬೆಳಗ್ಗೆಯಿಂದಲೇ ಸರ್ಕಾರ ಜಮ್ಮು-ಕಾಶ್ಮೀರಕ್ಕೆ ಹೇರಿದ್ದ ನಿಷೇಧಾಜ್ಞೆಗಳಲ್ಲಿ ಹಂತಹಂತವಾಗಿ ಹಿಂತೆಗೆದುಕೊಳ್ಳುತ್ತಾ ಒಂದೊಂದೇ ಸೇವೆಗಳನ್ನು ಮರು ಆರಂಭಗೊಳಿಸುತ್ತಾ ಬಂದಿದೆ. ನಿನ್ನೆ ರಾಜ್ಯಪಾಲ ಸತ್ಯಪಾಲ್ ಮಲಿಕ್ ಎಲ್ಲಾ ಸರ್ಕಾರಿ ಕಚೇರಿಗಳಿಗೆ ಎಂದಿನಂತೆ ಕಾರ್ಯನಿರ್ವಹಣೆ ಆರಂಭಿಸುವಂತೆ ಆದೇಶ ಹೊರಡಿಸಿದ್ದರು. 

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp