ಕಾಂಗ್ರೆಸ್ ಲಡಾಕ್ ನ್ನು ಸಂಪೂರ್ಣ ಕಡೆಗಣಿಸಿದ್ದರಿಂದ ಚೀನಾ ಡೆಮ್ಚೋಕ್ ನ್ನು ಆಕ್ರಮಣ ಮಾಡಿತು: ಬಿಜೆಪಿ ಸಂಸದ ನಮ್ಗ್ಯಾಲ್ 

ಸಂಸತ್ತಿನ ನೂತನ ಯುವ ಸದಸ್ಯ ಲಡಾಕ್ ನ ಬಿಜೆಪಿ ಸಂಸದ ಜಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್ ಇತ್ತೀಚೆಗೆ ಭಾರೀ ಸುದ್ದಿಯಾಗಿದ್ದರು. 
ಬಿಜೆಪಿ ಸಂಸದ ಜಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್
ಬಿಜೆಪಿ ಸಂಸದ ಜಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್

ಲೆಹ್(ಲಡಾಕ್): ಸಂಸತ್ತಿನ ನೂತನ ಯುವ ಸದಸ್ಯ ಲಡಾಕ್ ನ ಬಿಜೆಪಿ ಸಂಸದ ಜಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್ ಇತ್ತೀಚೆಗೆ ಭಾರೀ ಸುದ್ದಿಯಾಗಿದ್ದರು. ಕೇಂದ್ರ ಸರ್ಕಾರ ಸಂವಿಧಾನ ವಿಧಿ 370ನ್ನು ರದ್ದುಗೊಳಿಸಿದಾಗ ಅದನ್ನು ಬೆಂಬಲಿಸಿ ಅವರು ಸಂಸತ್ತಿನಲ್ಲಿ ಮಾಡಿದ ಭಾಷಣ ಭಾರೀ ವೈರಲ್ ಆಗಿತ್ತು. ಜಮ್ಮು-ಕಾಶ್ಮೀರ ಮತ್ತು ಲಡಾಕ್ ಅಭಿವೃದ್ಧಿಗೆ ಸಂವಿಧಾನ ವಿಧಿ 370 ಹೇಗೆ ತೊಡಕಾಗಿತ್ತು ಎಂದು ಹೇಳಿ ಅವರು ಸರ್ಕಾರದ ಪರವಾಗಿ ಮಾಡಿದ ಭಾಷಣ ಅನೇಕರ ಮನತಟ್ಟಿತ್ತು.


ಇದೀಗ ಲಡಾಕ್ ನಲ್ಲಿ ಚೀನಾ ದೇಶ ಹೇಗೆ ಹಸ್ತಕ್ಷೇಪ ಮಾಡಿತು, ಹಿಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರದಿಂದ ಆದ ತೊಂದರೆಯೇನು ಎಂದು ತಮ್ಮದೇ ಆದ ಕಾರಣ ನೀಡಿ ಸಮರ್ಥನೆ ಮಾಡಿದ್ದಾರೆ.


ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ಲಡಾಕ್ ಗೆ ಸಿಗಬೇಕಾದ ಪ್ರಾಶಸ್ತ್ಯ ಸಿಗದಿದ್ದರಿಂದಲೇ ಚೀನಾ ಡೆಮ್ಚೋಕ್ ವಲಯದವರೆಗೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿತು ಎಂಬುದು ಅವರ ವಾದವಾಗಿದೆ.


ಪ್ರತಿಕೂಲ ಸಂದರ್ಭಗಳಲ್ಲಿ ಕಾಂಗ್ರೆಸ್ ಸರ್ಕಾರ ಮೃದು ಧೋರಣೆ ತಳೆದಿದ್ದರಿಂದ ಕಾಶ್ಮೀರ ನಾಶವಾಗಿ ಹೋಯಿತು ಮತ್ತು ಲಡಾಕ್ ಹಾನಿಯನ್ನು ಕಂಡಿತು ಎನ್ನುತ್ತಾರೆ.


ಮಾಜಿ ಪ್ರಧಾನಿ ಪಂಡಿತ್ ಜವಹರ್ ಲಾಲ್ ನೆಹರೂ ರಚಿಸಿದ್ದ ಮುಂದುವರಿದ ನೀತಿ(Forward policy)ಯಡಿ ಭಾರಚ ಚೀನಾದ ಕಡೆಗೆ ಇಂಚು ಇಂಚಾಗಿಯೇ ಹಂತ ಹಂತವಾಗಿ ಹೋಗಬೇಕಾಗಿತ್ತು. ಅದನ್ನು ಜಾರಿಗೆ ತರುವ ಹೊತ್ತಿನಲ್ಲಿ ಚೀನಾದ ಸೇನಾಪಡೆ ಭಾರತದ ಪ್ರಾಂತ್ಯದೊಳಗೆ ನುಗ್ಗಿ ನಮ್ಮನ್ನು ಹಿಮ್ಮೆಟ್ಟಿಸಿದರು ಎಂದು ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಜಮ್ಯಾಂಗ್ ಹೇಳಿದ್ದಾರೆ.


ಈ ಫಾರ್ವರ್ಡ್ ಪಾಲಿಸಿಯಿಂದಾಗಿಯೇ ಇಂದು ಅಕ್ಸೈ ಚಿನ್ ಚೀನಾದೊಳಗಿದೆ. ಪೀಪಲ್ಸ್ ಲಿಬರೇಷನ್ ಸೇನಾ ಯೋಧರು ಡೆಮ್ಚೊಕ್ ನ ನಲ್ಹಾದೊಳಗೆ ನುಗ್ಗಿದರು, ಯಾಕೆಂದರೆ ಲಡಾಕ್ ಗೆ ಕಳೆದ 55 ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ರಕ್ಷಣಾ ನೀತಿಯಲ್ಲಿ ಪ್ರಾಮುಖ್ಯತೆ ಸಿಗಲೇ ಇಲ್ಲ. 


ಈ ವರ್ಷ ಜುಲೈಯಲ್ಲಿ ದಲೈಲಾಮಾ ಹುಟ್ಟುಹಬ್ಬದ ಸಂದರ್ಭದಲ್ಲಿ ಟಿಬೆಟಿಯನ್ನರು ಅವರ ಧ್ವಜವನ್ನು ಹಾರಿಸಿದ್ದರಿಂದ ಚೀನಾದ ಸೇನಾಪಡೆ ವಾಸ್ತವಿಕ ನಿಯಂತ್ರಣ ಗಡಿ(LAC)ಯನ್ನು ದಾಟಿ ಡೆಮ್ಚೊಕ್ ವಲಯವನ್ನು ಪ್ರವೇಶಿಸಿ ತಮ್ಮ ಗಡಿ ನಿಯಂತ್ರಣ ರೇಖೆಯ ಬಳಿ ಗಸ್ತು ತಿರುಗಿದ್ದರು.


ಲಡಾಕ್ ಇನ್ನು ಮುಂದೆ ಕೇಂದ್ರಾಡಳಿತ ಪ್ರದೇಶವಾಗುವುದರಿಂದ ರಕ್ಷಣಾ ದೃಷ್ಟಿಕೋನದಲ್ಲಿ ಹೇಗೆ ಬದಲಾಗಬಹುದು ಎಂಬ ಪ್ರಶ್ನೆಗೆ ಉತ್ತರಿಸಿದ ಸಂಸದ ನಮ್ಗ್ಯಾಲ್, ಇಲ್ಲಿಗೆ ಸಿಗಬೇಕಾದ ಪ್ರಾಶಸ್ತ್ಯ ಇನ್ನು ಮುಂದೆ ಸಿಗುತ್ತದೆ. ಹಿಂದಿನ ಗೃಹ ಸಚಿವ ರಾಜನಾಥ್ ಸಿಂಗ್ ಘೋಷಿಸಿದ್ದ ಪುನರ್ವಸತಿ ಯೋಜನೆಗಳು ಜಾರಿಗೆ ಬಂದರೆ ಗಡಿಭಾಗದ ಗ್ರಾಮಗಳಿಂದ ವಲಸೆ ಹೋಗುವುದು ಕೊನೆಯಾಗುತ್ತದೆ. ಇಲ್ಲಿಗೆ ರಸ್ತೆ, ಸಂಪರ್ಕ, ಸಂವಹನ, ಶಾಲಾ ಕಾಲೇಜುಗಳು, ಆಸ್ಪತ್ರೆಗಳು ಇತ್ಯಾದಿ ಮೂಲಭೂತ ಸೌಕರ್ಯಗಳು ಸಿಕ್ಕಿದಾಗ ಗಡಿಭಾಗ ಸುರಕ್ಷಿತ ನಗರ ಪ್ರದೇಶದಂತೆ ಬೆಳೆಯುತ್ತದೆ ಎಂದು ಅಭಿಪ್ರಾಯಪಟ್ಟರು.


ಕಾಶ್ಮೀರ ವಿಷಯದಲ್ಲಿ ವಿಶ್ವಸಂಸ್ಥೆಯನ್ನು ಸಂಪರ್ಕಿಸಿದ್ದು ಕಾಂಗ್ರೆಸ್ ಮಾಡಿದ ತಪ್ಪು ನಿರ್ಧಾರ, ಇನ್ನೊಂದು ಕಾಶ್ಮೀರದಲ್ಲಿ ಏನೇ ತೊಂದರೆಯಾದರೂ ಕೂಡ ಕಾಂಗ್ರೆಸ್ ಸರ್ಕಾರ ಮೃದು ಧೋರಣೆ ತಳೆದಿತ್ತು. ಅದನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ, ವಿಶೇಷ ಪ್ಯಾಕೆಜ್ ಪ್ರಕಟಿಸಿ ಸುಮ್ಮನಾಗುತ್ತಿತ್ತು. ಪ್ರತ್ಯೇಕತಾವಾದಿಗಳಿಗೆ ತಮ್ಮ ಇಷ್ಟದ ಪ್ರಕಾರ ನಡೆದುಕೊಳ್ಳಲು ಮತ್ತು ಕಲ್ಲು ತೂರಾಟಗಾರರು ಎಗ್ಗಿಲ್ಲದೆ ನಡೆದುಕೊಳ್ಳುತ್ತಿದ್ದರು, 55 ವರ್ಷ ಕಾಂಗ್ರೆಸ್ ನೇತೃತ್ವದ ಸರ್ಕಾರ ಆಡಳಿತ ನಡೆಸಿದ್ದರೂ ಜಮ್ಮು-ಕಾಶ್ಮೀರ ಮತ್ತು ಲಡಾಕ್ ಬಗ್ಗೆ ಯಾವುದೇ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಿಲ್ಲ ಎಂದರು.


ಜಮ್ಮು-ಕಾಶ್ಮೀರ ಸರ್ಕಾರ ಲಡಾಕ್ ಗೆ ಬಿಡುಗಡೆ ಮಾಡಿದ್ದ ಹಣವನ್ನು ಬೇರೆಯದಕ್ಕೆ ಬಳಸಿಕೊಳ್ಳುತ್ತಿತ್ತು. ಲಡಾಕ್ ನ ಭೌಗೋಳಿಕ, ಹವಾಮಾನ, ಪಾರಿಸರಿಕ ವಿಷಯಗಳನ್ನು ಯಾವತ್ತೂ ಪರಿಗಣಿಸಲೇ ಇಲ್ಲ. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಲಡಾಕ್ ಸ್ವಾಯತ್ತ ಪರ್ವತ ಅಬಿವೃದ್ಧಿ ಮಂಡಳಿಯನ್ನು ಮುಂದುವರಿಸುತ್ತದೆ. ಈ ಬಗ್ಗೆ ಜನರು ಆತಂಕಪಡುವ ಅಗತ್ಯವಿಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com