ರಾಜೀವ್ ಗಾಂಧಿ 75ನೇ ಜಯಂತಿ; ರಾಜಕೀಯ ನಾಯಕರಿಂದ ಗೌರವ ನಮನ 

ಮಂಗಳವಾರ ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ 75ನೇ ಹುಟ್ಟುಹಬ್ಬ. 
ರಾಜೀವ್ ಗಾಂಧಿ(ಸಂಗ್ರಹ ಚಿತ್ರ)
ರಾಜೀವ್ ಗಾಂಧಿ(ಸಂಗ್ರಹ ಚಿತ್ರ)

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಂಗಳವಾರ ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ 75ನೇ ಜಯಂತಿ ಅಂಗವಾಗಿ ಗೌರವ ನಮನ ಸಲ್ಲಿಸಿದರು.


ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರ ಜನ್ಮ ದಿನಾಚರಣೆ ಅಂಗವಾಗಿ ಗೌರವ ನಮನಗಳು ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.


ಇಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ 75ನೇ ಜಯಂತಿಯನ್ನು ನಾವೆಲ್ಲಾ ಆಚರಿಸುತ್ತಿದ್ದೇವೆ. ದೂರದೃಷ್ಟಿಯಿದ್ದ, ದೇಶಭಕ್ತ ರಾಜೀವ್ ಗಾಂಧೀಜಿಯವರ ಯೋಜನೆಗಳು ಭಾರತ ನಿರ್ಮಾಣಕ್ಕೆ ಸಹಾಯವಾದವು. ನನಗೆ ಅವರು ಪ್ರೀತಿಯ ತಂದೆ, ಯಾರನ್ನೂ ದ್ವೇಷಿಸಬೇಡ, ಕ್ಷಮಿಸಿಬಿಡು ಮತ್ತು ಎಲ್ಲರನ್ನೂ ಪ್ರೀತಿಸುವುದನ್ನು ಹೇಳಿಕೊಟ್ಟಿದ್ದರು ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.


1985ರಲ್ಲಿ ರಾಜೀವ್ ಗಾಂಧಿ ನಾಯಕತ್ವದಡಿ ದೇಶದಲ್ಲಿ ಮಾಹಿತಿ ತಂತ್ರಜ್ಞಾನ ಹೇಗೆ ಹುಟ್ಟಿಕೊಂಡಿತು ಎಂದು ಮೊದಲ ವಿಡಿಯೊದಲ್ಲಿ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು.


ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರನ್ನು ನೆನೆಯುತ್ತಾ ಟ್ವೀಟ್ ಮಾಡಿ, ನನ್ನ ಮತ್ತು ಎಲ್ಲರ ಹೃದಯದಲ್ಲಿ ನೀವು ಎಂದಿಗೂ ಇರುತ್ತೀರಾ, ಎಲ್ಲರ ಮನಸ್ಸನ್ನು ನೀವು ಮುಟ್ಟಿದ್ದೀರಿ, ರಾಷ್ಟ್ರ ನಿರ್ಮಾಣದಲ್ಲಿ ನಿಮ್ಮ ಕೊಡುಗೆಗಳನ್ನು ದೇಶ ಸ್ಮರಿಸುತ್ತದೆ, ನಿಮ್ಮ ಅನುಪಸ್ಥಿತಿ ನಮ್ಮೆಲ್ಲರನ್ನೂ ಕಾಡುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.


ದೆಹಲಿಯ ರಾಜೀವ್ ಗಾಂಧಿ ಸ್ಮಾರಕ ವೀರ ಭೂಮಿಗೆ ಇಂದು ಬೆಳಗ್ಗೆಯೇ ಕಾಂಗ್ರೆಸ್ ಹಿರಿಯ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಮನಮೋಹನ್ ಸಿಂಗ್ ಮೊದಲಾದವರು ತೆರಳಿ ಪುಷ್ಪ ನಮನ ಸಲ್ಲಿಸಿದರು.


ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಮಾಜಿ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ, ಗುಲಾಂ ನಬಿ ಆಜಾದ್, ಭೂಪೀಂದರ್ ಸಿಂಗ್ ಹೂಡಾ, ಅಹ್ಮದ್ ಪಟೇಲ್ ಮೊದಲಾದವರು ಕೂಡ ಅಗಲಿದ ನಾಯಕನ ಹುಟ್ಟುಹಬ್ಬ ಸಂದರ್ಭದಲ್ಲಿ ಗೌರವ ನಮನ ಸಲ್ಲಿಸಿದರು.


ಪ್ರಿಯಾಂಕಾ ಗಾಂಧಿ ಪತಿ ಉದ್ಯಮಿ ರಾಬರ್ಟ್ ವಾದ್ರಾ ಮತ್ತು ಅವರ ಪುತ್ರಿ ಮಿರಯಾ ವಾದ್ರಾ ಉಪಸ್ಥಿತರಿದ್ದರು.


ರಾಜೀವ್ ಗಾಂಧಿ ಜನ್ಮ ದಿನಾಚರಣೆ ಪ್ರಯುಕ್ತ ದೇಶಾದ್ಯಂತ ಕಾಂಗ್ರೆಸ್ ಪಕ್ಷದ ವತಿಯಿಂದ ಈ ವಾರವಿಡೀ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತಿದ್ದು ಅದಕ್ಕೆ ಸದ್ಭಾವನ ದಿವಸ ಎಂದು ಹೆಸರಿಡಲಾಗಿದೆ.


ದಿವಂಗತ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು 1984ರಲ್ಲಿ ಹತ್ಯೆಯಾದ ನಂತರ ರಾಜೀವ್ ಗಾಂಧಿಯವರನ್ನು ಪ್ರಧಾನ ಮಂತ್ರಿಯನ್ನಾಗಿ ನೇಮಿಸಲಾಯಿತು. 40 ವರ್ಷದಲ್ಲಿಯೇ ಪ್ರಧಾನಿಯಾಗಿದ್ದರು. ತಮಿಳು ನಾಡಿನ ಶ್ರೀಪೆರಂಬದೂರಿನಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರ ನಡೆಸುವಾಗ ಅವರನ್ನು 1991ರಲ್ಲಿ ಹತ್ಯೆ ಮಾಡಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com