ಪಿಎಂ ಮೋದಿ ಜನರಿಗೆ ಹತ್ತಿರವಾಗುತ್ತಾರೆ, ಪ್ರತಿ ಬಾರಿ ಅವರನ್ನು ಟೀಕಿಸುವುದರಿಂದ  ಏನೂ ಲಾಭವಿಲ್ಲ: ಜೈರಾಮ್ ರಮೇಶ್  

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆಡಳಿತ ವಿಧಾನ ಯಾವಾಗಲೂ ಕೆಟ್ಟದು ಎಂದು ಪ್ರತಿ ಬಾರಿಯೂ ಅವರನ್ನು ದೂಷಿಸುವುದು ಸರಿಯಲ್ಲ, ಇದರಿಂದ ಯಾವ ಪ್ರಯೋಜನವೂ ಆಗುವುದಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
 

Published: 23rd August 2019 11:51 AM  |   Last Updated: 23rd August 2019 11:54 AM   |  A+A-


Congress leader Jairam Ramesh

ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್

Posted By : Sumana Upadhyaya
Source : PTI

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆಡಳಿತ ವಿಧಾನ ಯಾವಾಗಲೂ ಕೆಟ್ಟದು ಎಂದು ಪ್ರತಿ ಬಾರಿಯೂ ಅವರನ್ನು ದೂಷಿಸುವುದು ಸರಿಯಲ್ಲ, ಇದರಿಂದ ಯಾವ ಪ್ರಯೋಜನವೂ ಆಗುವುದಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.


ಇದು ಮೋದಿಯವರ ಕೆಲಸವನ್ನು ಗುರುತಿಸುವ ಸಮಯ, ಅವರು 2014ರಿಂದ 2019ರವರೆಗೆ ಏನೇನು ಮಾಡಿದ್ದರೋ ಅದನ್ನು ಗುರುತಿಸಿ ಶೇಕಡಾ 30ಕ್ಕೂ ಹೆಚ್ಚು ಜನ ಮತ ಹಾಕಿ ಮತ್ತೆ ಅವರು ಅಧಿಕಾರಕ್ಕೆ ಬಂದಿದ್ದಾರೆ ಎಂದು ಹೇಳಿದ್ದಾರೆ.


ಭಾರತೀಯ ಜನತಾ ಪಾರ್ಟಿ ಈ ವರ್ಷದ ಲೋಕಸಭಾ ಚುನಾವಣೆಯಲ್ಲಿ ಶೇಕಡಾ 37.4ರಷ್ಟು ಮತಗಳನ್ನು ಪಡೆದಿದೆ. ಎನ್ ಡಿಎ ಮೈತ್ರಿಕೂಟ ಒಟ್ಟಾರೆ ಶೇಕಡಾ 45ರಷ್ಟು ಮತಗಳನ್ನು ಪಡೆದಿದೆ ಎಂದರು.


ಅವರು ದೆಹಲಿಯಲ್ಲಿ ಮೊನ್ನೆ ಕಪಿಲ್ ಸತೀಶ್ ಕೊಮಿರೆಡ್ಡಿಯವರು ಬರೆದ ''ಮಾಲೆವೊಲೆಂಟ್ ರಿಪಬ್ಲಿಕ್: ಎ ಶಾರ್ಟ್ ಹಿಸ್ಟರಿ ಆಫ್ ದಿ ನ್ಯೂ ಇಂಡಿಯಾ " ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದರು.


ಮೋದಿಯವರು ಆಡುವ ಮಾತುಗಳು ಜನರಿಗೆ ಹತ್ತಿರವಾಗುತ್ತವೆ. ಜನರು ಗುರುತಿಸುವ ರೀತಿಯಲ್ಲಿ ಅವರು ಕೆಲಸ ಮಾಡಿದ್ದಾರೆ ಮತ್ತು ಈ ಹಿಂದಿನ ಸರ್ಕಾರ ಅಂತಹ ಕೆಲಸ ಮಾಡಿರಲಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಜನರ ಜೊತೆ ಬೆರೆದು ಕೆಲಸ ಮಾಡದಿದ್ದರೆ ನಾವು ಈ ವ್ಯಕ್ತಿಯನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಕೂಡ ಜೈರಾಮ್ ರಮೇಶ್ ನರೇಂದ್ರ ಮೋದಿಯವರನ್ನು ಹೊಗಳಿದ್ದಾರೆ.


ಪ್ರತಿ ಬಾರಿಯೂ ಮೋದಿಯವರನ್ನು ತೆಗಳುತ್ತಾ, ಟೀಕಿಸುತ್ತಾ, ಬೈಯುತ್ತಾ ಹೋದರೆ ಅವರನ್ನು ಸೋಲಿಸಲು ಸಾಧ್ಯವೇ ಇಲ್ಲ ಎಂದು ಕೂಡ ತಮ್ಮ ಪಕ್ಷದ ನಾಯಕರಿಗೆ ಅವರು ಎಚ್ಚರಿಕೆ ನೀಡಿದ್ದಾರೆ. ಹಿಂದಿನ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಜೈರಾಮ್ ರಮೇಶ್ ಗ್ರಾಮೀಣಾಭಿವೃದ್ಧಿ ಮತ್ತು ಕುಡಿಯುವ ನೀರು, ಸ್ವಚ್ಛತೆ ಖಾತೆ ಸಚಿವರಾಗಿದ್ದರು.


ಮೋದಿ ಸರ್ಕಾರದಲ್ಲಿ ಆಡಳಿತದಲ್ಲಿನ ಆರ್ಥಿಕತೆ ಬಗ್ಗೆ ಪ್ರಸ್ತಾಪಿಸಿದ ಜೈರಾಮ್ ರಮೇಶ್, ಆಡಳಿತದ ಆರ್ಥಿಕತೆ ಮತ್ತು ಆಡಳಿತದ ರಾಜಕೀಯ ಸಂಪೂರ್ಣ ಭಿನ್ನವಾಗಿರುತ್ತದೆ. ಮೋದಿಯವರು ತಮ್ಮ ಆಡಳಿತ ವಿಧಾನದಿಂದ ಸೃಷ್ಟಿಸಿದ ಸಮಾಜ ಸುಧಾರಣೆಗಳು ಸಂಪೂರ್ಣವಾಗಿ ಭಿನ್ನವಾಗಿರುತ್ತದೆ. ಉದಾಹರಣೆಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಯಶಸ್ವಿಯಾಗಿದೆ ಎಂದರು.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp