ಚಿದಂಬರಂ ಸಿಬಿಐ ಬಂಧನ ಅರ್ಜಿ ವಿಚಾರಣೆ ಸೋಮವಾರ; ಇಡಿ ಪ್ರಕರಣದಲ್ಲಿ 'ಸುಪ್ರೀಂ' ತಾತ್ಕಾಲಿಕ ರಿಲೀಫ್!

ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಆದೇಶದಂತೆ ಸಿಬಿಐ ಬಂಧಿಸಿರುವುದನ್ನು ಪ್ರಶ್ನಿಸಿ ಕೇಂದ್ರದ ಮಾಜಿ ವಿತ್ತ ಮಂತ್ರಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ಕೈಗೆತ್ತಿಕೊಳ್ಳಲಿದೆ. 
ಪಿ ಚಿದಂಬರಂ
ಪಿ ಚಿದಂಬರಂ

ನವದೆಹಲಿ: ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಆದೇಶದಂತೆ ಸಿಬಿಐ ಬಂಧಿಸಿರುವುದನ್ನು ಪ್ರಶ್ನಿಸಿ ಕೇಂದ್ರದ ಮಾಜಿ ವಿತ್ತ ಮಂತ್ರಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ಕೈಗೆತ್ತಿಕೊಳ್ಳಲಿದೆ. 


ಐಎನ್ ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಮಾಜಿ ಸಚಿವ ಚಿದಂಬರಂ ತಪ್ಪಿತಸ್ಥ ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿದ 24 ಗಂಟೆಗಳಲ್ಲಿ ಸಿಬಿಐ ಅವರನ್ನು ಬಂಧಿಸಿತ್ತು. ಇದಕ್ಕೂ ಮುನ್ನ ಬಂಧನಕ್ಕೆ ತಡೆ ಕೋರಿ ಚಿದಂಬರಂ ಪರ ವಕೀಲ ಕಪಿಲ್ ಸಿಬಲ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಬುಧವಾರ ತುರ್ತು ವಿಚಾರಣೆ ಸಾಧ್ಯವಿಲ್ಲ ಎಂದು ಕೋರ್ಟ್ ಇಂದಿಗೆ ವಿಚಾರಣೆಯನ್ನು ಕಾಯ್ದಿರಿಸಿತ್ತು.


ಇಂದು ಸುಪ್ರೀಂ ಕೋರ್ಟ್ ಮುಂದೆ ವಾದ ಮಂಡಿಸಿದ ಕಪಿಲ್ ಸಿಬಲ್, ಸುಪ್ರೀಂ ಕೋರ್ಟ್ ಗೆ ಚಿದಂಬರಂ ಅವರು ನ್ಯಾಯ ಕೋರಿ ಸಮಯಕ್ಕೆ ಸರಿಯಾಗಿ ಮೇಲ್ಮನವಿ ಸಲ್ಲಿಸಿದ್ದರೂ ಕೂಡ ಅರ್ಜಿಯನ್ನು ವಿಚಾರಣೆ ನಡೆಸದೆ ಅವರ ಮೂಲಭೂತ ಹಕ್ಕನ್ನು ಕಸಿದುಕೊಳ್ಳಲಾಗಿದೆ ಎಂದರು. 


ಕಪಿಲ್ ಸಿಬಲ್ ಮತ್ತು ಸಾಲಿಸಿಟರ್ ಜನರಲ್ ಅವರ ವಾದ ವಿವಾದ ಮುಗಿದ ನಂತರ ಸಾಲಿಸಿಟರ್ ಜನರಲ್ ಅವರು ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಗೌರ್ ಅವರಿಗೆ ಬರಹವೊಂದನ್ನು ನೀಡಿದರು. ಆಗ ಮಧ್ಯೆ ಪ್ರವೇಶಿಸಿದ ಕಪಿಲ್ ಸಿಬಲ್ ನಮಗೆ ಪ್ರತಿಕ್ರಿಯೆ ನೀಡಲು ಅವಕಾಶ ನೀಡಲಿಲ್ಲ ಎಂದರು.


ಸಾಲಿಸಿಟರ್ ಜನರಲ್ ತುಶಾರ್ ಮೆಹ್ತಾ ಅದಕ್ಕೆ ಉತ್ತರಿಸಿ ತಪ್ಪು ಹೇಳಿಕೆ ನೀಡಬೇಡಿ, ವಾದ ವಿವಾದ ಮುಗಿದ ನಂತರ ನಾನು ಬರಹ ನೀಡಲಿಲ್ಲ ಎಂದರು. ವಿದೇಶದಲ್ಲಿ ಇರುವ 10 ಆಸ್ತಿಗಳು ಮತ್ತು 17 ಬ್ಯಾಂಕ್ ಖಾತೆಗಳು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಚಿದಂಬರಂ ಅವರಿಗೆ ಸಂಬಂಧವಿದ್ದು ವಿದ್ಯುನ್ಮಾನ ಸಾಧನಗಳ ಮೂಲಕ, ಇಮೇಲ್ ಮೂಲಕ ಅವರು ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದಾರೆ. ಉದ್ಯಮದಲ್ಲಿ ಅಕ್ರಮ ಹಾದಿ ತುಳಿದಿದ್ದರು ಎಂಬುದನ್ನು ಸಾಕ್ಷಿಯಾಗಿ ತೋರಿಸುತ್ತದೆ ಎಂದರು.


ವಾದ ವಿವಾದ ಆಲಿಸಿದ ಸುಪ್ರೀಂ ಕೋರ್ಟ್ ನ ನ್ಯಾಯಾಧೀಶೆ ಭಾನುಮತಿ ನೇತೃತ್ವದ ನ್ಯಾಯಪೀಠ, ಜಾರಿ ನಿರ್ದೇಶನಾಲಯ ತಮ್ಮನ್ನು ಬಂಧಿಸದಂತೆ ಚಿದಂಬರಂ ಸಲ್ಲಿಸಿದ್ದ ಮನವಿಯನ್ನು ಸೋಮವಾರಕ್ಕೆ ಮುಂದೂಡಿದೆ. ಅಲ್ಲದೆ ಕಸ್ಟಡಿ ವಿಚಾರಣೆ ನಡೆಸದಂತೆ ಸಿಬಿಐ ವಿರುದ್ಧ ಸಲ್ಲಿಸಿದ್ದ ಮನವಿಯನ್ನು ಸಹ ಸೋಮವಾರಕ್ಕೆ ಮುಂದೂಡಿದೆ. ಅಂದೇ ಅವರ ಸಿಬಿಐ ಕಸ್ಟಡಿ ಮುಕ್ತಾಯವಾಗಿದೆ. 


ಈ ಮೂಲಕ ಚಿದಂಬರಂ ಅವರನ್ನು ಜಾರಿ ನಿರ್ದೇಶನಾಲಯ ಸೋಮವಾರದವರೆಗೆ ಬಂಧಿಸುವಂತಿಲ್ಲ. ಅದರಿಂದ ಚಿದಂಬರಂ ಅವರಿಗೆ ಮಧ್ಯಂತರ ರಕ್ಷಣೆ ಸಿಕ್ಕಿದೆ. 


ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಎರಡು ಕೇಸುಗಳಿಗೆ ಸಂಬಂಧಿಸಿದಂತೆ ಪಿ ಚಿದಂಬರಂ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ನ್ಯಾಯಾಧೀಶ ಸುನಿಲ್ ಗೌರ್ ವಜಾ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com