ಕಣಿವೆ ರಾಜ್ಯದ ಶಾಂತಿಗೆ ಭಂಗ ತರಬೇಡಿ: ವಿಪಕ್ಷಗಳಿಗೆ ಕಾಶ್ಮೀರ ಸರ್ಕಾರದ ಎಚ್ಚರಿಕೆ

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಶಾಂತಿಗೆ ಭಂಗ ತರಬೇಡಿ ಎಂದು ಕಾಶ್ಮೀರ ಸರ್ಕಾರ ವಿಪಕ್ಷ ನಾಯಕರಿಗೆ ಎಚ್ಚರಿಕೆ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಶಾಂತಿಗೆ ಭಂಗ ತರಬೇಡಿ ಎಂದು ಕಾಶ್ಮೀರ ಸರ್ಕಾರ ವಿಪಕ್ಷ ನಾಯಕರಿಗೆ ಎಚ್ಚರಿಕೆ ನೀಡಿದೆ.

ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡುವ ವಿಧಿ 370 ರದ್ಧತಿ ಬಳಿಕ ಅಲ್ಲಿನ ರಾಜಕೀಯ ಮುಖಂಡರು, ಪ್ರತ್ಯೇಕತಾವಾದಿ ಮುಖಂಡರನ್ನು ಗೃಹಬಂಧನದಲ್ಲಿರಿಸಲಾಗಿದ್ದು, ಕಣಿವೆ ರಾಜ್ಯದಲ್ಲಿ ಮುಂಜಾಗ್ರತಾ ಕ್ರಮವಾಗಿ ನಿರ್ಬಂಧ ಹೇರಲಾಗಿದೆ. ಇದೇ ಕಾರಣಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ವಿರೋಧ ಪಕ್ಷಗಳ ನಿಯೋಗವು ಶನಿವಾರ ಶ್ರೀನಗರಕ್ಕೆ ಭೇಟಿ ನೀಡಲಿದೆ. ಅಲ್ಲಿ ಜನರ ಜತೆ ಸಂವಾದ ನಡೆಸಲು ವಿರೋಧ ಪಕ್ಷಗಳ ನಾಯಕರು ಸಿದ್ಧತೆ ನಡೆಸಿದ್ದಾರೆ. ಅವಕಾಶ ನೀಡಿದರೆ ಜಮ್ಮು ಮತ್ತು ಕಾಶ್ಮೀರದ ಬೇರೆ ಪ್ರದೇಶಗಳಿಗೂ ನಿಯೋಗ ಭೇಟಿ ನೀಡಲಿದೆ.

ಕಾಂಗ್ರೆಸ್‌ ನ ರಾಹುಲ್ ಗಾಂಧಿ, ಗುಲಾಂ ನಬಿ ಆಜಾದ್ ಮತ್ತು ಆನಂದ್ ಶರ್ಮಾ, ಸಿಪಿಎಂನ ಸೀತಾರಾಂ ಯೆಚೂರಿ, ಸಿಪಿಐನ ಡಿ.ರಾಜಾ,  ಆರ್‌ಜೆಡಿಯ ಮನೋಜ್ ಝಾ, ಎನ್‌ಸಿಪಿಯ ದಿನೇಶ್ ತ್ರಿವೇದಿ, ಮತ್ತು ಡಿಎಂಕೆಯ ತಿರುಚ್ಚಿ ಶಿವ ಈ ನಿಯೋಗದಲ್ಲಿ ಇರಲಿದ್ದಾರೆ. ಟಿಎಂಸಿ ನಾಯಕರೂ ಈ ನಿಯೋಗದಲ್ಲಿ ಇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದೇ ವಿಚಾರವಾಗಿ ಕಾಶ್ಮೀರ ಸರ್ಕಾರ ವಿಪಕ್ಷಗಳ ವಿರುದ್ಧ ಕೆಂಡ ಕಾರಿದ್ದು, ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಶಾಂತಿಗೆ ಭಂಗ ತರಬೇಡಿ ಎಂದು ಹೇಳಿದೆ. ಈ ಕುರಿತಂತೆ ಸರ್ಕಾರ ಹೇಳಿಕೆ ಬಿಡುಗಡೆ ಮಾಡಿದ್ದು, ರಾಜಕಾರಣಿಗಳ ಪ್ರವೇಶ ಇಲ್ಲಿನ ಶಾಂತಿ ಸುವ್ಯವಸ್ಥೆಗೆ ಭಂಗ ತಂದಾಗುತ್ತದೆ. ಹೀಗಾಗಿ ಯಾವುದೇ ರಾಜಕೀಯ ಮುಖಂಡರು ಕಾಶ್ಮೀರಕ್ಕೆ ಭೇಟಿ ನೀಡಬಾರದು ಎಂದು ಹೇಳಿದೆ.  ಅಂತೆಯೇ ಕಾಸ್ಮೀರದ ಹಲವು ಪ್ರದೇಶಗಳಲ್ಲಿ ನಿರ್ಬಂಧ ಹೇರಲಾಗಿದ್ದು, ರಾಜಕಾರಣಿಗಳ ಪ್ರವೇಶ ಇದನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಹೇಳುವ ಮೂಲಕ ಕಾನೂನು ಕ್ರಮದ ಎಚ್ಚರಿಕೆ ನೀಡಿದೆ.

ವಿಶೇಷಾಧಿಕಾರ ಅಸಿಂಧುಗೊಳಿಸಿದ ನಂತರ ಯಾವ ರಾಜಕೀಯ ನಾಯಕರೂ ಜಮ್ಮು ಮತ್ತು ಕಾಶ್ಮೀರ ಪ್ರವೇಶಿಸಲು ಸರ್ಕಾರ ಅವಕಾಶ ನೀಡಿಲ್ಲ. ರಾಜ್ಯಕ್ಕೆ ಭೇಟಿ ನೀಡಿ ಎಂದು ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ಈಚೆಗೆ ರಾಹುಲ್ ಗಾಂಧಿ ಅವರಿಗೆ ಸವಾಲು ಹಾಕಿದ್ದರು. ಈ ಸವಾಲನ್ನು ಸ್ವೀಕರಿಸಿದ್ದ ರಾಹುಲ್ ಗಾಂಧಿ ಕಾಶ್ಮೀರಕ್ಕೆ ಭೇಟಿ ನೀಡುವುದಾಗಿ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com